ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಕ್ರಮ

ಶ್ರೀರಂಗ ಏತ ನೀರಾವರಿ ಯೋಜನೆ ವಿಳಂಬಕ್ಕೆ ಸಂಸದ ಸುರೇಶ್‌ ಆಕ್ಷೇಪ
Last Updated 19 ಜನವರಿ 2017, 6:38 IST
ಅಕ್ಷರ ಗಾತ್ರ

ತಿಪ್ಪಸಂದ್ರ(ಮಾಗಡಿ): ರಾಜ್ಯ ಸರ್ಕಾರದ ಮಹತ್ವದ ಶ್ರೀರಂಗ ಏತ ನೀರಾವರಿ ಯೋಜನೆ, ಹೇಮಾವತಿ ನದಿ ನೀರು ಸರಬರಾಜು ಕಾಮಗಾರಿ ನಡೆಯುತ್ತಿರುವ ಕಲ್ಲೆರೆ ಗ್ರಾಮಕ್ಕೆ ಬುಧವಾರ  ಸಂಸದ ಡಿ.ಕೆ.ಸುರೇಶ್‌ ಬೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು. ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳೆಲ್ಲರೂ ಪರಸ್ಪರ ಸಹಕಾರದಿಂದ ದುಡಿಯುವಂತೆ  ಅವರು ತಿಳಿಸಿದರು.

ಪುರಸಭೆಯಲ್ಲಿ ಬುಧವಾರ ಸಂಜೆ ರಾಮನಗರ  ಮತ್ತು ತುಮಕೂರು ಜಿಲ್ಲೆಯ ವಿವಿಧ ಅಧಿಕಾರಿಗಳ ಸಭೆ ನಡೆಸಿ  ಅವರು ಮಾತನಾಡಿದರು.
ಶ್ರೀರಂಗ  ಯೋಜನೆ 2 ವರ್ಷದ ಒಳಗೆ ಮುಗಿಯಬೇಕಿದೆ, ಈಗಾಗಲೇ ಒಂದು ವರ್ಷ ಕಳೆದಿದ್ದು ಡಿಸೆಂಬರ್‌ನಲ್ಲಿ ಕಾಮಗಾರಿ ಮುಗಿಯಬೇಕಾಗಿತ್ತು.  ಕಾಮಗಾರಿ ಸಾಕಷ್ಟು ವಿಳಂಬವಾಗಿ ನಡೆಯುತ್ತಿದೆ. ಕಾಮಗಾರಿ ಬಗ್ಗೆ ಅಸಡ್ಡೆ ತೋರಿಸುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಯೋಜನೆಗೆ ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ 10 ದಿನದಲ್ಲಿ ಸಂಬಂಧಪಟ್ಟ ಇಲಾಖೆಗಳು ಮುಗಿಸಬೇಕು ಎಂದರು.

ಮೊದಲು ರೈತರಿಗೆ ನೋಟಿಸ್ ನೀಡಿ ಎಷ್ಟು ಭೂಮಿ ಪಡೆಯುತ್ತಿದ್ದೇವೆ. ಎಷ್ಟು ಹಣ ಬರುತ್ತದೆ ಹಾಗೂ ಬೆಳೆಗೆ ಸಂಬಂಧಿಸಿದ ಬೆಲೆಯನ್ನು ರೈತರಿಗೆ ನೀಡಿದರೆ ರೈತರು ಯಾವುದೇ ತೊಂದರೆ ಕೊಡದೆ ಭೂಸ್ವಾಧೀನ ಪ್ರಕ್ರಿಯೆಗೆ ಅವಕಾಶ ಕೊಡುತ್ತಾರೆ  ಎಂದರು.

ಹೇಮಾವತಿ ನೀರು ಸರಬರಾಜು ಯೋಜನೆಗೆ ಒಟ್ಟು 132 ಗ್ರಾಮಗಳು ಸೇರ್ಪಡೆಯಾಗಲಿವೆ. ಮಾಗಡಿ ತಾಲ್ಲೂಕಿನಲ್ಲಿ 14 ಗ್ರಾಮಗಳ ಜಮೀನು ಸರ್ವೆ ಕಾರ್ಯ ಮುಗಿದಿದೆ. ಇನ್ನೂ 5 ಗ್ರಾಮಗಳ ರೈತರ ಜಮೀನು ಸರ್ವೆಕಾರ್ಯ ಬಾಕಿ ಉಳಿದಿದೆ. ಕುಣಿಗಲ್‌ ತಾಲ್ಲೂಕಿನ 6 ಗ್ರಾಮದಲ್ಲಿ ಸರ್ವೆ ಕಾರ್ಯ ಮುಗಿದಿದೆ. ಇನ್ನೂ 3 ಗ್ರಾಮಗಳ ಸರ್ವೆ  ಕಾರ್ಯ ಬಾಕಿ ಉಳಿದಿದೆ. ಕೂಡಲೇ ಸರ್ವೆ ಕಾರ್ಯ ಮುಗಿಸಿ ಭೂಸ್ವಾಧೀನ ಮಾಡಿ ಕೊಡಬೇಕು. ಕಡ್ಡಾಯವಾಗಿ ರೈತರಿಂದ ಭೂಮಿ ಖರೀದಿ ಪ್ರಕ್ರಿಯೆ ಮಾಡಬೇಕು. ಯೋಜನೆಗೆ ಭೂಮಿ ನೀಡಿದ ರೈತರಿಗೆ  4 ಪಟ್ಟು ಪರಿಹಾರ ನೀಡಲಾಗುತ್ತಿದೆ ಎಂದರು.

ಪೈಪ್‌ಲೈನ್ ಕಾಮಗಾರಿ ಮುಗಿದ ನಂತರ ಬೆಳೆಯನ್ನು ರೈತರು ಬೆಳೆದುಕೊಳ್ಳಬಹುದು. ಈ ವಿಚಾರ  ರೈತರಿಗೆ ಮನವರಿಕೆಯಾಗುವಂತೆ ಅಧಿಕಾರಿಗಳು ತಿಳಿಸಬೇಕೆಂದು ತಾಕೀತು ಮಾಡಿದರು.

ಬೆಸ್ಕಾಂ ಇಲಾಖೆಗೆ ಕಾವೇರಿ  ನೀರಾವರಿ ನಿಗಮದಿಂದ ₹1.6 ಕೋಟಿ ಹಣವನ್ನು ನೀಡಿದರೆ 3.7 ಕಿ.ಮೀ ವಿದ್ಯುತ್ ಲೈನ್ ಹಾಗೂ ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಲಾಗುತ್ತದೆ.  ಕೇಂದ್ರದಲ್ಲಿ ಹಿಂದೆ ಇದ್ದ ಯುಪಿಎ ಸರ್ಕಾರ ಹೊಸ ಭೂಸ್ವಾಧೀನ ಕಾನೂನು  ಜಾರಿ ಮಾಡಿದ್ದು ಈಗ ಅನುಮೋದನೆಗೆ ಬಂದಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಎಷ್ಟು ಬೇಗ ನಡೆಯುತ್ತದೆಯೋ ಕಾಮಗಾರಿಯನ್ನೂ ಅಷ್ಟು ಬೇಗನೆ ನಡೆಸಲಾಗುತ್ತದೆಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜುನಾಥ ಮಾತನಾಡಿದರು.  ರಾಮನಗರ ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಪ್ರಸಾದ್, ತಹಶೀಲ್ದಾರ್  ಎನ್‌.ಲಕ್ಷ್ಮಿಚಂದ್ರ. ವಿಶೇಷ ಭೂಸ್ವಾಧೀನಾಧಿಕಾರಿ ಜಯಮಾಧವ್, ಕುಣಿಗಲ್ ತಹಶೀಲ್ದಾರ್ ರಮೇಶ್, ತುಮಕೂರು ಕಿರಿಯ ಎಂಜಿನಿಯರ್ ಬಾಲಕೃಷ್ಣ, ತಾಲ್ಲೂಕು ಪಂಚಾಯ್ತಿ ಇಒ, ಮುರುಡಯ್ಯ, ಪುರಸಭೆ ಸದಸ್ಯರಾದ ಎಂ.ಎನ್.ಮಂಜುನಾಥ, ಕೆ.ವಿ. ಬಾಲು, ಶಿವಕುಮಾರ್ ಮತ್ತಿತರರು ಇದ್ದರು.

**

ಮೊದಲು ಒಬ್ಬ ರೈತರಿಗೆ ಭೂಸ್ವಾಧೀನದ ಹಣ ನೀಡಿದರೆ ಉಳಿದವರು ಯಾವುದೇ ತೊಂದರೆ ಕೊಡುವುದಿಲ್ಲ. ಅಧಿಕಾರಿಗಳು ಕೂಡಲೇ ಜಂಟಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸಬೇಕು
- ಡಿ.ಕೆ.ಸುರೇಶ್, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT