ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾ: ಪ್ರಧಾನಿ ಒಪ್ಪಿಸಲು ಸಿದ್ಧ

Last Updated 19 ಜನವರಿ 2017, 5:16 IST
ಅಕ್ಷರ ಗಾತ್ರ

ಕುಷ್ಟಗಿ:  ಸಿದ್ದರಾಮಯ್ಯ ರೈತರ ಅರ್ಧ ಸಾಲ ಮನ್ನಾ ಮಾಡಿ ಎಂದು ಕೇಂದ್ರಕ್ಕೆ ಒಂದು ಪತ್ರ ವನ್ನೂ ಬರೆದಿಲ್ಲ, ಪತ್ರ ಬರೆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಉಳಿದ ಮೊತ್ತ ಮನ್ನಾ ಮಾಡಿಸುತ್ತೇವೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಗೆ ಸವಾಲು ಹಾಕಿದರು.

ಬುಧವಾರ ತಾಲ್ಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ವಣಗೇರಿ ಗ್ರಾಮದಲ್ಲಿ ರೈತರೊಂದಿಗಿನ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಬೊಕ್ಕಸದಿಂದ ರೈತರ ಸಾಲ ಮನ್ನಾ ಮಾಡುವುದಕ್ಕೆ ಸಿದ್ದರಾಮಯ್ಯ ಅವರಿಗೆ ಮನಸ್ಸಿಲ್ಲ ಹಾಗಾಗಿ ಪದೇ ಪದೇ ಕೇಂದ್ರ ಸರ್ಕಾರದ ನೆಪ ಹೇಳುತ್ತಿದ್ದಾರೆ. ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲದ ಮೊತ್ತ ಎಷ್ಟಿದೆ ಎಂಬುದರ ಬಗ್ಗೆ  ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿ ಎಂದರು.
ಬರ ಪರಿಸ್ಥಿತಿ ಕುರಿತ ರೈತರ ಅಹವಾಲಿಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ರೈತರ ಬಗ್ಗೆ ನಿಜವಾದ ಕಳಕಳಿ ಇದ್ದರೆ ಮೊದಲು ಗೋಶಾಲೆಗಳನ್ನು ಆರಂಭಿಸಲಿ, ಆದರೆ ಸರ್ಕಾರ ಈ ವಿಷಯದಲ್ಲಿ ಕ್ರಿಯಾಶೀಲವಾಗಿಲ್ಲ ಎಂದರು.

ಕೇಂದ್ರ ಸರ್ಕಾರ ಬೆಳೆಹಾನಿ ಪರಿಹಾರ ನೀಡಿದರೂ ರಾಜ್ಯ ತನ್ನ ಪಾಲಿನ ವಂತಿಗೆ ನೀಡದೇ ಕೇವಲ ಕೇಂದ್ರ ನೀಡಿದ ಹಣವನ್ನು ಮಾತ್ರ  ವಿತರಿಸುತ್ತಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಹಣದಲ್ಲಿ ಶೇಕಡ 10ರಷ್ಟು ಹಣ ಬಳಕೆ ಮಾಡಿಕೊಳ್ಳಲಿಲ್ಲ  ಎಂದರು.

ಕೃಷ್ಣಾ ಬಿ ಸ್ಕೀಂ ದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸಿದ್ದರೆ ಬರ ಪರಿಸ್ಥಿತಿಯಿಂದ ರೈತರು ನರಳುವ ಸ್ಥಿತಿ ಬರುತ್ತಿರಲಿಲ್ಲ ಎಂದರು.

ಬರಲಿರುವ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು  ಮೊದಲು ಮಾಡುವ ಕೆಲಸವೆಂದರೆ ರೈತರ ಸಾಲ ಮನ್ನಾ ಎಂದು ಹೇಳಿದ ಶೆಟ್ಟರ್‌, ಅಲ್ಲಿವರೆಗೂ ಸದನದ ಒಳಗೆ ಮತ್ತು ಹೊರಗೆ ರೈತರ ಪರ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ, ವಣಗೇರಿ ಗ್ರಾಮದ ರೈತ ಮಾಸಪ್ಪ ಗುಡದೂರು ಮಾತನಾಡಿದರು. ಮಾಜಿ ಶಾಸಕರಾದ ಕೆ.ಶರಣಪ್ಪ, ಹಾಲಪ್ಪ ಆಚಾರ, ಹೂಲಿ ನಾಯಕ, ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ತಾಲ್ಲೂಕು ಅಧ್ಯಕ್ಷ ತಮ್ಮಣ್ಣಾಚಾರ ದಿಗ್ಗಾವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ನೇಮಣ್ಣ ಮೇಲಸಕ್ರಿ, ರೈತ ಮುಖಂಡ ತಿಪ್ಪೆರುದ್ರಸ್ವಾಮಿ, ವಿಠ್ಠಪ್ಪ ನಾಗೂರು, ಶಶಿಧರ ಕವಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT