ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎಗೆ ಅಧಿಕಾರ ಕೊಟ್ಟವರು ಯಾರು?

‘ಪರಿಷ್ಕೃತ ಮಹಾಯೋಜನೆ – 2031’ರ ಔಚಿತ್ಯವನ್ನೇ ಪ್ರಶ್ನಿಸಿದ ಸಾರ್ವಜನಿಕರು
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಿಷ್ಕೃತ ಮಹಾಯೋಜನೆ (ಆರ್‌ಎಂಪಿ) 2031 ಸಿದ್ಧಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಅಧಿಕಾರ ಕೊಟ್ಟವರು ಯಾರು? ಜನರ ಆಶಯಕ್ಕೆ ಅನುಗುಣವಾಗಿ  ಯೋಜನೆ ರೂಪಿಸಲು ಬಿಡಿಎಯಲ್ಲಿ ಜನಪ್ರತಿನಿಧಿಗಳಿದ್ದಾರೆಯೇ?

ಪರಿಷ್ಕೃತ ಮಹಾ ಯೋಜನೆ 2031 ಸಿದ್ಧಪಡಿಸುವ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ  ನಾಗರಿಕ ಸಂಘಟನೆಗಳು ಎತ್ತಿದ ಮೂಲ ಪ್ರಶ್ನೆ ಇದು.

ಈ ವಿಚಾರ ಪ್ರಸ್ತಾಪಿಸಿದ ಸಿಟಿಜನ್ಸ್‌ ಆ್ಯಕ್ಷನ್‌ ಫೋರಮ್‌ ಅಧ್ಯಕ್ಷ   ಡಿ.ಎಸ್‌. ರಾಜಶೇಖರ್‌, ‘ಸಂವಿಧಾನದ 74ನೇ ತಿದ್ದುಪಡಿ ಬಳಿಕ  ಮಹಾಯೋಜನೆ ಸಿದ್ಧಪಡಿಸುವ ಅಧಿಕಾರ ಇರುವುದು ಬೆಂಗಳೂರು ಮಹಾನಗರ ಯೋಜನಾ ಸಮಿತಿಗೆ (ಬಿಎಂಪಿಸಿ) ಮಾತ್ರ’ ಎಂದರು.

ಇದಕ್ಕೆ ಧ್ವನಿ ಗೂಡಿಸಿದ ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ನರೇಶ್‌ ನರಸಿಂಹನ್‌, ‘2015ರ ಮಹಾಯೋಜನೆಯೇ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.ಯೋಜನೆ ಅನುಷ್ಠಾನದ ಅಧಿಕಾರವೂ ಬಿಡಿಎಗೆ ಇಲ್ಲ. ಹಾಗಿದ್ದ ಮೇಲೆ ಯೋಜನೆ ಸಿದ್ಧಪಡಿಸಿ ಪ್ರಯೋಜನ ಏನು’ ಎಂದು ಪ್ರಶ್ನಿಸಿದರು.

‘ನಗರದ ಜನಸಂಖ್ಯೆ ಕಡಿಮೆಗೊಳಿಸುವ ಯೋಜನೆ ರೂಪಿಸಬೇಕಾದ  ಬಿಡಿಎ   2 .03 ಕೋಟಿ ಜನಸಂಖ್ಯೆಯನ್ನು ಗುರಿಯನ್ನಾಗಿ ಇಟ್ಟುಕೊಂಡು ಯೋಜನೆ ರೂಪಿಸಲು ಮುಂದಾಗಿದೆ.  ಇದು ಬದುಕುವ  ಹಕ್ಕನ್ನು ಕಸಿದುಕೊಳ್ಳುವಂತಿದೆ. ಇದನ್ನು ಮುಂದುವರಿಸಿದರೆ ನಾವು ಮಹಾಯೋಜನೆ ಬೇಡ ಅಭಿಯಾನ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ವರ್ತುಲ ರಸ್ತೆಗೆ ಜಾಗವೆಲ್ಲಿ: ‘ನಗರದಲ್ಲಿ ಕನಿಷ್ಠ ಪಕ್ಷ ಆರು ವರ್ತುಲ ರಸ್ತೆಗಳನ್ನು  ನಿರ್ಮಿಸುವ ಹಾಗೂ ಅದರ ಜೊತೆಗೆ ಮಾನೊ ರೈಲು ಅಥವಾ ಚತುರ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹೇಳಿದ್ದೀರಿ. ಇದಕ್ಕೆ ಜಾಗ ಎಲ್ಲಿದೆ’ ಎಂದು ಗಂಗೇನಹಳ್ಳಿ ಪಾಲಿಕೆ ಸದಸ್ಯ ಎಂ.ನಾಗರಾಜು ಪ್ರಶ್ನಿಸಿದರು.

ಕೆರೆ ಒತ್ತುವರಿ ಮಾಡಿದ ಬಿಡಿಎಗೆ ಶಿಕ್ಷೆ ಏಕಿಲ್ಲ: ಬಿಡಿಎ ನಗರದಲ್ಲಿ  ಹತ್ತಾರು  ಕೆರೆಗಳನ್ನು ಒತ್ತುವರಿ ಮಾಡಿ  ಬಡಾವಣೆಗಳನ್ನು ನಿರ್ಮಿಸಿದೆ. ಜನರು ಕೆರೆ ಒತ್ತುವರಿ ಮಾಡಿದರೆ ಶಿಕ್ಷೆ ಇದೆ. ಹಾಗಾದರೆ ಬಿಡಿಎಗೆ ಏನು ಶಿಕ್ಷೆ ಎಂದು ರೈತರೊಬ್ಬರು ಪ್ರಶ್ನಿಸಿದರು.

ಉಕ್ಕಿನ ಸೇತುವೆ  ಪ್ರಸ್ತಾವ  ಯೋಜನೆಯಲ್ಲಿತ್ತೇ?
2015ರ ಮಹಾಯೋಜನೆಯಲ್ಲಿ ಉಕ್ಕಿನ ಸೇತುವೆ ಹಾಗೂ ಎತ್ತರಿಸಿದ ರಸ್ತೆಗಳ ಕಾರಿಡಾರ್‌ ನಿರ್ಮಿಸುವ ಪ್ರಸ್ತಾವಗಳು ಇರಲಿಲ್ಲ. ಹಾಗಿದ್ದರೂ ಅದನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಮಹಾಯೋಜನೆಯಲ್ಲಿ ಇಲ್ಲದ ಯೋಜನೆಗಳನ್ನು ಬಿಟ್ಟು ಸರ್ಕಾರ  ಬೇರೆಯೇ ಯೋಜನೆ ಅನುಷ್ಠಾನಗೊಳಿಸುವುದಾದರೆ ಈ ಕಸರತ್ತುಗಳೆಲ್ಲ ಏಕೆ ಎಂದು ನರೇಶ್‌ ನರಸಿಂಹನ್‌ ಪ್ರಶ್ನಿಸಿದರು.

‘ಶ್ವೇತಪತ್ರ ಪತ್ರ ಹೊರಡಿಸಿ’
2015ರ ಮಹಾಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಬಿಡಿಎ ಶ್ವೇತಪತ್ರ ಹೊರಡಿಸಬೇಕು ಎಂದು ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಆಗ್ರಹಿಸಿದರು. ‘ಹಸಿರು ವಲಯವನ್ನು ಶೇ 15ರಿಂದ  10ಕ್ಕೆ ಹಾಗೂ ಮುಕ್ತಪ್ರದೇಶವನ್ನು   ಶೇಕಡಾ 10ರಿಂದ 5ಕ್ಕೆ ಇಳಿಸಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುತ್ತಾರೆ.  ಬಿಬಿಎಂಪಿಯ ಅಥವಾ ಸಾರ್ವಜನಿಕರ ಅಭಿಪ್ರಾಯ ಪಡೆಯದೆಯೇ ಇಂತಹ ನಿರ್ಣಯ ಕೈಗೊಳ್ಳುವುದು ಸರಿಯೇ’ ಎಂದು ಅವರು ಪ್ರಶ್ನಿಸಿದರು.

ಅರ್ಕಾವತಿ ಕಣಿವೆ ಮೀಸಲು ಪ್ರದೇಶ ಪರಿಷ್ಕರಣೆಗೆ ಒತ್ತಾಯ
ಅರ್ಕಾವತಿ ಕಣಿವೆಯಲ್ಲಿ ನದಿಯ ಇಕ್ಕೆಲಗಳಲ್ಲಿ 1 ಕಿ.ಮೀ ಪ್ರದೇಶವನ್ನು ಮೀಸಲು ಪ್ರದೇಶವನ್ನಾಗಿ ಉಳಿಸಿಕೊಳ್ಳಬೇಕು. ಇಲ್ಲಿ ಕೃಷಿಯೇತರ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು ಎಂಬ ನಿರ್ಬಂಧ ಸಡಿಲಿಸುವಂತೆ ರೈತರು ಒತ್ತಾಯಿಸಿದರು.

2031ರ ಆರ್‌ಎಂಪಿ ಬಗ್ಗೆ ದಾಸರಹಳ್ಳಿ ವಲಯದಲ್ಲಿ ನಡೆದ ಸಾರ್ವಜನಿಕ ಅಭಿಪ್ರಾಯ ಸ್ವೀಕಾರ ಸಭೆಯಲ್ಲಿ ಮಾತನಾಡಿದ ರೈತರ ಮುಖಂಡರು,  ‘ನದಿಯ ಇಕ್ಕೆಲಗಳಲ್ಲಿ ತಲಾ 1 ಕಿ.ಮೀ. ಮೀಸಲು ಪ್ರದೇಶ ನಿಗದಿ ಪಡಿಸಿದ ಉದಾಹರಣೆ ದೇಶದಲ್ಲಿ ಎಲ್ಲೂ ಇಲ್ಲ. ಕೆರೆಗೆ ಹಸಿರು ನ್ಯಾಯಮಂಡಳಿ ನಿಗದಿಪಡಿಸಿದ್ದು ಕೇವಲ 75 ಮೀಟರ್‌ ಮೀಸಲು ಪ್ರದೇಶ. ಕರಾವಳಿ ಅಭಿವೃದ್ಧಿ ಪ್ರದೇಶದಲ್ಲೂ ಕೇವಲ 500 ಮೀ. ಮೀಸಲು ಪ್ರದೇಶ ನಿಗದಿಪಡಿಸಲಾಗಿದೆ’ ಎಂದು ಗಮನ ಸೆಳೆದರು. ಮಹಾಯೋಜನೆಯಲ್ಲಿ ಅರ್ಕಾವತಿ ಕಣಿವೆ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಎಂದು ಅವರು ಒತ್ತಾಯಿಸಿದರು.

ಪ್ರಮುಖ ಸಲಹೆಗಳು
* ಹೆಚ್ಚು ಅಂತರದ ಪ್ರಯಾಣಕ್ಕೆ ಜನ ರೈಲನ್ನು ಅವಲಂಬಿಸುವಂತಾಗಬೇಕು. 

*  ವಿಪತ್ತು ನಿರ್ವಹಣೆಗೆ ಮಹಾಯೋಜನೆಯಲ್ಲಿ ಆದ್ಯತೆ ನೀಡಬೇಕು.  ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ವಿಪತ್ತು ಸಂಭವಿಸಿದರೆ, ಅದರ ತೀವ್ರತೆ ಕಡಿಮೆಗೊಳಿಸುವ ಬಗ್ಗೆ ನಿರ್ದಿಷ್ಟ ಕ್ರಮಗಳನ್ನು ಅಳವಡಿಸಬೇಕು.

* ವಾರ್ಡ್‌ ಮಟ್ಟದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯುವ ಸಭೆ  ಏರ್ಪಡಿಸಬೇಕು

ನಾಗರಿಕರು  ಏನನ್ನುತ್ತಾರೆ?
ಸಂಸ್ಕರಿಸಿದ ನೀರನ್ನು ಮಾಡುವುದೇನು?
20ಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ದ್ರವತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ಹೊಂದದಿದ್ದರೆ ದಂಡ ವಿಧಿಸುವುದಾಗಿ ಜಲಮಂಡಳಿ ಹೇಳುತ್ತದೆ.  ಸಂಸ್ಕರಣೆಗೊಂಡ  ನೀರನ್ನು ಸಂಗ್ರಹಿಸಿಟ್ಟು ಕೊಳ್ಳುವುದು ಹೇಗೆ?  ಮತ್ತೆ ಅದನ್ನು ಒಳಚರಂಡಿಗೆ ಬಿಡುವುದಾದರೆ ಅದನ್ನು ಸಂಸ್ಕರಿಸಿ ಪ್ರಯೋಜನವೇನು?
–ಎನ್‌.ಎಸ್‌.ಮುಕುಂದ್‌, ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ

***
ಉಕ್ಕಿನ ಸೇತುವೆ ಏಕೆ?

ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಯೋಜನೆ ರೂಪಿಸುವುದಾಗಿ ಬಿಡಿಎ ಹೇಳುತ್ತಿದೆ. ಹಾಗಿದ್ದರೆ ಉಕ್ಕಿನ ಸೇತುವೆಯಂತಹ  ಯೋಜನೆ ಅನುಷ್ಠಾನಗೊಳಿಸಲು ಬಿಡಿಎ ಮುಂದಾಗಿರುವುದು ಏಕೆ
– ಟಿ.ವಿದ್ಯಾಧರ್‌, ಸಿಎಎಫ್‌

***
ಎನ್‌ಬಿಸಿ ಪಾಲನೆ ಕಡ್ಡಾಯಗೊಳಿಸಿ
ನಿರ್ಮಾಣದ ಸಂದರ್ಭದಲ್ಲಿ ರಾಷ್ಟ್ರಿಯ ಕಟ್ಟಡ ಮಾರ್ಗಸೂಚಿಯನ್ನು  (ಎನ್‌ಬಿಸಿ) ಅನುಸರಿಸುವುದನ್ನು ಕಡ್ಡಾಯ ಮಾಡಬೇಕು
–ಬಿ.ವಿ.ರಘು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯಲ್ಲಿ ತರಬೇತುದಾರ

***
‘ಯೋಗ್ಯವಾದ ತಾಣವನ್ನಾಗಿ ಮಾಡಿ’

ನಗರದ ವಿಸ್ತರಣೆಗೆ ಯೋಜನೆ ರೂಪಿಸುವ ಬದಲು, ಬಿಡಿಎ ಈಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನಗರವನ್ನು ಜೀವಿಸಲು ಯೋಗ್ಯವಾದ ತಾಣವನ್ನಾಗಿ  ಮಾಡಬೇಕು.  ಪರಿಷ್ಕೃತ ಮಹಾಯೋಜನೆ ಸಿದ್ಧಪಡಿಸುವುದು ಭೂಬಳಕೆ ಬದಲಾವಣೆಗೆ ಅವಕಾಶ ಕಲ್ಪಿಸಿ ದುಡ್ಡು ಮಾಡುವ ತಂತ್ರ
–ಪವಿತ್ರಾ ರೆಡ್ಡಿ, ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದಲ್ಲಿ ನೀತಿ ನಿರೂಪಣೆ ಕುರಿತ ಅಧ್ಯಯನನಿರತೆ

***
‘5 ಸಿ.ಎಂ ಬದಲಾದರೂ ಜಾರಿಯಾಗಿಲ್ಲ’

ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸುವ ಪ್ರಸ್ತಾವನೆ ಸಿದ್ಧವಾಗಿ 12 ವರ್ಷಗಳು ಕಳೆದವು. ಆ ಬಳಿಕ ಐದು ಮುಖ್ಯಮಂತ್ರಿಗಳು ಬದಲಾದರು. ಇನ್ನೂ  ಯೋಜನೆ ಜಾರಿಯಾಗಿಲ್ಲ.  ಅನುಷ್ಠಾನ ಗೊಳಿಸಲಾಗದ ಯೋಜನೆಗಳನ್ನು ರೂಪಿಸುವುದಾದರೂ ಏಕೆ
–ಬಾಬು, ಕಲ್ಯಾಣನಗರ

***
‘ಹಿಂದಿನ ಅನುಷ್ಠಾನದ ವಿಮರ್ಶೆಯಾಗಲಿ’

2015ರ ಯೋಜನೆಯಲ್ಲಿ ಎಷ್ಟು ಉಲ್ಲಂಘನೆಗಳಾಗಿವೆ, ವಸತಿ ಪ್ರದೇಶದಲ್ಲಿ ಎಷ್ಟು ವಾಣಿಜ್ಯ ಕಟ್ಟಡಗಳು ಬಂದಿವೆ, ಹಸಿರು ವಲಯ ಎಷ್ಟು ಕಡಿಮೆ ಆಗಿದೆ ಎಂಬುದನ್ನು ಮೊದಲು ವಿಮರ್ಶೆ ಮಾಡಬೇಕು. ಆ ನಂತರ ಬಿಡಿಎ  2031ರ ಮಹಾಯೋಜನೆ ರೂಪಿಸಲಿ
–ಎ.ರವೀಂದ್ರ, ನಿವೃತ್ತ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT