ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದನೊಳಗೊಬ್ಬ ಕಲಾವಿದ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಬಣ್ಣ ಮೂಡಿಸುತ್ತಿದ್ದ ರೇಖೆಗಳನ್ನು ಕಣ್ಣೊಳಗೆ ಜೋಪಾನ ಮಾಡುತ್ತಾ ಬೆಳೆದವ ನಾನು. ಕಣ್ಣಲ್ಲಿ ಅಚ್ಚೊತ್ತಿದ ಚಿತ್ರಗಳನ್ನು ಪೆನ್ಸಿಲ್‌ ಹಿಡಿದು ಭಟ್ಟಿ ಇಳಿಸುವುದನ್ನು ಚಿಕ್ಕಂದಿನಿಂದಲೂ ರೂಢಿಸಿಕೊಳ್ಳುತ್ತಲೇ ಬಂದೆ. ಓರೆ ಕೋರೆಯಾಗಿ ಮೂಡುತ್ತಿದ್ದ ಆ ಚಿತ್ರಗಳಿಗೆ ಇತ್ತೀಚೆಗೆ ಒಂದು ಮಟ್ಟಿನ ಖದರು ಸಿಕ್ಕಿದೆ. ನಂದೊಂದು, ಅವರದ್ದೊಂದು ಚಿತ್ರ ಬಿಡಿಸಿಕೊಡಿ ಎನ್ನುವ ಅಭಿಮಾನಿಗಳು ಹೆಚ್ಚಿದ್ದಾರೆನ್ನಿ.

ಓ, ಅಂದಹಾಗೆ ನಾನು ರವಿ ಸಾಲಿಯಾನ್‌. ‘ಆಮಂತ್ರಣ’ ಎನ್ನುವ ಕಿರುಚಿತ್ರ, ‘ಗೀತಾಂಜಲಿ’ ಧಾರಾವಾಹಿಯ ಕಿರಣ್‌ ಪಾತ್ರಗಳಲ್ಲಿ ನನ್ನನ್ನು ನೀವು ನೋಡಿರುತ್ತೀರಿ, ನಟನಾಗಿ. ಅಭಿನಯ ಎಳೆಗೆ ಜೋತಾಡಿಕೊಂಡು ಬೆಳೆಯುತ್ತಿರುವ ನನಗೆ, ಮನದ ಮೂಲೆಯಲ್ಲಿ ಬೆಳೆಯಯತ್ತಿರುವ ಚಿತ್ರಕಲಾವಿದನನ್ನು ಗುರುತಿಸಿಕೊಳ್ಳಲು ಸಿಕ್ಕ ಅವಕಾಶಗಳು ಕಡಿಮೆಯೇ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು, ಸರಪಾಡಿ ಗ್ರಾಮದ ಪೆರ್ಲ ಬಿಯಪಾದೆಯಲ್ಲಿ ನಾನು ಹುಟ್ಟಿದ್ದು. ಶಾಲಾ ಕಾಲೇಜುಗಳಲ್ಲಿ ನಾನು ಮೂಡಿಸಿದ ಚಿತ್ರಗಳಿಗೆ ಹಲವು ಪ್ರಶಸ್ತಿ ಸಿಕ್ಕಿದೆ. ಐಟಿಐ ಮಾಡಿ, ಡಿಪ್ಲೊಮಾ ಮುಗಿಸಿದೆ. ಮನೆಯಲ್ಲಿ ಬಡತನ ಕಾಡುತ್ತಿದ್ದರಿಂದ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಅಕೌಂಟೆಂಟ್‌ ಆಗಿ ಸೇರಿಕೊಂಡೆ.

ಬಿಡುವು ಸಿಕ್ಕಾಗಲೆಲ್ಲಾ ಚಿತ್ರ ಮೂಡಿಸುತ್ತಾ ದೇವಸ್ಥಾನದ ಅಲ್ಲಲ್ಲಿ ಅವುಗಳನ್ನು ಪ್ರತಿಷ್ಠಾಪಿಸಿದೆ. ಚಿತ್ರ ಸಾಂಗತ್ಯದ ನನ್ನ ಈ ಹುಚ್ಚಿಗೆ ದಿನೇಶ್‌ ಎನ್ನುವವರು ಕರೆದು ಕಲಾವಿದನ ಕೆಲಸ ಕೊಟ್ಟರು. ಶಾಲಾ ಪ್ರಾಜೆಕ್ಟ್‌ಗಳಲ್ಲಿ ನನ್ನೊಳಗಿನ ಕಲಾವಿದನಿಗೆ ರೂಪು ಸಿಕ್ಕಿತು. ಪೆನ್ಸಿಲ್‌, ಸ್ಕೆಚ್‌ಪೆನ್‌, ಆಯಿಲ್‌ ಪೇಂಟ್‌ ನಂಗಿಷ್ಟ, ಬೇರೆ ಬೇರೆ ಊರುಗಳ ಒಡನಾಟದಲ್ಲಿ ದೇಹ ಅಲರ್ಜಿಗೆ ತುತ್ತಾಯಿತು. ಆ ಬಣ್ಣಗಳು ನನಗೆ ಸಾಟಿಯಲ್ಲ ಎಂದು ಪೆನ್ಸಿಲ್‌ ಕಲೆಗೆ ನನ್ನನ್ನು ಸೀಮಿತವಾಗಿಸಿಕೊಂಡೆ.

ಅಲ್ಲಿಂದ ಹೊರಟ ನನ್ನ ಪಯಣ ನಾಯಂಡಹಳ್ಳಿಯ ಮಾರುತಿ ಮೋಟಾರ್ಸ್‌ನಿಂದ ಟೊಯೊಟಾ ಕಂಪೆನಿವರೆಗೆ ಬಂದು ನಿಂತಿದೆ. ಕೆಲಸದ ಜೊತೆಜೊತೆಗೆ ಕಲಾವಿದನಾಗಿ ಗುರುತಿಸಿಕೊಳ್ಳುವ ಪ್ರಯತ್ನ ಇಲ್ಲಿಯೂ ನಡೆದಿದೆ. 

ಬದುಕಿಗಾಗಿ ವೃತ್ತಿ, ಮನಸು ಬೇಡುವ ಚಿತ್ರಕಲೆಯಲ್ಲೇ ದಿನದೂಡುತ್ತಿದ್ದ ನನಗೆ  ಬದುಕು ಇಷ್ಟೇ ಅಲ್ಲ ಎನಿಸತೊಡಗಿತು. ಹೀಗಾಗಿ ನಾಗರಾಜ ಕೋಟೆ ಅವರ ಬಣ್ಣ ಇನ್‌ಸ್ಟಿಟ್ಯೂಟ್‌ ಸೇರಿಕೊಂಡೆ. ‘ಜೋಗಿಯ ರಾಣಿ’ ನಾಟಕಕ್ಕೆ ಬಣ್ಣ ಹಚ್ಚಿ ಮೆಚ್ಚುಗೆ ಗಳಿಸಿದೆ. ಅಲ್ಲಿಂದ ಕಿರುಚಿತ್ರ, ಧಾರಾವಾಹಿ ನಟನಾ ಅವಕಾಶಗಳು ಸಿಕ್ಕವು.

ಟೊಯೊಟಾ ಕಂಪೆನಿಯಲ್ಲಿ ಪಾಳಿ ಪ್ರಕಾರ ಕೆಲಸ ಮಾಡುವ ನಾನು, ಸಿಕ್ಕ ಸಮಯದಲ್ಲಿ ಧಾರಾವಾಹಿಗಾಗಿ ಬಣ್ಣ ಹಚ್ಚುತ್ತೇನೆ. ಸ್ನೇಹಿತರಿಂದ, ಅಭಿಮಾನಿಗಳಿಂದ ಬರುವ ಆರ್ಡರ್‌ಗಳಿಗೆ ರಾತ್ರಿ ಕುಳಿತು ಚಿತ್ರ ಮೂಡಿಸುತ್ತೇನೆ.

ನಾನು ಹೆಚ್ಚಾಗಿ ಪೋರ್ಟ್ರೇಟ್‌ ಚಿತ್ರವನ್ನು ಬಿಡಿಸುವುದು. ಫೇಸ್‌ಬುಕ್‌ನಲ್ಲಿ ನಾನು ಶೇರ್‌ ಮಾಡಿದ ಚಿತ್ರಗಳನ್ನು ಕಂಡು ಅನೇಕರು ತಮಗಿಷ್ಟದವರ ಚಿತ್ರ ಬಿಡಿಸಿಕೊಡಿ ಎನ್ನುತ್ತಾರೆ. ಹುಟ್ಟುಹಬ್ಬ ಸೇರಿದಂತೆ ಅನೇಕ ಶುಭ ದಿನಗಳಂದು ಅವು ಉಡುಗೊರೆಯಾಗಿ ಸಲ್ಲುತ್ತವೆ.

ಜಲವರ್ಣ, ತೈಲವರ್ಣಗಳಲ್ಲಿಯೂ  ಚಿತ್ರ ಮೂಡಿಸಿ ಗೊತ್ತು. ಆದರೆ ನನಗೆ ಪೆನ್ಸಿಲ್‌ ರೇಖೆಗಳೇ ಹೆಚ್ಚು ಆಪ್ಯಾಯಮಾನ. ಬಾಲ್ಯದಿಂದಲೂ ಚಿತ್ರಗಳನ್ನು ನೋಡುತ್ತಾ, ಚಿತ್ರಸುತ್ತಾ ಬೆಳೆದ ನನಗೆ ಕಲಾ ಗುರು ಎಂದು ಯಾರೂ ಇಲ್ಲ. ಇತ್ತೀಚೆಗೆ ಆನ್‌ಲೈನ್‌ ಅನ್ನೇ ಗುರುವಾಗಿಸಿಕೊಂಡಿದ್ದೇನೆ.

ಅಂದಹಾಗೆ ಪೆನ್ಸಿಲ್‌ ಕಲೆಯಲ್ಲಿ ಪ್ರಖ್ಯಾತಿ ಗಳಿಸಿರುವ ಬ್ರೆಜಿಲ್‌ನ ಫಾಬಿಯೊ ರಾಂಗೆಲ್‌ ನನಗೆ ಕೂಡ ಮಾರ್ಗದರ್ಶನ ನೀಡುತ್ತಾರೆ. ಇಂಗ್ಲಿಷ್‌ ಬಾರದ ಅವರಿಗೆ ನಾನು ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ಪೋರ್ಚುಗೀಸ್‌ ಭಾಷೆಯಲ್ಲಿ ಸಂದೇಶ ಕಳುಹಿಸುತ್ತೇನೆ. ಅವರು ಕಳುಹಿಸುವ ಸಂದೇಶವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿಕೊಳ್ಳುತ್ತೇನೆ. ಹೀಗೆ ಅವರಿಂದ ಕಲಾಪಟ್ಟು ಕಲಿತಿದ್ದು ಅಪಾರ. ಅವರೇ ಒಂದರ್ಥದಲ್ಲಿ ನನಗೆ ಗುರು. ಅಂತೆಯೇ ರಷ್ಯದ ವ್ಲಾಡಿಮಿರ್‌ ವೋಲ್ಗೇವ್‌ ಅವರನ್ನೂ ನಾನು ಆರಾಧಿಸಿ ಅನುಕರಿಸುತ್ತೇನೆ. ಸಂದೇಶ ಮುಖೇನವೇ ಒಂದಿಷ್ಟು ಹೊಸದನ್ನು ಕಲಿಯುತ್ತ, ಈ ಮೊದಲು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಸಾಗುತ್ತಿದ್ದೇನೆ.

ಅನೇಕರು ‘ಇದು ನಿಜವಾಗಲೂ ನೀನೆ ಚಿತ್ರಿಸಿದ್ದೋ ಅಥವಾ ಅಪ್ಲಿಕೇಶನ್‌ ಬಳಸಿದ್ದೀಯೊ’ ಎಂದು ಕೇಳಿದಾಗ ನಾನು ಹಿರಿಹಿರಿ ಹಿಗ್ಗುತ್ತೇನೆ. ಪ್ರಯತ್ನಕ್ಕೆ ಸಿಕ್ಕ ಕಾಂಪ್ಲಿಮೆಂಟ್‌ ಎಂದು ಹರ್ಷಿಸುತ್ತೇನೆ. ಅನೇಕರು ‘ನಮಗೂ ಚಿತ್ರಬಿಡಿಸೋಕೆ ಹೇಳಿಕೊಡಿ’ ಎನ್ನುತ್ತಾರೆ. ನಾನೇ ಇನ್ನೂ ಕಲಿಯುತ್ತಿರುವಾಗ ಬೇರೆಯವರಿಗೆ ಹೇಗೆ ಹೇಳಿಕೊಡಲಿ.

ಚಿತ್ರಕಲೆ ನನ್ನ ಮೊದಲ ಆದ್ಯತೆಯೇ ಆದರೂ ನಟನೆಯೂ ನಂಗಿಷ್ಟ. ರಾಜೇಶ್‌ ಧ್ರುವ, ಗೀತಾಂಜಲಿ ಧಾರಾವಾಹಿಯ ನಿರ್ದೇಶಕ ಸಂಜೀವ್‌ ತಗಡೂರು ಸೇರಿದಂತೆ ಅನೇಕರು ನನ್ನ ನಟನಾ ಕನಸಿಗೆ ನೀರೆರೆದು ಪೋಷಿಸಿದ್ದಾರೆ. ನಾಳೆಯ ಬಗ್ಗೆ ಯೋಚಿಸದೆ ಇಂದಿನ ದಿನವನ್ನು ಎಂಜಾಯ್‌ ಮಾಡುವ ಮನಸ್ಥಿತಿ ನಂದು. ಹೀಗಾಗಿ ಭವಿಷ್ಯತ್ತಿನ ಬಗೆಗೆ ದೊಡ್ಡ ಕನಸುಗಳನ್ನೇನೂ ಹೆಣೆದಿಲ್ಲ. 

*

ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಚಿಕ್ಕಂದಿನಲ್ಲೇ ಅದನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಬೆಳೆಯುವಂತೆ ಮಾಡಬೇಕಾದುದು ತಂದೆತಾಯಿಗಳ ಕರ್ತವ್ಯ.
– ರವಿ ಸಾಲಿಯಾನ್‌, ಕಲಾವಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT