ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಾಕ್ ಒಬಾಮ ಹೆಜ್ಜೆ ಗುರುತು

ಅಮೆರಿಕ: ಮೊದಲ ಕಪ್ಪು ವರ್ಣೀಯ ಅಧ್ಯಕ್ಷನ ಆಡಳಿತ ಅಂತ್ಯ
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಎರಡು ಅವಧಿಗೆ (2008–2016) ಅಮೆರಿಕದ ಚುಕ್ಕಾಣಿ ಹಿಡಿದಿದ್ದ ಡೆಮಾಕ್ರಟಿಕ್‌ ಪಕ್ಷದ ಬರಾಕ್‌ ಒಬಾಮ ಅವರ ಆಡಳಿತದ ಕೊನೆಯ ದಿನ ಇಂದು (ಜ.19). ಶುಕ್ರವಾರ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 2008ರಲ್ಲಿ ಶ್ವೇತಭವನದ ಗದ್ದುಗೆ ಏರುವುದಕ್ಕೂ ಮೊದಲು ಒಬಾಮ ಅವರ ಮೇಲೆ ಹಲವು ನಿರೀಕ್ಷೆಗಳಿದ್ದವು. ಮತ್ತಷ್ಟು ನಿರೀಕ್ಷೆಗಳ ಭಾರದೊಂದಿಗೆ 2012ರಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು. ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಹಲವಾರು ಏಳು ಬೀಳುಗಳನ್ನು ಅವರು ಕಂಡಿದ್ದಾರೆ. ಅದರ ಇಣುಕು ನೋಟ ಇಲ್ಲಿದೆ.

ಆರ್ಥಿಕ ಹಿಂಜರಿತ: 2008ರಲ್ಲಿ ಬರಾಕ್‌ ಒಬಾಮ ಅವರು ಅಮೆರಿಕ ಅಧ್ಯಕ್ಷತೆ ವಹಿಸಿಕೊಂಡಾಗ ಅವರನ್ನು ಸ್ವಾಗತಿಸಿದ್ದು ಜಾಗತಿಕ ಆರ್ಥಿಕ ಹಿಂಜರಿತ! 2007ರ ಡಿಸೆಂಬರ್‌ನಲ್ಲಿ ಆರಂಭವಾದ ಆರ್ಥಿಕ ಹಿಂಜರಿತ 2009ರ ಜೂನ್‌ ವರೆಗೂ ಮುಂದುವರಿದಿತ್ತು. ಈ 19 ತಿಂಗಳ ಅವಧಿಯಲ್ಲಿ ಅಮೆರಿಕದ ಬ್ಯಾಂಕಿಂಗ್‌ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿತ್ತು.

ದೇಶದ ಹಣಕಾಸು ಸ್ಥಿತಿಯನ್ನು ಹಳಿಗೆ ತರಲು ಒಬಾಮ ಆಡಳಿತ ದೇಶದ ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ಮತ್ತು ಹಣಕಾಸು ನೀತಿಗಳನ್ನು ಜಾರಿಗೆ ತರಬೇಕಾಯಿತು. ಈ ನೀತಿಗಳ ಬಗ್ಗೆ ವಿವಾದವೂ ಉಂಟಾಯಿತು.

ಒಸಾಮ ಬಿನ್‌ ಲಾಡೆನ್‌ ಹತ್ಯೆ: ಒಬಾಮ ಆಡಳಿತದಲ್ಲಿ ನಡೆದ ಮಹತ್ವದ ಘಟನೆ ಎಂದರೆ ಭಯೋತ್ಪಾದಕ ಸಂಘಟನೆ ಅಲ್‌–ಕೈದಾ ಮುಖ್ಯಸ್ಥ ಒಸಾಮ ಬಿನ್‌ ಲಾಡೆನ್‌ನ ಹತ್ಯೆ.  2011ರ ಮೇ 2ರ ಮುಂಜಾನೆ ಅಮೆರಿಕದ ಸೀಲ್‌ ಕಮಾಂಡೊಗಳು, ಪಾಕಿಸ್ತಾನದ ಅಬೋಟಾಬಾದ್‌ನ ಮನೆಯೊಂದರಲ್ಲಿ ಅವಿತಿದ್ದ ಒಸಾಮ ಬಿನ್‌ ಲಾಡೆನ್‌ನನ್ನು ಹತ್ಯೆ ಮಾಡಿದರು. ಸ್ವತಃ ಒಬಾಮ ಅವರೇ ಶ್ವೇತ ಭವನದಿಂದ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದು ಮಾತ್ರವಲ್ಲದೇ ಅದರ ನೇರ ಪ್ರಸಾರ ವೀಕ್ಷಿಸಿದ್ದರು.

ಹಿರೋಷಿಮಾ ಭೇಟಿ: ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕವು, ಜಪಾನಿನ ಹಿರೋಷಿಮಾ ಮೇಲೆ ಅಣುಬಾಂಬ್‌ ದಾಳಿ ನಡೆಸಿತು. ಈ ನಗರಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷ ಬರಾಕ್ ಒಬಾಮ.

2016ರ ಮೇ 27ರಂದು ನಡೆದ ಒಬಾಮ ಭೇಟಿಯ ಹಿಂದೆ ಅಣ್ವಸ್ತ್ರ ಪ್ರಸರಣಕ್ಕೆ ತಡೆಯೊಡ್ಡುವ ಉದ್ದೇಶ ಇತ್ತು ಎಂದು ಅಮೆರಿಕ ಹೇಳಿಕೊಂಡಿತು. ಭೇಟಿ ವೇಳೆ ಒಬಾಮ ಅವರು, ಜಪಾನ್‌ ಮೇಲೆ ಅಮೆರಿಕ ಅಣ್ವಸ್ತ್ರ ಪ್ರಯೋಗಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಲಿಲ್ಲ. ಆದರೂ, ಈ ಭೇಟಿ ಮಹತ್ವದ್ದು ಎಂಬ ಮಾತಿದೆ.

ಕ್ಯೂಬಾ ಸಂಬಂಧ ಸುಧಾರಣೆ: ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ ಮತ್ತು ಕ್ಯೂಬಾ ನಡುವಣ ಸಂಬಂಧ ಹದಗೆಟ್ಟಿತ್ತು. ಈ ಸಂಬಂಧ ಸುಧಾರಣೆಗೆ ಒಬಾಮ ಮುಂದಾದರು. ಕ್ಯೂಬಾ ಮೇಲೆ ಹಿಂದೆ ವಿಧಿಸಿದ್ದ ದಿಗ್ಬಂಧನಗಳನ್ನು ಸಡಿಲಿಸುವುದೂ ಈ ಪ್ರಕ್ರಿಯೆಯ ಒಂದು ಭಾಗವಾಗಿತ್ತು.

ಸಂಬಂಧ ಸುಧಾರಿಸುವ ನಿಟ್ಟಿನ ಮಾತುಕತೆಗಳಿಗೆ ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್‌ ಕೂಡ ಒತ್ತಾಸೆಯಾಗಿ ನಿಂತಿದ್ದರು ಎಂಬ ವರದಿಗಳಿವೆ. ಈಗ ಎರಡೂ ದೇಶಗಳು ತಮ್ಮಲ್ಲಿ ಇನ್ನೊಂದು ದೇಶದ ರಾಯಭಾರ ಕಚೇರಿ ಆರಂಭಿಸಲು ಒಪ್ಪಿವೆ.

ನೊಬೆಲ್‌ ಪ್ರಶಸ್ತಿ: 2009ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಒಬಾಮ ಅವರಿಗೆ ನೀಡಲಾಯಿತು. ಅಣ್ವಸ್ತ್ರ ಪ್ರಸರಣ ತಡೆಗೆ ಯತ್ನ ಹಾಗೂ ಮುಸ್ಲಿಂ ಜಗತ್ತಿನ ಕಡೆ ಅಮೆರಿಕ ಗಮನಹರಿಸುವಂತೆ ಮಾಡಿದ್ದಕ್ಕಾಗಿ ಒಬಾಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ರಷ್ಯಾ ಜೊತೆ ಹದಗೆಟ್ಟ ಸಂಬಂಧ: ಒಬಾಮ ಆಡಳಿತ ಅವಧಿಯಲ್ಲಿ ರಷ್ಯಾ ಜೊತೆಗಿನ ಅಮೆರಿಕದ ಸಂಬಂಧ ತೀರಾ ಹದಗೆಟ್ಟಿತು. ಅಧ್ಯಕ್ಷೀಯ ಚುನಾವಣೆ ವೇಳೆ, ರಷ್ಯಾ ಪರವಾಗಿ ಅಮೆರಿಕದ ಸರ್ವರ್‌ಗಳಿಗೆ ಕನ್ನ ಹಾಕಲು ನೆರವಾದ ಆರೋಪ ಹೊರಿಸಿ ರಷ್ಯಾದ ಕೆಲವು ರಾಯಭಾರಿಗಳಿಗೆ ದೇಶದಿಂದ ಹೊರಹೋಗುವಂತೆ ಒಬಾಮ ಆಡಳಿತ ಸೂಚಿಸಿತು.

ಶೀತಲ ಸಮರದ ಕಾಲಘಟ್ಟದ ನಂತರ ಅಮೆರಿಕ ಮತ್ತು ರಷ್ಯಾ ನಡುವಣ ಸಂಬಂಧ ಯಾವ ಹಂತದಲ್ಲೂ ಇಷ್ಟೊಂದು ಹದಗೆಟ್ಟಿರಲಿಲ್ಲ ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.

ಚೀನಾ ಜೊತೆ ಸಂಬಂಧ: ಒಬಾಮ ಅವರು ಅಧ್ಯಕ್ಷ ಪದವಿಯಿಂದ ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ ಅಮೆರಿಕ–ಚೀನಾ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ. ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಚೀನಾ ಮುಂದಾಗಿರುವುದು ಅಮೆರಿಕಕ್ಕೆ ಅಪಥ್ಯವಾಗಿದೆ. ಈ ಕಾರಣಕ್ಕಾಗಿ ಎರಡೂ ದೇಶಗಳ ನಡುವೆ ಆರೋಪ – ಪ್ರತ್ಯಾರೋಪಗಳು ನಡೆದಿವೆ.

ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸಿದ ಕಾರಣಕ್ಕೂ ಅಮೆರಿಕ – ಚೀನಾ ನಡುವಣ ಸಂಬಂಧ ಹದಗೆಟ್ಟಿದೆ. ಉತ್ತರ ಕೊರಿಯಾಕ್ಕೆ ಚೀನಾದ ಬೆಂಬಲ ಇದೆ ಎಂಬುದು ಅಮೆರಿಕದ ಹೇಳಿಕೆ.

ಸ್ಥಗಿತಗೊಂಡ ಸರ್ಕಾರ!: 2013ರ ಅಕ್ಟೋಬರ್‌ 1ರಿಂದ 16ರವರೆಗೆ ಅಮೆರಿಕ ಸರ್ಕಾರದ ಕಾರ್ಯಕ್ರಮಗಳು ಸ್ಥಗಿತಗೊಂಡವು. ಸರ್ಕಾರದ ವೆಚ್ಚಗಳಿಗೆ ಅಗತ್ಯವಾಗಿದ್ದ ಬಜೆಟ್‌ಗೆ ಅನುಮೋದನೆ ಪಡೆದುಕೊಳ್ಳದಿದ್ದುದು ಇದಕ್ಕೆ ಕಾರಣವಾಗಿತ್ತು. ಸರ್ಕಾರದ ಕಾರ್ಯಕ್ರಮಗಳು, ಚಟುವಟಿಕೆಗಳು ಅ. 17ರಿಂದ ಮತ್ತೆ ಆರಂಭವಾದವು. ಈ ನಡುವಣ ಅವಧಿಯಲ್ಲಿ ಅಂದಾಜು ಎಂಟು ಲಕ್ಷ ನೌಕರರಿಗೆ ರಜೆ ನೀಡಲಾಗಿತ್ತು!

ಬಂದೂಕು ಸಂಸ್ಕೃತಿ ನಿಯಂತ್ರಿಸಲು ವಿಫಲ ಯತ್ನ: ಅಮೆರಿಕದಲ್ಲಿ ಚಿಕ್ಕ ಮಕ್ಕಳೂ ಬಂದೂಕು ಹಿಡಿದು, ಕಂಡವರ ಮೇಲೆಲ್ಲ ಗುಂಡು ಹಾರಿಸಿದ ಘಟನೆಗಳು ಹಲವು ಬಾರಿ ವರದಿಯಾದ ನಂತರ, ಬಂದೂಕು ಸಂಸ್ಕೃತಿಗೆ ನಿಯಂತ್ರಣ ಹೇರಲು ಒಬಾಮ ಮುಂದಾದರು.

ಬಂದೂಕು ಬಯಸಿ ಅರ್ಜಿ ಸಲ್ಲಿಸುವವರ ಹಿನ್ನೆಲೆಯನ್ನು ಆಮೂಲಾಗ್ರವಾಗಿ ಪರಿಶೀಲಿಸುವ ಆದೇಶ ಹೊರಡಿಸುವುದಾಗಿ ಹೇಳಿದರು. ಆದರೆ ಅಮೆರಿಕದ ಕಾಂಗ್ರೆಸ್‌ನಲ್ಲಿ ಇದಕ್ಕೆ ಅನುಮೋದನೆ ಸಿಗಲಿಲ್ಲ. ಬಂದೂಕು ಸಂಸ್ಕೃತಿ ನಿಯಂತ್ರಿಸಲು ಒಬಾಮ ವಿಫಲವಾದುದರ ಹಿಂದೆ ಬಂದೂಕು ತಯಾರಿಕಾ ಕಂಪೆನಿಗಳ ಲಾಬಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ ಎಂಬ ಮಾತಿದೆ.

ಒಬಾಮಕೇರ್‌
ಬರಾಕ್‌ ಒಬಾಮ ಅವರ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಒಬಾಮಕೇರ್‌’ನ ವಾಸ್ತವಿಕ ಹೆಸರು, ‘ರೋಗಿಗಳ ರಕ್ಷಣೆ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವಾ ಕಾಯ್ದೆ’. ದೇಶದ ಜನರಿಗೆ ಮಿತ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿದ ಕಾಯ್ದೆ ಇದು. 2010ರ ಮಾರ್ಚ್‌ 23ರಂದು ಇದು ಅನುಷ್ಠಾನಕ್ಕೆ ಬಂತು. ಇದರ ಅಡಿಯಲ್ಲಿ ಅಮೆರಿಕದ  ಲಕ್ಷಾಂತರ ಮಂದಿಗೆ ಆರೋಗ್ಯ ವಿಮೆ ಲಭ್ಯವಾಗಿದೆ.

ರಿಪಬ್ಲಿಕನ್‌ ಪಕ್ಷ ಆರಂಭದಿಂದಲೇ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಈ ಯೋಜನೆ ರದ್ದುಗೊಳಿಸಿ, ಹೊಸ ಯೋಜನೆ ಜಾರಿಗೆ ತರುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗಾಗಲೇ ಘೋಷಿಸಿದ್ದಾರೆ.

ಒನ್‌ ವರ್ಲ್ಡ್‌ ಟ್ರೇಡ್‌ ಸೆಂಟರ್‌
9/11ರ ಭಯೋತ್ಪಾದನಾ ದಾಳಿಯಲ್ಲಿ ಧ್ವಂಸಗೊಂಡ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಲ್ಲಿದ್ದ ಜಾಗದಲ್ಲೇ ನಿರ್ಮಿಸಲಾಗಿರುವ, ವಿಶ್ವ ವಾಣಿಜ್ಯ ಕೇಂದ್ರದ ಹೊಸ ಸಂಕೀರ್ಣದ ಭಾಗವಾಗಿರುವ ಒನ್‌ ವರ್ಲ್ಡ್‌ ಟ್ರೇಡ್‌ ಸೆಂಟರ್‌ ನ್ಯೂಯಾರ್ಕ್‌ ಸಿಟಿಯಲ್ಲಿರುವ ಅತ್ಯಂತ ದೊಡ್ಡ ಕಟ್ಟಡ. 1,776 ಅಡಿಗಳಷ್ಟು ಎತ್ತರವಿರುವ  (ಆ್ಯಂಟೆನಾ ಸೇರಿ) ಈ ಕಟ್ಟಡವನ್ನು 2014ರ ನವೆಂಬರ್‌ 3ರಂದು ಉದ್ಘಾಟಿಸಲಾಯಿತು.

ಆರಂಭದಲ್ಲಿ ಇದನ್ನು ಸ್ವಾತಂತ್ರ್ಯ ಗೋಪುರ (ಫ್ರೀಡಮ್‌ ಟವರ್‌) ಎಂದು ಕರೆಯಲಾಯಿತಾದರೂ, ನಂತರ ಅದರ ಹೆಸರನ್ನು ಒನ್‌ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಎಂದು ಬದಲಿಸಲಾಯಿತು. ಸ್ವಾತಂತ್ರ್ಯ ಗೋಪುರ ಎಂಬ ಹೆಸರು ಭಾವನಾತ್ಮಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುವುದರಿಂದ ಕಟ್ಟಡದಲ್ಲಿರುವ ಕಚೇರಿಗಳನ್ನು ಬಾಡಿಗೆಗೆ ಕೊಡಲು ತೊಂದರೆಯಾಗಬಹುದು ಎಂಬ ಕಾರಣಕ್ಕೆ ಹೆಸರು ಬದಲಾಯಿಸಲಾಯಿತು.


ಭಯೋತ್ಪಾದನೆ ವಿರುದ್ಧ ಸಮರ
ಆಫ್ಘಾನಿಸ್ತಾನ, ಇರಾಕ್‌ನಿಂದ ಸೇನೆ ವಾಪಸ್‌: 2001ರ ಸೆಪ್ಟೆಂಬರ್‌ 11ರಂದು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಅಲ್‌–ಕೈದಾ ಭಯೋತ್ಪಾದಕರು ದಾಳಿ ನಡೆಸಿದ ನಂತರ ಆಫ್ಘಾನಿಸ್ತಾನದಲ್ಲಿದ್ದ ಭಯೋತ್ಪಾದಕರ ವಿರುದ್ಧ ಅಮೆರಿಕ ಸಮರ ಸಾರಿತು.

2011ರ ಮೇ 2ರಂದು  ಅಲ್‌–ಕೈದಾ ಮುಖ್ಯಸ್ಥ ಒಸಾಮ ಬಿನ್‌ ಲಾಡೆನ್‌ನನ್ನು ಹತ್ಯೆಯೊಂದಿಗೆ ಆಫ್ಘನ್‌ನಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಆಫ್ಘಾನಿಸ್ತಾನದಲ್ಲಿ ನಿಯೋಜಿಸಿದ್ದ ಬಹುಪಾಲು ಸೇನೆಯನ್ನು 2014ರ ಅಂತ್ಯದ ವೇಳೆಗೆ ವಾಪಸ್‌ ಪಡೆಯುವುದಾಗಿ ಅಮೆರಿಕ ಘೋಷಿಸಿತು. ಹಾಗಿದ್ದರೂ, ಸಣ್ಣ ಪ್ರಮಾಣದಲ್ಲಿ ಸೇನಾ ಸಿಬ್ಬಂದಿಯನ್ನು 2016ರ ಡಿಸೆಂಬರ್‌ವರೆಗೂ ಅಲ್ಲಿ ನಿಯೋಜಿಸಿತ್ತು.

ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ ವಿರುದ್ಧ ಅಮೆರಿಕ ಮತ್ತು ಮೈತ್ರಿ ಪಡೆಗಳು 2003ರಲ್ಲಿ ಆರಂಭಿಸಿದ್ದ ಯುದ್ಧ, ಅವರನ್ನು ಗಲ್ಲಿಗೇರಿಸಿದ ನಂತರವೂ ಮುಂದುವರಿಯಿತು.  2007ರ ಕೊನೆಯಲ್ಲಿ ಅಮೆರಿಕ, ಅಲ್ಲಿಂದ ತನ್ನ ಸೇನೆ ಹಿಂಪಡೆಯಲು ಆರಂಭಿಸಿತು. ಒಬಾಮ ಆಡಳಿತದಲ್ಲಿ ಸೇನೆ ವಾಪಸ್‌ ಪ್ರಕ್ರಿಯೆ ವೇಗ ಪಡೆಯಿತು. 2011ರ ಜುಲೈನಲ್ಲಿ ಸೇನೆಯನ್ನು ಪೂರ್ಣವಾಗಿ ವಾಪಸ್‌ ಪಡೆಯಲಾಯಿತು.

ನಿಲುವು ಬದಲು:  ಒಬಾಮ ಅವರು 2013ರಲ್ಲಿ ‘ಭಯೋತ್ಪಾದನೆಯ ವಿರುದ್ಧದ ಸಮರ’ ಕುರಿತಾಗಿ ಅಮೆರಿಕದ ಬದಲಾದ ನಿಲುವು ಪ್ರಕಟಿಸಿದರು.  ‘ಅಮೆರಿಕ ಇನ್ನು ಮುಂದೆ ನಿರ್ದಿಷ್ಟ ವೈರಿ, ನಿರ್ದಿಷ್ಟ ಭಯೋತ್ಪಾದನಾ ಸಂಘಟನೆ ಹಾಗೂ ಜಾಲಗಳನ್ನು ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ  ನಡೆಸಲು ಗಮನ ನೀಡಲಿದೆ’ ಎಂದು ಘೋಷಿಸಿದರು.

ಐಎಸ್ ವಿರುದ್ಧ ಸಮರ: ಇರಾಕ್‌ನಲ್ಲಿ ಸದ್ದಾಂ ಹುಸೇನ್ ಆಡಳಿತ ಪತನ ಮತ್ತು 2011ರಲ್ಲಿ ಲಾಡೆನ್‌ ಹತ್ಯೆಯ ನಂತರ ಹೆಚ್ಚು ಪ್ರವರ್ಧಮಾನಕ್ಕೆ ಬಂದ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌  ವಿರುದ್ಧ ಅಮೆರಿಕ 2014ರಲ್ಲಿ ಆರಂಭಿಸಿರುವ ಸೇನಾ ಕಾರ್ಯಾಚರಣೆ ಈಗಲೂ ಮುಂದುವರಿದಿದೆ. ಇಸ್ಲಾಮಿಕ್‌ ಸ್ಟೇಟ್‌ ಮುಖ್ಯಸ್ಥ ಅಬು ಬಕರ್‌ ಅಲ್‌–ಬಾಗ್ದಾದಿಯ ತಲೆಗೆ ಒಬಾಮ ಆಡಳಿತ 2.5 ಕೋಟಿ ಡಾಲರ್‌ ಬಹುಮಾನ ಘೋಷಿಸಿದೆ.

***
ಒಬಾಮ ಮತ್ತು ಭಾರತ
* ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದ ಒಬಾಮ, ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು.

* ‘ಅಮೆರಿಕದ ಮತ್ತು ಭಾರತದ ನಡುವಣ ಸಂಬಂಧ ಬಲಪಡಿಸುವ ಉದ್ದೇಶದಿಂದ ನಾನಿಲ್ಲಿಗೆ ಬಂದಿದ್ದೇನೆ’ ಎಂದು 2010ರ ನವೆಂಬರ್‌ 8ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು. ‘ನಮ್ಮಿಬ್ಬರ ಸ್ನೇಹ ಚಿರಕಾಲ ಬಾಳಲಿ’ ಎಂಬ ಆಶಯ ವ್ಯಕ್ತಪಡಿಸಿದ್ದರು.

* ಅಣ್ವಸ್ತ್ರ ಪ್ರಸರಣ ತಡೆ ಕಾಯ್ದೆಗೆ (ಎನ್‌ಪಿಟಿ) ಸಹಿ ಮಾಡದಿದ್ದರೂ, ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಭಾರತವನ್ನು ಸೇರಿಸಿಕೊಳ್ಳಬೇಕು ಎಂದು ಒಬಾಮ ಆಡಳಿತ ಹೇಳಿತು. ಎನ್‌ಪಿಟಿಗೆ ಸಹಿ ಮಾಡದ ರಾಷ್ಟ್ರವೊಂದಕ್ಕೆ ಅಮೆರಿಕದ ಇಂಥದ್ದೊಂದು ಬೆಂಬಲ ನೀಡಿದ್ದು ತೀರಾ ವಿರಳ.

* ಭಾರತದ ವಾಯು ನೆಲೆಗಳಲ್ಲಿನ ಮೂಲಸೌಕರ್ಯಗಳನ್ನು ಅಮೆರಿಕದ ವಾಯುಪಡೆ ಬಳಸಿಕೊಳ್ಳಬಹುದು ಎಂಬ ಒಪ್ಪಂದಕ್ಕೂ ಒಬಾಮ ಅವಧಿಯಲ್ಲಿ ಅಂಕಿತ ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT