ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ನಂತರದ ಜಗತ್ತು

ಪ್ರಜಾಪ್ರಭುತ್ವದ ಮೌಲ್ಯ ಮತ್ತು ಪರಿಸರ ಸುರಕ್ಷತೆಗಾಗಿ, ಹಲವು ಮಿತಿಗಳ ನಡುವೆಯೂ ಈ ಮುತ್ಸದ್ದಿ ಪಟ್ಟ ಶ್ರಮವನ್ನು ಯಾರೂ ತಳ್ಳಿಹಾಕಲಾರರು
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಜನರು ನೀಡಿದ್ದ ಅಧಿಕಾರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತಮ್ಮ ದೇಶವನ್ನು ಮತ್ತೊಂದು ಮನ್ವಂತರಕ್ಕೆ ಹೊರಳಿಕೊಳ್ಳಲು ಬಿಟ್ಟು, ಮೆಲ್ಲನೆ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಆದರೆ, ಅವರು ಬಿಟ್ಟುಹೊರಡುತ್ತಿರುವ ಆಡಳಿತ ದೃಷ್ಟಿಕೋನ ಮತ್ತು ಕಾರ್ಯಶೈಲಿಯ ಪರಂಪರೆ ಮಾತ್ರ ಭವಿಷ್ಯದ ಜಗತ್ತಿನ ಆಲೋಚನೆ ಹಾಗೂ ಕಾರ್ಯವಿಧಾನಗಳನ್ನು ಪ್ರಚೋದಿಸುತ್ತಲೇ ಇರುವಂಥವು. ಈ ಪ್ರಭೆಯಿಂದ ನಮ್ಮ ದೇಶವೂ ಹೊರಗುಳಿಯಲಿಕ್ಕಿಲ್ಲ!

ಅಮೆರಿಕದ ಇಲಿನಾಯ್, ಪ್ರಸಿದ್ಧ ಷಿಕಾಗೊ ನಗರ ಇರುವ ರಾಜ್ಯ. ಒಬಾಮ ರಾಷ್ಟ್ರಾಧ್ಯಕ್ಷರಾಗುವುದಕ್ಕೂ ಪೂರ್ವದಲ್ಲಿ, ಈ ರಾಜ್ಯದಿಂದಲೇ ಸಂಸತ್ ಸದಸ್ಯರಾಗಿ (ಸೆನೆಟರ್) ಆಯ್ಕೆಯಾಗಿದ್ದರು. ತಮ್ಮ ಊರು ಷಿಕಾಗೊ  ಕುರಿತು ಅಭಿಮಾನಪಡುವ ಅವರು ಅಲ್ಲಿನ ಜನಜೀವನದ ಬಹುಪರಿಚಿತ  ನಾಯಕ. ಹಾಗೆಂದೇ, ಅಲ್ಲಿನ ದೈನಂದಿನ ಚರ್ಚೆ, ಚಟುವಟಿಕೆಗಳಲ್ಲೂ ಒಬಾಮ ಪ್ರಸ್ತಾಪ ಅಗುತ್ತಲೇ ಇರುತ್ತಾರೆ.

2012ರಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಸಂಶೋಧನೆ ಮತ್ತು ಅಧ್ಯಾಪನ ಕಾರ್ಯಕ್ಕಾಗಿ ಫೆಲೊಷಿಪ್ ಒಂದರ ಅನ್ವಯ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ನಾನಿದ್ದೆ. ಆ ವರ್ಷ ಅಧ್ಯಕ್ಷೀಯ ಚುನಾವಣಾ ವರ್ಷವಾಗಿದ್ದರಿಂದ ಸಾರ್ವಜನಿಕವಾಗಿ ರಾಜಕೀಯ ಚರ್ಚೆಗಳು ಹೆಚ್ಚಾಗಿಯೇ ನಡೆಯುತ್ತಿದ್ದವು. ಇದರಿಂದ ಅಮೆರಿಕದ ರಾಜಕೀಯ ಇತಿಹಾಸ, ಆಡಳಿತ ಕ್ರಮವನ್ನು ಹತ್ತಿರದಿಂದ ಅರಿಯುವ ಅವಕಾಶಗಳು ದೊರೆತವು.

ದೇಶದ ಬೌದ್ಧಿಕ ಕೋಶಕೇಂದ್ರಗಳಂತೆ ಕಾರ್ಯ ನಿರ್ವಹಿಸುವ ಅಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಈ ಮೂಲಕ ದೊರಕಿದ ಕೆಲ ಅನುಭವಗಳನ್ನು ನೆನಪಿಸಿಕೊಳ್ಳುತ್ತ, ಒಬಾಮ ಅವರ ಜೀವನದೃಷ್ಟಿಯನ್ನು ಗೌರವಿಸುವುದು ಈ ಬರಹದ ಉದ್ದೇಶ. ಒಂದನೆಯದು, ಅವರ ವಿಶಾಲವಾದ ರಾಜಕೀಯ ದೃಷ್ಟಿಕೋನದ ಕುರಿತು. ರಾಜಕೀಯ ಕ್ಷೇತ್ರದಲ್ಲಿ ಪರಮ ವಿರೋಧದ ನಿಲುವು ಉಳ್ಳವರನ್ನೂ ಗೌರವಿಸುವುದು ಒಬಾಮ ಅವರ ಒಂದು ಗುಣವಿಶೇಷ.

ಲೈಂಗಿಕ ಅಲ್ಪಸಂಖ್ಯಾತರು ಮತ್ತು ಗರ್ಭಪಾತದ ಬಗೆಗಿನ ಮಹಿಳೆಯರ ಹಕ್ಕಿನ ಕುರಿತಾಗಿ ಪ್ರಗತಿಪರ ಧೋರಣೆ ಹೊಂದಿದ್ದ ಒಬಾಮ, ಆಗ ದೇಶದ ಬಹುಪಾಲು ಬಿಳಿಯರು ಮತ್ತು ಧಾರ್ಮಿಕ ಸಂಪ್ರದಾಯವಾದಿಗಳ ಕೋಪಕ್ಕೆ ತುತ್ತಾಗಿದ್ದರು. ನಾನಿದ್ದ ವಿಶ್ವವಿದ್ಯಾಲಯದ ಒಬ್ಬ ಹಿರಿಯ ಮತ್ತು ಗೌರವಾನ್ವಿತ ಪ್ರಾಧ್ಯಾಪಕರು ಸಾರ್ವಜನಿಕವಾಗಿ ಒಬಾಮರ ಈ ನಿಲುವುಗಳನ್ನು ಕಾರಣಸಹಿತ ವಿರೋಧಿಸುತ್ತ ದೇಶದ ಗಮನ ಸೆಳೆದಿದ್ದರು. ಹೀಗಾಗಿ, ಡೆಮಾಕ್ರಟಿಕ್‌ ಪಕ್ಷದವರ ಅಪಾರ ವಿರೋಧವನ್ನೂ ಕಟ್ಟಿಕೊಂಡಿದ್ದರು.

ಆದರೆ, ಆ ವರ್ಷ ಶತಮಾನೋತ್ಸವ ಆಚರಿಸುತ್ತಿದ್ದ ವಿಶ್ವವಿದ್ಯಾಲಯದ ‘ಅಬ್ರಹಾಂ ಲಿಂಕನ್’ ಹೆಸರಿನ ಕಾಲೇಜೊಂದರ ಶತಮಾನೋತ್ಸವ ಸಂದರ್ಭದ ಸಂದೇಶವೊಂದರಲ್ಲಿ, ಆ ಪ್ರಾಧ್ಯಾಪಕರು ದೇಶಕ್ಕೆ,  ಶೈಕ್ಷಣಿಕ ರಂಗಕ್ಕೆ ಸಲ್ಲಿಸಿದ್ದ ಕೊಡುಗೆಗಳನ್ನು ಮುಕ್ತಕಂಠದಿಂದ ಒಬಾಮ ಶ್ಲಾಘಿಸಿದರು. ಅವರೊಂದಿಗೆ ಇದ್ದ ತಮ್ಮ ಅಭಿಪ್ರಾಯಭೇದವನ್ನು ಸ್ಪಷ್ಟವಾಗಿ ಹೇಳುತ್ತಲೇ, ಪರಸ್ಪರ ವಿರುದ್ಧದ ನಿಲುವುಗಳನ್ನು ಮುಕ್ತವಾಗಿ ಚರ್ಚಿಸುವ ಮೂಲಕ ಸಮಾಜ ಚಲನಶೀಲವಾಗಿರುವಂತೆ ನೋಡಿಕೊಳ್ಳುವ ಅಗತ್ಯವನ್ನೂ ಪುನರುಚ್ಚರಿಸಿದರು!

ಎರಡನೆಯದು, ಸರ್ಕಾರದ ನೀತಿಗಳನ್ನು ಜನಸಾಮಾನ್ಯರ ದೃಷ್ಟಿಯಿಂದ ಸದಾ ಗಮನಿಸುವ ಅವರ ಎಚ್ಚರದ ನಡೆ. ಆರ್ಥಿಕ ಹಿಂಜರಿತದಿಂದ ಸತತ ನಾಲ್ಕು ವರ್ಷಗಳಿಂದ ಸಂಕಷ್ಟಕ್ಕೆ ಈಡಾಗಿದ್ದ ದೇಶ ಆಗಷ್ಟೇ ಸಾಮಾನ್ಯ ಸ್ಥಿತಿಗೆ ಬರತೊಡಗಿತ್ತು. ಆದರೂ ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳ ಅರ್ಥಿಕ ಪರಿಸ್ಥಿತಿ ಕಷ್ಟದಲ್ಲಿಯೇ ಇತ್ತು. ಇಲಿನಾಯ್ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿದ್ದ ಚಿಕ್ಕ ಪಟ್ಟಣದ ಅನೇಕ ಅಂಗಡಿ-ಉದ್ಯಮಗಳು ನಷ್ಟದಲ್ಲಿಯೇ ಸಾಗುತ್ತಿದ್ದವು.

ಬಹುಸಂಖ್ಯೆಯಲ್ಲಿದ್ದ ವಿದ್ಯಾರ್ಥಿ ಗ್ರಾಹಕರಲ್ಲಿ ಹೆಚ್ಚಿನವರು ಜಾಲತಾಣಗಳ ಮೂಲಕ ಖರೀದಿ ಮಾಡುತ್ತಿದ್ದುದರಿಂದ, ವ್ಯಾಪಾರವೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗಿ, ಸ್ಥಳೀಯ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದರು.

ಈ ವಿಷಯಗಳೆಲ್ಲ ವಿಶ್ವವಿದ್ಯಾಲಯದ ಚರ್ಚೆ-ಚಿಂತನ ಗೋಷ್ಠಿಗಳಲ್ಲೂ ಸದಾ ಅನುರಣಿಸುತ್ತಿದ್ದವು. ಆನಂತರದ ದಿನಗಳಲ್ಲಿ ಇದಕ್ಕೆಲ್ಲ ಪ್ರತಿಕ್ರಿಯೆಯೆಂಬಂತೆ ಸ್ಥಳೀಯ ಕರೆನ್ಸಿಗಳನ್ನು ಬಳಸಲು (ಖಾಸಗಿ ಸಂಸ್ಥೆಗಳು ಸೀಮಿತವಾಗಿ ಬಳಸುವ ಕೂಪನ್ನುಗಳಂತೆ) ವಿದ್ಯಾರ್ಥಿ ಸಂಘಟನೆಗಳು ಪ್ರಯತ್ನಿಸತೊಡಗಿದವು.

ಗ್ರಾಹಕರು ತಮ್ಮ ಹಣವನ್ನು ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಬಳಕೆ ಮಾಡಿ ಅಲ್ಲಿನ ವ್ಯಾಪಾರ, ಉದ್ಯಮಗಳಿಗೆ ಉಸಿರು ತುಂಬಿಸುವ ಸಣ್ಣದಾದರೂ ಪ್ರಯತ್ನವಿದಾದ್ದರಿಂದ, ಇದಕ್ಕೆ ವ್ಯಾಪಕ ಸ್ಪಂದನೆ ದೊರಕತೊಡಗಿತು. ಇದು ಕಾನೂನುಬದ್ಧವೇ ಆದರೂ, ಕೆಲವು ಬೃಹತ್ ಬಹುರಾಷ್ಟ್ರೀಯ ಉದ್ಯಮಗಳು ಇದನ್ನೊಂದು ಸಾಮಾಜಿಕ ಪಿಡುಗೆಂಬಂತೆ ಚಿತ್ರಿಸಿ, ರಾಷ್ಟ್ರಾಧ್ಯಕ್ಷರ ಬಳಿಗೂ ದೂರನ್ನು ಒಯ್ದವು. ಆದರೆ, ಒಬಾಮ ಇದನ್ನು ಪುರಸ್ಕರಿಸಲಿಲ್ಲ.

ಬದಲಿಗೆ, ಪ್ರಜಾಸತ್ತಾತ್ಮಕವಾಗಿ ತಳಮಟ್ಟದಲ್ಲಿ ಕೈಗೊಳ್ಳುವ ಇಂಥ ಸಮುದಾಯದ ಪ್ರಯತ್ನಗಳನ್ನು ಶ್ಲಾಘಿಸಿದರು! ಮುಂದೊಂದು ದಿನ ಆ ಪ್ರದೇಶಕ್ಕೆ ಭೇಟಿ ನೀಡಿದಾಗ, ಸ್ಥಳೀಯವಾಗಿ ಬಳಸುವ ಅಂಥ ಟಿಕೆಟುಗಳನ್ನೇ ಬಳಸಿ ಅವರು ಸಣ್ಣಪುಟ್ಟ ಖರೀದಿ ಮಾಡಿದ ಸುದ್ದಿಯನ್ನು ತಿಳಿದು ವಿದ್ಯಾರ್ಥಿಗಳು ಸಂಭ್ರಮಿಸಿದರು!

ಮೂರನೆಯದು ಹಾಗೂ ಬಹಳ ಮುಖ್ಯವಾದದ್ದು, ಭೂಮಿಯ ಸಂರಕ್ಷಣೆ ಕುರಿತಾಗಿನ ಕಾಳಜಿ. ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯ ನಾಶದಂಥ ಜಾಗತಿಕ ಪರಿಸರ ಸಮಸ್ಯೆಗಳ ಕುರಿತು ಗಂಭೀರ ಕಳಕಳಿಯನ್ನು ಒಬಾಮ  ನಿರಂತರವಾಗಿ ಪ್ರಕಟಿಸುತ್ತಲೇ ಬಂದರು. ಪರಿಸರ ಸ್ನೇಹಿ ಇಂಧನ ಮೂಲಗಳ ಕುರಿತಾಗಿ ಮೂಲಭೂತ ಸಂಶೋಧನೆ, ಉತ್ಪಾದನೆ ಹಾಗೂ ಬಳಕೆ ಕುರಿತು ಹಲವು ಹಂತಗಳಲ್ಲಿ ಮಹತ್ವದ ನಿರ್ಣಯಗಳನ್ನೂ ಕೈಗೊಂಡರು. ಅಮೆರಿಕದ ಆರ್ಥಿಕ ರಾಜಕಾರಣದಲ್ಲಿ ಅಪಾರ ಹಿಡಿತವಿರುವ ತೈಲ ಕಂಪೆನಿಗಳು ಮತ್ತು ರಾಜಕೀಯ ವಿರೋಧಿಗಳ ಪ್ರತಿರೋಧದ ನಡುವೆಯೇ, ದೀರ್ಘಕಾಲೀನ ಪರಿಣಾಮದ ಅನೇಕ ಯೋಜನೆಗಳನ್ನು ರೂಪಿಸಿದರು.

ನೀರಿನ ಮರುಬಳಕೆ, ಸಾವಯವ ತ್ಯಾಜ್ಯಾಧಾರಿತ ಕೃಷಿ, ಸೌರ ಮತ್ತು ಪವನ ಶಕ್ತಿಯಂಥ ಅನೇಕ ವಿಷಯಗಳಲ್ಲಿ ನಾನಿದ್ದ ವಿಶ್ವವಿದ್ಯಾಲಯದಲ್ಲೇ ಬೃಹತ್ ಅಂತರ್ಶಿಸ್ತೀಯ ಸಂಶೋಧನಾ ಯೋಜನೆಗಳು ಸರ್ಕಾರದ ನೆರವಿನಿಂದ ಪ್ರಾರಂಭವಾದವು. ಜನ ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಜೀವನವಿಧಾನ ಅಳವಡಿಸಿಕೊಳ್ಳಬೇಕಾದ ಅಗತ್ಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮೊದಲ ಬಾರಿಗೆ ಅಧ್ಯಕ್ಷರೊಬ್ಬರು ಅಮೆರಿಕದ ಜನರಿಗೆ ಕಿವಿಮಾತನ್ನು ಹೇಳತೊಡಗಿದರು!

ಈ ಎಲ್ಲ ಮೌಲ್ಯಗಳನ್ನು ಒಬಾಮ ತಮ್ಮ ಎರಡನೆಯ ಅವಧಿಯಲ್ಲೂ ಮುನ್ನೆಲೆಗೆ ತಂದರು. ಕೊನೆಗೆ, 2015ರ ಡಿಸೆಂಬರ್‌ನಲ್ಲಿ, ಮಾಲಿನ್ಯಕಾರಿ ಇಂಗಾಲದ ಸಂಯುಕ್ತಗಳ ಹೊರಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಒಪ್ಪುವ ಐತಿಹಾಸಿಕ ‘ಪ್ಯಾರಿಸ್ ಹವಾಮಾನ ಬದಲಾವಣೆ’ ಕುರಿತ ಜಾಗತಿಕ ಒಪ್ಪಂದಕ್ಕೆ ತಾವೂ ಸಹಿ ಹಾಕಿದರು, ಚೀನಾ ಸಹಿತ ಬಹುತೇಕ ಬೃಹತ್ ರಾಷ್ಟ್ರಗಳು ಒಡಂಬಡಿಕೆಗೆ ಒಪ್ಪಲೂ ಪ್ರೇರೇಪಿಸಿದರು!

ಆಂತರಿಕ ಮತ್ತು ಅಂತರರಾಷ್ಟ್ರೀಯ ರಾಜಕೀಯ ಸಮೀಕರಣಗಳ ಮಿತಿಗಳ ನಡುವೆಯೂ ತಮ್ಮ ನೈತಿಕ ಬಲ, ಜಾಣ್ಮೆ ಹಾಗೂ ಮನವೊಲಿಸುವ ಕಲೆಯಿಂದಾಗಿ, ಪ್ರಜಾಪ್ರಭುತ್ವದ ಮೌಲ್ಯಗಳು, ಜಾಗತಿಕ ಪರಿಸರ ಸುರಕ್ಷತೆಗಾಗಿ ಈ ಮುತ್ಸದ್ದಿ ಪಟ್ಟ ಶ್ರಮವನ್ನು ಯಾರೂ ತಳ್ಳಿಹಾಕಲಾರರು. ಹವಾಮಾನ ಬದಲಾವಣೆ, ಅಣ್ವಸ್ತ್ರ ಪ್ರಸರಣದಂಥ ಗಂಭೀರ ಸವಾಲುಗಳಿಂದಾಗಿ ಬೆದರುತ್ತಲೇ ಭವಿಷ್ಯವನ್ನು ಎದುರಿಸುತ್ತಿರುವ ಈ ವಿಶ್ವವು ವಿವೇಕದ ಪ್ರತೀಕವಾಗಿ ಒಬಾಮ ಅವರನ್ನು ಸದಾ ನೆನಪಿಸಿಕೊಳ್ಳುತ್ತ, ಪ್ರೇರಣೆ ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT