ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಮಾಡಿನ ಮೇಲೆ ‘...ಮಿಡಿನಾಗರ’

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

‘ತೀರ್ಥಹಳ್ಳಿಯಿಂದ ಸಿನಿಮಾ ನಟನಾಗಬೇಕು ಎಂದು ಬೆಂಗಳೂರಿಗೆ ಬಂದು ಹತ್ತು ವರ್ಷಗಳಾಯ್ತು. ಈ ಹತ್ತು ವರ್ಷಗಳಲ್ಲಿ ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ತುಂಬ ಕಷ್ಟಗಳನ್ನು ನೋಡಿದ್ದೀನಿ. ಆದರೂ ಛಲಬಿಡದೆ ಉಳಿದುಕೊಂಡಿದ್ದೀನಿ’. 

ನವೀನ್‌ ತೀರ್ಥಹಳ್ಳಿ ಅವರ ಮಾತಿನಲ್ಲಿ ಕಳೆದ ದಿನಗಳ ನೋವಿನ ಛಾಯೆ ಇದ್ದರೆ, ಕಣ್ಣಿನಲ್ಲಿ ನಾಳಿನ ಬಗೆಗೆ ಉಜ್ವಲ ಕನಸುಗಳು ಹೊಳೆಯುತ್ತಿದ್ದವು. 
ಧಾರಾವಾಹಿಗಳು, ಕಿರುಚಿತ್ರಗಳು, ಸಿನಿಮಾಗಳಲ್ಲಿ ಪೋಷಕ ಪಾತ್ರಗಳು ಹೀಗೆ ಹಂತ ಹಂತವಾಗಿ ಮೇಲೇರುತ್ತಿರುವ  ನವೀನ್ ತೀರ್ಥಹಳ್ಳಿ, ಈಗ ವೃತ್ತಿಜೀವನದ ಸಂಕ್ರಮಣದ ಕಾಲದಲ್ಲಿದ್ದಾರೆ. 
 
ಯಂಡಮೂರಿ ವೀರೇಂದ್ರನಾಥ್‌ ಅವರು ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶಿಸಿರುವ ‘ಕರಿಕಂಬಳಿಯಲ್ಲಿ ಮಿಡಿನಾಗರ’ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿದೆ. ಇದು ತನ್ನ ಬಣ್ಣದ ಬದುಕಿನ ಉಜ್ವಲ ಭವಿಷ್ಯಕ್ಕೆ ಮುನ್ನುಡಿಯಾಗುತ್ತದೆ ಎಂಬ ಬಲವಾದ ನಂಬಿಕೆಯೂ ಅವರಲ್ಲಿದೆ. 
 
ಸಿನಿಮಾ ಮಾಯೆಗೆ ಮರುಳಾಗಿ ಹತ್ತು ವರ್ಷಗಳ ಹಿಂದೆ ಗಾಂಧಿನಗರದಲ್ಲಿ ಅಡಿಯಿಟ್ಟಾಗ ನವೀನ್‌ ಬಳಿ ನಟನಾಗಬೇಕು ಎಂಬ ಛಲದ ಹೊರತು ಇನ್ನೇನೂ ಇರಲಿಲ್ಲ. ಆಗ ಅವರ ಕೈಹಿಡಿದಿದ್ದು ರಂಗಭೂಮಿ. ರವೀಂದ್ರ ಕಲಾಕ್ಷೇತ್ರದ ಹಲವು ರಂಗತಂಡಗಳ ನಾಟಕಗಳಲ್ಲಿ ನಟಿಸುತ್ತಲೇ ಅವರು ಅಭಿನಯದ ವ್ಯಾಕರಣ ಕಲಿತುಕೊಂಡರು. ಅಲ್ಲಿ ನಟಿಸುತ್ತಲೇ ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್‌ ಹೀಗೆ ಹಲವು ಭಾಷೆಗಳ ಕಿರುಚಿತ್ರಗಳಲ್ಲಿಯೂ ನಟಿಸಿದರು. ನಂತರ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾ ಕ್ಯಾಮೆರಾ ಎದುರು ನಟಿಸುವ ಪರಿಯನ್ನು ಕಲಿತುಕೊಂಡರು. ‘ಮುಕ್ತ ಮುಕ್ತ’, ‘ಮಹಾಭಾರತ’, ‘ವಸುದೈವ ಕುಟುಂಬ’, ‘ಪಲ್ಲವಿ ಅನುಪಲ್ಲವಿ’ – ಹೀಗೆ ಹಲವು ಧಾರವಾಹಿಗಳಲ್ಲಿ ಅವರು ನಟಿಸಿದ್ದಾರೆ. ಹಾಗೆಯೇ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಅವಕಾಶವೂ ಅವರಿಗೆ ಸಿಕ್ಕಿತು. ‘ಮಂಜಿನ ಹನಿ’, ‘ಆಟ’, ‘ದುಷ್ಟ’, ‘ಒನ್‌ ಟೈಮ್‌’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರೂ ಮುಖ್ಯಪಾತ್ರವೊಂದನ್ನು ನಿರ್ವಹಿಸುವ ಅವಕಾಶ ಅವರ ಪಾಲಿಗೆ ಒದಗಿ ಬಂದಿರಲಿಲ್ಲ. 
 
ಪೂರ್ಣ ಪ್ರಮಾಣದ ನಾಯಕನಾಗುವ ಅವಕಾಶ ಸಿಕ್ಕಿದ್ದು ‘ಕೌರ್ಯ’ ಎಂಬ ಸಿನಿಮಾದ ಮೂಲಕ. ‘ಟೀಂ ಶಂಕರ್‌ನಾಗ್‌’ ತಂಡದ ಸುರೇಶ್‌ ಮತ್ತು ಅನಿಲ್‌ ನಿರ್ದೇಶಿಸುತ್ತಿರುವ ಈ ಸಿನಿಮಾ ಸಸ್ಪೆನ್ಸ್‌ ಕಥೆಯನ್ನು ಹೊಂದಿದೆ. ಈಗಾಗಲೇ ಶೇ. 30ರಷ್ಟು ಚಿತ್ರೀಕರಣ ಮುಗಿಸಿರುವ ‘ಕೌರ್ಯ’ದ ಬಗ್ಗೆ ನವೀನ್‌ಗೆ ಅಪಾರ ನಿರೀಕ್ಷೆಯಿದೆ. ಈ ಚಿತ್ರದ ಚಿತ್ರೀಕರಣದಲ್ಲಿರುವಾಗಲೇ ಅವರಿಗೆ ಯಂಡಮೂರಿ ವೀರೇಂದ್ರನಾಥ್‌ ಅವರು ಕನ್ನಡದಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿರುವ ಸುದ್ದಿ ಸಿಕ್ಕಿತು. ಹಾಗೆಯೇ ಅವರು ನಾಯಕನಿಗಾಗಿ ಹುಡುಕುತ್ತಿರುವ ಸುದ್ದಿ ತಿಳಿದು ಅವರು ಆಡಿಷನ್‌ಗೆ ತೆರಳಿದರು. ಚಿತ್ರಕ್ಕೆ ಆಯ್ಕೆಯೂ ಆದರು.
 
ಇಲ್ಲಿವರೆಗೆ ನಾನು ದೊಡ್ಡ ದೊಡ್ಡ ನಿರ್ದೇಶಕರ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದೆ. ಆದರೆ ಮುಖ್ಯಪಾತ್ರಗಳಲ್ಲಿ ನಟಿಸಿದ್ದೆಲ್ಲ ಹೊಸಬರ ತಂಡದೊಂದಿಗೆ. ‘ಕರಿಕಂಬಳಿಯಲ್ಲಿ ಮಿಡಿನಾಗರ’ ಸಿನಿಮಾದಲ್ಲಿ ಯಂಡಮೂರಿ ವೀರೇಂದ್ರನಾಥ್‌ ಅವರಂಥ ಜನಪ್ರಿಯ ಮತ್ತು ಅನುಭವಿ ನಿರ್ದೇಶಕರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಇದೇ ಮೊದಲು. ಆದ್ದರಿಂದಲೇ ಈ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಮೈಲಿಗಲ್ಲಾಗುತ್ತದೆ ಎಂಬ ನಂಬಿಕೆಯಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ನವೀನ್‌. ಈ ಸಿನಿಮಾದಲ್ಲಿ ಸಿಬಿಐ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
‘ಈ ಸಿನಿಮಾದಲ್ಲಿನ ನನ್ನ ಪಾತ್ರಕ್ಕೆ ಹಲವು ಛಾಯೆಗಳಿವೆ. ಹಾಸ್ಯವಿದೆ, ಆ್ಯಕ್ಷನ್‌ ಇದೆ, ಭಾವುಕತೆ ಇದೆ, ಪ್ರೇಮಕಥೆ ಹೀಗೆ ಹಲವು ಭಾವಗಳ ಅಭಿವ್ಯಕ್ತಿಗೆ ಅವಕಾಶ ಇರುವ ಪಾತ್ರ ಇದು. ಆದ್ದರಿಂದ ನನ್ನೊಳಗಿನ ಕಲಾವಿದನನ್ನು ಚೆನ್ನಾಗಿ ದುಡಿಸಿಕೊಳ್ಳಲು ಸಾಧ್ಯವಾಗಿದೆ’ ಎಂದು ಅವರು ಹೇಳಿಕೊಳ್ಳುತ್ತಾರೆ. 
ಯಂಡಮೂರಿ ಜೊತೆಗೆ ಕೆಲಸ ಮಾಡಿದ ಅನುಭವವೂ ನವೀನ್‌ ಅವರೊಳಗಿನ ನಟನನ್ನು ಇನ್ನಷ್ಟು ಪಕ್ವಗೊಳಿಸಿದೆ.
 
‘ಯಂಡಮೂರಿ ಕಾದಂಬರಿಕಾರನಾಗಿ ತುಂಬ ಪ್ರಸಿದ್ಧರು. ಅವರು ನಿರ್ದೇಶಕರಾಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ತೆಲುಗಿನಲ್ಲಿ ಐದು ಸಿನಿಮಾ ನಿರ್ದೇಶಿಸಿದ್ದಾರೆ. ಐದಾರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇಷ್ಟಾಗಿಯೂ ತುಂಬ ಸರಳ ಮನುಷ್ಯ ಅವರು. ಪ್ರತಿಯೊಂದು ದೃಶ್ಯವೂ ಹೇಗೆ ಬರಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುತ್ತಿತ್ತು. ನಾನು ಒಂಚೂರು ಹೆಚ್ಚು ಕಮ್ಮಿ ನಟಿಸಿದರೂ ಅವರೇ ಸ್ವತಃ ಅಭಿನಯಿಸಿ ತೋರಿಸುತ್ತಿದ್ದರು. ಅಷ್ಟು ಶ್ರದ್ಧೆಯಿಂದ ನಮ್ಮಿಂದ ಅಭಿನಯ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ನನಗೆ ಕಷ್ಟವೇ ಆಗಲಿಲ್ಲ’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು.
 
ಮಾರತ್‌ಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ 24 ದಿನಗಳಲ್ಲಿಯೇ ಚಿತ್ರೀಕರಣ ಮುಗಿಸಲಾಗಿದೆ. ಚಿರಶ್ರೀ ಎನ್ನುವ ತುಳು ನಟಿ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
 
‘ಇಷ್ಟು ವರ್ಷ ಕಷ್ಟಪಟ್ಟಿರುವುದಕ್ಕೆ ಒಳ್ಳೆಯ ಅವಕಾಶ ಸಿಕ್ಕಿದ ಖುಷಿಯಲ್ಲಿದ್ದೇನೆ. ಮುಂದೆಯೂ ಒಳ್ಳೆಯ ಅವಕಾಶಗಳು ಸಿಗುತ್ತವೆ ಎನ್ನುವ ಭರವಸೆ ಇದೆ’ ಎನ್ನುವ ನವೀನ್‌ ಅವರಿಗೆ ಆ್ಯಕ್ಷನ್‌ ಹೀರೊ ಆಗಿ ಗುರ್ತಿಸಿಕೊಳ್ಳಬೇಕು ಎಂಬ ಕನಸಿದೆ. ಈ ಕನಸಿಗೆ ಪೂರಕವಾಗಿ ಅವರು ಸಾಕಷ್ಟು ಶ್ರಮವನ್ನು ವಹಿಸಿದ್ದಾರೆ. ಆ್ಯಕ್ಷನ್‌ ಹೀರೊ ಆಗಲು ಬೇಕಿರುವ ಅಂಗಸೌಷ್ಠವವನ್ನೂ ಬೆಳೆಸಿಕೊಂಡಿದ್ದಾರೆ. 
 
‘ಇನ್ನು ಮುಂದಿನ ನಟನೆಯ ಹಾದಿ ಹಸಿರಾಗಿರುತ್ತದೆ ಎಂಬ ನಂಬಿಕೆಯಲ್ಲಿದ್ದೇನೆ’ ಎನ್ನುವ ನವೀನ್‌ ಮಾತಿನಲ್ಲಿ ತನ್ನ ಪ್ರತಿಭೆಯ ಬಗೆಗೆ ಹೆಮ್ಮೆ ಮತ್ತು ನಾಳಿನ ಬಗೆಗಿನ ಭರವಸೆಗೆ ಎರಡೂ ಇಣುಕುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT