ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಬೋಧನಾ ವಿಧಾನ ಸರಳವಾಗಿರಲಿ

ಇಂಗ್ಲಿಷ್ ಭಾಷಾ ಶಿಕ್ಷಕರಿಗೆ ಸಿಟಿಇ ಪ್ರಾಂಶುಪಾಲ ಎನ್.ಎಸ್.ಕುಮಾರ್ ಸಲಹೆ
Last Updated 19 ಜನವರಿ 2017, 5:51 IST
ಅಕ್ಷರ ಗಾತ್ರ

ಚಿತ್ರದುರ್ಗ:  ‘ಶಿಕ್ಷಕರು ತಮ್ಮಲ್ಲಿರುವ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಸರಳ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಹ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಸಿಟಿಇ ಪ್ರಾಂಶುಪಾಲ ಎನ್.ಎಸ್.ಕುಮಾರ್ ಸಲಹೆ ನೀಡಿದರು.

ತಾಲ್ಲೂಕಿನ ಎಂ.ಕೆ. ಹಟ್ಟಿಯಲ್ಲಿರುವ ರಾಕ್‌ಪೋರ್ಟ್ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಇಂಗ್ಲಿಷ್ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ‘ಫಲಿತಾಂಶ ಸುಧಾರಣೆ ಕುರಿತು ಶಿಕ್ಷಕರೊಂದಿಗೆ ಚರ್ಚೆ ಹಾಗೂ ಒಂದು ದಿನದ ಇಂಗ್ಲಿಷ್ ಭಾಷಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್‌ ಭಾಷಾ ಜ್ಞಾನ ಎಲ್ಲ ಕ್ಷೇತ್ರದಲ್ಲೂ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ವಿಧಾನವನ್ನು ಸರಳ ಮತ್ತು ಸುಲಭಗೊಳಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ತರಬೇತಿ, ಕಾರ್ಯಾಗಾರಗಳಿಂದ ಶಿಕ್ಷಕರಿಗೆ ಬೋಧನೆಯಲ್ಲಿ ಎದುರಾಗುವ ಸಮಸ್ಯೆ, ಅನುಮಾನಗಳನ್ನು ಹೋಗಲಾಡಿಸಲು ಸಾಧ್ಯವಿದೆ. ಹೀಗಾಗಿ ಕಾರ್ಯಾಗಾರಗಳನ್ನು ನಡೆಸಲು ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ’ ಎಂದು ಭರವಸೆ ನೀಡಿದರು.

ಡಿಡಿಪಿಐ ಎಂ.ರೇವಣಸಿದ್ದಪ್ಪ ಮಾತನಾಡಿ, ‘ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚು ಆಸಕ್ತಿ ತೋರಬೇಕು. ಇದರಿಂದ ಉತ್ತಮ ಫಲಿತಾಂಶ ಸುಧಾರಣೆ ಯಾಗುತ್ತದೆ’ ಎಂದರು.

‘ಶಿಕ್ಷಕರು ಪಾಸಿಂಗ್ ಮಾರ್ಕ್ಸ್‌ ಪ್ಯಾಕೇಜ್‌ ಕಡೆಗೆ ಹೆಚ್ಚು ಗಮನಕೊಟ್ಟು, ಮಕ್ಕಳಿಗೆ ಅದೇ ವಿಧಾನದಲ್ಲಿ ಅಭ್ಯಾಸ ಮಾಡಿಸಬೇಕು. ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸುಧಾರಿಸಲು ಶಿಕ್ಷಕರು ಶ್ರಮಿಸಬೇಕು’ ಎಂದರು.

ರಾಕ್‌ಪೋರ್ಟ್ ಇಂಟರ್‌ ನ್ಯಾಷನಲ್‌ ಶಾಲೆ ಕಾರ್ಯದರ್ಶಿ ದ್ಯಾಮಣ್ಣ ಮಾತನಾಡಿ, ‘ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧಿಸಬೇಕು. ಮೊದಲು ಮಕ್ಕಳನ್ನು ಇಂಗ್ಲಿಷ್‌ ಕಲಿಕೆಗೆ ಸಿದ್ಧಪಡಿಸಬೇಕು. ಹೊಸ ವಿಷಯಗಳನ್ನು ಮಕ್ಕಳಿಗೆ ಕಲಿಸುವ ಪ್ರಯತ್ನ ಮಾಡಬೇಕು’ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 423 ಶಿಕ್ಷಕರು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿ ಗುಂಡಪ್ಪ, ಡಯೆಟ್ ಪ್ರಾಂಶುಪಾಲರಾದ ಲೀಲಾವತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿಶಂಕರ್ ರೆಡ್ಡಿ, ಹನುಮಂತರಾಯಪ್ಪ, ವಿಷಯ ಪರಿವೀಕ್ಷಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಎನ್.ಜ್ಯೋತಿ ಸ್ವಾಗತಿಸಿದರು. ಡಿ.ಪದ್ಮಾವತಿ ಕಾರ್ಯಕ್ರಮ ನಿರೂಪಿಸಿದರು. ನಾಗರತ್ನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT