ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ವಿಚಾರ ತಿರುಚುವ ಪ್ರಯತ್ನ

ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪದಲ್ಲಿ ಸಿದ್ದರಾಮಯ್ಯ ಟೀಕೆ
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ಪಟ್ಟಭದ್ರರು ಸ್ವಾಮಿ ವಿವೇಕಾನಂದರ ವಿಚಾರಧಾರೆ  ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನಗರದ ಅರಮನೆ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,  ವಿವೇಕಾನಂದರ ಹೆಸರು ಬಳಸಿಕೊಂಡು ರಾಜಕಾರಣ ಮಾಡುವವರ ಬಗ್ಗೆ ಯುವ ಸಮೂಹ ಎಚ್ಚರದಿಂದ ಇರಬೇಕು ಎಂದರು.

‘ಹಸಿದವನಿಗೆ ಅನ್ನ ನೀಡುವ ಬದಲು ಧರ್ಮ ಬೋಧನೆ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಪೂಜೆ, ಮಂತ್ರದಿಂದ ದೇವರು ಸಿಗುವುದಿಲ್ಲ. ಸಾಮಾಜಿಕ ರೋಗದಿಂದ ಬಳಲುತ್ತಿರುವ ಸಮಾಜಕ್ಕೆ ಮಾನವ ಧರ್ಮವೇ ಮದ್ದು ಎಂಬುದನ್ನು ವಿವೇಕಾನಂದರು ಸಾರಿ ಹೇಳುತ್ತಿದ್ದರು. ಈ ಕಾರಣಕ್ಕಾಗಿಯೇ ಅವರ ಆದರ್ಶಗಳು ಪ್ರಸ್ತುತ’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.

ಅಸ್ಪೃಶ್ಯತೆ ಎನ್ನುವುದು ಮಾನಸಿಕ ರೋಗ. ಕೆಲವರು ಸ್ವಾರ್ಥಕ್ಕಾಗಿ ಸಾಮಾಜಿಕ ಪಿಡುಗುಗಳನ್ನು ಹುಟ್ಟು ಹಾಕಿದ್ದಾರೆ. ಅದರಿಂದ ಹೊರಬರುವ ಜೊತೆಗೆ ಅನ್ಯ ಧರ್ಮದ ಬಗ್ಗೆ  ಸಹಿಷ್ಣುತೆ ಬೆಳಸಿಕೊಳ್ಳಬೇಕು  ಎಂಬುದು ವಿವೇಕಾನಂದರ ಆಶಯವಾಗಿತ್ತು ಎಂದರು. ಮೂಢನಂಬಿಕೆಯಿಂದ ವಿದ್ಯಾರ್ಥಿಗಳು ದೂರ ಇರಬೇಕು. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣಕ್ಕೆ ಒತ್ತು ನೀಡಲಿದೆ ಎಂದೂ  ಅವರು ಸ್ಪಷ್ಟಪಡಿಸಿದರು.

ವಿವೇಕಾನಂದರ ಭಾವಚಿತ್ರದ ಟಿ–ಶರ್ಟ್‌
ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ವಿವೇಕಾನಂದರ ಭಾವಚಿತ್ರ ಇರುವ ಟಿ–ಶರ್ಟ್‌ ಧರಿಸಿ ಅರಮನೆ ಮೈದಾನದಲ್ಲಿ ಜಮಾಯಿಸಿದ್ದರು.ವಿವೇಕಾನಂದರ ಭಾವಚಿತ್ರದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಭಾವಚಿತ್ರವೂ ಟೀ ಶರ್ಟ್‌ನ ಕೆಳಬದಿಯಲ್ಲಿತ್ತು. ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಸಂಕಲ್ಪ ಪ್ರತಿಜ್ಞಾ ವಿಧಿ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT