ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ಸರ್ಕಾರದ ದಿಟ್ಟ ನಿರ್ಧಾರ’

ತಾಲ್ಲೂಕು ಮಟ್ಟದ ಚರ್ಚಾಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ನಮ್ರತಾ ಪ್ರಥಮ
Last Updated 19 ಜನವರಿ 2017, 6:45 IST
ಅಕ್ಷರ ಗಾತ್ರ

ಅಂಕೋಲಾ: ‘ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಉದ್ಭವಿಸಿದ ಕಾಶ್ಮೀರ ಸಮಸ್ಯೆ ಉಲ್ಬಣಗೊಂಡಿದ್ದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ವಿಮೋಚನೆಗೊಳಿಸುವ ನಿಲುವನ್ನು ಪ್ರಕಟಿಸಿರುವುದು ಗಮನಾರ್ಹವಾಗಿದೆ.

ಇದೇ ಮೊದಲ ಬಾರಿಗೆ ಭಾರತ ಸರ್ಕಾರ ದಿಟ್ಟ ನಿಲುವನ್ನು ಪ್ರದರ್ಶಿಸಿರುವುದರಿಂದ ಕಾಶ್ಮೀರ ಕುರಿತ ವಿವಾದ ನಿರ್ಣಾಯಕವಾಗಿ ಬಗೆಹರಿಯುವ ಲಕ್ಷಣ ಕಂಡುಬರುತ್ತಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಆರ್. ಭಟ್ ಅಭಿಪ್ರಾಯಪಟ್ಟರು.

ಮಂಗಳವಾರ ಪಟ್ಟಣದ ಜಿ.ಸಿ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ದಿ. ಪಿ.ಎಸ್. ಕಾಮತ ಸ್ಮರಣಾರ್ಥ ಜಿಲ್ಲಾ ಮಟ್ಟದ ಸ್ಪರ್ಧೆಯ ಪೂರ್ವಭಾವಿ ತಾಲ್ಲೂಕು ಮಟ್ಟದ ಚರ್ಚಾಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ವಿವಿಧ ಕಾಲೇಜುಗಳ 16 ಚರ್ಚಾಪಟುಗಳು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದಲ್ಲಿ ಒಗ್ಗೂಡಿಸುವುದು ಕಾಶ್ಮೀರ ಸಮಸ್ಯೆಗೆ ಪರಿಹಾರವಾಗಿದೆ’ ಎಂಬ ವಿಷಯದ ಕುರಿತು ಪರ ಮತ್ತು ವಿರೋಧವಾಗಿ ವಾದಗಳನ್ನು ಮಂಡಿಸಿದರು.

ಪ್ರಾಚಾರ್ಯ ಡಾ. ಇಮ್ತಿಯಾಜ್‌ ಅಹ್ಮದ್‌ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುಳ್ಳಾಪುರ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ರಾಮಮೂರ್ತಿ ಎಸ್. ನಾಯಕ, ನಿವೃತ್ತ ಮುಖ್ಯಾಧ್ಯಾಪಕ ಎನ್.ಎಚ್. ನಾಯ್ಕ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ನಮ್ರತಾ ಗಾಂವಕರ ಪ್ರಾರ್ಥಿಸಿದರು. ಜಿ.ಸಿ. ಕಾಲೇಜಿನ ಡಿಬೇಟ ಕಮಿಟಿ ಚೇರಮನ್ ಡಾ. ಎಸ್.ವಿ. ವಸ್ತ್ರದ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೇಘಾ ವಿ. ಶಿರೋಡಕರ ನಿರೂಪಿಸಿದರು. ಪ್ರೊ. ಡಿ.ಪಿ. ಕುಚಿನಾಡ ವಂದಿಸಿದರು.

ಫಲಿತಾಂಶ : ಚರ್ಚಾಸ್ಪರ್ಧೆಯಲ್ಲಿ ಪೂಜಗೇರಿಯ ಹಿಮಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಮೃತಾ ನಾಗಪತಿ ಹೆಗಡೆ ಪ್ರಥಮ ಹಾಗೂ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಶ್ವರ್ಯ ದಿನಕರ ನಾಯ್ಕ ದ್ವಿತೀಯ ಸ್ಥಾನ ಪಡೆದು ಜನವರಿ 27 ಮತ್ತು 28 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾದರು.

ಕಾಲೇಜು ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟದಲ್ಲಿ ಸ್ಪರ್ಧಿಸಿದ ಚರ್ಚಾಪಟುಗಳಿಗೆ ಕ್ರಮವಾಗಿ ತಲಾ ₹500 ಹಾಗೂ ₹300 ನಗದು ಬಹುಮಾನವನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT