ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಸಾನ್‌’

ಪಿಚ್ಚರ್ ನೋಡಿ
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ತಾನಾಗಿಯೇ ರೂಪಿಸಿಕೊಂಡ ಸಾಮಾಜಿಕ ಕಟ್ಟು ಪಾಡುಗಳು, ಪ್ರಕೃತಿಸಹಜ ಗುಣಧರ್ಮಗಳು ಮತ್ತು ಈ ಎಲ್ಲದಕ್ಕೂ ಮೀರಿ ಬದುಕಿಗೆ ನಿರೀಕ್ಷೆಯಾಚೆಯ ತಿರುವು ನೀಡುವ ವಿಧಿ. ಈ ಮೂರು ಅಂಚುಗಳಲ್ಲಿ ನಿಂತು ಬದುಕನ್ನು ಅರ್ಥ ಮಾಡಿಕೊಳ್ಳುವ ತೀವ್ರ ಪ್ರಯತ್ನ ‘ಮಸಾನ್‌’. 2015ರಲ್ಲಿ ಬಿಡುಗಡೆಯಾದ ಈ ಸಿನಿಮಾ ನೀರಜ್‌ ಗಾಯ್ವಾನ್‌ ಅವರ ನಿರ್ದೇಶನದ ಮೊದಲ ಪ್ರಯತ್ನ.

ರೀತಿ–ರಿವಾಜು, ಜಾತಿ, ಸಂಪ್ರದಾಯಗಳ ಹೆಸರಿನಲ್ಲಿ ಮನುಷ್ಯನನ್ನು ಪಳಗಿಸುವ ಪ್ರಯತ್ನ ಮತ್ತು ಅವೆಲ್ಲವನ್ನೂ ಮೀರಿ ಜಿಗಿಯುವ ಪ್ರೇಮದ ಸಾರ್ವವ್ಯಾಪಕತೆಯ ನಡುವಣ ಘರ್ಷಣೆಯೇ ಈ ಸಿನಿಮಾದ ವಸ್ತು. ಬರೀ ಒಂದು ಕಥನದ ಎಳೆಯ ಕಾರಣದಿಂದಲ್ಲ, ವಿಶಿಷ್ಟವಾದ ನಿರೂಪಣೆ ಮತ್ತು ಕಥನ ನಡೆಯುವ ಮೂಲಭಿತ್ತಿಯಾದ ಬದುಕನ್ನೂ ಈ ಸಿನಿಮಾ ಅಷ್ಟೇ ಗಾಢವಾಗಿ ಕಟ್ಟಿಕೊಡುತ್ತದೆ.

ಗಂಗಾನದಿ, ಅಲ್ಲಿನ ಸ್ಮಶಾನದ ಪರಿಸರವನ್ನೂ ಬಳಸಿಕೊಂಡಿರುವ ರೀತಿ ಈ ಸಿನಿಮಾಕ್ಕೊಂದು ಪ್ರಾದೇಶಿಕ ನೆಲೆಗಟ್ಟನ್ನೂ ಕಲ್ಪಿಸಿದೆ. ಎರಡು ಪ್ರತ್ಯೇಕ ಎಳೆಗಳನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕರು. ತನ್ನ ಸಹಪಾಠಿಯೊಟ್ಟಿಗೆ ದೈಹಿಕ ಸಂಪರ್ಕಕ್ಕೆ ತೊಡಗಿದ್ದಾಗ ದೇವಿ ಪೊಲೀಸರ ಕೈಗೆ ಸಿಕ್ಕು ಬೀಳುತ್ತಾಳೆ. ಪೊಲೀಸರು ಅದರ ವಿಡಿಯೊ ಮಾಡಿಕೊಂಡು ದೇವಿಯ ಕುಟುಂಬಕ್ಕೆ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ.

ಒಂದೆಡೆ ಮೇಲು ಜಾತಿಯ ಹೆಣ್ಣುಮಗಳು ಸಮಾಜದ ದೃಷ್ಟಿಯಲ್ಲಿ ಕಳಂಕಿತಳಾಗಿ ಅನುಭವಿಸುವ ನಿಂದನೆಗಳನ್ನು ತೋರಿಸುತ್ತಾ ಇನ್ನೊಂದು ಎಳೆಯಲ್ಲಿ ದೀಪಕ್‌ ಎಂಬ ಹುಡುಗನ ಕಥೆಯನ್ನೂ ಸಮಾನಾಂತರವಾಗಿ ಹೇಳಿಕೊಂಡು ಹೋಗಲಾಗಿದೆ.

ದೀಪಕ್‌ ಕೆಳಜಾತಿಯ ಹುಡುಗ. ಗಂಗಾನದಿ ತಟದ ಸ್ಮಶಾನವೊಂದರಲ್ಲಿ ಶವ ಸುಡುವ ಕುಟುಂಬಕ್ಕೆ ಸೇರಿದವ. ಆದರೆ ತನ್ನ ಜಾತಿಗಂಟಿದ ಈ ಕೀಳುತನದ ಕಳಂಕವನ್ನು ಮೀರಿ ಬೆಳೆಯಬೇಕು ಎನ್ನುವುದು ಅವನ ಆಳದ ಹಂಬಲ. ಅದಕ್ಕಾಗಿ ಅವನು ಎಂಜಿನಿಯರಿಂಗ್‌ ಮುಗಿಸಿ ಒಳ್ಳೆಯ ಸಂಬಳದ ನೌಕರಿಯನ್ನು ಸಂಪಾದಿಸುವ ಸಿದ್ಧತೆಯನ್ನೂ ನಡೆಸುತ್ತಾನೆ.

ಕಾಲೇಜಿನಲ್ಲಿ ತನ್ನೊಟ್ಟಿಗೆ ಓದುತ್ತಿರುವ ಮೇಲು ಜಾತಿಯ ಹುಡುಗಿ ಶಾಲೂವಿನೊಟ್ಟಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಅವಳೂ ಅವನ ಪ್ರೇಮವನ್ನು ಒಪ್ಪಿಕೊಳ್ಳುತ್ತಾಳೆ. ಆದರೆ ಕುಟುಂಬದೊಟ್ಟಿಗೆ ತೀರ್ಥಯಾತ್ರೆಗೆ ಹೋದಾಗ ಆ್ಯಕ್ಸಿಡೆಂಟ್‌ನಲ್ಲಿ ತೀರಿಹೋಗುತ್ತಾಳೆ.

ಈ ಎರಡು ಎಳೆಗಳನ್ನೂ ಇಟ್ಟುಕೊಂಡು ನಿರ್ದೇಶಕರು ಮರ್ಯಾದೆಯ ಹೆಸರಿನಲ್ಲಿ ನಡೆಯುವ ಕ್ರೌರ್ಯಗಳು, ಅದನ್ನು ಮೀರಿ ನಿಲ್ಲಲು ಯತ್ನಿಸುವವರು ಅನುಭವಿಸಬೇಕಾದ ಸಂಕಟಗಳನ್ನು ಕಟ್ಟಿಕೊಟ್ಟಿದ್ದಾರೆ. ರಿಚಾ ಚಡ್ಡಾ, ವಿಕ್ಕಿ ಕೌಶಲ್‌, ಸಂಜಯ್‌ ಮಿಶ್ರಾ ಅವರ ನಟನೆಯೂ ‘ಮಸಾನ್‌’ಗೆ ವಿಶೇಷ ಪ್ರಭಾವಳಿ  ಕೊಟ್ಟಿದೆ. goo.gl/69oAHW ಕೊಂಡಿ ಬಳಸಿ ‘ಮಸಾನ್‌’ ಸಿನಿಮಾವನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT