ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಿಂದ ಸೀಳುತುಟಿ ಉಚಿತ ಶಸ್ತ್ರಚಿಕಿತ್ಸೆ

ಇಎಸ್ಐಸಿ ವೈದ್ಯಕೀಯ ಸಮುಚ್ಚಯ ಆಸ್ಪತ್ರೆಯಲ್ಲಿ
Last Updated 19 ಜನವರಿ 2017, 5:12 IST
ಅಕ್ಷರ ಗಾತ್ರ

ಕಲಬುರ್ಗಿ: ಈ ಭಾಗದ ಜನರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ದೊರಕಿಸಲು ಮುತ್ತೂಟ್‌ ಪಾಪಚ್ಚನ್‌ ಫೌಂಡೇಷನ್‌ ಸಹಯೋಗದಲ್ಲಿ ಜನವರಿ 23 ರಿಂದ 27 ರವರೆಗೂ ನಗರದ ಸೇಡಂ ರಸ್ತೆಯಲ್ಲಿರುವ ರಾಜ್ಯ ಕಾರ್ಮಿಕರ ವಿಮಾ ಕಾಲೇಜು (ಇಎಸ್‌ಐಸಿ) ಆಸ್ಪತ್ರೆಯಲ್ಲಿ ‘ಸ್ಮೈಲ್‌ ಪ್ಲೀಸ್‌’ ಹೆಸರಿನಲ್ಲಿ ಸೀಳುತುಟಿಗೆ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಆಸ್ಪತ್ರೆಯ ಡೀನ್‌ ಡಾ.ಎಂ.ಆರ್‌.ಚಂದ್ರಶೇಖರ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೌಂಡೇಷನ್‌ನಿಂದ ನುರಿತ ವೈದ್ಯರ ತಂಡವು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನವರಿ 22 ರಂದು ಸೀಳುತುಟಿ ಸಮಸ್ಯೆ ಇರುವವರನ್ನು ತಪಾಸಣೆ ಮಾಡುವರು.

23 ರಿಂದ ಶಸ್ತ್ರಚಿಕಿತ್ಸೆಗಳು ನಡೆಯಲಿವೆ. ಶಿಬಿರಕ್ಕಾಗಿ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವು ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೂ ತುಂಬಾ ಉಪಯುಕ್ತವಾಗುವುದು ಎಂದು ತಿಳಿಸಿದರು.

ಮಿಷನ್‌ ಸ್ಮೈಲ್‌ ಯೋಜನೆಯ ಸಹಾಯಕ ವ್ಯವಸ್ಥಾಪಕ ರಫಿ–ಉರ್‌ ರೆಹಮಾನ್‌ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಶಿಬಿರ ಏರ್ಪಡಿಸಲಾಗಿದೆ. ಸೀಳುತುಟಿ ಸಮಸ್ಯೆ ಇದ್ದವರು ಯಾವ ಭಾಗದಿಂದ ಬಂದರೂ ಅವರಿಗೆ ಸೇವೆ ಒದಗಿಸಲಾಗುವುದು. 2002 ರಿಂದ ಮಿಷನ್‌ ಸ್ಮೈಲ್‌ ಆರಂಭಿಸಲಾಗಿದ್ದು, ಇವರೆಗೂ 45 ಸಾವಿರ ಜನರ ತಪಾಸಣೆ ಮಾಡಿ, 29 ಸಾವಿರ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

ಕೇರಳದ ಕೊಟ್ಟಾಯಂ ನಿಂದ 2014 ರಲ್ಲಿ ಸ್ಮೈಲ್‌ ಪ್ಲೀಸ್‌ ಹೊಸ ಹೆಸರಿನೊಂದಿಗೆ ಸೀಳುತುಟಿಗೆ ಉಚಿತ ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ 82 ಕ್ಕೂ ಹೆಚ್ಚು ಶಿಬಿರಗಳನ್ನು ಮಾಡಲಾಗಿದೆ. ಸುಮಾರು 900 ಸ್ವಯಂ ಸೇವಾ ವೈದ್ಯರು ಫೌಂಡೇಷನ್‌ ಮೂಲಕ ಉಚಿತ ಚಿಕಿತ್ಸೆ ನೀಡಿದ್ದಾರೆ.

ಇಎಸ್‌ಐ ಸಹಯೋಗದಲ್ಲಿ ಕಲಬುರ್ಗಿಯಲ್ಲಿ ಮೊದಲ ಶಿಬಿರ ಮಾಡಲಾಗುತ್ತಿದೆ ಎಂದು ಹೇಳಿದರು.

ಮುತ್ತೂಟ್‌ ಪಾಪಚ್ಚನ್‌ ಫೌಂಡೇಷನ್‌ ಪ್ರಾದೇಶಿಕ ವ್ಯವಸ್ಥಾಪಕ ಬಿಸ್ವಾ ಮಾತನಾಡಿ, ಕಲಬುರ್ಗಿ, ಬೀದರ್‌, ಯಾದಗಿರಿ, ವಿಜಯಪುರ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮುತ್ತೂಟ್‌ ಫೈನಾನ್ಸ್‌ನ 66 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಗಳಿಸುವ ಲಾಭದ ಭಾಗವನ್ನು ಸಮಾಜಕ್ಕೆ ಸಮರ್ಪಿಸುವ ಭಾಗವಾಗಿ ಈ ಭಾಗದಲ್ಲಿ ವೈದ್ಯಕೀಯ ಶಿಬಿರಗಳನ್ನು ಮಾಡಲಾಗುತ್ತಿದೆ.

ಕಂಪೆನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಯೋಜನೆ ಅಡಿಯಲ್ಲಿ ವೈದ್ಯಕೀಯ ಶಿಬಿರಗಳೊಂದಿಗೆ ನಿರುದ್ಯೋಗಿಗಳಿಗಾಗಿ ವಿವಿಧ ತರಬೇತಿಗಳನ್ನು ಕೊಡಲಾಗುತ್ತಿದೆ ಎಂದು ತಿಳಿಸಿದರು.

ಇಎಸ್‌ಐಸಿ ವೈದ್ಯಕೀಯ ಅಧೀಕ್ಷಕ ವಿ.ಬಿ.ಬಿರಾದಾರ ಇದ್ದರು.

ಹೆಚ್ಚಿನ ಮಾಹಿತಿಗಾಗಿ 96746 54679, 99646 77422 ಮೊಬೈಲ್‌ ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಅಥವಾ CLEFT ಎಂದು ಬರೆದು 58888 ಸಂಖ್ಯೆಗೆ ಮೊಬೈಲ್‌ ಸಂದೇಶ ಕಳುಹಿಸಬಹುದು.

ಆಸ್ಪತ್ರೆಯಲ್ಲಿ ಎಂಟು ವಿಭಾಗಗಳು: ಜನರಲ್‌ ಮೆಡಿಷನ್‌, ಜನರಲ್‌ ಸರ್ಜರಿ, ಎಲುಬು–ಕೀಲು ರೋಗ ವಿಭಾಗ, ಕಿವಿ–ಮೂಗು–ಗಂಟಲು ವಿಭಾಗ, ಕಣ್ಣಿನ ವಿಭಾಗ, ಚಿಕ್ಕ ಮಕ್ಕಳ ಚಿಕಿತ್ಸಾ ವಿಭಾಗ, ಚರ್ಮರೋಗ ವಿಭಾಗ, ಟಿ.ಬಿ–ಎದೆರೋಗ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 200 ವೈದ್ಯರಿದ್ದಾರೆ. ಪ್ರತಿ ವಿಭಾಗಕ್ಕೂ ಪ್ರತ್ಯೇಕ ಶಸ್ತ್ರಚಿಕಿತ್ಸೆ ಹಾಗೂ ರೋಗಿಗಳಿಗೆ ಹಾಸಿಗೆಗಳ ಸೌಲಭ್ಯಗಳಿವೆ.

ವೈದ್ಯರಿಂದ ಸೇವೆ: ಸೀಳುಬಾಯಿ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ಒದಗಿಸಲು ಪಾಲ್ಗೊಳ್ಳುವ ಯಾವ ವೈದ್ಯರು ಇದಕ್ಕಾಗಿ ಹಣ ಪಡೆದುಕೊಳ್ಳುವುದಿಲ್ಲ. ಸ್ವಯಂ ಸ್ಫೂರ್ತಿಯಿಂದ ಫೌಂಡೇಷನ್‌ ಜೊತೆ ಕೈ ಜೋಡಿಸಿದ್ದಾರೆ. ಉಚಿತ ಔಷಧಿ, ಊಟ, ಸಾರಿಗೆ ವೆಚ್ಚ ಕೂಡಾ ಲಭ್ಯ.

ಎಲ್ಲರಿಗೂ ಉಚಿತ ಚಿಕಿತ್ಸೆ

ರಾಜ್ಯ ಕಾರ್ಮಿಕರ ವಿಮಾ (ಇಎಸ್‌ಐ) ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ದೇಶದಾದ್ಯಂತ ಸ್ಥಾಪಿಸಿರುವ ಆಸ್ಪತ್ರೆಗಳ ಪೈಕಿ ಕಲಬುರ್ಗಿಯ ಇಸಿಐ ಆಸ್ಪತ್ರೆಯಲ್ಲಿ ಮಾತ್ರ ಸಾರ್ವಜನಿಕರಿಗೂ ಉಚಿತ ವೈದ್ಯಕೀಯ ಸೇವೆ ಕೊಡಲಾಗುತ್ತಿದೆ.  ಆಸ್ಪತ್ರೆ ಆರಂಭವಾದಾಗಿನಿಂದ ಈವರೆಗೆ ಸುಮಾರು 700 ವಿವಿಧ ಬಗೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಯಾವುದೇ ಶುಲ್ಕವನ್ನು ರೋಗಿಗಳಿಂದ ಪಡೆದಿಲ್ಲ ಎಂದು ಆಸ್ಪತ್ರೆಯ ಕಾರ್ಯದರ್ಶಿ ಡಾ.ದೀನಾನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT