ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಸ್ವೀಕರಿಸದ ಅಧಿಕಾರಿಗಳು: ಸದಸ್ಯರ ಆಕ್ರೋಶ

ಚಿತ್ರದುರ್ಗ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ: ಸಮಸ್ಯೆಗೆ ಸ್ಪಂದಿಸಲು ಸೂಚನೆ
Last Updated 19 ಜನವರಿ 2017, 5:49 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಸಂಬಂಧಪಟ್ಟ ಇಲಾಖೆಗಳು ಮಾಡಿಲ್ಲ ಎಂದು ತಾಲ್ಲೂಕು ಪಂಚಾಯ್ತಿಯ ಬಹುತೇಕ ಸದಸ್ಯರು ದೂರಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ‘ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ 29 ಇಲಾಖೆಗಳು ಒಳಪಡುತ್ತವೆ. ಆದರೆ, ಕೃಷಿ ಮತ್ತು ತೋಟಗಾರಿಕೆ ಹೊರತು ಪಡಿಸಿದರೆ, ಉಳಿದ ಯಾವ ಇಲಾಖೆಗಳೂ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದೂರವಾಣಿ ಮೂಲಕ ಅಧಿಕಾರಿಗಳಿಗೆ ಕರೆ ಮಾಡಿದರೆ, ಕಾರ್ಯನಿರ್ವಾಹಕ ಅಧಿಕಾರಿಯೂ ಸೇರಿದಂತೆ ಯಾರೊಬ್ಬರೂ ಕರೆ ಸ್ವೀಕರಿಸುವುದಿಲ್ಲ, ಮಾಹಿತಿ ನೀಡುತ್ತಿಲ್ಲ. ಇದನ್ನೆಲ್ಲ ಯಾರ ಬಳಿ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ಕಾರ್ಯನಿರ್ವಾಹಕ ಅಧಿಕಾರಿ ಸತೀಶ್‌ ರೆಡ್ಡಿ ಪ್ರತಿಕ್ರಿಯಿಸಿ, ‘ರಾತ್ರಿ 8.30ರೊಳಗೆ ಯಾವ ಕರೆ ಬಂದರೂ ಸ್ವೀಕರಿಸುತ್ತೇನೆ. ಅದರ ನಂತರ ಬಂದಂತಹ ಕರೆ ಸ್ವೀಕರಿಸಿಲ್ಲ. ಇನ್ನು ಮುಂದೆ ಎಲ್ಲ ಅಧಿಕಾರಿಗಳು ಸದಸ್ಯರ ಕರೆಗಳನ್ನು ಸ್ವೀಕರಿಸಬೇಕು. ಸಮಸ್ಯೆಗಳಿದ್ದರೆ, ತಕ್ಷಣ ಸ್ಪಂದಿಸಬೇಕು’ ಎಂದು ಸೂಚನೆ ನೀಡಿದರು.

‘ಮಾಡನಾಯಕನಹಳ್ಳಿ ಪಂಚಾಯ್ತಿ ವ್ಯಾಪ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವಿದ್ದು, ಕೂಡಲೇ ಆರೋಗ್ಯ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ವೇಣುಗೋಪಾಲ್ ಪ್ರತಿಕ್ರಿಯಿಸಿ ‘ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಕ್ರಿಯಾಯೋಜನೆ ತಯಾರಿಸಿ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.

ಸದಸ್ಯ ನಾಗೇಂದ್ರಪ್ಪ ಮಾತನಾಡಿ, ‘ಕೊಳಹಾಳ್‌ನಲ್ಲಿ ಹೆಸರಿಗಷ್ಟೇ ಆರೋಗ್ಯ ಕೇಂದ್ರವಿದೆ. ಅದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಹಾಗಾಗಿ ಶುಶ್ರೂಷಕರು ಇಲ್ಲಿ ವಾಸ್ತವ್ಯ ಮಾಡುವುದಿಲ್ಲ. ಅವರು ಯಾವಾಗ ಬಂದು ಹೋಗುತ್ತಾರೋ ಗೊತ್ತಾಗುವುದಿಲ್ಲ. ಹೀಗಾಗಿ ರೋಗಿಗಳು ಪರದಾಡುವಂತಾಗಿದೆ. ಕೂಡಲೇ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ವೇಣುಗೋಪಾಲ್ ‘ಕಟ್ಟಡ ಮತ್ತು ವಸತಿ ಗೃಹಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗೆ ಸೂಚಿಸಿದರು.

‘ಸೀಬಾರದ ಬಳಿ ಆಗಿಂದಾಗ್ಗೆ ನಡೆಯುವ ಉಚಿತ ಕಣ್ಣಿನ ತಪಾಸಣೆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ನಂತರ ಗುಣಮಟ್ಟದ ಲೆನ್ಸ್‌ ಅಳವಡಿಸುತ್ತಿಲ್ಲ’ ಎಂಬ ದೂರುಗಳು ಕೇಳಿ ಬರುತ್ತಿದೆ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು. ಅದಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಫಾಲಾಕ್ಷ ಪ್ರತಿಕ್ರಿಯಿಸಿ, ‘ಗುಣಮಟ್ಟದ ಲೆನ್ಸ್ ಅಳವಡಿಸಲಾಗುತ್ತಿದೆ. ಕಳಪೆ ಗುಣಮಟ್ಟ ಇದ್ದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಶೋಭಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಿ.ಬಿ.ಬೋರಯ್ಯ, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

**

ತಾಲ್ಲೂಕು ಪಂಚಾಯ್ತಿಯಲ್ಲಿ ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ. ನಾವು ಹೇಳುವ ಯಾವ ಕೆಲಸಗಳೂ ಆಗುತ್ತಿಲ್ಲ. ಪಂಚಾಯ್ತಿ ಇದೆಯೋ, ಇಲ್ಲವೋ ಎಂಬ ಅನುಮಾನ ಉಂಟಾಗಿದೆ.
– ಎನ್.ಕಲ್ಲೇಶ್, ಪಿ.ಸುರೇಶ್‌ನಾಯ್ಕ,  ತಾಲ್ಲೂಕು ಪಂಚಾಯ್ತಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT