ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆ ಇಟ್ಟರೂ ವಿದ್ಯುತ್ ಉತ್ಪಾದನೆ!

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ನಡೆದಾಡಿ ಶಕ್ತಿ ವ್ಯರ್ಥ ಮಾಡಿಕೊಳ್ಳುವ ಅಗತ್ಯ ಇನ್ನುಮುಂದೆ ಇರುವುದಿಲ್ಲ; ನಡೆದಲ್ಲೆಲ್ಲಾ ಶಕ್ತಿ ಉತ್ಪಾದನೆಯಾಗುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ವಿದ್ಯುತ್‌ ಉತ್ಪಾದನೆಯಾಗಿ ಅಗತ್ಯವುಳ್ಳ ದೀಪ ಬೆಳಗುತ್ತದೆ!

ಇಂಥದ್ದೊಂದು ತಂತ್ರಜ್ಞಾನವನ್ನು ಮೈಸೂರಿನ ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ. ಇದಕ್ಕೆ ಅವರು ‘ಹೆಜ್ಜೆಯಿಂದ ವಿದ್ಯುತ್ ಉತ್ಪಾದನೆ’ (Footstep Power Generation) ಎಂಬ ಹೆಸರಿಟ್ಟಿದ್ದಾರೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿಮ್ಮ ಮನೆಯ ನೆಲವನ್ನು ನಿರ್ಮಿಸಿದ್ದೇ ಆದಲ್ಲಿ, ಮನೆಯ ಸದಸ್ಯರು ಸುಮ್ಮನೆ ನಡೆದಾಡುತ್ತಿದ್ದರೆ, ವಿದ್ಯುತ್‌ ತನಗೆ ತಾನೇ ಉತ್ಪಾದನೆಯಾಗುತ್ತಿರುತ್ತದೆ.

ಮೈಸೂರಿನ ವಿದ್ಯಾವಿಕಾಸ ಎಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳಾದ ಪ್ರೀತಿ ಆರ್‌.ಹರಗೆ, ಎಂ.ಪಿ.ಚಂದನ್, ಆರ್‌.ಸಂತೋಷ್‌, ಎಚ್‌.ಆರ್.ಮಹೇಶ ಈ ತಂತ್ರಜ್ಞಾನವನ್ನು ಸಂಶೋಧಿಸಿದ್ದಾರೆ. ಇವರಿಗೆ ವಿಭಾಗದ ಮುಖ್ಯಸ್ಥರಾದ ಕೆ.ಎಸ್‌.ಕೀರ್ತಿಪ್ರಸಾದ್‌ ಮಾರ್ಗದರ್ಶನ ನೀಡಿದ್ದಾರೆ.

ಹೆಚ್ಚು ನಡೆದಾಡುವ ಪ್ರದೇಶಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿದರೆ ಹೆಚ್ಚು ವಿದ್ಯುತ್‌ ಉತ್ಪಾದಿಸಬಹುದು ಎಂಬುದು ಈ ವಿದ್ಯಾರ್ಥಿಗಳ ವಾದ. ಹಾಗಾಗಿ, ಮನೆಗಳು, ಪಾದಚಾರಿ ಮಾರ್ಗಗಳು, ರಸ್ತೆಗಳು, ರೈಲ್ವೆ ಹಾಗೂ ಬಸ್ ನಿಲ್ದಾಣಗಳು,  ಕ್ರೀಡಾಂಗಣದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿದರೆ ಅಗತ್ಯ ವಿದ್ಯುತ್‌ ಉತ್ಪಾದಿಸಬಹುದು ಎನ್ನುವುದು ಇವರ ವಾದ.

2015ರ ವೇಳೆಗೆ ಬಹುತೇಕ ಪೆಟ್ರೋಲಿಯಂ ಇಂಧನಗಳು ಖಾಲಿಯಾಗುತ್ತವೆ. ಆಗ ಪುನರ್ಬಳಕೆ ಇಂಧನ ಮೂಲಗಳನ್ನು ಬಳಸಬೇಕಾಗುತ್ತದೆ. ಭಾರತದಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ಈಗ 4,344 ಮೆಗಾವ್ಯಾಟ್‌, ಜೈವಿಕ ತ್ಯಾಜ್ಯದಿಂದ 4,418 ಮೆಗಾವ್ಯಾಟ್‌, ಕಿರು ಜಲವಿದ್ಯುತ್‌ ಕೇಂದ್ರಗಳಿಂದ 4,146 ಮೆಗಾವ್ಯಾಟ್‌, ಪವನಶಕ್ತಿಯಿಂದ 24,376 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ (2015ರ ಅಂಕಿ–ಅಂಶಗಳು). ಇವೆಲ್ಲಾ ಮೂಲಗಳನ್ನು ಸೇರಿಸಿ 37,13 ಮೆಗಾವ್ಯಾಟ್‌ ಉತ್ಪಾದನೆ ಆಗುತ್ತಿದೆ. 2020ಕ್ಕೆ ಇದನ್ನು ಶೇ 50ರಷ್ಟಾದರೂ ಹೆಚ್ಚಿಸಬೇಕು ಎಂದು ಪುನರ್ಬಳಕೆ ಇಂಧನಗಳ ಇಲಾಖೆ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಒಟ್ಟು ಉತ್ಪಾದನೆಯ ಕನಿಷ್ಠ ಶೇ10ರಷ್ಟಾದರೂ ವಿದ್ಯುತ್‌ ಉತ್ಪಾದಿಸಬಹುದು ಎನ್ನುವುದು ಈ ವಿದ್ಯಾರ್ಥಿಗಳ ಭರವಸೆ.

ಕಾರ್ಯವೈಖರಿ ಹೀಗಿದೆ...
ಕಾಲ್ತುಳಿತವನ್ನು ಗಮನಿಸಿ ಅದಕ್ಕೆ ಸ್ಪಂದಿಸುವ ಸಂವೇದಕಗಳು ಈ ತಂತ್ರಜ್ಞಾನದಲ್ಲಿ ಇರುತ್ತವೆ. ಇವುಗಳ ಜತೆಗೆ, ವ್ಯಕ್ತಿಯ ತೂಕಕ್ಕೆ ಸ್ಪಂದಿಸುವ ಮೆಕ್ಯಾನಿಕಲ್ ಪಟ್ಟಿಗಳು ಕಂಪಿಸುತ್ತವೆ. ಈ ಕಂಪನವನ್ನು ಗ್ರಹಿಸುವ ಜನರೇಟರ್‌ಗಳು ವಿದ್ಯುತ್‌ ಉತ್ಪಾದಿಸುತ್ತವೆ. ಉತ್ಪಾದನೆಯಾದ ವಿದ್ಯುತ್‌ ಬ್ಯಾಟರಿಯೊಂದರಲ್ಲಿ ಶೇಖರವಾಗುತ್ತದೆ. ಇವೆಲ್ಲವನ್ನೂ ನಿಯಂತ್ರಿಸುವ ಒಂದು ಸರ್ಕ್ಯೂಟ್‌ ಸಹ ಇದರಲ್ಲಿದೆ.

ಭಾರತದಂತಹ ಜನದಟ್ಟಣೆ ಹೆಚ್ಚಿರುವ ದೇಶದಲ್ಲಿ ಈ ವಿಧಾನದ ಮೂಲಕ ವಿದ್ಯುತ್‌ ಉತ್ಪಾದಿಸುವುದು ಜಾಣ್ಮೆ ಕೆಲಸ. ಹಾಗಾಗಿ, ಈ ವಿಧಾನವನ್ನು ಅಳವಡಿಸಿಕೊಂಡು ತಂತ್ರಜ್ಞಾನ ಅಭಿವೃದ್ಧಿಪಡಿಸಿದೆವು ಎನ್ನುತ್ತಾರೆ ವಿದ್ಯಾರ್ಥಿನಿ ಪ್ರೀತಿ ಹರಗೆ. ತಮ್ಮ ಕಾರ್ಯಯೋಜನೆಯ ಭಾಗವಾದ ಈ ಸಂಶೋಧನೆಯ ವೆಚ್ಚ ₹10,200. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದಾದರೆ ಇನ್ನೂ ಕಡಿಮೆ ಬೆಲೆಗೆ ತಂತ್ರಜ್ಞಾನ ಲಭ್ಯ ಎನ್ನುತ್ತಾರೆ.

ಜತೆಗೆ, ಈ ತಂತ್ರಜ್ಞಾನದಿಂದ ಕೊಂಚವೂ ಪರಿಸರ ಮಾಲಿನ್ಯ ಆಗುವುದಿಲ್ಲ. ಅಲ್ಲದೇ, ಸ್ಥಳೀಯವಾಗಿ ಲಭ್ಯವುಳ್ಳ ಸಾಧನಗಳನ್ನೇ ಬಳಸಿಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ, ವಿದೇಶಿ ತಂತ್ರಜ್ಞಾನಕ್ಕೆ ಅವಲಂಬಿತವಾಗುವ ಅಗತ್ಯ ಇರುವುದಿಲ್ಲ ಎಂದು ಈ ವಿದ್ಯಾರ್ಥಿಗಳು ಹೇಳುತ್ತಾರೆ.

ಈ ತಂತ್ರಜ್ಞಾನದಲ್ಲಿ ಬ್ಯಾಟರಿಯದೇ ಪ್ರಮುಖ ಪಾತ್ರ. ಸದ್ಯಕ್ಕೆ ಇವರು ಕಡಿಮೆ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದ್ದಾರೆ. ಲೀಥಿಯಂ ಅಯಾನ್‌ ಅಥವಾ ಲೀಥಿಯಂ ಪಾಲಿಮರ್‌ ರಾಸಾಯನಿಕಗಳುಳ್ಳ ಬ್ಯಾಟರಿಯನ್ನು ಅಳವಡಿಸಿದರೆ ಈ ತಂತ್ರಜ್ಞಾನದಿಂದ ಹೆಚ್ಚು ಅನುಕೂಲ ಪಡೆಯಬಹುದಾಗಿದೆ. ದೊಡ್ಡ ಪ್ರಮಾಣದಲ್ಲಿ ಈ ತಂತ್ರಜ್ಞಾನ ಅಳವಡಿಸಲ್ಪಟ್ಟರೆ ಕಡಿಮೆ ಬೆಲೆಗೆ ನಾಗರಿಕರಿಗೆ ಸಿಗುವುದು ಸಾಧ್ಯ  ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT