ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣದಲ್ಲಿ ಸಾಹಿತ್ಯವಿರಲಿ, ಸಾಹಿತ್ಯದಲ್ಲಿ ರಾಜಕಾರಣ ಬೇಡ’

Last Updated 19 ಜನವರಿ 2017, 6:23 IST
ಅಕ್ಷರ ಗಾತ್ರ

ಹಾವೇರಿ: ‘ರಾಜಕಾರಣದಲ್ಲಿ ಸಾಹಿತ್ಯ, ಸಂಸ್ಕೃತಿ ಬರಬೇಕು. ಆ ಮೂಲಕ ಉನ್ನತ ಮೌಲ್ಯದ ರಾಜಕಾರಣ ರೂಪುಗೊಳ್ಳಬೇಕು. ಆದರೆ, ಸಾಹಿತ್ಯ ದಲ್ಲಿ ರಾಜಕಾರಣ ಬೇಡ. ಇಂತಹ ‘ರಾಜಕಾರಣಿ ಮನಸ್ಥಿತಿ’ಗಳು ಸಾಹಿತ್ಯ, ಸಂಘಟನೆಗಳಿಂದ ದೂರ ಇರುವುದೇ ಲೇಸು...’

–ಶಿಗ್ಗಾವಿಯಲ್ಲಿ ಇಂದಿನಿಂದ (ಇದೇ 19) ಎರಡು ದಿನ ನಡೆಯಲಿರುವ ‘9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಮಹೇಶ ಜೋಶಿ ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರ ಜೊತೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.

* ಹಾವೇರಿ ಜಿಲ್ಲೆ ಜೊತೆಗಿನ ನಿಮ್ಮ ಸಂಬಂಧ? 
–‘ನಾನು ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಜನಿಸಿದೆ. ಹಾವೇರಿ ನನಗೆ ಜನ್ಮ ನೀಡಿದ ಜಿಲ್ಲೆ. ಶಿಗ್ಗಾವಿಯು ಷರೀಫರ ನಾಡು. ನಾನು ಷರೀಫರ ಗುರುಗೋವಿಂದ ಭಟ್ಟರ ವಂಶಜ. ಹೀಗೆ ಸಮಗ್ರ ಜಿಲ್ಲೆಯ ಜೊತೆ ನನ್ನ ನಂಟಿದೆ. ಈಗ ಸಮ್ಮೇಳನ ಅಧ್ಯಕ್ಷತೆಯ ಬಹುದೊಡ್ಡ ‘ಸೌಭಾಗ್ಯ’ ನನ್ನ ಪಾಲಿಗೆ ಬಂದಿದೆ.

ಆದರೆ, ಬಾಲ್ಯದಲ್ಲೇ ಬಡತನ ಬೆನ್ನಿಗಂಟಿತ್ತು. ನಾನು ಮಗುವಾಗಿ ದ್ದಾಲೇ ತಂದೆ ತೀರಿಕೊಂಡರು. ಆ ಬಳಿಕ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನಮ್ಮ ಕುಟುಂಬ ಬೇರೆಡೆ ಹೋಯಿತು. ಆದರೆ, ಹಾವೇರಿ ನನ್ನ ಮಾತೃಭೂಮಿ. ಸಕಲ ಐಶ್ವರ್ಯಗಳ ಗಂಡನ ಮನೆ ಗಿಂತ ತವರು ಮನೆಯೇ ಅಚ್ಚುಮೆಚ್ಚು. ನನಗೂ ಹಾವೇರಿಗೂ ಅಂತಹ ಸಂಬಂಧ ಇದೆ.

* ಹಾವೇರಿ ಜಿಲ್ಲೆಯ ಕುರಿತು?
–ಕರ್ನಾಟಕದ ಅಭಿವೃದ್ಧಿಯಲ್ಲಿ ‘ಉತ್ತರ–ದಕ್ಷಿಣ’ದ ನಡುವೆ ಅಸಮಾನತೆ ಇದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಈಗ ಸಾಹಿತ್ಯಿಕ ಹಾಗೂ ಭೌತಿಕವಾಗಿ ಬೆಳವಣಿಗೆ ಆಗುತ್ತಿದೆ. ಇಲ್ಲಿನ ಮೌಲ್ಯಗಳನ್ನು ಎತ್ತಿ ಹಿಡಿಯ ಬೇಕು ಎಂದೇ ನಾನು ಶಿಶುನಾಳ ಷರೀಫರ ಕುರಿತು  ‘ಈಶ್ವರ ಅಲ್ಲಾ ನೀನೇ ಎಲ್ಲಾ’ ಎಂದು ಧಾರಾವಾಹಿ ಮಾಡಿದೆ. ಜಿಲ್ಲೆಯ ಎಲ್ಲರೂ ಒಗ್ಗಟ್ಟಿ ನಿಂದ ತಮ್ಮ ತಮ್ಮ ಕ್ಷೇತ್ರಗಳ ಕೊಡುಗೆ ಮೂಲಕ ಇಂತಹ ಅಸಮಾನತೆಯನ್ನು ನಿವಾರಿಸಬೇಕಾಗಿದೆ.
 
ಅಸಮಾನತೆಯ ನಿವಾರಣೆಗೆ ಡಾ. ಡಿ.ಎಂ. ನಂಜುಂಡಪ್ಪ ವರದಿ ಜಾರಿಗೆ ತರಬೇಕು. ನೆಲ–ಜಲ ನೀಡಿದ ಸ್ಥಳೀಯ ಜನತೆಗೆ ಉದ್ಯಮ, ಸಂಸ್ಥೆ ಗಳು ಉದ್ಯೋಗಾವಕಾಶ ಕಲ್ಪಿಸ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಕಾಯಿದೆಯು ಶೀಘ್ರವೇ ಅನುಷ್ಠಾನಕ್ಕೆ ಬರಬೇಕಾಗಿದೆ.

*ಸಾಹಿತ್ಯ, ತಂತ್ರಜ್ಞಾನ ಮತ್ತಿತರ ಬೆಳವಣಿಗೆಗಳ ಕುರಿತು ಏನು ಹೇಳುತ್ತೀರಿ?
–ನಾನು, ಹಳೇಯದು ಮತ್ತು ಹೊಸದರ ನಡುವೆ ಒಳ್ಳೆಯದು– ಕೆಟ್ಟದು ಎಂದು ಭೇದ ಭಾವಿಸು ವುದಿಲ್ಲ. ಏಕೆಂದರೆ ‘ಸಂಕ್ರಮಣ ಸ್ಥಿತಿ’ಯಲ್ಲಿ ಇದ್ದೇನೆ. ದಾ.ರಾ. ಬೇಂದ್ರೆಯವರನ್ನು ನೋಡಿದ್ದೇನೆ. ವಿ.ಕೃ.ಗೋಕಾಕ ಅವರಿಗೆ ಜ್ಞಾನಪೀಠ ಬಂದಾಗ ಸಂದರ್ಶನ ಮಾಡಿದ್ದೇನೆ. ಹಲವಾರು ಹಿರಿಯ ಸಾಹಿತಿಗಳ ಜೊತೆ ಒಡನಾಟ ಹೊಂದಿದ್ದೇನೆ.

ಇನ್ನೊಂದೆಡೆ ಇಂದಿನ ಯುವಜನತೆ ಜೊತೆಯೂ ನಂಟು ಹೊಂದಿದ್ದೇನೆ. ಇಂದಿನ ಯುವಜನತೆ ಮೊಬೈಲ್, ಆ್ಯಪ್, ದೃಶ್ಯವಾಹಿನಿ, ಸಿನಿಮಾ ಮತ್ತಿತರ ತಾಂತ್ರಿಕ ಮಾಧ್ಯಮದ ಮೂಲಕ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ಎಲ್ಲ ಕಾಲದಲ್ಲೂ ಬದಲಾವಣೆ ಸಹಜ. ಮಾರ್ಪಾಡು ಎಂಬುದು ‘ಸಂಕ್ರಮಣ ಕಾಲ’ವೇ ಹೊರತು, ‘ಎಲ್ಲ ಹೋಯಿತು’ ಎಂಬ ಕೊರಗು ಆಗಬಾರದು. ನಾನು ಆಶಾವಾದಿ

*ಪರ ಊರಲ್ಲಿರುವ ಹಾವೇರಿ ಮೂಲದವರು ಏನು ಮಾಡಬಹುದು?
–ಹಾವೇರಿಗೆ ಸಾಹಿತಿ, ಸಂತರು, ದಾರ್ಶನಿಕರು ಕೊಡುಗೆ ನೀಡಿದ್ದಾರೆ. ಈಗ ಸುಧಾಮೂರ್ತಿ, ಗುರು ದೇಶಪಾಂಡೆ ಹೀಗೆ ಹಲವರು ಜಾಗತಿಕ ಲೋಕದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದು ಸಾಧಕರ ಮಾತೃಭೂಮಿ. ಹೀಗಾಗಿ ನಾನು ಸೇರಿದಂತೆ ಹಲವರು ಉದ್ಯೋಗ ಮತ್ತಿತರ ಕಾರಣಕ್ಕಾಗಿ ಪರ ಊರಿಗೆ ಹೋಗಿರಬಹುದು. ಆದರೆ, ತಮ್ಮ ಮಾತೃಭೂಮಿ (ಹಾವೇರಿ ಜಿಲ್ಲೆ) ಅಭಿವೃದ್ಧಿಗೆ  ತಮ್ಮ ತಮ್ಮ ಕ್ಷೇತ್ರದ ಮೂಲಕ ಕೊಡುಗೆ ನೀಡಬೇಕು ಎಂಬುದು ನನ್ನ ಆಶಯ.

*‘ಮಧುರ ಮಧುರವೀ ಮಂಜುಳ ಗಾನ’ ಮತ್ತಿತರ ಕಾರ್ಯಕ್ರಮಗಳ ಕುರಿತು...
–‘ಮಧುರ ಮಧುರವೀ ಮಂಜುಳ ಗಾನ’ದ ನಿರ್ಮಾಣದಲ್ಲಿ ಜಿಲ್ಲೆಯ ಮಣ್ಣಿನ ಗುಣವಿದೆ. ಸಾಹಿತ್ಯ, ಸಂಗೀತ ಇತ್ಯಾದಿಗಳು ಕೇವಲ ಬೆಂಗಳೂರು ಕೇಂದ್ರೀಕೃತ ಆಗಬಾರದು. ಕಲಾವಿದ ರನ್ನು ಹುಡುಕಿಕೊಂಡು ದೃಶ್ಯವಾಹಿನಿ ಗಳು ಹೋಗಬೇಕು. ದೃಶ್ಯವಾಹಿನಿ ಹುಡುಕಿಕೊಂಡು ಕಲಾವಿದರು ಅಲೆದಾಡಬಾರದು.

ಆ ದೃಷ್ಟಿಯಿಂದ ‘ಮಧುರ ಮಧುರವೀ...’ ಕಾರ್ಯಕ್ರಮ ನಿರ್ಮಿಸಿದೆ. ಈ ನೆಲದ ಸೊಗಡೇ ನನಗೆ ಪ್ರೇರಣೆ. ಅವಿಭಜಿತ ಧಾರವಾಡವೇ ‘ಗಂಡು ಮೆಟ್ಟಿನ ನೆಲ’. ಅದಕ್ಕಾಗಿ ‘ಚಂದನೋತ್ಸವ’ವನ್ನು ಧಾರವಾಡದಲ್ಲಿ ಆರಂಭಿಸಿದೆ.

*ಇಂದಿನ ಸಮಾಜಕ್ಕೆ ಏನು ಅಗತ್ಯವಿದೆ?
–‘ಬ್ರಾಹ್ಮಣರಾದ ಗೋವಿಂದ ಭಟ್ಟರು ಹಾಗೂ ಮುಸಲ್ಮಾನರಾದ ಷರೀಫರು ಗುರುಶಿಷ್ಯರು. ಅವರಿಬ್ಬರೂ ಎಂದಿಗೂ ತಮ್ಮ ತಮ್ಮ ಧರ್ಮ ಬದಲಾವಣೆಗೆ ಪರಸ್ಪರ ಒತ್ತಡ ಹೇರಲಿಲ್ಲ. ಪರಸ್ಪರ ಧರ್ಮಗಳನ್ನು ಗೌರವಿಸಿಕೊಂಡು ಗುರು ಶಿಷ್ಯರಾಗಿದ್ದರು. ನಾಡಿಗೆ ಕೊಡುಗೆ ನೀಡಿದರು. ಆ ಸಹಿಷ್ಣುತಾ, ಸಾಮರಸ್ಯದ ಮನೋಭಾವವೇ ಇಂದಿನ ಸಮಾಜಕ್ಕೂ ಅಗತ್ಯವಿದೆ.

*ಮಾಧ್ಯಮ ಮತ್ತು  ಸಾಹಿತ್ಯ ಕ್ಷೇತ್ರದ ಕುರಿತು ತಮ್ಮ ಅಭಿಪ್ರಾಯ...
–‘ಸಾಹಿತ್ಯ ಬೆಳೆಯಲು ಮಾಧ್ಯಮ ಬೇಕು, ಮಾಧ್ಯಮದ ಶುದ್ಧೀಕರಣಕ್ಕೆ ಸಾಹಿತ್ಯ ಅಗತ್ಯ. ದೃಶ್ಯವಾಹಿನಿಗಳಲ್ಲಿ  ಉಚ್ಚಾರಣೆ, ಮುದ್ರಣ ಮಾಧ್ಯಮದಲ್ಲಿ ಶುದ್ಧ ಬರಹ ಬರಬೇಕಾದರೆ ಸಾಹಿತ್ಯದ ಓದು ಅಗತ್ಯ. ಸಾಹಿತ್ಯ ಮಾಧ್ಯಮವನ್ನು ಶುದ್ಧಗೊಳಿಸುತ್ತದೆ. ಹೀಗಾಗಿ ಓದು ಅತೀ ಮುಖ್ಯ. ಹಾಗೆ ಶುದ್ಧವಾದ ಸಾಹಿತ್ಯ ಬೆಳೆಯಲು ಮಾಧ್ಯಮದ ಕೊಡುಗೆಯೂ ಅಗತ್ಯ. ಅವೆರೆಡು ಕೈ ಕೈ ಹಿಡಿದು ಮುನ್ನಡೆಯಬೇಕು. ಇಲ್ಲದಿದ್ದರೆ, ‘ಅತಿಥಿಗಳ ಆದರದ ಸ್ವಾಗತ’ದ ಬದಲಾಗಿ ‘ಅತಿಥಿಗಳಿಗೆ ಹಾದರದ ಸ್ವಾಗತ’ ಆಗುವ ಅಪಾಯ ಇದೆ’ ಎಂದು ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT