ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊ ಬಳಸಿ ವಿಡಿಯೊ ರಚಿಸಿ

ತಂತ್ರೋಪನಿಷತ್ತು
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಡಿಜಿಟಲ್‌ ಜಗತ್ತಿನಲ್ಲಿ ತಂತ್ರಜ್ಞಾನದ ಸಾಧ್ಯತೆಗಳು ಹಲವು. ಹಿಂದೆಲ್ಲಾ ಕೆಲವರಷ್ಟೇ ಬಳಸುತ್ತಿದ್ದ ಡಿಜಿಟಲ್‌ ತಂತ್ರಗಳು ಈಗ ಹಲವರ ಅಭ್ಯಾಸವಾಗಿವೆ. ಸ್ಮಾರ್ಟ್‌ಫೋನ್‌ ಕೈಯಲ್ಲಿರುವ ಕೆಲವರಿಗಂತೂ ತಾವು ಕಂಡು ಕೇಳಿದ್ದನ್ನೆಲ್ಲಾ ಫೋಟೊ, ವಿಡಿಯೊ, ಆಡಿಯೊದಲ್ಲಿ ದಾಖಲಿಸುವುದು ರೂಢಿಯಾಗಿದೆ. ಕೆಲವರಿಗೆ ಆಪ್ತರ ಮಾತು, ಸಂದರ್ಶನ, ಸಂಗೀತ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿಕೊಳ್ಳುವ ಹವ್ಯಾಸವಿರುತ್ತದೆ.

ಆಡಿಯೊವನ್ನಷ್ಟೇ ರೆಕಾರ್ಡ್‌ ಮಾಡಿಕೊಂಡಿರುವವರು ಅದನ್ನು ಯೂಟ್ಯೂಬ್‌ಗೆ ಹಾಕಬೇಕೆಂದು ಬಯಸಿದರೆ ನಿರಾಸೆಯಾಗುವುದು ಸಾಮಾನ್ಯ. ಏಕೆಂದರೆ ಯೂಟ್ಯೂಬ್‌ಗೆ ನೇರವಾಗಿ ಆಡಿಯೊ ಫೈಲ್‌ ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ. ಹೀಗೆಂದು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮಲ್ಲಿರುವ ಆಡಿಯೊ ಫೈಲ್ ಅನ್ನು ವಿಡಿಯೊ ಫೈಲ್‌ ಆಗಿ ಪರಿವರ್ತಿಸಿ, ಅದಕ್ಕೆ ಆಕರ್ಷಕ ರೂಪ ಕೊಟ್ಟು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುವ ವಿಧಾನವಿದೆ.

ಆಡಿಯೊ ಫೈಲ್‌ ಹಾಗೂ ಫೋಟೊ ಬಳಸಿ ವಿಡಿಯೊ ಫೈಲ್‌ ರಚಿಸಬಹುದು. ಮೊದಲು ನಿಮ್ಮಲ್ಲಿರುವ ಆಡಿಯೊ ಫೈಲ್‌ ಹಾಗೂ ಅದಕ್ಕೆ ಪೂರಕವಾಗಿ ಬಳಸಲು ಸಾಧ್ಯವಿರುವ ಫೋಟೊವನ್ನು ನಿಮ್ಮ ಪಿಸಿಯ ಒಂದು ಫೋಲ್ಡರ್‌ನಲ್ಲಿಟ್ಟುಕೊಳ್ಳಿ. ಆಡಿಯೊ ಮೂಲಕ ವಿಡಿಯೊ ರಚಿಸುವ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಫೋಟೊಗಳನ್ನೂ ಬಳಸಬಹುದು.

ಒಂದಕ್ಕಿಂತ ಹೆಚ್ಚು ಫೋಟೊಗಳಿದ್ದರೆ ಆಡಿಯೊ- ವಿಡಿಯೊ ಅಂದ ಹೆಚ್ಚುತ್ತದೆ. ವಿಡಿಯೊ ಎಡಿಟ್‌ ಮಾಡಲು ಸಾಧ್ಯವಿರುವ ಯಾವುದೇ ಸಾಫ್ಟ್‌ವೇರ್‌ ಮೂಲಕ ನೀವು ಆಡಿಯೊ ಫೈಲ್‌ ಬಳಸಿ ವಿಡಿಯೊ ರಚಿಸಬಹುದು. ಉಚಿತವಾಗಿ ಲಭ್ಯವಿರುವ ಮೂವಿ ಮೇಕರ್‌ ಮೂಲಕ ಆಡಿಯೊ ವಿಡಿಯೊ ರಚಿಸುವುದು ಸುಲಭ. ಮೂವಿ ಮೇಕರ್‌ನಲ್ಲಿ ಮೊದಲು ನೀವು ರಚಿಸಬೇಕಿರುವ ವಿಡಿಯೊಗೆ ಬೇಕಾದ ಫೋಟೊಗಳನ್ನು ಆಯ್ಕೆ ಮಾಡಿಕೊಳ್ಳಿ.

ಫೋಟೊಗಳನ್ನು ಅನುಕ್ರಮದಲ್ಲಿ ಜೋಡಿಸಿಕೊಂಡ ಮೇಲೆ ನಿಮಗೆ ಯಾವ ರೀತಿಯಲ್ಲಿ ಬೇಕೋ ಹಾಗೆ ಫೋಟೊಗಳು ಸ್ಲೈಡ್‌ ಆಗುವಂತೆ ಅನಿಮೇಷನ್‌ ಕೊಡಿ.
ಇಷ್ಟಾದ ಮೇಲೆ Add music ಮೇಲೆ ಕ್ಲಿಕ್ಕಿಸಿ ನಿಮ್ಮ ಆಡಿಯೊ ಫೈಲ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಆಡಿಯೊ ಫೈಲ್‌ ಎಷ್ಟು ನಿಮಿಷ ಇದೆ ಎಂಬುದನ್ನು ತಿಳಿಯಲು Music tools ಮೇಲೆ ಕ್ಲಿಕ್ಕಿಸಿ. ಇಲ್ಲಿ ಆಡಿಯೊ ಫೈಲ್‌ ಎಷ್ಟು ಸೆಕೆಂಡ್‌ ಇದೆಯೋ ನೋಡಿಕೊಂಡು ಗುರುತು ಮಾಡಿಕೊಳ್ಳಿ.

ಈಗ Video tools ಮೇಲೆ ಕ್ಲಿಕ್ಕಿಸಿ ಆಡಿಯೊ ಫೈಲ್‌ ಎಷ್ಟು ಸೆಕೆಂಡ್ ಇದೆಯೋ ಅಷ್ಟು ಸೆಕೆಂಡ್‌ಗೆ ಫೋಟೊಗಳನ್ನು ಹೊಂದಿಸಿ. ಇಷ್ಟೆಲ್ಲಾ ಆದ ಬಳಿಕ ಆಡಿಯೊ ಎಡಿಟ್‌ ಮಾಡಬೇಕಿದ್ದರೆ Music tools ಮೇಲೆ ಕ್ಲಿಕ್ಕಿಸಿ ಎಲ್ಲೆಲ್ಲಿ ಆಡಿಯೊ ಕತ್ತರಿಸಬೇಕೋ ಅಲ್ಲೆಲ್ಲಾ Split ಮಾಡಿ. ಬೇಕಿಲ್ಲದ ಆಡಿಯೊ ಭಾಗವನ್ನು ಆಯ್ಕೆ ಮಾಡಿಕೊಂಡು ಡಿಲೀಟ್‌ ಮಾಡಿ.

ಈಗ ಮತ್ತೊಮ್ಮೆ ಪೂರ್ತಿ ಆಡಿಯೊ ಕೇಳಿಸಿಕೊಂಡು ಸರಿಯಾಗಿದೆ ಎನಿಸಿದರೆ ಸೇವ್‌ ಕೊಡಿ. ಈಗ ನಿಮ್ಮ ವಿಡಿಯೊ ಫೈಲ್‌ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT