ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡಕ್ಕೆ ಮಣಿದರೆ ಸುಮ್ಮನಿರುವುದಿಲ್ಲ

ನಗರಸಭೆ ಮತ್ತು ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಖಡಕ್‌ ಎಚ್ಚರಿಕೆ
Last Updated 19 ಜನವರಿ 2017, 4:56 IST
ಅಕ್ಷರ ಗಾತ್ರ

ಕೋಲಾರ: ‘ನೀರು ಪೂರೈಕೆ ವಿಚಾರದಲ್ಲಿ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಬುಧವಾರ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳ ಸಭೆ ನಡೆಸಿದ ಅವರು, ನೀರಿನ ಸಮಸ್ಯೆ ತೀವ್ರವಾಗಿರುವ ವಾರ್ಡ್‌ಗಳಿಗೆ ಮಾತ್ರ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಸದಸ್ಯರ ಅಥವಾ ಇತರೆ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಟ್ಯಾಂಕರ್‌ ನೀರು ಪೂರೈಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನೀರು ಲಭ್ಯವಿರುವ ವಾರ್ಡ್‌ಗಳಲ್ಲಿ ವಾಲ್‌ಮೆನ್‌ಗಳು ನಾಗರೀಕರಿಗೆ ನೀರು ಬಿಡದೆ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ. ಈ ಬಗ್ಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಒತ್ತಡ ಹೇರುತ್ತಿದ್ದಾರೆ: ಕೋಲಾರ ನಗರಸಭೆ ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌ ಮಾತನಾಡಿ, ‘ನಗರದಲ್ಲಿ ಪ್ರಸ್ತುತ 37 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 50 ಟ್ಯಾಂಕರ್‌ ಸೇರ್ಪಡೆ ಮಾಡುವಂತೆ ಸದಸ್ಯರು ಒತ್ತಡ ಹೇರುತ್ತಿದ್ದಾರೆ. ಕೆಲಸ ಮಾಡಲು ಬಿಡುತ್ತಿಲ್ಲ’ ಎಂದು ಸಭೆಯಲ್ಲಿ ಅಳಲು ತೋಡಿಕೊಂಡರು.

ಹೆಚ್ಚುವರಿಯಾಗಿ 37 ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ 185 ಲೋಡ್‌ ನೀರು ಪೂರೈಸಲಾಗುತ್ತಿದೆ. ಗಾಂಧಿನಗರದ ಅರ್ಧ ಬಡಾವಣೆಗೆ ಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದೇವೆ. ಆದರೆ, ಟ್ಯಾಂಕರ್‌ ಮಾಲೀಕರು ಮತ್ತು ವಾರ್ಡ್‌ ಸದಸ್ಯರು ಸ್ಥಳೀಯರನ್ನು ಎತ್ತಿ ಕಟ್ಟಿ ಪ್ರತಿಭಟನೆ ಮಾಡಿಸಿದ್ದಾರೆ. ಜನರಿಗೆ ವಾಸ್ತವಾಂಶ ಹೇಳಲು ಸದಸ್ಯರು ಮತ್ತು ಟ್ಯಾಂಕರ್ ಮಾಲೀಕರು ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.

ನಗರದಲ್ಲಿ ಒಟ್ಟು 298 ಕೊಳವೆ ಬಾವಿಗಳಿದ್ದು, ಆ ಪೈಕಿ 130 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. 168 ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ ಎಂದು ವಿವರಿಸಿದರು.

ವೈಯಕ್ತಿಕ ಹಿತಾಸಕ್ತಿ: ‘ಯಾರದೊ ವೈಯಕ್ತಿಕ ಹಿತಾಸಕ್ತಿಗಾಗಿ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವಿಲ್ಲ. ಅವರ ಪ್ರತಿಷ್ಠೆ ಉಳಿಸಿಕೊಳ್ಳಬೇಕಾದರೆ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಿಕೊಳ್ಳಲಿ. ಟ್ಯಾಂಕರ್‌ಗಳ ಸಂಖ್ಯೆ ಕಡಿಮೆ ಮಾಡಿ ಪೈಪ್‌ಲೈನ್ ಮೂಲಕವೇ ನೀರು ಸರಬರಾಜು ಮಾಡಬೇಕೆಂಬುದು ನನ್ನ ಉದ್ದೇಶ. ಕೆರೆಗಳ ಅಂಗಳದಲ್ಲಿನ ಎಷ್ಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ ಎಂಬ ಬಗ್ಗೆ ಗುರುವಾರ (ಜ.19) ಸಂಜೆಯೊಳಗೆ ಮಾಹಿತಿ ನೀಡಿ’ ಎಂದು ತ್ರಿಲೋಕಚಂದ್ರ ಆಯುಕ್ತರಿಗೆ ಸೂಚಿಸಿದರು.

ಸ್ವಚ್ಛ ಭಾರತ್ ಯೋಜನೆಯಡಿ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಅನುದಾನ ಸರ್ಕಾರಕ್ಕೆ ವಾಪಸ್‌ ಹೋದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇನೆ. ಯೋಜನೆಯಡಿ ನಿರ್ಮಿಸಿರುವ ಶೌಚಾಲಯಗಳ ಬಗ್ಗೆ ಮಾಹಿತಿ ಕೊಡಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ರಾಮ್‌ಪ್ರಕಾಶ್, ‘ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು 333 ಅರ್ಜಿ ಬಂದಿದ್ದವು. ಈ ಪೈಕಿ 153 ಶೌಚಾಲಯಗಳ ನಿರ್ಮಾಣ ಪೂರ್ಣಗೊಂಡಿದ್ದು, ಉಳಿದ 180 ನಿರ್ಮಾಣದ ಹಂತದಲ್ಲಿವೆ. ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ’ ಎಂದರು.

ಕೆಜಿಎಫ್‌ ನಗರಸಭೆ ಆಯುಕ್ತ ಶ್ರೀಕಾಂತ್ ಮಾತನಾಡಿ, ‘2,918 ಶೌಚಾಲಯಗಳ ನಿರ್ಮಾಣದ ಗುರಿ ಹೊಂದಲಾಗಿತ್ತು. ಈ ಪೈಕಿ 2,600 ಶೌಚಾಲಯಗಳ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಶೌಚಾಲಯಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆಯಿದೆ. ಸದ್ಯದಲ್ಲೇ ಜಾಗ ಗುರುತಿಸಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಯೋಜನಾ ನಿರ್ದೇಶಕಿ ರೇಣುಕಾ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT