ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞವೈದ್ಯನಿಗೆ ಒಂದು ವರ್ಷ ಜೈಲು

ಶಸ್ತ್ರಚಿಕಿತ್ಸೆಗೆ ಲಂಚ ಪಡೆದ ಆರೋಪ
Last Updated 18 ಜನವರಿ 2017, 19:50 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿಯೊಬ್ಬಳ ಪಾದದ  ಶಸ್ತ್ರಚಿಕಿತ್ಸೆ ನಡೆಸಲು ₹ 1 ಸಾವಿರ ಲಂಚ ಪಡೆದ ಆರೋಪದಡಿ ಚಿಕ್ಕಮಗಳೂರಿನ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಹಿರಿಯ ತಜ್ಞವೈದ್ಯ ಡಾ.ಎಂ.ಹನುಮಂತಪ್ಪ ಅವರಿಗೆ ಹೈಕೋರ್ಟ್, ಒಂದು ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದೆ.

ಈ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು  ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.
2008ರ ನವೆಂಬರ್‌ ತಿಂಗಳಿನಲ್ಲಿ ಶ್ರುತಿ ಎಂಬ ಯುವತಿಯ ಪಾದದ ಶಸ್ತ್ರಚಿಕಿತ್ಸೆ ನಡೆಸಲು ಡಾ.ಹನುಮಂತಪ್ಪ  ₹ 1 ಸಾವಿರ ಲಂಚದ ಬೇಡಿಕೆ ಇರಿಸಿದ್ದರು.

ಯುವತಿ ಪೋಷಕರು  ವೈದ್ಯರಿಗೆ ₹ 500 ನೀಡಿದ್ದರು. ಉಳಿದ ₹ 500 ನೀಡುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹನುಮಂತಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ– 1988ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಡಾ.ಹನುಮಂತಪ್ಪ ಅವರನ್ನು ಆರೋಪಮುಕ್ತಗೊಳಿಸಿತ್ತು. ಈ ಆದೇಶವನ್ನು ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

‘ಆರೋಪಿ ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡು ಹಣ ಪಡೆದಿದ್ದಾರೆ. ಇದು ಅಕ್ಷಮ್ಯ. ಇವರನ್ನು ವಿಚಾರಣಾ ನ್ಯಾಯಾಲಯ ಆರೋಪ ಮುಕ್ತ ಮಾಡಿರುವ ಆದೇಶ ತಪ್ಪಿನಿಂದ ಕೂಡಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹಣ ಹೊರಗೆಸೆದಿದ್ದ ಡಾ.ಹನುಮಂತಪ್ಪ
‘ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಹನುಮಂತಪ್ಪ ತಮ್ಮ ಅಂಗಿಯ ಜೇಬಿನಲ್ಲಿ ಇರಿಸಿಕೊಂಡಿದ್ದ  ₹500 ಕೂಡಲೇ ತೆಗೆದು ಹೊರಗೆಸೆದಿದ್ದರು. ಆದರೆ ಈ ಹಣವನ್ನು ಅವರು ಲೋಕಾಯುಕ್ತ ಪೊಲೀಸರು ಬಂದ ಮೇಲೆ ಹೊರಗೆಸೆದರೋ ಅಥವಾ ಅವರು ಬರುವ ಮುನ್ನವೇ ಹೊರಗೆಸೆದರೋ ಎಂಬ ಬಗ್ಗೆ ಗೊಂದಲವಿದೆ’ ಎಂಬ ಅಭಿಪ್ರಾಯದೊಂದಿಗೆ ವಿಚಾರಣಾ ನ್ಯಾಯಾಲಯ ಹನುಮಂತಪ್ಪ ಅವರನ್ನು ಆರೋಪ ಮುಕ್ತಗೊಳಿಸಿತ್ತು.

‘ಈ ಅಂಶವನ್ನು ನಾವು ಹೈಕೋರ್ಟ್‌ಗೆ  ಮನವರಿಕೆ ಮಾಡಿಕೊಡುವ ಮೂಲಕ ಆರೋಪಿ ಪೊಲೀಸರು ಬಂದ ಮೇಲೆ ಹಣವನ್ನು ಎಸೆದರೋ ಅಥವಾ ಬರುವ ಮುನ್ನವೇ ಎಸೆದರೋ ಎಂಬುದು ಮುಖ್ಯವಲ್ಲ. ಅವರು ಲಂಚದ ಹಣ ಪಡೆದಿದ್ದರು ಎಂಬುದನ್ನು ಗುರುತಿಸಬೇಕು’ ಎಂದು ವಿವರಿಸಿದ್ದೆವು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಆರೋಪಿಗೆ  ಶಿಕ್ಷೆ ವಿಧಿಸಿರುವುದು ಗಮನಾರ್ಹ’ ಎನ್ನುತ್ತಾರೆ ಲೋಕಾಯುಕ್ತ ಪರ ಹಾಜರಾಗಿದ್ದ ವೆಂಕಟೇಶ ಅರಬಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT