ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡೆಲಿಂಗ್ ಕನಸಿನ ಕೀರ್ತನಾ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ನಟಿಯಾಗುವ ಕನಸಿನ ಕನವರಿಕೆಯಲ್ಲಿ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದವರು ಕೀರ್ತನಾ. ನೃತ್ಯ, ಸಂಗೀತದ ಜೊತೆಗೆ ಓದಿನಲ್ಲಿ ಮುಂದಿರುವ ಇವರು, ಐದನೇ ತರಗತಿಯಿಂದಲೇ ಬಣ್ಣದ ನಂಟನ್ನು ಬೆಸೆದುಕೊಂಡವರು.

‘ಮೂರನೇ ಕ್ಲಾಸ್‌ ಮಂಜ’, ‘ಬಿಕಾಂ ಭಾಗ್ಯ’, ‘ಉಡ’ ಕನ್ನಡ ಸಿನಿಮಾದಲ್ಲಿ ಚಿಕ್ಕ ಪಾತ್ರಕ್ಕೆ ಬಣ್ಣ ಹಚ್ಚಿದಾಗಲೇ ನಟಿಯಾಗುವ ಆಸೆ ಮೂಡಿತ್ತಂತೆ. ಕಲಾ ಪ್ರಪಂಚದ ಸೆಳೆತದಿಂದಾಗಿ ಇವರು ಮಾಡೆಲಿಂಗ್‌ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ  ಓದುತ್ತಿರುವ ಇವರು, ಭರತನಾಟ್ಯದಲ್ಲಿ ಜೂನಿಯರ್‌ ಮುಗಿಸಿದ್ದಾರೆ. ಜೊತೆಗೆ  ವೆಸ್ಟರ್ನ್ ನೃತ್ಯವನ್ನು ಅಭ್ಯಸಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದಾರೆ.

ರೂಪದರ್ಶಿಯಾಗುವ ಕನಸಿನ ಸಾಕಾರಕ್ಕೆ ಪೂರಕ ವಾತಾವರಣ ದೊರಕಿದ್ದು ಕಾಲೇಜಿನಲ್ಲಿ. ಅಲ್ಲಿ ನಡೆಯುತ್ತಿದ್ದ ಫ್ಯಾಷನ್‌ ಷೋಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ತಮ್ಮ ಮಾಡೆಲಿಂಗ್‌ ಕನಸನ್ನು ಪೋಷಿಸಿದರು.
 
ಬಹುಮುಖ ಪ್ರತಿಭೆಯ ಕೀರ್ತನಾ, ಓದಿನಲ್ಲಿಯೂ ಮುಂದು. ಪಿಯುಸಿಯಲ್ಲಿ ಶೇ 95 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇದೇ ಕಾರಣಕ್ಕೆ ಮಗಳು ಚೆನ್ನಾಗಿ ಓದಿ, ಒಳ್ಳೆಯ ವೃತ್ತಿಗೆ ಸೇರಬೇಕು ಎಂಬ ಆಸೆ ಅಪ್ಪನಿಗೆ.

ತಮ್ಮ ಮಗಳು ರೂಪದರ್ಶಿಯಾಗುವುದು ಅಪ್ಪ–ಅಮ್ಮನಿಗೆ ಸುತರಾಂ ಇಷ್ಟವಿರಲಿಲ್ಲ. ಆದರೆ ಕುಟುಂಬದ ವಿರೋಧದ ನಡುವೆಯೂ ಇವರು ಆಯ್ದುಕೊಂಡಿದ್ದು ಫ್ಯಾಷನ್‌ ಜಗತ್ತನ್ನೇ. ಹಾಗಾಗಿ ಮಗಳ ಆಸಕ್ತಿ ಕ್ಷೇತ್ರಕ್ಕೆ ವಿರೋಧ ವ್ಯಕ್ತಪಡಿಸಲಾಗದೆ ಸಮ್ಮತಿ ಸೂಚಿಸಿದ್ದಾರೆ.

‘ಚೆನ್ನಾಗಿ ಓದುತ್ತಿರುವುದರಿಂದ ಅಪ್ಪನಿಗೆ ನಾನು ಸಿಎ ಮಾಡಬೇಕೆಂಬ ಹಂಬಲ. ಆದರೆ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ಭರವಸೆಯನ್ನು ನೀಡಿ ಈ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದೇನೆ’ ಎನ್ನುತ್ತಾರೆ ಕೀರ್ತನಾ.

‘ನಟಿಯಾಗಬೇಕೆಂಬುದು ನನ್ನ ಆಸೆ. ಆದರೆ ಸಿನಿಮಾ ಕ್ಷೇತ್ರದಲ್ಲಿ ನನಗೆ ಯಾರ ಸಂಪರ್ಕವೂ ಇಲ್ಲ. ಹಾಗಾಗಿ ರೂಪದರ್ಶಿಯಾಗಿ ಯಾವುದಾದರೂ ಕಿರೀಟ ಗೆದ್ದುಕೊಂಡರೆ ಜನರು ಗುರುತಿಸುತ್ತಾರೆ. ಇದರಿಂದ ಸಿನಿಮಾದಲ್ಲಿ ಅವಕಾಶವೂ ಸಿಗುತ್ತದೆ ಎಂಬ ಕಾರಣಕ್ಕೆ ಅಂತರ್ಜಾಲದಲ್ಲಿ ಹುಡುಕಿದಾಗ ‘ಸಿಲ್ವರ್‌ ಸ್ಟಾರ್‌ ಮಾಡೆಲಿಂಗ್‌ ಏಜೆನ್ಸಿ’ಯ ಮಾಹಿತಿ ದೊರಕಿತು. ಅಲ್ಲಿಯೇ ನಾನೀಗ ತರಬೇತಿ ಪಡೆಯುತ್ತಿದ್ದೇನೆ’ ಎಂದು ಮಾಡೆಲಿಂಗ್‌ ಪಯಣದ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾರೆ.

ನಟಿಯಾಗಬೇಕೆಂಬುದು ಇವರ ಕನಸಾದರೂ, ಎಲ್ಲಿಯೂ ಇವರು ನಟನಾ ತರಬೇತಿ ಪಡೆದುಕೊಂಡಿಲ್ಲ. ‘ನನಗೆ ನಟನೆಯ ಕಲೆ ಸಿದ್ಧಿಸಿದೆ.  ಅದಕ್ಕಾಗಿ ತರಬೇತಿ ಪಡೆಯಬೇಕೆಂದು ನನಗೆ ಅನಿಸಿಲ್ಲ’ ಎನ್ನುವ ಆತ್ಮವಿಶ್ವಾಸ ಇವರದು.

ಫಿಟ್‌ನೆಸ್‌ ವಿಷಯ
ಸಿನಿಮಾ ಎಂದ ಮೇಲೆ ಸೌಂದರ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ ಎನ್ನುವುದು ಅವರ ಅಭಿಮತ. ಈ ವಿಷಯದಲ್ಲಿ ಸದಾ ಜಾಗೃತವಾಗಿರುತ್ತಾರೆ. ಹಾಗೆಂದು ಸಣ್ಣಗಾಗಬೇಕೆಂದು ಊಟ ತಿಂಡಿ ಬಿಡುವ ಜಾಯಮಾನ ಇವರದ್ದಲ್ಲ. ತಿನ್ನುವುದನ್ನೇ ಎಚ್ಚರಿಕೆಯಿಂದ ತಿನ್ನುವ ರೂಢಿ. ತೀರಾ ಕಟ್ಟುನಿಟ್ಟಾದ ಆಹಾರ ಪಥ್ಯ ಪಾಲಿಸದಿದ್ದರೂ, ಕಂಡದ್ದೆಲ್ಲ ತಿನ್ನುವ ತಿಂಡಿಪೋತಿಯೂ ಅಲ್ಲ. ಪ್ರೊಟೀನ್‌ಯುಕ್ತ ಆಹಾರಕ್ಕೆ ಇವರ ಮೊದಲ ಆದ್ಯತೆ. 

ರಾತ್ರಿ ಊಟ ತ್ಯಜಿಸಿರುವ ಕೀರ್ತನಾ, ಹಣ್ಣು, ತರಕಾರಿಗಳ ಸಲಾಡ್‌ ಸೇವಿಸುತ್ತಾರೆ. ಸಪೂರವಾಗಿರಬೇಕೆಂಬ ಕಾರಣಕ್ಕೆ ಜಂಕ್‌ಫುಡ್‌ಗಳನ್ನು ಇವರು ತ್ಯಜಿಸಿದ್ದಾರೆ.

ಚರ್ಮದ ರಕ್ಷಣೆಗೆ ಯಾವುದೇ ಫೇಸ್‌ಪ್ಯಾಕನ್ನು ಇವರು ಬಳಸುವುದಿಲ್ಲ. ಬದಲಾಗಿ ಚೆನ್ನಾಗಿ ನೀರು ಕುಡಿಯುತ್ತಾರೆ. ಗುಣಮಟ್ಟದ ಮೇಕಪ್‌ ಬಳಸುತ್ತಾರೆ. ಕೊಬ್ಬರಿ ಎಣ್ಣೆ ಬಳಸಿ  ಮೇಕಪ್‌ ತೆಗೆಯುತ್ತಾರೆ.

ನೃತ್ಯಗಾರ್ತಿಯಾಗಿರುವುದರಿಂದ ಜಿಮ್‌ನಲ್ಲಿ ಬೆವರಿಳಿಸುವ ಸಂದರ್ಭವೂ ಇವರಿಗೆ ಎದುರಾಗಿಲ್ಲ. ವಾರಕ್ಕೊಮ್ಮೆ ಯೋಗಾಭ್ಯಾಸ ಮಾಡುತ್ತಾರೆ. ಪ್ರತಿದಿನ ತಪ್ಪದೆ ಒಂದು ಗಂಟೆ ವಾಕಿಂಗ್‌ ಮಾಡುವುದು ಇವರ ಅಭ್ಯಾಸ.  

‘ಮಿಸ್‌  ಇಂಡಿಯಾ ಸೌತ್‌’ಸ್ಪರ್ಧೆಗೆ ತಯಾರಿ
‘ಮಿಸ್‌ ಇಂಡಿಯಾ ಸೌತ್‌–2017ಕ್ಕೆ ಆಯ್ಕೆಯಾಗಿರುವ ಇವರು ಗೆಲುವಿನ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
‘ಫೆಬ್ರುವರಿ ಎರಡನೇ ವಾರದಲ್ಲಿ  ನಗರದಲ್ಲಿಯೇ ಸ್ಪರ್ಧೆ ನಡೆಯುತ್ತದೆ. ಇದರಲ್ಲಿ ಗೆಲ್ಲಲೇಬೇಕೆಂಬ ಹಟ ಇದೆ. ಈಗಾಗಲೇ ಸ್ಪರ್ಧೆಗೆ ತಯಾರಿ ಪ್ರಾರಂಭವಾಗಿದೆ. ಜನಪ್ರಿಯ ಮಾಡೆಲ್‌ಗಳು ತರಬೇತಿ ನೀಡುತ್ತಿದ್ದಾರೆ.  ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಕೀರ್ತನಾ.

**

ಒಳ್ಳೆಯ ರೂಪದರ್ಶಿ ಎನಿಸಿಕೊಳ್ಳಲು ಆತ್ಮವಿಶ್ವಾಸ, ಉತ್ತಮ ಅಂಗ ಸೌಂದರ್ಯ ಎರಡೂ ಮುಖ್ಯ. ಒಳ್ಳೆಯ ಅಂಗಸೌಂದರ್ಯ ಇದ್ದಾಗ ಮಾತ್ರ ಆತ್ಮವಿಶ್ವಾಸ ಮೂಡಲು ಸಾಧ್ಯ
– ಕೀರ್ತನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT