ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಪಲ್ಲೆ ಬೀಜದ ಆನ್‌ ಲೈನ್‌ ವಹಿವಾಟು

ದಶಕದಿಂದಲೂ ಕಂಪೆನಿಗಳೊಂದಿಗೆ ಇಂಟರ್‌ನೆಟ್‌ ಮೂಲಕ ವ್ಯವಹಾರ ನಡೆಸಿ ಖರೀದಿಸುವ ಖಾಜೇಸಾಬ್‌ ಗೊಡೇಕಾರ
Last Updated 19 ಜನವರಿ 2017, 6:04 IST
ಅಕ್ಷರ ಗಾತ್ರ

ಗಜೇಂದ್ರಗಡ: ‌‌ಇದು ಆನ್‌ಲೈನ್‌ ಯುಗ. ಎಲ್ಲವೂ ಆನ್‌ಲೈನ್‌ನಲ್ಲೇ ನಡೆ­ಯುತ್ತದೆ. ಆದರೆ ಪಟ್ಟಣದ ಕಾಯಿಪಲ್ಲೆ ಬೀಜ ಮಾರಾಟಗಾರರೊಬ್ಬರು ದಶಕದ ಹಿಂದೆಯೇ ಆನ್‌ಲೈನ್‌ನಲ್ಲಿ ಬೀಜದ ವಹಿವಾಟು ನಡೆಸುತ್ತಿದ್ದರು ಎಂಬುದು ಬಹಳ ಸೋಜಿಗವಾದುದು.

ಪಟ್ಟಣದ ಜೋಡು ರಸ್ತೆಯ ಪೂರ್ವ ಭಾಗದಲ್ಲಿ ಸಣ್ಣ ಅಂಗಡಿ ಹಾಕಿಕೊಂಡು ಬೀಜ ಮಾರಾಟ ಮಾಡುವ ಖಾಜೇ­ಸಾಬ್‌ ಗೊಡೇಕಾರ ಅವರಿಗೆ ಆನ್‌ಲೈನ್‌ ವಹಿವಾಟು ಹೊಸದಲ್ಲ. ಅಪರೂಪದ ಕಾಯಿಪಲ್ಲೆ ಬೀಜಗಳನ್ನು ದೂರದ ಊರುಗಳಿಂದ ಆನ್‌ಲೈನ್‌ನಲ್ಲಿ ಕಾಯ್ದಿ­ರಿಸಿ, ತರಿಸಿಕೊಂಡು ವಿವಿಧ ಸಂತೆಗಳಲ್ಲಿ ಮಾರಾಟ ಮಾಡುತ್ತಾ ಬಂದಿದ್ದಾರೆ.

ಖಾಜೇಸಾಬ್‌ ಮೊದಲು ಹುಬ್ಬಳ್ಳಿಯಲ್ಲಿ ಕಾಯಿಪಲ್ಲೆ ಬೀಜ ಖರೀದಿಸುತ್ತಿದ್ದರು. ಆದರೆ ಕೆಲ ತರಕಾರಿ ಬೀಜಗಳು ಹುಬ್ಬಳ್ಳಿಯಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ಅವರು ಬೇರೆ ಬೇರೆ ಕಂಪೆನಿಗಳ ತರಕಾರಿ ಬೀಜ ಕೊಳ್ಳಲು ಆನ್‌ಲೈನ್‌ ಮೊರೆ ಹೋದರು. ದಶಕದಿಂದಲೂ ವಿವಿಧ ಕಂಪೆನಿಗಳೊಂದಿಗೆ ಆನ್‌ಲೈನ್‌ನಲ್ಲಿ ವ್ಯವಹರಿಸಿ ಬೀಜ ತರಿಸಿಕೊಳ್ಳುತ್ತಾರೆ. ಈ ಭಾಗದಲ್ಲಿ ಹಲವು ಹೊಸ ಕಾಯಿಪಲ್ಲೆ ಬೀಜವನ್ನು ಪರಿಚಯಿಸಿದ ಕೀರ್ತಿಯೂ ಅವರ ಮೇಲಿದೆ.

‘ಹಲವು ವರ್ಷಗಳಿಂದ ಕಾಯಿಪಲ್ಲೆ ಬೀಜ ವ್ಯಾಪಾರ ಮಾಡುವ ಕಂಪೆನಿಗಳ ಜೊತೆ ವ್ಯವಹಾರ ಮಾಡುತ್ತಿದ್ದೇನೆ. ಅವುಗಳ ಜೊತೆಗೆ ನೇರವಾಗಿ ವ್ಯವಹಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆನ್‌ಲೈನ್‌ ಮೊರೆ ಹೋದೆ. ಕಂಪೆನಿಗಳ ಜೊತೆ ಅಪಾರ ವಿಶ್ವಾಸ ಉಳಿಸಿಕೊಂಡಿದ್ದೇನೆ. ಬೀಜ ಕಾಯ್ದಿರಿ­ಸಿದರೆ ಅವರೇ ಕಳುಹಿಸಿ­ಕೊಡು­ತ್ತಾರೆ. 2–3 ತಿಂಗಳು ಹಣ ಕೇಳು­ವುದಿಲ್ಲ. ಅಷ್ಟು ನಂಬಿಕೆ ಉಳಿಸಿ­ಕೊಂಡಿದ್ದೇನೆ. ಬೀಜದ ಅವಧಿ ಮೀರಿದ್ದರೆ ಅವು­ಗಳನ್ನು ವಾಪಸ್‌ ಕಳಿಸಿದರೆ ಮರಳಿ ತೆಗೆದುಕೊಳ್ಳುತ್ತಾರೆ’ ಎಂದು ಖಾಜೇ­ಸಾಬ್‌  ಹೇಳಿದರು.

ಬಡತನದ ಕುಟುಂಬ...
ಒಂದು ಕಾಲದಲ್ಲಿ ಬಡತನವನ್ನು ಮೈಗಂಟಿಸಿಕೊಂಡ ಕುಟುಂಬ ಇದು. ಇಂದು ಕಾಯಿಪಲ್ಲೆ ಬೀಜಗಳ ಮಾರಾಟ ಮಾಡುವ ಮೂಲಕ ಸಂಸಾರದ ನೊಗ ಎಳೆಯುತ್ತಿದೆ. ಈ ಕುಟುಂಬ ಎರಡು ತಲೆಮಾರುಗಳಿಂದಲೂ ಕಾಯಿ ಪಲ್ಲೆ ಬೀಜ ಮಾರಾಟ ಮಾಡುತ್ತಾ ಜೀವನ ಕಟ್ಟಿಕೊಂಡಿದೆ.

ಅಜ್ಜ ಇಮಾಂಸಾಬ್‌ ಅವರು ಮುನ್ಸಿಪಾಲಟಿಯಲ್ಲಿ ಕೆಲಸಗಾರ ಆಗಿದ್ದ­ವರು. ಅವರ ಮಗ ಚಾಂದಸಾಬ್‌ ಕಿರಾಣಿ ಅಂಗಡಿ, ಹುಣಸೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಅದರಲ್ಲಿ ಸಾಕಷ್ಟು ನಷ್ಟ ಅನುಭವಿಸಿದ ನಂತರ ಅಪಾರ ಬಡತನ ಅನುಭವಿಸ­ಬೇಕಾ­ಯಿತು.

ಪತ್ನಿ ಬಡಿತಾಜ್‌ಬಿ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕ­ಳನ್ನು ಬಡತನದಲ್ಲಿಯೇ ಬೆಳೆಸಿ­ದರು. ಚಾಂದಸಾಬ್‌ ಸಹೋದರ ಹುಸೇನ್‌­ಸಾಬ್‌ ಅಂದು ಕಾಯಿಪಲ್ಲೆ ಕಮೀಷನ್ ವ್ಯಾಪಾಯಾಗಿದ್ದರು. ಅವ­ರೊಂದಿಗೆ ಗದಗ, ಹುಬ್ಬಳ್ಳಿ ಅಡ್ಡಾಡಿದ ಚಾಂದ­ಸಾಬ್‌ ಅವರು ವ್ಯವಹಾರವನ್ನು ಕರಗತ ಮಾಡಿಕೊಂಡು  1977ರಲ್ಲಿ ಬೀಜದ ವ್ಯಾಪಾರಕ್ಕೆ ಅಣಿಯಾದರು.

ಆಗ ಪಟ್ಟಣದ ಜನರಿಗೆ ಪಾಲಾಕ್, ಬೀನ್ಸ್‌ ಬೀಜ ಪರಿಚಯಿಸಿವರೇ ಚಾಂದ­ಸಾಬ್‌. ಇಬ್ಬರೂ ಹೆಣ್ಣು ಮಕ್ಕಳು ಮದುವೆ ಮಾಡಿಕೊಟ್ಟಿದ್ದಾರೆ. ಖಾಜೇ­ಸಾಬ್‌ ಬೀಜ ಮಾರಾಟದಲ್ಲಿ ಹೊಸತನ ಸೃಷ್ಟಿಸಿಕೊಂಡಿದ್ದರೆ ಇನ್ನೊಬ್ಬ ಮಗ ಇಮಾಂಸಾಬ್‌ ಸುದ್ದಿ ವಾಹಿನಿ­ಯೊಂದರಲ್ಲಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.

10ನೇ ವರ್ಗದ ವರೆಗೆ ಓದಿದ ಖಾಜೇಸಾಬ್‌, ತಂದೆಯೊಂದಿಗೆ ಸಂಚ­ರಿಸಿ ಬೀಜದ ವ್ಯಾಪಾರವನ್ನು ಕರಗತ ಮಾಡಿಕೊಂಡರು. ತಂದೆಯ ಮರಣದ ನಂತರ ಬೀಜ ಮಾರಾಟದ ವೃತ್ತಿ ಅವರ ಕುಟುಂಬಕ್ಕೆ ಆಧಾರವಾಯಿತು. ಚವಳಿ, ಬದನೆ, ಪಾಲಾಕ್, ಹೀರೇಕಾಯಿ, ಬೆಂಡೆ, ಮೂಲಂಗಿ, ಮೆಂತೆ, ಹಾಗಲ­ಕಾಯಿ, ಕೊತ್ತಂಬರಿ  ಇತ್ಯಾದಿ ತಹ­ರೇ­ವಾರಿ ಬೀಜಗಳನ್ನು ಮಂಗಳ­ವಾರದಿಂದ ಶನಿವಾರದ ವರೆಗೆ ನಡೆಯುವ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ.

ಭಾನುವಾರ ಕುಷ್ಟಗಿ, ಸೋಮವಾರ ಹನುಮಸಾಗರ ಸಂತೆಯಲ್ಲಿ ಅಂಗಡಿ ಹಾಕುತ್ತಾರೆ. ಕಾಯಿಪಲ್ಲೆ ಹಾಕುವ ರೈತರು, ಮನೆಯ ಕೈತೋಟದಲ್ಲಿ ತರ­ಕಾರಿ ಬೆಳೆಯುವವರಿಗೆ ಖಾಜಾಸಾಬ್‌ ಎಂದರೆ ಬಹಳ ಪರಿಚಿತ ವ್ಯಕ್ತಿ. ಗುಣಮಟ್ಟದ ಜೀಜ ನೀಡುವಲ್ಲಿಯೂ ಅವರು ಹೆಸರುವಾಸಿಯಾಗಿದ್ದಾರೆ.

‘ಈ ವರ್ಷ ಸರಿಯಾಗಿ ಮಳೆ ಬೀಳದ ಕಾರಣ ಬೀಜದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಬೀಜ ವ್ಯಾಪಾರ­ದೊಂದಿಗೆ ಪರ್ಯಾಯವಾಗಿ ಅಡಿಕೆ, ಚಹಾಪುಡಿ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇನೆ’ ಎಂದು ಖಾಜೇಸಾಬ್‌ ಹೇಳಿದರು. ಅವರ ಜೊತೆ ಮಾತನಾಡಲು ಮೊ: 9886564153 ಸಂಪರ್ಕಿಸಬಹುದು.
–ಡಾ.ಮಲ್ಲಿಕಾರ್ಜುನ ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT