ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ

ಮಾರ್ಗದರ್ಶನ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಎಚ್ಚರಿಕೆ
Last Updated 19 ಜನವರಿ 2017, 5:11 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ. ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಪ್ರಯತ್ನದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ನೂತನ ಪರೀಕ್ಷಾ ಪದ್ಧತಿ ಕುರಿತು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಮತ್ತು ಹಿರಿಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಮಕ್ಕಳು ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯದಲ್ಲಿ ಹಿನ್ನಡೆ ಹೊಂದಿದ್ದಾರೆ. ಈ ವಿಷಯಗಳಿಗೆ  ಶಿಕ್ಷಕರು ಹೆಚ್ಚಿನ ಒತ್ತು ಕೊಡಬೇಕು. ಜೂನಿಯರ್ ಕಾಲೇಜು ಹಾಗೂ ಹಿಂದುಳಿದ ಪ್ರದೇಶದಲ್ಲಿನ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಫಲಿತಾಂಶ ಸುಧಾರಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಮಟ್ಟದ ಪೂರ್ವ ಸಿದ್ದತಾ ಪರೀಕ್ಷೆಯು ಎಸ್ಸೆಸ್ಸೆಲ್ಸಿ ಫಲಿತಾಂಶದ ದಿಕ್ಸೂಚಿಯಾಗಿದೆ. ಇದರಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಅವರ ಬಗ್ಗೆ ವಿಶೇಷ ಗಮನ ಹರಿಸಿ. ಫಲಿತಾಂಶ ಹೆಚ್ಚಿಸುವುದನ್ನು ಸವಾಲಾಗಿ ಸ್ವೀಕರಿಸಿ. ಫಲಿತಾಂಶ ಕುಸಿದರೆ ಮುಖ್ಯ ಶಿಕ್ಷಕರು ಮತ್ತು ವಿಷಯ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿಷಯ ಪರಿವೀಕ್ಷಕರು ಶಾಲೆಗಳಲ್ಲಿ ಫಲಿತಾಂಶ ಹಿನ್ನಡೆಗೆ ಕಾರಣವಾದ ನ್ಯೂನತೆಗಳನ್ನು ಪಟ್ಟಿ ಮಾಡಿ, ಅವುಗಳನ್ನು ಸರಿಪಡಿಸಲು ಕೈಗೊಂಡಿರುವ ಕ್ರಿಯಾಯೋಜನೆ ಬಗ್ಗೆ ಮುಂದಿನ ಸಭೆಯಲ್ಲಿ ವಿಷಯ ಮಂಡಿಸಬೇಕು ಎಂದು ಸೂಚಿಸಿದರು.

ತರಗತಿ ತಪ್ಪಿಸಬೇಡಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ವಿಶೇಷ ತರಗತಿಗಳನ್ನು ತಪ್ಪಿಸಬೇಡಿ, ಮುಖ್ಯ ಶಿಕ್ಷಕರು ಇತರೆ ಶಿಕ್ಷಕರ ಸಹಕಾರ ಪಡೆದು ತಂಡವಾಗಿ ಕಾರ್ಯ ನಿರ್ವಹಿಸಬೇಕು’ ಎಂದರು.

‘ಗುಣಮಟ್ಟದ ಫಲಿತಾಂಶಕ್ಕೆ ಆದ್ಯತೆ ನೀಡಿ. ವಾಮ ಮಾರ್ಗದ ಚಿಂತನೆ ಬೇಡ. ಮಕ್ಕಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ನಿರಂತರ ಮಾರ್ಗದರ್ಶನ ನೀಡಿ. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಹೀಗಾಗಿ ಶಿಕ್ಷಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು.

ಮುಖ್ಯ ಶಿಕ್ಷಕರ ಸಂಘ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಳಸಿಕೊಂಡು ಮಕ್ಕಳ ಕಲಿಕೆ ದೃಢೀಕರಣ ಮಾಡಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಜಿ.ರಂಗಯ್ಯ ಹೇಳಿದರು.

ಬದುಕುವ ಶಿಕ್ಷಣ: ಜಿಲ್ಲಾ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎಸ್.ಮುನಿಯಪ್ಪ ಮಾತನಾಡಿ, ‘ಶಿಕ್ಷಣದ ಗುಣಮಟ್ಟ ಹೆಚ್ಚಲು ಬೋಧನೆ, ಪರೀಕ್ಷೆ ಸಾಲದು. ಮಕ್ಕಳಲ್ಲಿ ಮೌಲ್ಯಗಳ ಅರಿವು ಮೂಡಿಸಬೇಕು. ಬದುಕುವ ಶಿಕ್ಷಣ ಇಂದಿನ ಅಗತ್ಯ’ ಎಂದರು.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹಾಯಕ ನಿರ್ದೇಶಕಿ ಅನಿತಾ ಅವರು ಹೊಸ ಪರೀಕ್ಷಾ ಪದ್ಧತಿಯ ಬಗ್ಗೆ  ಪ್ರಾತ್ಯಕ್ಷಿಕೆ ಮೂಲಕ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿದರು. ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ವಿಷಯ ಪರಿವೀಕ್ಷಕ ಸಿ.ಆರ್.ಆಶೋಕ್, ಜಿಲ್ಲಾ ಶಿಕ್ಷಣಾಧಿಕಾರಿ ಮಾಧವರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜಗದೀಶ್, ಜಯರಾಜ್, ವೆಂಕಟರಾಮರೆಡ್ಡಿ, ದೇವರಾಜ್ ಪಾಲ್ಗೊಂಡಿದ್ದರು.

ಫಲಿತಾಂಶ ಏರಿಕೆಗೆ ಸಾಂಘಿಕ ಪ್ರಯತ್ನ ಅಗತ್ಯ
ಕೋಲಾರ
: ‘ಜಿಲ್ಲೆಯ ಎಸ್ಸೆಸ್ಸೆಲ್ಸಿ ಗುಣಾತ್ಮಕ ಫಲಿತಾಂಶ ಏರಿಕೆಗೆ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಒಂದು ತಂಡದಂತೆ ಕಾರ್ಯ ನಿರ್ವಹಿಸಬೇಕು. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ವಿಶೇಷ ತರಗತಿ ಮತ್ತು ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ ಬದಲಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ರೀತಿಯ ಪರೀಕ್ಷೆ ಶಿಕ್ಷಕರಿಗೆ ಹೊಸತಲ್ಲ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ. ನೋಂದಣಿ ಸಂಖ್ಯೆ, ಪ್ರಶ್ನೆ ಮತ್ತು ಮುಖ್ಯ ಪ್ರಶ್ನೆ ಸಂಖ್ಯೆ ಬರೆಯುವ ಕುರಿತು ಅರಿವು ಮೂಡಿಸಿ. ಅಂಕಗಳನ್ನು ಆಧರಿಸಿ ಎಷ್ಟು ಉತ್ತರ ಬರೆಯಬೇಕೆಂಬ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.

ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ಬರಬಾರದು. ಪೂರ್ವ ಸಿದ್ದತಾ ಪರೀಕ್ಷಾ ಮೌಲ್ಯಮಾಪನವನ್ನು ಸಮರ್ಪಕವಾಗಿ ಮಾಡಿ. ಇಲಾಖೆ ನೀಡಿರುವ ಮಾದರಿ ಪ್ರಶ್ನೆಪತ್ರಿಕೆಯನ್ನು ಮಕ್ಕಳಿಂದ ಅಭ್ಯಾಸ ಮಾಡಿಸಿ. ಮಕ್ಕಳಿಗೆ ಕಠಿಣವಾಗಿರುವ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡಿ ಎಂದು ಹೇಳಿದರು.

ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಮಾತನಾಡಿ, ‘ಫಲಿತಾಂಶದಲ್ಲಿ ಹಿಂದುಳಿದ ಶಾಲೆಗಳಿಗೆ ಜಿಲ್ಲಾ ಪಂಚಾಯಿತಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸುವುದಾಗಿ ಸಿಇಒ ಹೇಳಿದ್ದಾರೆ. ಜೀವನದಲ್ಲಿ ಮೊದಲ ಬಾರಿ ಪಬ್ಲಿಕ್ ಪರೀಕ್ಷೆ ಬರೆಯುತ್ತಿರುವ ಮಕ್ಕಳಲ್ಲಿ ಭಯ ಸಹಜ. ಆದರೆ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT