ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನ ಹೋರಾಟ, ನಾಯಕತ್ವ ಗುಣ ಬೆಳೆಸುವ ಕ್ರೀಡೆ

ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಎಚ್‌ಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ಜಿ ಶ್ಲಾಘನೆ
Last Updated 19 ಜನವರಿ 2017, 5:50 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಾಯಕತ್ವದ ಗುಣ, ಒಗ್ಗಟ್ಟಿನ ಹೋರಾಟ, ಭಾವೈಕ್ಯ, ಸೌಹಾರ್ದ ಗುಣವನ್ನು ಕಲಿಸುವ ವಾಲಿಬಾಲ್ ಪಂದ್ಯಾವಳಿಯನ್ನು ಆಚರಿಸುವ ಮೂಲಕ ಮಾದಾರ ಚನ್ನಯ್ಯ ಸ್ವಾಮೀಜಿಯವರು ಯುವಕರಿಗೆ ಉತ್ತಮ ಸಂದೇಶ ರವಾನಿಸಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ಜಿ ಶ್ಲಾಘಿಸಿದರು.

ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಆರು ದಿನಗಳಿಂದ ನಡೆಯುತ್ತಿರುವ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಶಿಪ್ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಬುಧವಾರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆ ಮನುಷ್ಯನಿಗೆ ಆನಂದ ಕೊಡುತ್ತದೆ. ನಾಯಕತ್ವದ ಗುಣ ಬೆಳೆಸುತ್ತದೆ. ಮೊಘಲರು ಭಾರತಕ್ಕೆ ಮುತ್ತಿಗೆ ಹಾಕಿದಾಗ ಶಿವಾಜಿ ಮಹಾರಾಜ ಯುವಕರಲ್ಲಿ ಕೋಟೆ ಗೆಲ್ಲುವ ಆಟ ಹೇಳಿಕೊಟ್ಟು, ಸ್ಪೂರ್ತಿ ತುಂಬಿದ್ದರು. ಅದೇ ರೀತಿ ಕ್ರೀಡಾಪಟುಗಳು ಗೆಲ್ಲಲು ಸ್ಪೂರ್ತಿ ತುಂಬಿಕೊಳ್ಳಬೇಕು’ ಎಂದು ತಿಳಿಸಿದರು.
ಕ್ರೀಡೆಗೆ ವಯಸ್ಸಿನ ಭೇದವಿಲ್ಲ. ಹಾಗೆಯೇ ಕ್ರೀಡೆಯಲ್ಲಿ ಗೆಲ್ಲಬೇಕೆಂಬ ಛಲವಿರಬೇಕು. ಅಂಥ ಛಲದೊಂದಿಗೆ ಕರ್ನಾಟಕ ತಂಡದವರು ಸೆಮಿಫೈನಲ್‌ ಪ್ರವೇಶಿಸಿರುವದು ಅತೀವ ಸಂತಸ ತಂದಿದೆ ಎಂದರು.

‘ಭಾರತ ಕ್ರೀಡೆಯಲ್ಲಿ ಹಿಂದುಳಿದಿದೆ. ಚಿಕ್ಕ ಚಿಕ್ಕ ದೇಶಗಳು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಪಡೆಯುತ್ತಿವೆ. ಕ್ರೀಡೆಯಲ್ಲಿ ನಾನು ಎನ್ನುವ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ‘ನಾವು’ ಎಂದು ಒಂದು ತಂಡವಾಗಿ ಆಡಿದಾಗ ಮಾತ್ರ ಹೋರಾಟದ ಭಾವ ಬರುತ್ತದೆ’ ಎಂದರು.

ಬಳ್ಳಾರಿ ಗ್ರಾಮಾಂತರ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ‘ಬಿಸಿಲ ನಾಡು ಚಿತ್ರದುರ್ಗದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಅತ್ಯಂತ ಸಂತೋಷದ ಸಂಗತಿ. ಸೋಲು-ಗೆಲುವಿಗಿಂತಲೂ ಅಭಿಮಾನದಿಂದ ಕ್ರೀಡೆಯನ್ನು ಆಡಿ. ಸೋತವರು ನಿರಾಶರಾಗದೆ ಗೆಲುವಿನ ಮೆಟ್ಟಿಲು ಎಂದು ತಿಳಿದುಕೊಳ್ಳಿ. ಕ್ರೀಡೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

‘ನಾನು ಭಾಷಣ ಮಾಡಲು ಬಂದಿಲ್ಲ. ರಾಷ್ಟ್ರೀಯ ಪಂದ್ಯಾವಳಿಯನ್ನು ಚಿತ್ರದುರ್ಗದಲ್ಲಿ ಹೇಗೆ ಆಯೋಜಿಸಿದ್ದಾರೆ ಎಂದು ನೋಡಿ, ಕಣ್ತುಂಬಿಕೊಳ್ಳಲು ಬಂದೆ. ನಿಜಕ್ಕೂ ಬಹುದೊಡ್ಡ ಸಂಭ್ರಮ ಎನ್ನಿಸುತ್ತಿದೆ’ ಎಂದು ಶ್ಲಾಘಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಶಾಸಕ ಎ.ವಿ.ಉಮಾಪತಿ, ಮೋಕ್ಷರುದ್ರಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವಿಶೇಷಾಧಿಕಾರಿ ಬಿ.ಟಿ.ಮಂಜುನಾಥ್, ನಗರಸಭೆ ಉಪಾಧ್ಯಕ್ಷ ಮಲ್ಲೇಶಪ್ಪ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಚಂದ್ರಶೇಖರ್, ಜಾನ್ಹವಿ ನಾಗರಾಜ್, ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಅಧ್ಯಕ್ಷ
ಬೆಟ್ಟೇಗೌಡ, ವಕೀಲ ಕುಮಾರ್‌ಗೌಡ, ವೇದಿಕೆಯಲ್ಲಿದ್ದರು.

ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಸ್ವಾಗತಿಸಿದರು. ಲಾಸಿಕ ಫೌಂಡೇಷನ್ ವಿದ್ಯಾರ್ಥಿಗಳು ಗಣೇಶ, ಶಿವ, ಪಾರ್ವತಿ ವೇಷ ಧರಿಸಿ ಕೈಲಾಸವೇ ಧರೆಗೆ ಇಳಿದಂತೆ ಸಾಂಸ್ಕೃತಿಕ ನೃತ್ಯ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT