ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಂದು ರೈತ ಸಂಘಟನೆಗಳ ಜತೆ ಮುಖ್ಯಮಂತ್ರಿ ಸಭೆ

ಸಚಿವರ ಭರವಸೆ: ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ವಾಪಸ್‌ ಪಡೆದ ರೈತರು
Last Updated 19 ಜನವರಿ 2017, 4:52 IST
ಅಕ್ಷರ ಗಾತ್ರ

ತುಮಕೂರು: ರೈತರ ಸಮಸ್ಯೆಗಳನ್ನು ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಜ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವವರು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಭರವಸೆ ಕಾರಣ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ನಡೆಸುತ್ತಿದ್ದ ಧರಣಿ ವಾಪಸ್‌ ಪಡೆಯಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಧರಣಿ ನಡೆಸಲಾಯಿತು. ಮಂಗಳವಾರ ಜಾಸ್‌ ಟೋಲ್‌ ಬಳಿ ಹೆದ್ದಾರಿ ಬಂದ್‌ ನಡೆಸಿದ್ದ ರೈತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ ಧರಣಿ ಆರಂಭಿಸಿದರು. ಮಧ್ಯಾಹ್ನ  ಸ್ಥಳಕ್ಕೆ ಬಂದ ಕಾನೂನು ಸಚಿವರು, ರೈತರ ಬೇಡಿಕೆಗಳ ಬಗ್ಗೆ ಚರ್ಚೆಗೆ ಮುಖ್ಯಮಂತ್ರಿ ಸಿದ್ಧ ಇದ್ದಾರೆ. ಕೊಬ್ಬರಿ ಬೆಂಬಲ ಬೆಲೆ ಸೇರಿ ಎಲ್ಲ ವಿಷಯಗಳ ಬಗ್ಗೆ ರೈತ ಮುಖಂಡರೊಂದಿಗೆ ಚರ್ಚಿಸಿ ಪರಿಹಾರ ಪ್ರಕಟಿಸುವರು ಎಂದು ಹೇಳಿದರು. ಇದಾದ ನಂತರ ಧರಣಿ ವಾಪಸ್‌ ಪಡೆಯಲಾಯಿತು.

ಇದಕ್ಕೂ ಮುನ್ನ, ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ರೈತರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ರೈತರನ್ನು ಎರಡೂ ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸಭೆ: ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ರೈತರ ಸಭೆ ನಡೆಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಖಾಸಗಿ ಬ್ಯಾಂಕ್‌ಗಳು, ಫೈನಾನ್ಸ್‌ಗಳು ಬಡ ರೈತರನ್ನು ಸಾಲ ವಸೂಲಾತಿ ಹೆಸರಿನಲ್ಲಿ ಶೋಷಣೆ ಮಾಡುತ್ತಿವೆ ಎಂದು ರೈತ ಮುಖಂಡರು ದೂರಿದರು.
ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಮಹಿಳಾ ಸಂಘಗಳಿಗೆ ಅಧಿಕ  ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಸಾಲ ವಸೂಲಿಗೆ ದೌರ್ಜನ್ಯ ಎಸಗುತ್ತಿವೆ ಎಂದರು.

ಮಹೀಂದ್ರ, ಟಾಟಾ ಫೈನಾನ್ಸ್ ಕಂಪೆನಿಯರು ರೈತರಿಂದ ಖಾಲಿ ಚೆಕ್‌ಗಳನ್ನು ಪಡೆದು ಸಾಲ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈ ಬ್ಯಾಂಕ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.

ಗೋಶಾಲೆಗಳಲ್ಲಿ ರೈತರು ಮನೆಗೆ ಮೇವು ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು. ಈಗ ಗೋಶಾಲೆಗೆ ರಾಸುಗಳನ್ನು ತಂದರೆ ಮಾತ್ರ ಮೇವು ನೀಡಲಾಗುತ್ತಿದೆ. ಇದರ ಬದಲಿಗೆ ರೈತರ ಮನೆಗಳಿಗೆ ಮೇವು ವಿತರಿಸಬೇಕು ಎಂದು ಆಗ್ರಹಿಸಿದರು.

ಕೃಷಿ ವಿಮೆ ಹಣ ಸಹ ಬಂದಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ವಿಮೆ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್, ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ನಿಜಾನಂದ ಮೂರ್ತಿ, ಜನ ಸಂಗ್ರಾಮ ಮತ್ತು ಸ್ವರಾಜ್‌ ಅಭಿಯಾನದ ರಾಜ್ಯ ಉಪಾಧ್ಯಕ್ಷ  ಸಿ.ಯತಿರಾಜು ಇನ್ನಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT