ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುರುಕುಲ’ದಲ್ಲಿ ಜೀವನಪಾಠ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಮಂಡ್ಯದ ಎಂಐಟಿಯಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್‌  ಪದವಿ ಪಡೆದಿರುವ ಪುಷ್ಪಲತಾ, ಪದವಿ ಮುಗಿಸಿ ಕೆಲವು ಕಡೆ  ಸಂದರ್ಶನಕ್ಕೂ ಹೋಗಿ ಬರುತ್ತಾರೆ. ಆದರೆ, ಕೆಲಸ ಸಿಗುವುದಿಲ್ಲ. ಹಾಗೆ ಸಂದರ್ಶನಕ್ಕೆ ಹೋದಾಗಲೆಲ್ಲ ಆಕೆಗೆ ಎದುರಾಗಿದ್ದು ಇಂಗ್ಲಿಷ್‌ ಎಂಬ ಭೂತ. ಸಂದರ್ಶನದಲ್ಲಿ ಉತ್ತರಿಸುವಾಗ, ಇಂಗ್ಲಿಷ್‌ನಲ್ಲೇ ಸಂವಹನ ನಡೆಸಬೇಕಾದಾಗ ಆಕೆಯ ಜಂಘಾಬಲವೇ ಉಡುಗಿದಂತಾಗಿತ್ತು. ಕಷ್ಟಪಟ್ಟು ಮೈಲುಗಟ್ಟಲೆ ನಡೆದು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ  ಶಿಕ್ಷಣ ಪಡೆದು, ಎಂಜಿನಿಯರಿಂಗ್‌ ಪೂರೈಸಿದ್ದರೂ ಇಂಗ್ಲಿಷ್‌ನಲ್ಲಿ ಮಾತನಾಡುವುದು ಮಾತ್ರ ಕಷ್ಟವೇ ಆಗಿತ್ತು. ಇನ್ನು ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿ ಅಪ್ಪ–ಅಮ್ಮನಿಗೆ ನೆಮ್ಮದಿ ಕೊಡುವುದು ಕನಸಿನ ಮಾತು.

ಇಂಗ್ಲಿಷ್‌ ಸಂವಹನ ಇಲ್ಲದೆ ಯಾವುದೇ ಕಂಪೆನಿಯಲ್ಲಿ ಕೆಲಸ ಸಿಗಲಾರದು ಎಂದು ಅರ್ಥವಾಗುವ ಹೊತ್ತಿಗೆ ಆಕೆಯಲ್ಲಿ ಆತ್ಮವಿಶ್ವಾಸ ತುಂಬಿದ್ದು ‘ನಡ್್ಜ್‌’ ಫೌಂಡೇಷನ್‌.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡ್ಜ್‌ ಫೌಂಡೇಷನ್‌ ನಡೆಸುತ್ತಿರುವ ಗುರುಕುಲಕ್ಕೆ ಸೇರಿದ ಒಂದು ತಿಂಗಳಲ್ಲಿಯೇ, ‘ಈಗ ಯಾವುದೇ ಸಂದರ್ಶನವನ್ನು ಎದುರಿಸುವ ಆತ್ಮವಿಶ್ವಾಸ ಬಂದಿದೆ’ ಎಂದು ಧೈರ್ಯದಿಂದ ಹೇಳುತ್ತಾರೆ ಪುಷ್ಪಲತಾ.
***
ಹಾಸನದ ಮಂಜೇಶ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಐಟಿಐ ಮಾಡಿ, ಕೆಲಸ ಹುಡುಕುತ್ತಾ ಬೆಂಗಳೂರಿಗೆ ಬಂದವರು. ಹಾಗೆ ಬಂದ ಮಂಜೇಶ್‌  ಅವರು, ಓದಿದ ವಿಷಯಕ್ಕೆ ಸಂಬಂಧವೇ ಇಲ್ಲದ ವೆಲ್ಡಿಂಗ್‌ ಕೆಲಸಕ್ಕೆ ಸೇರುತ್ತಾರೆ. ಕೆಲಸದಲ್ಲಿ ತೃಪ್ತಿ ಸಿಗದಿದ್ದಾಗ ಪರಿಚಿತರ ಸಲಹೆಯಂತೆ ಬಂದು ಸೇರಿದ್ದು ಈ ಗುರುಕುಲಕ್ಕೆ. ಈಗ ಅವರು ಇಂಗ್ಲಿಷ್‌ನಲ್ಲಿ ವ್ಯವಹರಿಸಬಲ್ಲರು, ಡ್ರೈವಿಂಗ್‌ ಕಲಿತಿದ್ದಾರೆ, ಲೈಸೆನ್ಸ್‌ ಕೂಡಾ ಸಿಕ್ಕಿದೆ, ಕಂಪ್ಯೂಟರ್‌ ಕಲಿತಿದ್ದಾರೆ. ಕಲಿತಲ್ಲಿಯೇ ಕೆಲಸವೂ ಸಿಕ್ಕಿದೆ.
****
ನಾಲ್ಕನೇ ತರಗತಿಯವರೆಗೆ ಮಾತ್ರ ಶಾಲಾ ಶಿಕ್ಷಣ ಪಡೆದಿರುವ ತನುಜಾ, ಗುರುಕುಲಕ್ಕೆ ಬಂದು ಬ್ಯೂಟೀಷಿಯನ್‌ ಆಗುವ ಸಿದ್ಧತೆಯಲ್ಲಿದ್ದಾಳೆ. ಗೊತ್ತಾಗದ ವಿಷಯವನ್ನು ತರಗತಿಯ ಅವಧಿ ಮುಗಿದ ನಂತರ ತನಗಿಂತ ಹೆಚ್ಚು ಓದಿರುವ ಸಹಪಾಠಿಗಳಿಂದ ಕಲಿಯುತ್ತಿದ್ದಾಳೆ. ‘ಇಲ್ಲಿ ಹೇಳಿಕೊಡುವ ರೀತಿ ಗ್ರಹಿಸಿಕೊಳ್ಳಲು ಸುಲಭವಾಗುತ್ತದೆ’ ಎಂಬುದು ತನುಜಾಳ ಅಭಿಪ್ರಾಯ.
***

ಇಂಥ ಉದಾಹರಣೆಗಳು ಇಲ್ಲಿ ನೂರಾರು ಸಿಗುತ್ತವೆ. ಗ್ರಾಮೀಣ ಭಾಗದ ಯುವಜನರ ಶ್ರೇಯಕ್ಕೆಂದು ಹುಟ್ಟಿಕೊಂಡ ‘ನಡ್ಜ್ ಫೌಂಡೇಷನ್‌’ ಹಳ್ಳಿಗಳ ಬಡ ಯುವಕ–ಯುವತಿಯರಲ್ಲಿ ಆತ್ಮವಿಶ್ವಾಸ ತುಂಬಿ ಬದುಕಿಗೊಂದು ಸ್ಪಷ್ಟ ದಾರಿ ತೋರುವ ಹಂಬಲ ಹೊತ್ತು ಮುನ್ನಡೆಯುತ್ತಿದೆ. 2016ರ ಆಗಸ್ಟ್‌ನಲ್ಲಿ ನಡ್ಜ್‌ ಫೌಂಡೇಷನ್‌ ಅಡಿಯಲ್ಲಿ ಹುಟ್ಟಿಕೊಂಡ ‘ಗುರುಕುಲ’, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಯುವಕ ಯುವತಿಯರಿಗೆ ಕೌಶಲ ತರಬೇತಿಯ ಜೊತೆಗೆ ಇಂಗ್ಲಿಷ್‌ ಭಾಷಾ ತರಬೇತಿಯನ್ನು ನೀಡಿ ಕೆಲಸವನ್ನೂ ನೀಡುತ್ತದೆ. ‘ಡಿಜಿಟಲ್ ಲಿಟೆರಸಿ’ ಪರಿಕಲ್ಪನೆಯಲ್ಲಿ ಯುವಜನರಿಗೆ  ತಂತ್ರಜ್ಞಾನದ ಒಳ ಹೊರಗನ್ನೂ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದೆ.

ಗ್ರಾಮೀಣ ಭಾಗದ ಕಡುಬಡತನದ ಹಿನ್ನೆಲೆಯ ಅರ್ಹ ಯುವಮಂದಿಯನ್ನು ನೂರು ದಿನಗಳ ಕಾಲ ಗುರುಕುಲದಲ್ಲಿಯೇ ಇರಿಸಿಕೊಂಡು ಕಂಪ್ಯೂಟರ್‌, ಇಂಗ್ಲಿಷ್‌ ಸಂವಹನ ತರಬೇತಿ ನೀಡಲಾಗುತ್ತಿದೆ. ಹೆಚ್ಚು ವಿದ್ಯಾಭ್ಯಾಸವಿಲ್ಲದಿದ್ದವರಿಗೆ ವಾಹನ ಚಾಲನಾ ತರಬೇತಿ, ಬ್ಯೂಟೀಷಿಯನ್‌  ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ. ಈಗಾಗಲೇ ಈ ಸಂಸ್ಥೆಯಿಂದ ಎರಡು ಬ್ಯಾಚ್‌ಗಳು ಕಲಿತು ಹೊರಹೋಗಿವೆ. ಗುರುಕುಲದಲ್ಲಿ ಕೌಶಲ ತರಬೇತಿಯಷ್ಟೇ ಅಲ್ಲ, ಜೀವನ ಶಿಕ್ಷಣವನ್ನೂ ನೀಡಲಾಗುತ್ತದೆ. ಸಾಮಾಜಿಕವಾಗಿ ನಮ್ಮ ನಡವಳಿಕೆಗಳು ಹೇಗಿರಬೇಕು ಎಂಬುದನ್ನು ಕಲಿಸುವ ಹಲವು ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. 

‘ಗುರುಕುಲಕ್ಕೆ ಬರುವವರು ವೈಯಕ್ತಿಕ ಅಗತ್ಯಗಳಾದ ಬಟ್ಟೆ, ಸೋಪು ಮುಂತಾದ ವಸ್ತುಗಳನ್ನಷ್ಟೇ ತಂದರೆ ಸಾಕು. ಪ್ರತಿಯೊಬ್ಬರಿಗೂ ಒಂದೊಂದು ಟ್ರಂಕ್‌, ಹಾಸಿಗೆ, ಹೊದಿಕೆ ನೀಡಲಾಗುತ್ತದೆ. ವಿಶಾಲ ಹಾಲ್‌ನಲ್ಲಿ  ಮಲಗುವ ವ್ಯವಸ್ಥೆ ಇದೆ. ಸೀಮಿತ ಸೌಲಭ್ಯದಲ್ಲಿ ಬದುಕುವುದು ಅಭ್ಯರ್ಥಿಗಳಿಗೆ ಅಭ್ಯಾಸವಾಗಬೇಕು ಎಂಬ ಉದ್ದೇಶದಿಂದ ಹೆಚ್ಚು ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ಫೌಂಡೇಷನ್‌ನ ಸಿಬ್ಬಂದಿ ಕಲ್ಯಾಣಿ ಹೇಳುತ್ತಾರೆ.

ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್‌ ಒಂದರ ನಾಲ್ಕು ಫ್ಲ್ಯಾಟ್‌ಗಳಲ್ಲಿ ಹೆಣ್ಣುಮಕ್ಕಳ ಗುರುಕುಲ ಕಾರ್ಯ ನಿರ್ವಹಿಸುತ್ತದೆ. ಪ್ರತಿ ಫ್ಲ್ಯಾಟ್‌ನಲ್ಲಿ 150 ಮಂದಿಗೆ ತರಬೇತಿ ನೀಡುವ ಸಾಮರ್ಥ್ಯ ಇದೆ. ಪಕ್ಕದಲ್ಲಿಯೇ ಯುವಕರ ಗುರುಕುಲ ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಆಯ್ಕೆ ಪ್ರಕ್ರಿಯೆ ಹೀಗೆ ಸಾಗುತ್ತದೆ

ಗುರುಕುಲಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ತಂಡದ ಸದಸ್ಯರು  ಗ್ರಾಮೀಣ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಅರ್ಧಕ್ಕೆ ಶಾಲೆ–ಕಾಲೇಜು ಬಿಟ್ಟ ಯುವಕರನ್ನು ಆಯ್ದು ಕೌನ್ಸೆಲಿಂಗ್‌ ನಡೆಸುತ್ತಾರೆ. ಗುರುಕುಲದ ತರಬೇತಿಯ ಬಗ್ಗೆ ಮಾಹಿತಿ ನೀಡುತ್ತಾರೆ. ಗುರುಕುಲಕ್ಕೆ ಬರುವ ಆಸಕ್ತರಿಗೆ ಒಂದು ವಾರ ಗುರುಕುಲದ ವಾತಾವರಣಕ್ಕೆ ಒಗ್ಗಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಗುರುಕುಲದ ನಿಯಮವನ್ನು ಪಾಲಿಸಲು ಕಷ್ಟವಾಗುವವರಿಗೆ ವಾಪಸ್ಸಾಗುವುದಕ್ಕೂ ಅವಕಾಶ ನೀಡಲಾಗುತ್ತದೆ. ಉಳಿಯಬಯಸುವವರು ನೂರು ದಿನ   ಇರಬೇಕಾಗುತ್ತದೆ. 

ವಿವಿಧ ಕಡೆ ಉದ್ಯೋಗ
ಯುವಕರಿಗೆ ಮತ್ತು ಯುವತಿಯರಿಗೆ ಪ್ರತ್ಯೇಕ ಗುರುಕುಲದಲ್ಲಿ ಶಿಕ್ಷಣ ನೀಡಲಾಗುತ್ತದೆ. ಯುವತಿಯರಿಗೆ ಹೆಚ್ಚುವರಿಯಾಗಿ ಬ್ಯೂಟೀಷಿಯನ್‌ ಕೋರ್ಸ್‌ ಮತ್ತು ಯುವಕರಿಗೆ ವಾಹನ ಚಾಲನಾ ತರಬೇತಿ ನೀಡಲಾಗುತ್ತದೆ. ತರಬೇತಿಯ ಅವಧಿಯಲ್ಲಿಯೇ ಚಾಲನಾ ಪರವಾನಗಿಯನ್ನು ಕೂಡಾ ಸಂಸ್ಥೆಯೇ ಮಾಡಿಸಿಕೊಡುತ್ತದೆ.  ವಿವಿಧ ಟ್ರಾವೆಲ್‌ ಕಂಪೆನಿಗಳಲ್ಲಿ ಕೆಲಸವನ್ನೂ ಕೊಡಿಸುತ್ತದೆ. ಚಾಲನಾ ತರಬೇತಿಗೆ ಮಾರುತಿ ಕಾರು ತಯಾರಿಕಾ ಕಂಪೆನಿ ಸಹಯೋಗ ನೀಡಿದೆ. ಬ್ಯೂಟೀಷಿಯನ್‌ ತರಬೇತಿ ಪಡೆದ ಯುವತಿಯರಿಗೆ ‘ನ್ಯಾಚುರಲ್ಸ್‌’ ಸಂಸ್ಥೆಯ ವಿವಿಧ ಮಳಿಗೆಗಳಲ್ಲಿ ಕೆಲಸ ನೀಡಲಾಗುತ್ತದೆ.

ಶಿಸ್ತುಬದ್ಧ ದಿನಚರಿ: ಗುರುಕುಲದಲ್ಲಿ ಬೆಳಿಗ್ಗೆ 6.30ರಿಂದ 7ರವರೆಗೆ ಯೋಗಾಭ್ಯಾಸ ಇರುತ್ತದೆ. ನಂತರ ಕ್ಲೀನಿಂಗ್‌, ಬೆಳಗಿನ ಉಪಾಹಾರ ಸ್ನಾನ ಮುಗಿಸಿ 9 ಗಂಟೆಗೆ ತರಬೇತಿ ಆರಂಭವಾಗುತ್ತದೆ. ಎರಡು ತಂಡಗಳಿಗೆ ಪ್ರತ್ಯೇಕ ತರಗತಿಗಳು ಒಂದೇ ಸಮಯದಲ್ಲಿ ನಡೆಯುತ್ತಿರುತ್ತದೆ. ಸಂಜೆ 8ರವರೆಗೆ ಇಂಗ್ಲಿಷ್‌, ಕಂಪ್ಯೂಟರ್‌, ಜೀವನ ಕೌಶಲ ತರಗತಿಗಳು ನಿರಂತರವಾಗಿ ನಡೆಯುತ್ತದೆ. 

ತೀರಾ ಬಡತನದಲ್ಲಿರುವ ಮತ್ತು ಅರ್ಧಕ್ಕೆ ಶಿಕ್ಷಣ ನಿಲ್ಲಿಸಿರುವ ಯುವಜನರನ್ನು  ಎಲ್ಲ ಜಿಲ್ಲೆಗಳಿಂದ ಆಯ್ದು ಕರೆತಂದು ನಡ್ಜ್‌ ಫೌಂಡೇಷನ್‌ ಕೌಶಲ ತರಬೇತಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವನ್ನೂ ನೀಡುತ್ತಿದೆ. ಕಚೇರಿ ನಿರ್ವಹಣೆ, ಬ್ಯುಟೀಷಿಯನ್‌ ಮತ್ತು ಚಾಲನಾ  ವೃತ್ತಿಗಳಲ್ಲಿ ಗುರುಕುಲದ ವಿದ್ಯಾರ್ಥಿಗಳು  ಬದುಕು ಕಂಡುಕೊಂಡಿದ್ದಾರೆ ಎನ್ನುತ್ತಾರೆ ನಡ್ಜ್‌ ಫೌಂಡೇಷನ್‌ನ ದಾಖಲಾತಿ ಮುಖ್ಯಸ್ಥ ಶಿವರಾಮ್‌ ವಿ.

‘ಕರ್ಮ ಪಾಯಿಂಟ್‌’
ಗುರುಕುಲದ ಅಭ್ಯರ್ಥಿಗಳು ತಮ್ಮನ್ನು ತಾವು ತಿದ್ದಿಕೊಳ್ಳುವುದಕ್ಕೆ, ಸ್ವಯಂನಿಯಂತ್ರಣ ಹೇರಿಕೊಳ್ಳುವುದಕ್ಕೆ ‘ಕರ್ಮ ಪಾಯಿಂಟ್‌’ ಪೂರಕವಾಗಿದೆ. ನೂರು ದಿನದ ಗುರುಕುಲ ವಾಸದಲ್ಲಿ ನಡವಳಿಕೆ, ಶುಚಿತ್ವ, ನಾಯಕತ್ವ, ಕಲಿಕೆಗೆ ಅನುಗುಣವಾಗಿ 200 ಕರ್ಮ ಪಾಯಿಂಟ್‌ಗಳನ್ನು ನೀಡಲಾಗುತ್ತದೆ. ಹೆಚ್ಚು ಪಾಯಿಂಟ್‌ ಪಡೆದವರಿಗೆ ಪದವಿ ದಿನಾಚರಣೆಯಂದು ಕೆಂಪು ಟೋಪಿ ನೀಡಿ ಗೌರವಿಸಲಾಗುತ್ತದೆ.

ಬೆಳಿಗ್ಗೆ ತರಗತಿ ಆರಂಭಕ್ಕೂ ಮುನ್ನ ಎಲ್ಲರೂ ಸೇರಿ ಕೊಠಡಿಗಳನ್ನು ಶುಚಿ ಮಾಡಬೇಕು. ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಿದವರಿಗೆ ಐದು ಕರ್ಮ ಪಾಯಿಂಟ್‌ ಅನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.  ಸರಿಯಾಗಿ ಕಾರ್ಯ ನಿರ್ವಹಿಸದವರಿಗೆ, ತರಗತಿಗೆ ಗೈರಾದವರಿಗೆ ಐದು ಪಾಯಿಂಟ್‌ ಕಡಿತಗೊಳಿಸಲಾಗುತ್ತದೆ. ಕೆಟ್ಟ ಪದ ಬಳಕೆ ಮಾಡುವುದು, ದುಶ್ಚಟಗಳಿಗೆ ಪಾಯಿಂಟ್‌ ಕಡಿತವಿದೆ. ಉತ್ತಮ ನಡತೆ ತೋರಿದವರು ಗುರುಕುಲದಿಂದ ಹೆಚ್ಚಿನ ಸಹಾಯ ಪಡೆಯಲು ಅರ್ಹತೆ ಗಳಿಸುತ್ತಾರೆ. ‘ಕರ್ಮ ಪಾಯಿಂಟ್‌ ಇರುವ ಕಾರಣ ಏನೇ ಕೆಲಸ ಮಾಡುವಾಗಲೂ ಜಾಗರೂಕತೆಯಿಂದ ಇರುತ್ತೇವೆ. ಹೆಚ್ಚು ಪಾಯಿಂಟ್‌ ಗಳಿಸಲು ಶ್ರಮವಹಿಸುತ್ತೇವೆ’ ಎಂದು ಗುರುಕುಲದ ವಿದ್ಯಾರ್ಥಿಗಳು ಹೇಳುತ್ತಾರೆ.

ಗುರುಕುಲದ ಬೆನ್ನೆಲುಬಾದವರು: ಅತುಲ್ ಸತಿಜಾ ನಡ್ಜ್‌ ಸಂಸ್ಥೆಯ ಸಂಸ್ಥಾಪಕರು. ಈ ಫೌಂಡೇಷನ್‌ಗೆ ಆರ್ಥಿಕ ಸಹಾಯ ಮಾಡುತ್ತಿರುವವರಲ್ಲಿ  ಉದ್ಯಮಿ ನಂದನ್‌ ನೀಲೇಕಣಿ, ಡಾ. ದೇವಿ ಶೆಟ್ಟಿ, ಟೀಮ್‌ಲೀಸ್‌ ಅಧ್ಯಕ್ಷ ಮನೀಷ್‌ ಸಬರವಾಲ್‌, ನಾಸ್ಕಾಂ ಮಾಜಿ ಅಧ್ಯಕ್ಷ ಕಿರಣ್‌ ಕಾರ್ಣಿಕ್‌, ಬ್ರಿಟಿಷ್‌ ಟೆಲಿಕಾಂ ಮಾಜಿ ಅಧ್ಯಕ್ಷ ಅರುಣ್‌ ಸೇಠ್‌,  ಐಎಸ್‌ಬಿ ಸ್ಥಾಪಕ ಡೀನ್ ಡಾ. ಪ್ರಮತ್‌ ಸಿನ್ಹಾ, ಜಿವಾಮಿ ಉಪಾಧ್ಯಕ್ಷ ಹ್ಯೂಗೊ ಬರ್ರಾ, ಇನ್‌ಮೊಬಿ ಸ್ಥಾಪಕ ನವೀನ್‌ ತಿವಾರಿ, ಪೇಟಿಯಂ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ, ವಾಟ್ಸ್‌ಆ್ಯಪ್‌ ಉಪಾಧ್ಯಕ್ಷ ನೀರಜ್‌ ಅರೊರಾ, ಅಜೀಂ ಪ್ರೇಮ್‌ಜಿ ಸ್ವಯಂಸೇವಾ ಸಂಸ್ಥೆಯ ಸಿಇಒ ಜಿ. ಅನಂತಪದ್ಮನಾಭನ್, ಆ್ಯಪಲ್‌ ಇಂಡಿಯಾದ ಮಾಜಿ ವ್ಯವಸ್ಥಾಪಕ ಮನೀಶ್‌ ಧೀರ್‌, ಪ್ರಾಕ್ಟೋ ಹಣಕಾಸು ಅಧಿಕಾರಿ ಮಹೇಶ್‌ ದುಗರ್‌ ಪ್ರಮುಖರು.

‘ಸದ್ಯ 114 ಯುವತಿಯರು, 74 ಯುವಕರು ವಿವಿಧ ತರಬೇತಿ ಪಡೆಯುತ್ತಿದ್ದಾರೆ. ಈ   ಜನವರಿಯಲ್ಲಿ ಬರುವ ಹೊಸ ತಂಡದಲ್ಲಿ 100 ಯುವಕರು ಮತ್ತು 70 ಯುವತಿಯರನ್ನು ಆಯ್ಕೆ ಮಾಡುವ ಗುರಿ ಇದೆ’ ಎಂದು ಮಾಹಿತಿ ನೀಡಿದರು ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಸಾಯಿ ಪವಿತ್ರಸಾಗರ್‌.

ಗುರುಕುಲ ಸೇರಬಯಸುವವರು  08039515195 ಸಂಖ್ಯೆಗೆ ಒಂದು ಮಿಸ್ಡ್‌ಕಾಲ್‌ ಕೊಟ್ಟರೆ, ಸಂಸ್ಥೆಯ ಸಿಬ್ಬಂದಿಯೇ ಕರೆ ಮಾಡಿದವರನ್ನು ಸಂಪರ್ಕಿಸುತ್ತಾರೆ.

ಕಲಿತವರು ಹೇಳಿದ್ದು...

ನಾನು ಓದಿದ್ದು ಕೇವಲ ನಾಲ್ಕನೇ ತರಗತಿ. ಟೈಲರಿಂಗ್‌ ಗೊತ್ತಿತ್ತು. ಸ್ನೇಹಿತರೊಬ್ಬರು ಗುರುಕುಲದ ಮಾಹಿತಿ ನೀಡಿದರು. ಇಲ್ಲಿಗೆ ಬಂದು ಇಂಗ್ಲಿಷ್‌, ಕಂಪ್ಯೂಟರ್‌, ಬ್ಯೂಟೀಷಿಯನ್‌ ತರಬೇತಿ ಪಡೆಯುತ್ತಿದ್ದೇನೆ.
– ತನುಜಾ, ಚಿಕ್ಕನಾಯಕನಹಳ್ಳಿ

ನಾನು ಬಿ.ಎ. ಓದಿದ್ದೇನೆ. ಸ್ವಲ್ಪ ಕಾಲ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದೆ. ಅಲ್ಲಿ ರಾತ್ರಿ ಪಾಳಿಯೂ ಕೆಲಸ ಮಾಡಬೇಕಿತ್ತು. ಕಂಪ್ಯೂಟರ್‌ನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವುದು ಕಷ್ಟವಾಗುತ್ತಿತ್ತು. ನನಗೆ ಬ್ಯುಟೀಷಿಯನ್‌ ಆಗಲು ಇಷ್ಟ. ಅದಕ್ಕಾಗಿ ಇಲ್ಲಿಗೆ ಬಂದೆ.
– ಭವಾನಿ, ಚಿಕ್ಕಮಗಳೂರು

ಗುರುಕುಲಕ್ಕೆ ಬಂದ ಮೇಲೆ ಕಂಪ್ಯೂಟರ್‌ನಲ್ಲಿ ಎಕ್ಸೆಲ್‌, ಇಮೇಲ್‌ ಮಾಡುವುದು ಎಲ್ಲ ಕಲಿತಿದ್ದೇನೆ. ಡ್ರೈವಿಂಗ್‌ ಕಲಿತು ಲೈಸೆನ್ಸ್‌ ಕೂಡಾ ಸಿಕ್ಕಿದೆ. ಗುರುಕುಲದಲ್ಲಿಯೇ ಡಾಟಾ

ಆಪರೇಟರ್‌ ಆಗಿ ಕೆಲಸವೂ ಸಿಕ್ಕಿದೆ.
– ಮಂಜೇಶ್‌, ಹಾಸನ


ಕ್ಯಾಷ್‌ ಕೌಂಟರ್‌ ಒಂದರಲ್ಲಿ ಕೆಲಸ ಮಾಡಿ ತಿಂಗಳಿಗೆ 4 ಸಾವಿರ ದುಡಿಯುತ್ತಿದ್ದೆ. ನಡ್ಜ್‌ ಫೌಂಡೇಷನ್‌ನ ಗುರುಕುಲಕ್ಕೆ ಬಂದು 100 ದಿನ ತರಬೇತಿ ಪಡೆದ ನಂತರ ‘ಕ್ಲೀನ್‌ ಪೆನಟಿಕ್ಸ್‌’ ಕಂಪೆನಿಯಲ್ಲಿ ಕೆಲಸ ಪಡೆದು ತಿಂಗಳಿಗೆ 20 ಸಾವಿರ ವೇತನ ಪಡೆಯುತ್ತಿದ್ದೇನೆ. ಇಂಗ್ಲಿಷ್‌, ಕಂಪ್ಯೂಟರ್‌, ಡ್ರೈವಿಂಗ್‌ ಎಲ್ಲ ಕಲಿತಿದ್ದೇನೆ.
– ಅಪ್ಪಾಸಾಬ್‌ ಬಿರಾದಾರ್‌, ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT