ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನದಲ್ಲಿ ಸುರಕ್ಷತೆಗೆ ಗಮನ

ಲಾಲ್‌ಬಾಗ್‌ನಲ್ಲಿನ 21 ಜೇನುಗೂಡುಗಳ ತೆರವು
Last Updated 18 ಜನವರಿ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಜೇನುನೊಣ ದಾಳಿ ಸೇರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತೋಟಗಾರಿಕಾ ಇಲಾಖೆ ಸುರಕ್ಷತೆಗೆ  ಹೆಚ್ಚು ಗಮನ ನೀಡಿದೆ.

205ನೇ ಫಲಪುಷ್ಪ ಪ್ರದರ್ಶನದ ಸಿದ್ಧತೆ ಕುರಿತು ತೋಟಗಾರಿಕಾ ಇಲಾಖೆ ಆಯುಕ್ತ ಪ್ರಭಾಶ್ ಚಂದ್ರ ರೇ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.‘ಜೇನುನೊಣಗಳಿಂದ ಯಾವುದೇ ತೊಂದರೆ ಆಗದಂತೆ ಉದ್ಯಾನದಲ್ಲಿರುವ 31 ಜೇನುಗೂಡುಗಳಲ್ಲಿ ಜನ ಓಡಾಡುವ ಕಡೆಯಲ್ಲಿರುವ 21 ಗೂಡುಗಳನ್ನು ತೆರವು ಮಾಡಲಾಗಿದೆ. ಉಳಿದ ಗೂಡುಗಳ ಬಳಿ ಜನರು ಹೋಗದಂತೆ ನಿಷೇಧಿಸಲಾಗಿದೆ’ ಎಂದು ಹೇಳಿದರು.

‘ಹೀಗಿದ್ದೂ ಜೇನುನೊಣಗಳ ದಾಳಿ ನಡೆದರೆ ಪ್ರಾಣಕ್ಕೆ ಹಾನಿಯಾಗದಂತೆ ತಕ್ಷಣ ಯಾವ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲಾ ಕಡೆಗಳನ್ನು ಮಾಹಿತಿ ಫಲಕಗಳನ್ನು ಹಾಕಲಾಗಿದೆ’ ಎಂದರು.

‘ಗಾಜಿನ ಮನೆಯ ಬಳಿ ನುರಿತ ವೈದ್ಯರ ತಂಡವನ್ನೊಳಗೊಂಡ ಸಣ್ಣ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದ್ದು, ಐಸಿಯು ಕೂಡ ಇದೆ. ಜೇನುಹುಳು, ಹಾವು, ನಾಯಿಗಳ ಕಚ್ಚುವಿಕೆಗೆ ಚುಚ್ಚುಮದ್ದುಗಳ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಹೆಲ್ಪ್‌ಡೆಸ್ಕ್‌ ತೆರೆದಿದ್ದು, ನಾಯಿ ಹಿಡಿಯುವವರು, ಪಶುವೈದ್ಯಾಧಿಕಾರಿ, ಜೇನು ಕೃಷಿ ಸಹಾಯಕರು, ಹಾವು ಹಿಡಿಯುವವರು ಹಾಗೂ ಈಜು ಪರಿಣಿತರ ತಂಡವಿರುತ್ತದೆ’ ಎಂದು ವಿವರಿಸಿದರು.

‘ಉದ್ಯಾನದಲ್ಲಿರುವ 90ಕ್ಕೂ ಹೆಚ್ಚು ನಾಯಿಗಳಿಗೆ ಔಷಧಿ ಮಾಡಿಸಲಾಗಿದ್ದು, ಕಚ್ಚದಂತೆ ಎಚ್ಚರ ವಹಿಸಲಾಗಿದೆ. ಇಲ್ಲಿ ಹಾವುಗಳು ಸಹ ಇರುವುದರಿಂದ ಜನರು ಇರುವ ಜಾಗದಲ್ಲಿ ಯಾವುದೇ ಹಾವುಗಳು ಇರದಂತೆ ಸ್ವಚ್ಛಗೊಳಿಸಲಾಗಿದೆ. ಒಂದು ವೇಳೆ ಹಾವು ಕಡಿತಕ್ಕೆ ಒಳಗಾದರೆ  ತಕ್ಷಣ ಪ್ರಥಮ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ. ಒಟ್ಟು 45 ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

‘ಪ್ರದರ್ಶನ ಸಮಯದಲ್ಲಿ ಯಾವುದೇ ಅನಾಹುತವಾಗದಂತೆ ಗಾಜಿನ ಮನೆ ಹಾಗೂ ಲಾಲ್‌ಬಾಗ್‌ನ ಎಲ್ಲಾ ನಾಲ್ಕೂ ದ್ವಾರದಲ್ಲಿ ಪ್ಯಾರಾ ಮೆಡಿಕಲ್‌ ತಂಡವನ್ನು ಒಳಗೊಂಡ ಐದು ಆ್ಯಂಬುಲೆನ್ಸ್ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದೆ. ಫಲಪುಷ್ಪ ಪ್ರದರ್ಶನದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವುದರಿಂದ ಆ ರೀತಿ ಪ್ರಕರಣಗಳು ನಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಿಗಿ ಭದ್ರತೆ ವಹಿಸಲಾಗಿದೆ’ ಎಂದರು.

‘ಒಬ್ಬರು ಎಸಿಪಿ, ಆರು ಜನ ಇನ್‌ಸ್ಟೆಕ್ಟರ್‌, 20 ಮಂದಿ ಪಿಎಸ್‌ಐ, 30 ಮಂದಿ ಎಎಸ್‌ಐ, 315 ಮಂದಿ ಹೆಡ್‌ಕಾನ್‌ಸ್ಟೆಬಲ್‌ ಹಾಗೂ ಕಾನ್‌ಸ್ಟೆಬಲ್‌, 150 ಮಂದಿ ಹೋಮ್‌ಗಾರ್ಡ್ಸ್‌, 200 ಮಂದಿ ಟ್ರಾಫಿಕ್‌ ಸಿಬ್ಬಂದಿ ಮತ್ತು ಎರಡು ವಜ್ರವಾಯು ವಾಹನವನ್ನು ಫಲಪುಷ್ಪ ಪ್ರದರ್ಶನಕ್ಕಾಗಿ ನಿಯೋಜಿಸಲಾಗಿದೆ. ಅಲ್ಲದೆ, ಕೆಲವು ಪೊಲೀಸರು ಮಫ್ತಿಯಲ್ಲಿಯೂ ಕೆಲಸ ಮಾಡುತ್ತಿರುತ್ತಾರೆ’ ಎಂದು ವಿವರಿಸಿದರು.

‘ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳು, ಗಾಜಿನ ಮನೆ ಹಾಗೂ ಇತರೇ ಆಯ್ದ ಪ್ರದೇಶಗಳಲ್ಲಿ ಒಟ್ಟು 25ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದರು.

ವಿನ್ಯಾಸಗಳ ತೆರವು: ‘ಯಾವುದೇ ಪ್ರಾಣಾಪಾಯ ಆಗದಂತೆ ಎಚ್ಚರಿಕೆ ವಹಿಸಿದ್ದು, ಅಪಾಯದ ಸ್ಥಿತಿಯಲ್ಲಿದ್ದ 67 ಕಂಬಗಳನ್ನು ತೆರವುಗೊಳಿಸಲಾಗಿದೆ.  ಭದ್ರತೆ ಇಲ್ಲದ 15 ಕಂಬಗಳಲ್ಲಿ ನಾಲ್ಕನ್ನು ದುರಸ್ತಿಪಡಿಸಿದ್ದು, ಉಳಿದ ಕಂಬಗಳನ್ನು ತೆರವು ಮಾಡಿದ್ದಾರೆ. ಒಟ್ಟು 108 ವಿನ್ಯಾಸಗಳನ್ನು ದುರಸ್ತಿ ಪಡಿಸಿದ್ದು, 43 ವಿನ್ಯಾಸಗಳ ದುರಸ್ತಿ ಕಾರ್ಯ ನಡೆಯುತ್ತಿದೆ’ ಎಂದು ಪ್ರಭಾಶ್ ಚಂದ್ರ ರೇ ತಿಳಿಸಿದರು.

₹1.10 ಕೋಟಿ ಖರ್ಚು
‘ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ₹ 1.10 ಕೋಟಿ ಖರ್ಚು ಆಗಿದೆ. ಆಕರ್ಷಣೆಯ ಗೋಲಗುಮ್ಮಟ ರಚನೆಗೆ ಸುಮಾರು ₹30 ಲಕ್ಷ ಖರ್ಚಾಗಿದೆ. 4.7 ಲಕ್ಷದಿಂದ 5.5 ಲಕ್ಷ ಜನರ ನಿರೀಕ್ಷೆ ಮಾಡಲಾಗಿದೆ. ಈ ಬಾರಿ ಒಟ್ಟು ₹1.6 ಕೋಟಿ ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ  ಜಗದೀಶ್‌ ಹೇಳಿದರು.

ಸೆಲ್ಫಿಗೆ ನಿರ್ಬಂಧ
ಈಗಾಗಲೇ ಇಲಾಖೆ ಗುರುತಿಸಿರುವ  ಬಂಡೆ ಪ್ರದೇಶ, ಕೆರೆ ಹೀಗೆ 12 ಅಪಾಯಕಾರಿ ಸ್ಥಳಗಳಲ್ಲಿ ಪ್ರಾಣಕ್ಕೆ ಕುತ್ತು ತರುವಂತೆ ಸೆಲ್ಫಿ ತೆಗೆದುಕೊಳ್ಳುವುದನ್ನು ಇಲಾಖೆ ನಿರ್ಬಂಧಿಸಿದೆ.

‘ಲಕ್ಷಗಟ್ಟಲೆ ಜನರು ಫಲಪುಷ್ಪ ಪ್ರದರ್ಶನಕ್ಕೆ ಬರುವುದರಿಂದ ಎಲ್ಲರನ್ನು ನಿಭಾಯಿಸಲು ಸಾಧ್ಯವಿಲ್ಲ. ವಿವಿಧ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಉದಾಹರಣೆಗಳಿವೆ. ಹಾಗಾಗಿ ಅಪಾಯಕಾರಿ ಸ್ಥಳ ಎಂದು ಗುರುತಿಸಿರುವ ಕಡೆ ಸೆಲ್ಫಿಗೆ ಅವಕಾಶ ನೀಡಿಲ್ಲ. ಜನರು ಇದಕ್ಕೆ ಸಹಕರಿಸಬೇಕು’ ಎಂದು  ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT