ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಹೌಸ್‌: ಏಕಾಏಕಿ ಸಹಾಯಧನ ಇಳಿಕೆ

ನೆರಳು ಪರದೆ ಘಟಕಕ್ಕೂ ಸಹಾಯ ಧನ ಕಡಿತ: ರೈತರ ಆಕ್ರೋಶ
Last Updated 19 ಜನವರಿ 2017, 5:13 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್‌ ಹಾಗೂ ನೆರಳು ಪರದೆ ಘಟಕಗಳನ್ನು ನಿರ್ಮಿಸಿ ಸಹಾಯಧನದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರ ಮೇಲೆ ಕೃಷಿ ಇಲಾಖೆ ಗದಾಪ್ರಹಾರ ನಡೆಸಿದೆ. ಇಲಾಖೆಯು ಸಹಾಯಧನ ಮೊತ್ತವನ್ನು ಏಕಾಏಕಿ ಕಡಿಮೆ ಮಾಡಿದ್ದು, ಪರಿಷ್ಕೃತ ದರಕ್ಕೆ ಅನುಗುಣವಾಗಿ ಸಹಾಯಧನ ನೀಡುವಂತೆ ಆದೇಶ ಹೊರಡಿಸಿದೆ.

ಕಳೆದೊಂದು ವರ್ಷದಿಂದ ಸಹಾಯಧನ ಬಿಡುಗಡೆಗೊಳಿಸದೆ ರೈತರನ್ನು ಸತಾಯಿಸುತ್ತಿರುವ ಇಲಾಖೆಯು ಈಗ ಸಹಾಯಧನ ಕಡಿಮೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಇಲಾಖೆಯ ಹೊಸ ಆದೇಶದಿಂದ ರೈತರು ಕಂಗಾಲಾಗಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಕನಿಷ್ಠ 1 ಹೆಕ್ಟೇರ್‌ ಜಮೀನು ಹೊಂದಿರುವ ರೈತರನ್ನು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಪಾಲಿಹೌಸ್‌ ಮತ್ತು ನೆರಳು ಪರದೆ ಘಟಕಗಳಿಗೆ ಫಲಾನುಭವಿಗಳಾಗಿ ಆಯ್ಕೆ ಮಾಡಿ 2015–16ನೇ ಸಾಲಿನಲ್ಲಿ ಕಾರ್ಯಾದೇಶ ನೀಡಲಾಗಿತ್ತು.

ಯೋಜನೆ ಪ್ರಕಾರ ಒಂದು ಹೆಕ್ಟೇರ್‌ಗೆ ಒಂದು ಎಕರೆ ವಿಸ್ತೀರ್ಣದಲ್ಲಿ ಪಾಲಿಹೌಸ್‌ ಅಥವಾ ನೆರಳು ಪರದೆ ನಿರ್ಮಿಸಬೇಕು. ಯೋಜನೆಯ ಆರಂಭದಲ್ಲಿ ಪಾಲಿಹೌಸ್‌ಗೆ ಸಾಮಾನ್ಯ ವರ್ಗಕ್ಕೆ ಶೇ 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ 90 ಸಹಾಯಧನ ನಿಗದಿಪಡಿಸಲಾಗಿತ್ತು.

ಬಳಿಕ ಯೋಜನೆಯಲ್ಲಿ ಮಾರ್ಪಾಡು ಮಾಡಿ ಸತತ ಮೂರು ವರ್ಷಗಳಿಂದ ಬರಪೀಡಿತ ಪ್ರದೇಶವೆಂದು ಘೋಷಣೆಯಾದ ತಾಲ್ಲೂಕುಗಳಿಗೆ ವಿಶೇಷ ಪ್ಯಾಕೇಜ್‌ನಡಿ ಸಹಾಯಧನ ಹೆಚ್ಚಿಸಲಾಯಿತು. ಅದರಂತೆ ಸಾಮಾನ್ಯ ವರ್ಗಕ್ಕೆ ಶೇ 75 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 90 ಸಹಾಯಧನ ನಿಗದಿಪಡಿಸಲಾಯಿತು.

ಸಹಾಯಧನ ವಿವರ: ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿದ್ದ ಸಂದರ್ಭದಲ್ಲಿ ಪಾಲಿಹೌಸ್‌ಗೆ ಪ್ರತಿ ಚದರ ಮೀಟರ್‌ಗೆ ₹ 844 ಮತ್ತು ನೆರಳು ಪರದೆ ಘಟಕಕ್ಕೆ ₹ 710 ಸಹಾಯಧನ ನಿಗದಿಪಡಿಸಲಾಗಿತ್ತು. ಈ ದರದ ಪ್ರಕಾರ ಒಂದು ಎಕರೆ ವಿಸ್ತೀರ್ಣದ ಪಾಲಿಹೌಸ್‌ಗೆ ₹ 33.76 ಲಕ್ಷ ಹಾಗೂ ನೆರಳು ಪರದೆ ಘಟಕಕ್ಕೆ ₹ 28.40 ಲಕ್ಷ ಸಹಾಯಧನ ನಿಗದಿಯಾಗಿತ್ತು. ಯೋಜನೆಯ ಮಾರ್ಗಸೂಚಿ ಪ್ರಕಾರ ಫಲಾನುಭವಿಗಳು ಕಾರ್ಯಾದೇಶ ಪಡೆದ ಮೂರು ತಿಂಗಳಲ್ಲಿ ಘಟಕ ನಿರ್ಮಿಸಬೇಕು.

ಈ ನಿಯಮದಂತೆ ರೈತರು ಇಲಾಖೆಯ ಸಹಾಯಧನ ನಂಬಿ ಖಾಸಗಿ ಲೇವಾದೇವಿದಾರರು ಮತ್ತು ಬ್ಯಾಂಕ್‌ಗಳಲ್ಲಿ ಜಮೀನು, ಚಿನ್ನಾಭರಣ ಅಡವಿಟ್ಟು ಬಡ್ಡಿ ಸಾಲ ಪಡೆದು ಮೂರು ತಿಂಗಳಲ್ಲೇ ಘಟಕಗಳನ್ನು ನಿರ್ಮಿಸಿದ್ದಾರೆ. ಆದರೆ, ವರ್ಷ ಕಳೆದರೂ ಸಹಾಯಧನ ಬಿಡುಗಡೆಯಾಗಿಲ್ಲ.

ಈ ನಡುವೆ ಇಲಾಖೆಯು ಪಾಲಿಹೌಸ್‌ ಸಹಾಯಧನವನ್ನು ಪ್ರತಿ ಚದರ ಮೀಟರ್‌ಗೆ ₹ 740ಕ್ಕೆ ಮತ್ತು ನೆರಳು ಪರದೆ ಘಟಕದ ಸಹಾಯಧನವನ್ನು ₹ 384ಕ್ಕೆ ಇಳಿಕೆ ಮಾಡಿ ಜ.16ರಂದು ಆದೇಶ ಹೊರಡಿಸಿದೆ. ಪರಿಷ್ಕೃತ ದರದ ಪ್ರಕಾರ ಒಂದು ಎಕರೆ ವಿಸ್ತೀರ್ಣದ ಪಾಲಿಹೌಸ್‌ಗೆ ₹ 29.60 ಲಕ್ಷ ಹಾಗೂ ನೆರಳು ಪರದೆ ಘಟಕಕ್ಕೆ ₹ 15.36 ಲಕ್ಷ ಸಹಾಯಧನ ನಿಗದಿಪಡಿಸಲಾಗಿದೆ. ಹೊಸ ದರದ ಅನ್ವಯ ಪಾಲಿಹೌಸ್‌ ಸಹಾಯಧನದಲ್ಲಿ ₹ 4.16 ಲಕ್ಷ ಹಾಗೂ ನೆರಳು ಪರದೆ ಘಟಕಕ್ಕೆ ₹ 13.04 ಲಕ್ಷ ಕಡಿಮೆಯಾಗಲಿದೆ.

ಬಾಕಿ ಎಷ್ಟು: 2015– 16ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 155 ರೈತರು ಪಾಲಿಹೌಸ್‌ ಹಾಗೂ ನೆರಳು ಪರದೆ ಘಟಕಗಳನ್ನು ನಿರ್ಮಿಸಿದ್ದು, ಈ ಪೈಕಿ 67 ಫಲಾನುಭವಿಗಳಿಗೆ ಹಳೆ ದರದಲ್ಲೇ ಸುಮಾರು ₹ 13.32 ಕೋಟಿ ಸಹಾಯಧನ ಬಿಡುಗಡೆಯಾಗಿದೆ. ಉಳಿದಂತೆ 38 ಪಾಲಿಹೌಸ್‌ ಹಾಗೂ 50 ನೆರಳು ಪರದೆ ಘಟಕಗಳ ಫಲಾನುಭವಿಗಳಿಗೆ ₹ 22.81 ಕೋಟಿ ಸಹಾಯಧನ ಕೊಟ್ಟಿಲ್ಲ.

ಕೋಲಾರ ತಾಲ್ಲೂಕಿನಲ್ಲಿ 51 ಫಲಾನುಭವಿಗಳಿಗೆ ₹ 13.63 ಕೋಟಿ, ಮಾಲೂರು ತಾಲ್ಲೂಕಿನಲ್ಲಿ 13 ಮಂದಿಗೆ ₹ 2.24 ಕೋಟಿ, ಬಂಗಾರಪೇಟೆ ತಾಲ್ಲೂಕಿನಲ್ಲಿ 9 ಫಲಾನುಭವಿಗಳಿಗೆ ₹ 2.74 ಕೋಟಿ, ಮುಳಬಾಗಿಲು ತಾಲ್ಲೂಕಿನಲ್ಲಿ 12 ಮಂದಿಗೆ ₹ 3.32 ಕೋಟಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 3 ಫಲಾನುಭವಿಗಳಿಗೆ ಸುಮಾರು ₹ 85 ಲಕ್ಷ ಸಹಾಯಧನ ಕೊಡಬೇಕಿದೆ.

ಫಲಾನುಭವಿಗಳ ಆಕ್ರೋಶ: ಬಡ್ಡಿ ಹಾಗೂ ಸಾಲದ ಕಂತು ಕಟ್ಟಲಾಗದೆ ಕಂಗಾಲಾಗಿರುವ ರೈತರು ಸಹಾಯಧನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಸಂದರ್ಭದಲ್ಲೇ ಇಲಾಖೆಯು ಹೊಸ ಆದೇಶ ಹೊರಡಿಸಿ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಆದೇಶ ಹೊರಬಿದ್ದ ಬೆನ್ನಲ್ಲೇ ಪಾಲಿಹೌಸ್‌ ಮತ್ತು ನೆರಳು ಪರದೆ ಘಟಕದ ಫಲಾನುಭವಿಗಳು ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಬುಧವಾರ ಭೇಟಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲದ ಬಡ್ಡಿ ಹೊರೆಯಿಂದ ನಲುಗಿರುವ ರೈತರಿಗೆ ಸಹಾಯಧನ ಕಡಿಮೆಗೊಳಿಸಿರುವ ಕ್ರಮವು ಬರ ಸಿಡಿಲಿನಂತೆ ಆಘಾತ ನೀಡಿದೆ.

ಪತ್ರ ಬರೆಯಲಾಗಿದೆ
ಇಲಾಖೆಯು ಪಾಲಿಹೌಸ್‌ ಹಾಗೂ ನೆರಳು ಪರದೆ ಘಟಕಗಳ ಸಹಾಯಧನ ಕಡಿಮೆ ಮಾಡಿ ಆದೇಶ ಹೊರಡಿಸಿದ್ದು, ಫಲಾನುಭವಿಗಳಿಗೆ ಪರಿಷ್ಕೃತ ದರಕ್ಕೆ ಅನುಗುಣವಾಗಿ ಸಹಾಯಧನ ನೀಡುವಂತೆ ಸೂಚಿಸಿದೆ. ಸಹಾಯಧನ ಕಡಿಮೆ ಮಾಡಿರುವುದಕ್ಕೆ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.
–ಎಂ.ಎಸ್‌.ರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

*
ದಿಕ್ಕು ತೋಚದಂತಾಗಿದೆ
ಕೃಷಿ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ರೈತರನ್ನು ನಂಬಿಸಿ ಕತ್ತು ಕೊಯ್ಯುವ ಕೆಲಸ ಮಾಡಿದ್ದಾರೆ. ಸಹಾಯಧನ ನಂಬಿ ನೆರಳು ಪರದೆ ಘಟಕ ನಿರ್ಮಾಣಕ್ಕೆ ಶೇ 13ರ ದರದಲ್ಲಿ ₹ 25 ಲಕ್ಷ ಬಡ್ಡಿ ಸಾಲ ಮಾಡಿದ್ದೇನೆ. ಸಕಾಲಕ್ಕೆ ಸಹಾಯಧನ ಬಿಡುಗಡೆಯಾಗದ ಕಾರಣ ಸಾಲದ ಕಂತು ಕಟ್ಟಲು ಸಾಧ್ಯವಾಗಿಲ್ಲ. ಸಾಲದ ಬಡ್ಡಿ ಹೊರೆಯ ನಡುವೆ ಇಲಾಖೆಯು ಸಹಾಯಧನ ಕಡಿಮೆ ಮಾಡಿರುವುದರಿಂದ ದಿಕ್ಕು ತೋಚದಂತಾಗಿದೆ.
–ಮುನಿಯಪ್ಪ, ಫಲಾನುಭವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT