ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗ ಹನುಮಪ್ಪ ನಾಯಕ ಹೆಸರಿನಲ್ಲಿ ಮಹಾದ್ವಾರ

ಸಂತೇಬೆನ್ನೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ
Last Updated 19 ಜನವರಿ 2017, 5:53 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಇದೇ ಜ. 21, 22ರಂದು ಸಂತೇಬೆನ್ನೂರಿನಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಹಾದ್ವಾರಕ್ಕೆ ಕೆಂಗ ಹನುಮಪ್ಪ ನಾಯಕನ ಎಂದು ಹೆಸರಿಡಲು ತೀರ್ಮಾನ ಕೈಗೊಂಡಿ ರುವುದು ಔಚಿತ್ಯಪೂರ್ಣವಾಗಿದೆ.

ಖ್ಯಾತ ಇತಿಹಾಸ ಸಂಶೋಧಕ ಡಾ.ಚಿದಾನಂದ ಮೂರ್ತಿ ಉಲ್ಲೇಖಿಸಿರುವಂತೆ ದಕ್ಷಿಣ ಭಾರತದಲ್ಲೇ ಅತ್ಯಂತ ಸುಂದರ ಪುಷ್ಕರಣಿಯ ನಿರ್ಮಾತೃ ರಾಜ ಕೆಂಗ ಹನುಮಪ್ಪ ನಾಯಕ. ಕೈಫಿಯತ್ತಿನ ದಾಖಲೆಯಂತೆ ಸಂತೇಬೆನ್ನೂರು ನಾಯಕ ಅರಸರ ನಾಲ್ಕನೇ ದೊರೆ. ವೀರ, ಧೀರ ಪರಾಕ್ರಮಿ. 1558ರಿಂದ 1567ರವರೆಗೆ ಆಡಳಿತ  ನಡೆಸಿದ. 

ಈತನ ಕಾಲದಲ್ಲಿಯೇ ಈಗಿನ ಸುಂದರ ಪುಷ್ಕರಣಿ, ಶ್ರೀ ರಾಮಚಂದ್ರ ದೇವಾಲಯ, ಆಂಜನೇಯ ದೇವಾಲಯ, ಕೋಟೆ, ಅರಮನೆ ನಿರ್ಮಾಣಗೊಂಡಿದ್ದವು. ಶ್ರೀ ರಾಮಚಂದ್ರ ದೇವಾಲಯ ದಾಳಿಯಿಂದಾಗಿ ನಾಶಗೊಂಡಿದೆ. ಕೋಟೆ ಅವಶೇಷಗಳೂ ಉಳಿದಿಲ್ಲ.

1558ರಲ್ಲಿ ಗ್ರಾಮದ ದಕ್ಷಿಣ ಭಾಗದಲ್ಲಿ 64 ಅಂಕಣದ ಶ್ರೀ ರಾಮಚಂದ್ರ ದೇವಾಲಯವನ್ನು ಕೆಂಗ ಹನುಮಪ್ಪ ನಾಯಕ ನಿರ್ಮಿಸಿದ. ಅದರ ಮುಂಭಾಗದಲ್ಲಿ ದೇವಾಲಯದ ಪೂಜಾ ಕೈಂಕರ್ಯಗಳಿಗಾಗಿ ರಾಮತೀರ್ಥ (ಪುಷ್ಕರಣಿ) ಕಟ್ಟಿಸಿದ. ಪುಷ್ಕರಣಿ 235 ಅಡಿ ಅಗಲ ಹಾಗೂ 245 ಅಡಿ ಉದ್ದವಿದೆ.

ನೆಲಮಟ್ಟದಿಂದ 40 ಅಡಿ ಆಳವಿದೆ. 54 ದೊಡ್ಡ ಮೆಟ್ಟಿಲುಗಳು, 44 ಚಿಕ್ಕ ಪಾವಟಿಗೆಗಳು ಸುತ್ತಲೂ ಇವೆ. ಕೆಂಪು ಗ್ರಾನೈಟ್‌ ಶಿಲೆ ಬಳಸಿ ನಿರ್ಮಿಸಲಾಗಿದೆ. ಸುತ್ತಲೂ ಆರು ಮಂಟಪಗಳನ್ನು ಇಂಡೋ–ಸೆರ್‍್ಯಾಸಿನಿಕ್ ಶೈಲಿಯಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ.

ಪುಷ್ಕರಣಿಯ ನೀರಿನ ಮಧ್ಯೆ 31 ಅಡಿ ಅಗಲ, 31 ಅಡಿ ಉದ್ದದ ಭವ್ಯ ವಸಂತ ಮಂಟಪ ನಿರ್ಮಿಸಲಾಗಿದೆ. ಕಲ್ಲಿನ ತೇರಿನಂತೆ ಕಾಣುವ ಈ ಮಂಟಪ 5 ಮಹಡಿಗಳನ್ನು ಹೊಂದಿದೆ. ಸಂಶೋಧಕರು ನೆಲ ಮಹಡಿ, ರಹಸ್ಯ ಮಹಡಿ, ವೀಕ್ಷಣಾ ಮಹಡಿ, ಉಯ್ಯಾಲೆ ಮಹಡಿ, ಗೋಪುರ ಮಹಡಿ ಎಂದು ವಿಂಗಡಿಸಿದ್ದಾರೆ. ವೀಕ್ಷಣಾ ಮಹಡಿ ಇಂಡೋ ಅರೆಬಿಕ್ ಶೈಲಿಯಲ್ಲಿ ಕಮಾನುಗಳಿಂದ ಆಕರ್ಷಿಣೀಯ ವಾಗಿದೆ. ಗೋಪುರ ಮಹಡಿ ಇಟ್ಟಿಗೆ, ಗಾರೆಗಳಿಂದ ಕಟ್ಟಲಾಗಿದೆ.

ಜ್ಯಾಮಿತಿ, ಗಿಳಿವಿಂಡು, ಸಿಂಹ, ಆನೆ, ಹೂಬಳ್ಳಿಯ ಕಲಾಕೃತಿ ಅಚ್ಚರಿ ಮೂಡಿಸುತ್ತವೆ. ಕಾಲದ ಹೊಡೆತಕ್ಕೆ ಸಿಕ್ಕು ಮುಕ್ಕಾಗಿವೆ. ಮಳೆ ನೀರು ಸಂಗ್ರಹಿಸಲು ಜಲಹರಿ ಮಂಟಪವನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಆನೆಹೊಂಡದಲ್ಲಿ ಸಂಗ್ರಹವಾದ ನೀರು ಜಲಹರಿ ಮಂಟಪದಿಂದ ಪುಷ್ಕರಣಿಗೆ ಜಲಪಾತದಂತೆ ಧುಮುಕುವ ದೃಶ್ಯ ಮನಮೋಹಕ. ಐದು ನೂರು ವರ್ಷಗಳ ಹಿಂದೆಯೇ ಮಳೆ ನೀರು ಸಂಗ್ರಹದ ಮಹತ್ವ ಅರಿತ ನಾಯಕ ಅರಸರ ಪ್ರಯತ್ನ ಇಂದಿಗೂ ಅನುಕರಣೀಯ.

ಶಿಲಾ ಶಾಸನ, ತಾಮ್ರ ಶಾಸನ ಹಾಗೂ ಕೈಫಿಯತ್ತಿನ ದಾಖಲೆಗಳಂತೆ ನಾಯಕರು ಸಂತೇಬೆನ್ನೂರನ್ನು ರಾಜ ಧಾನಿಯನ್ನಾಗಿಸಿಕೊಂಡು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಹಾವೇರಿ ಜಿಲ್ಲೆಯ ಬಹುಭಾಗವನ್ನು ಆಳುತ್ತಿದ್ದರು. ಸುಮಾರು 57 ಶಾಸನಗಳಲ್ಲಿ ದತ್ತಿ, ದಾನಗಳನ್ನು ನೀಡಿದ ದಾಖಲೆಗಳು ಲಭ್ಯವಾಗಿವೆ. ಕೂಡಲಿ ಶ್ರಿಂಗೇರಿ ಮಠ, ಕದರ ಮಂಡಲಗಿ ಆಂಜನೇಯ ದೇವಸ್ಥಾನ, ತೀರ್ಥಹಳ್ಳಿ ಸೇರಿದಂತೆ ಅನೇಕ ದೇವಾಲಯಗಳಿಗೆ ದಾನ ನೀಡಿದ ಶಾಸನಗಳು ಇವೆ.

ಸಂತೇಬೆನ್ನೂರು ನಾಯಕರ ಆಳ್ವಿಕೆ ಕಾಲದಲ್ಲಿ ಸಂತೇಬೆನ್ನೂರು, ಬಸವಾಪಟ್ಟಣ, ತರೀಕೆರೆ, ಹಿರೇಕೋಗಲೂರು, ತಣಿಗೆರೆ, ಸಿದ್ಧನಮಠ, ಮೆದಿಕೆರೆ, ಬೆಳ್ಳಿಗನೂಡು, ಕುಳೆನೂರು, ಕಂಚುಗಾರನಹಳ್ಳಿ, ಸಾಸ್ವೆಹಳ್ಳಿ, ಹೊಸಹಳ್ಳಿ, ಹೊದಿಗೆರೆ, ಹಾರ್ನಹಳ್ಳಿ, ಅಮರಗಿರಿ ಮುಂತಾದ ಕೆರೆಗಳನ್ನು ಕಟ್ಟಿಸಲಾಗಿದೆ ಎಂದು ಕೈಫಿಯತ್ತಿನಲ್ಲಿ ದಾಖಲಾಗಿದೆ. ನೀರಾವರಿ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ತಿಳಿದು ಬರುತ್ತದೆ ಎನ್ನುತ್ತಾರೆ ಸಂಶೋಧಕ ಸುಮತೀಂದ್ರ ನಾಡಿಗ.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪುಷ್ಕರಣಿಗೆ ಭೇಟಿ ಕೊಡುವವರ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಇಲ್ಲಿನ ಉದ್ಯಾನ ಹಾಗೂ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎನ್ನುತ್ತಾರೆ ಗ್ರಾಮಸ್ಥರು.

**
–ಕೆ.ಎಸ್‌.ವೀರೇಶ್ ಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT