ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನಲ್ಲಿ 15 ದಿನಕ್ಕೆ ₹ 5.5 ಕೋಟಿ ವ್ಯವಹಾರ

ಪರಿಶುದ್ಧತೆಗೆ ಒತ್ತು ನೀಡಿ, ಹಾಲು ಉತ್ಪಾದಕರಿಗೆ ಸಲಹೆ
Last Updated 19 ಜನವರಿ 2017, 6:44 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರತಿನಿತ್ಯ ಹಾಲು ಉತ್ಪಾದನೆಯಲ್ಲಿ ತೊಡಗಿರುವ ಪಶು ಪಾಲಕರು ಪರಿಶುದ್ಧತೆಗೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಗುಣಮಟ್ಟದ ಹಾಲು ಪಡೆಯಲು ಸಾಧ್ಯ ಎಂದು ‘ಬಮುಲ್’ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ. ಗಂಗಯ್ಯ ತಿಳಿಸಿದರು.

ತಾಲ್ಲೂಕಿನ ಆಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ನಡೆದ ಹಾಲು ಉತ್ಪಾದಕರ ಸದಸ್ಯರಿಗೆ ಹಾಲು ಸಂಗ್ರಹ ಕ್ಯಾನ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಆರೋಗ್ಯಯುತ ಪಶುವಿ ಪೌಷ್ಟಿಕಾಂಶಯುತ ಮೇವು ನೀಡಿ,  ಆರೋಗ್ಯಯುತ ವಾತಾವರಣದಲ್ಲಿ, ಶುದ್ಧವಾದ ಪಾತ್ರೆಗೆ ಕೆಚ್ಚಲಿನಿಂದ ಹಾಲು ಇಳಿಸಿದಾಗ ಮಾತ್ರ ಪರಿಶುದ್ಧವಾಗಿ ದೊರೆಯಲು ಸಾಧ್ಯ ಎಂದರು.

ಪ್ರಸ್ತುತ 87 ಸದಸ್ಯರ ಪೈಕಿ ಏಳೆಂಟು ಸದಸ್ಯರ ಹಾಲಿನ ಗುಣಮಟ್ಟ ಕಡಿಮೆಯಾಗಿರುವುದಕ್ಕೆ ವಿವಿಧ ರೀತಿಯ ಕಾರಣಗಳಿರಬಹುದು. ಗೋವಿನಿಂದ ಗ್ರಾಹಕರವರೆಗೂ ಪರಿಶುದ್ಧ ಹಾಲು ಪೂರೈಕೆಯಾಗಲೇ ಬೇಕು. ಇದು ಆಹಾರ ಸುರಕ್ಷತೆಯ ಕಾಯ್ದೆಯೂ ಕೂಡ. ಪ್ರತಿ 15 ದಿನಗಳಿಗೊಮ್ಮೆ ₹ 5.5 ಕೋಟಿ ಹಣ ಹಾಲಿನ ಉತ್ಪಾದನೆಯಿಂದ ತಾಲ್ಲೂಕಿನಲ್ಲಿ ಬಟವಾಡೆ ಆಗುತ್ತಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರದೇಶನಹಳ್ಳಿ ಸೊಣ್ಣಪ್ಪ ಮಾತನಾಡಿ, ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲ್ಲೂಕಿನಲ್ಲಿ ಆರ್ಥಿಕ ಚೇತರಿಕೆಗೆ ಪ್ರತಿ ತಿಂಗಳು 15 ದಿನಗಳಿಗೊಮ್ಮೆ ಹಣ ನೋಡುವುದು ಹಾಲಿನ ಉತ್ಪಾದನೆಯಿಂದ ಮಾತ್ರ. ಸರ್ಕಾರ ಪ್ರೋತ್ಸಾಹ ಧನ ನೀಡದೆ ಇದ್ದಿದ್ದರೆ ಸಹಕಾರ ಸಂಘಗಳು ಬಾಗಿಲು ಮುಚ್ಚಬೇಕಾಗಿತ್ತು ಎಂದರು.

ಎಪಿಎಂಸಿ ನಿರ್ದೇಶಕ ಕೆ.ವಿ ಮಂಜುನಾಥ್ ಮಾತನಾಡಿ, ಹಾಲು ಉತ್ಪಾದನೆ ಪ್ರಸ್ತುತ ರೈತರಿಗೆ ಅನಿವಾರ್ಯವಾಗಿದೆ, ಸರ್ಕಾರ ವ್ಯವಸಾಯ ಸೇವಾ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಮೂರು ತಿಂಗಳ ಕರು ಸಾಕಾಣಿಕೆಗೆ 23 ಸಾವಿರ, ಕರು ಖರೀದಿಗೆ 27 ಸಾವಿರ, ಒಟ್ಟು 50 ಸಾವಿರ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿದೆ. ಮೂರು ಕರು ಪಾಲನೆ ಮಾಡಿದರೆ ಎರಡು ಉಚಿತ ಸಿಗಲಿದೆ.  ಸದುಪಯೋಗ ಪಡೆದುಕೊಳ್ಳಬೇಕು ಎಂದರು.

‘ಬಮುಲ್’ ನಿರ್ದೇಶಕ ಬಿ ಶ್ರೀನಿವಾಸ್ ಮಾತನಾಡಿ, ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನದ ಜತೆಗೆ ‘ಬಮುಲ್’ ಒಕ್ಕೂಟದ ವತಿಯಿಂದ ಜನವರಿಯಿಂದ ಮಾರ್ಚ್‌ವರೆಗೆ ಮೂರು ತಿಂಗಳು ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ಎಂಪಿಸಿಎಸ್ ಅಧ್ಯಕ್ಷ ಮುನೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಪಿ.ಪಟಾಲಪ್ಪ, ವಿಸ್ತೀರ್ಣಾಧಿಕಾರಿ ಮುನಿರಾಜು ಗೌಡ, ವಿಎಸ್ಎಸ್ಎನ್ ನಿರ್ದೇಶಕ ಚಿಕ್ಕಣ್ಣ, ಗ್ರಾ ಪಂ. ಸದಸ್ಯ ಕುದುರಪ್ಪ, ಹನು ಮಂತೇಗೌಡ ಹಾಗೂ ಎಂಪಿಸಿಎಸ್ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT