ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಹೆಚ್ಚುತ್ತಿರುವ ಕಸದ ರಾಶಿ

ಕಸ ವಿಲೇವಾರಿಗೆ ಆದ್ಯತೆ ನೀಡಿ ಸಾರ್ವಜನಿಕರ ಆಗ್ರಹ
Last Updated 19 ಜನವರಿ 2017, 5:41 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದ ಹಲವು ಬಡಾವಣೆಗಳಲ್ಲಿ ಕಸ ವಿಲೇವಾರಿ ಸೂಕ್ತವಾಗಿ ಆಗದೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಹಲವರು ದೂರಿದ್ದಾರೆ.

ಪುರಸಭೆಯು ಮನೆ ಕಂದಾಯ ವಸೂಲಿ ಸಂದರ್ಭದಲ್ಲಿ ಮಾಸಿಕ ₹20ಗಳನ್ನು ತ್ಯಾಜ್ಯ ವಿಲೇವಾರಿಗಾಗಿಯೇ ಸಂಗ್ರಹಿಸುತ್ತದೆ. ಆದರೆ ಕಾರ್ಮಿಕರ ಕೊರತೆ ನೆಪ ಒಡ್ಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ಮನೆ ಮನೆಗಳಿಂದ ಕಸ ಸಂಗ್ರಹಿಸುವ ಗಾಡಿಗಳು ನಿಯಮಿತವಾಗಿ ಕಾರ್ಯ ನಿರ್ವಹಿಸದೆ ಕಸ ಸಂಗ್ರಹಣೆ ಹೆಚ್ಚುತ್ತಿದೆ. ಪೌರಕಾರ್ಮಿಕರು ಚರಂಡಿಯಿಂದ ತೆಗೆದ ಕಸವನ್ನು ಶೀಘ್ರವಾಗಿ ತೆರವು ಮಾಡದ ಕಾರಣ ಧೂಳು, ಅನೈರ್ಮಲ್ಯ, ಅನಾರೋಗ್ಯಕರ ವಾತಾವರಣ ಉಂಟಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಈ ಕುರಿತು ‘ ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಎಂ.ಜಿ. ಕಾಂತರಾಜು, ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿರುವುದರಿಂದ ಮತ್ತು ಮಳೆ ಕೊರತೆ ಯಿಂದ ಸಹಜವಾಗಿ ಧೂಳಿನ ವಾತಾವರಣ ಉಂಟಾಗುತ್ತಿದೆ. ಪಟ್ಟಣದಲ್ಲಿ 13 ಜನ ಕಾಯಂ ನೌಕರರು ಮತ್ತು 13 ಜನ ಹೊರಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಹೊರಗುತ್ತಿಗೆ ನೌಕರರ ವೇತನ ಸಮಸ್ಯೆ ಬಗೆಹರಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಪಟ್ಟಣದಲ್ಲಿ ಕಸ ಸಂಗ್ರಹಿಸಲು ನಾಲ್ಕು ಆಟೊ ಟಿಪ್ಪರ್‌ ಅಳವಡಿಸಲು ತೀರ್ಮಾನಿಸಲಾಗಿದೆ.

ಶೀಘ್ರವಾಗಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸ್ಥಳ ಗುರುತಿಸಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ಸಿಕ್ಕಿದ ತಕ್ಷಣ ಘಟಕ ಸ್ಥಾಪನೆಗೆ ಮುಂದಾಗುವುದಾಗಿ ತಿಳಿಸಿದರು.
–ಎನ್‌.ಸೋಮಶೇಖರ್

ಜನಪ್ರತಿನಿಧಿಗಳ ಸಹಕಾರ ಬೇಕು
ಇದು ಇಂದಿನ ಸಮಸ್ಯೆಯಲ್ಲ, ಆದರೂ ನಾನು ಇದನ್ನು ಹೀಗೇ ಬಿಡುವುದಿಲ್ಲ, ಜಿಲ್ಲಾಧಿಕಾರಿಯವರ ಭೇಟಿ ಸಂದರ್ಭದಲ್ಲಿ ಪೌರಕಾರ್ಮಿಕರ ಕೊರತೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ವಿಷಯ ಪ್ರಸ್ತಾಪಿಸುತ್ತಲೇ ಇದ್ದೇನೆ. ಇದಕ್ಕೆ ನಾಗರಿಕರ, ಶಾಸಕರ, ಜನಪ್ರತಿನಿಧಿಗಳ ಕಾಳಜಿ ಹಾಗೂ ಸಹಕಾರವೂ ಬೇಕಿದೆ’ ಎನ್ನುತ್ತಾರೆ ಪುರಸಭಾ ಅಧ್ಯಕ್ಷೆ ಸವಿತಾ ರಮೇಶ್

*
ಸ್ವಚ್ಛತೆಗೆ ಆದ್ಯತೆ: ಸಲಹೆ

ಕಾರ್ಮಿಕರ ಕೊರತೆ ಸ್ವಚ್ಛತೆಗೆ ಮುಂದಾಗ ದಿರುವ ನೆಪವಾಗಬಾರದು. ಬೇಸಿಗೆ ಸಮೀಪಿಸು ತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡದಿರಲು ಸ್ವಚ್ಛತೆಗೆ ಆದ್ಯತೆ ನೀಡಬೇಕಿರುವುದು ಪುರಸಭೆಯ ಮುಖ್ಯ ಕರ್ತವ್ಯ ಆಗಬೇಕು ಹಾಗೂ ಜನರಲ್ಲಿಯೂ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮನೋಭಾವ ಮೂಡಬೇಕು ಎನ್ನುತ್ತಾರೆ ಹಿರಿಯ ನಾಗರಿಕ ಬಿ.ವಿ. ಮಹೇಶ್ವರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT