ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೂ ವಿಸ್ತರಿಸಿದ ‘ಫಿಲ್ಮೋಕ್ರಸಿ’ ಪ್ರಭಾವಳಿ

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ಸಿನಿಮಾ ಒಬ್ಬ ವ್ಯಕ್ತಿಯ ಪ್ರತಿಭೆ, ಸೃಜನಶೀಲತೆ, ಶ್ರಮಗಳ ಮೇಲಷ್ಟೇ ರೂಪುಗೊಳ್ಳುವ ಕಲೆ ಅಲ್ಲ. ಅದು ಹಲವು ಪ್ರತಿಭಾವಂತರ ಸಮೂಹವನ್ನು, ದುಬಾರಿ ತಾಂತ್ರಿಕ ಪರಿಕರಗಳನ್ನು, ಅಷ್ಟೇ ದೊಡ್ಡ ಮಟ್ಟದ ಬಂಡವಾಳವನ್ನು ಬೇಡುವ ವೆಚ್ಚದಾಯಕ ಮಾಧ್ಯಮ. ಹೀಗಾಗಿಯೇ ಪ್ರತಿಭೆ ಇದ್ದೂ ಸಿನಿಮಾ ಮಾಡುವುದು ಹಲವರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. 
 
ವಾಣಿಜ್ಯಾತ್ಮಕ ಉದ್ದೇಶಗಳಿಲ್ಲದೆ ಕಲಾತ್ಮಕ ಅಭಿವ್ಯಕ್ತಿಯನ್ನೇ ಗುರಿಯಾಗಿಸಿಕೊಳ್ಳುವ ಪರ್ಯಾಯ ಮಾದರಿ ಸಿನಿಮಾಗಳ ನಿರ್ಮಾಣ ಯಾವತ್ತಿಗೂ ದುಸ್ತರವೇ. ಇಂಥ ಸಿನಿಮಾಗಳನ್ನು – ಸಿನಿಕರ್ಮಿಗಳನ್ನು ಬೆಂಬಲಿಸಿ ಉತ್ತೇಜಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಸಂಸ್ಥೆ ‘ಫಿಲ್ಮೋಕ್ರಸಿ ಪ್ರತಿಷ್ಠಾನ’. 
ಆರು ತಿಂಗಳ ಹಿಂದೆ ಕೇರಳದ ಕೊಚ್ಚಿಯಲ್ಲಿ ಕಾರ್ಯಾರಂಭ ಮಾಡಿರುವ ‘ಫಿಲ್ಮೋಕ್ರಸಿ ಫೌಂಡೇಷನ್‌’, ಪ್ರಯೋಗಾತ್ಮಕ ಸಿನಿಮಾಗಳನ್ನು ನಿರ್ಮಿಸುವ ಸ್ವತಂತ್ರ ನಿರ್ದೇಶಕರಿಗೆ ತಾಂತ್ರಿಕ ಸಹಾಯ ಮತ್ತು ಸೃಜನಶೀಲ ಮಾರ್ಗದರ್ಶನವನ್ನು ನೀಡುವ ಉದ್ದೇಶ ಹೊಂದಿದೆ. 
 
ಇಷ್ಟು ದಿನ ಮಲಯಾಳಂ ಸಿನಿಮಾಗಳಿಗೆ ಮಾತ್ರ ಸಹಾಯ ಮಾಡುತ್ತಿದ್ದ ಈ ಪ್ರತಿಷ್ಠಾನ ,ಇದೀಗ ತನ್ನ ವ್ಯಾಪ್ತಿಯನ್ನು ಕರ್ನಾಟಕ ಮತ್ತು ತಮಿಳುನಾಡಿಗೂ ವಿಸ್ತರಿಸಿದೆ. ಇನ್ನು ಕೆಲವು ತಿಂಗಳುಗಳ ನಂತರ ಬೇರೆ ಭಾಷೆಗಳಿಗೂ ಸಹಾಯ ಮಾಡುವ ಯೋಜನೆಯೂ ಫಿಲ್ಮೋಕ್ರಸಿಗಿದೆ.
 
ಸಿನಿಮಾ ಮಾಧ್ಯಮದ ಹಲವು ವಿಭಾಗಗಳಲ್ಲಿ ಪರಿಣತಿ ಸಾಧಿಸಿರುವ, ಈ ಮಾಧ್ಯಮದ ಸಾಧ್ಯತೆಗಳನ್ನು ವಿಸ್ತರಿಸುವ ಶ್ರದ್ಧೆ ಮತ್ತು ಬದ್ಧತೆ ಇರುವ ಹಲವು ಸಮಾನಮನಸ್ಕರು ಸೇರಿ ರೂಪಿಸಿರುವ ಪ್ರತಿಷ್ಠಾನ ಇದು. ಆದರೆ ಇದಕ್ಕೆ ಯಾವುದೇ ವಾಣಿಜ್ಯಾತ್ಮಕ ಉದ್ದೇಶಗಳಿಲ್ಲ. ‘ಫಿಲ್ಮೋಕ್ರಸಿ ಚಿತ್ರೋದ್ಯಮದ ಭಾಗ ಅಲ್ಲ. ಚಿತ್ರರಂಗಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ ಈ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ವಿ.ಜಿ. ಬಾಬುರಾಜ್‌. 
 
 
‘ಸಾಮಾನ್ಯವಾಗಿ ಚಿತ್ರೋದ್ಯಮ ಅಂದ್ರೆ ಅಲ್ಲಿ ನಿರ್ಮಾಪಕರಿರುತ್ತಾರೆ. ಕೆಲವು ಸಿದ್ಧಸೂತ್ರಗಳಿರುತ್ತವೆ. ಲಾಭಗಳಿಕೆಯೂ ಮಹತ್ವದ್ದಾಗುತ್ತದೆ. ಈ ಎಲ್ಲದರಿಂದ ಹೊರತಾಗಿ – ಸಿದ್ಧಸೂತ್ರಗಳನ್ನು ಮೀರಿ ಗಂಭೀರ ಸಿನಿಮಾ ಮಾಡಲು ಹೊರಡುವವರು ತುಂಬ ಕಷ್ಟಪಡಬೇಕಾಗುತ್ತದೆ. ಬಂಡವಾಳ ಹೊಂದಾಣಿಕೆ, ತಂತ್ರಜ್ಞಾನದ ಬಳಕೆ, ಪರಿಕರಗಳ ಲಭ್ಯತೆ – ಎಲ್ಲವೂ ಅವರಿಗೆ ಸವಾಲೇ. ಆದರೆ ಇಂಥ ಪರ್ಯಾಯ ಪ್ರಯೋಗಾತ್ಮಕ ಪ್ರಯತ್ನಗಳು ಸಿನಿಮಾ ಮಾಧ್ಯಮದ ಸಾಧ್ಯತೆಗಳನ್ನು ವಿಸ್ತರಿಸುತ್ತವೆ. ಅವರಿಗೆ ಬೆಂಬಲ ನೀಡಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ಅವರು ವಿವರಿಸುತ್ತಾರೆ.
ಫಿಲ್ಮೋಕ್ರಸಿ ಸಿನಿಮಾಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಬದಲಿಗೆ ಅದಕ್ಕೆ ಅವಶ್ಯವಿರುವ ಸಾಧನ ಪರಿಕರಗಳು ಮತ್ತು ಸೃಜನಶೀಲ ಸಲಹೆಗಳನ್ನು ನೀಡುತ್ತದೆ.
 
ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಬೆಳಕು, ಅಭಿನಯ – ಹೀಗೆ ಹಲವು ಕ್ಷೇತ್ರಗಳಲ್ಲಿ ಅನುಭವ ಇರುವ ಸುಮಾರು 90 ಜನರು ‘ಫಿಲ್ಮೋಕ್ರಸಿ’ಯಲ್ಲಿದ್ದಾರೆ. ಈ ಎಲ್ಲರೂ ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ದೀರ್ಘಕಾಲದಿಂದ ಕೃಷಿ ಮಾಡುತ್ತಿರುವವರು. ಪೂನಾದ ಫಿಲ್ಮ್‌ ಇನ್‌ಸ್ಟಿಟ್ಯೂಟ್‌, ಕೋಲ್ಕತ್ತಾದ ‘ಸತ್ಯಜಿತ್‌ ರೇ ಫಿಲ್ಮ್‌ ಆ್ಯಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌’ ಸೇರಿದಂತೆ ಹಲವು ಸಿನಿಮಾ ಸಂಸ್ಥೆಗಳಲ್ಲಿ ತರಬೇತಿ ಪಡೆದಿರುವ, ಕೆಲಸ ಮಾಡುತ್ತಿರುವವರು ಫಿಲ್ಮೋಕ್ರಸಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಹಾಗೆಯೇ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿರುವವರೂ ಇದ್ದಾರೆ.
 
ಕಿರುಚಿತ್ರ, ಸಾಕ್ಷ್ಯಚಿತ್ರ ಮತ್ತು ಪೂರ್ಣಪ್ರಮಾಣದ ಚಲನಚಿತ್ರ ಮೂರು ರೀತಿಯ ಪ್ರಯತ್ನಗಳಿಗೂ ಈ ಪ್ರತಿಷ್ಠಾನ ಬೆಂಬಲ ನೀಡುತ್ತದೆ.
 
ಇದು ಹೊಸ ರೀತಿಯ ಪರಿಕಲ್ಪನೆಯಾಗಿದ್ದರಿಂದ ಯಾವ ರೀತಿ ಕಾರ್ಯನಿರ್ವಹಿಸಬಹುದು ಎಂಬ ಬಗ್ಗೆ ಕೆಲವು ಅನುಮಾನಗಳಿದ್ದವು. ಆದ್ದರಿಂದ ಆರಂಭದ ಆರು ತಿಂಗಳು ಪ್ರಯೋಗಾತ್ಮಕವಾಗಿ ಕೇವಲ ಮಲಯಾಳಿ ಸಿನಿಮಾಗಳಿಗೆ ಸೀಮಿತಗೊಳಿಸಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಮಲಯಾಳಂನ ನಾಲ್ಕು ಚಲನಚಿತ್ರಗಳು ಮತ್ತು ಒಂದು ಕಿರುಚಿತ್ರ ಫಿಲ್ಮೋಕ್ರಸಿಯ ಸಹಾಯದಿಂದ ರೂಪುಗೊಂಡಿದೆ. ಈ ಜನವರಿಯಿಂದ ಫಿಲ್ಮೋಕ್ರಸಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಿನಿಕರ್ಮಿಗಳಿಗೂ ಬೆಂಬಲ ನೀಡಲು ಮುಂದೆ ಬಂದಿದೆ. ಇನ್ನು ಕೆಲವು ತಿಂಗಳ ನಂತರ ಮತ್ತೆರಡು ರಾಜ್ಯಗಳಿಗೆ ವಿಸ್ತರಿಸಿಕೊಳ್ಳುವ ಯೋಚನೆಯೂ ಇದೆ. 
 
ಹೇಗೆ ನೆರವಾಗುತ್ತದೆ?
ಫಿಲ್ಮೋಕ್ರಸಿ ಸಹಕಾರ ಬಯಸುವವರು ಪ್ರತಿಷ್ಠಾನದ ಜಾಲತಾಣದ  (filmocracy.in) ಮೂಲಕ ಅರ್ಜಿ ಸಲ್ಲಿಸಬಹುದು. ಜಾಲತಾಣದಲ್ಲಿಯೇ ಅರ್ಜಿಯ ನಮೂನೆ ಲಭ್ಯವಿದೆ. ಸ್ಕ್ರಿಪ್ಟ್‌ ಮತ್ತು ಬಜೆಟ್‌ ವಿವರಗಳನ್ನೂ ನೀಡಬೇಕು. ಅದು ಇಂಗ್ಲಿಷಿನಲ್ಲಿರುವುದು ಕಡ್ಡಾಯ. 
 
ಯಾವ ಸಿನಿಮಾಗಳಿಗೆ ಬೆಂಬಲ ನೀಡಬೇಕು ಎಂಬುದನ್ನು ಫಿಲ್ಮೋಕ್ರಸಿಯ ಐದು ಸಮಿತಿಗಳು ನಿರ್ಧರಿಸುತ್ತವೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಮೂರು ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. ಸೃಜನಶೀಲ ದೃಷ್ಟಿಕೋನ, ಪ್ರಯೋಗಾತ್ಮಕ ದೃಷ್ಟಿಕೋನ, ಕಥನಾತ್ಮಕ ದೃಷ್ಟಿಕೋನ ಈ ಮೂರು ಅಂಶಗಳನ್ನು ಗಮನಿಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸಿನಿಮಾಗಳ ನಿರ್ದೇಶಕರನ್ನು ಫಿಲ್ಮೋಕ್ರಸಿ ತಂಡವೇ ಸಂಪರ್ಕಿಸುತ್ತದೆ. ನಿರ್ದೇಶಕರ ಜತೆ ಚಿತ್ರಕಥೆಯ ಬಗ್ಗೆ ಚರ್ಚಿಸಲಾಗುತ್ತದೆ. ನಿರ್ದೇಶಕರು ಬಯಸಿದರೆ ಚಿತ್ರಕಥೆಯನ್ನು ತಿದ್ದುವ ವಿಷಯದಲ್ಲಿ ಸಲಹೆ ನೀಡಲು ಒಂದು ತಂಡವೂ ಫಿಲ್ಮೋಕ್ರಸಿಯಲ್ಲಿದೆ. 
 
ಮುಂದಿನ ಚಿತ್ರೀಕರಣದ ಹಂತದಲ್ಲಿ ಫಿಲ್ಮೋಕ್ರಸಿ ಇಬ್ಬರು ಪರಿಣತ ತಂತ್ರಜ್ಞರ ಜತೆಗೆ ಚಿತ್ರೀಕರಣದ ಸಾಧನಗಳನ್ನೂ ನೀಡುತ್ತದೆ. 
 
‘ಸ್ವತಂತ್ರ ನಿರ್ದೇಶಕರಿಗೆ ಒಳ್ಳೆಯ ಸಿನಿಮಾಗಳನ್ನು ತೆಗೆಯಲು ಸಾಧ್ಯವಾಗುವ ಪ್ರಾಥಮಿಕ ಸಾಧನಗಳನ್ನು ನಾವು ಕೊಡುತ್ತೇವೆ. ಸದ್ಯಕ್ಕೆ ಚಿತ್ರೀಕರಣಕ್ಕೆ ‘ಸೋನಿ A7s2’ ಕ್ಯಾಮೆರಾ ನೀಡುತ್ತಿದ್ದೇವೆ. ಬೆಳಕಿನ ಸಾಧನಗಳನ್ನೂ ಕೊಡುತ್ತೇವೆ’ ಎಂದು ಬಾಬುರಾಜ್‌ ಮಾಹಿತಿ ನೀಡುತ್ತಾರೆ. 
 
ಫಿಲ್ಮೋಕ್ರಸಿ ಪ್ರತಿಷ್ಠಾನವನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಆರಂಭಿಸಲಾಗಿದೆ. ಈ ಹಣವನ್ನು ಸಾರ್ವಜನಿಕರು ಮತ್ತು ಆಸಕ್ತ ಸಮಾನ ಮನಸ್ಕರಿಂದಲೇ ಒಟ್ಟುಗೂಡಿಸಲಾಗಿದೆ. ಆದರೆ ಅದರ ನಿರ್ವಹಣೆಗೂ ಸಾರ್ವಜನಿಕರಿಂದಲೇ ಹಣ ಪಡೆದುಕೊಳ್ಳುವುದು ಸಮಂಜಸ ಅಲ್ಲ ಎನ್ನುವ ಕಾರಣದಿಂದ ನಿರ್ವಹಣಾ ವೆಚ್ಚಕ್ಕಾಗಿ ಇನ್ನೊಂದು ದಾರಿ ಕಂಡುಕೊಳ್ಳಲಾಗಿದೆ.
 
‘ನಮ್ಮ ಸಹಾಯ ಪಡೆದು ತಯಾರಾದ ಸಿನಿಮಾಗಳು ಶೇ. 5ರಷ್ಟು ಗಳಿಕೆಯನ್ನು ಫಿಲ್ಮೋಕ್ರಸಿಗೆ ಕೊಡಬೇಕು ಎಂದು ಕೇಳುತ್ತಿದ್ದೇವೆ. ಲಾಭ ಬಂದಿಲ್ಲವಾದರೆ ಕೊಡಬೇಕಾದ ಅವಶ್ಯಕತೆ ಇಲ್ಲ. ಅವರು ಕೊಡುವ ಹಣವನ್ನು ಸಂಸ್ಥೆಯು ಹೊಸ ಹೊಸ ಸಾಧನ ಸಲಕರಣಗಳನ್ನು ಖರೀದಿಸಲು ವಿನಿಯೋಗಿಸುತ್ತದೆ. ಅದರಿಂದ ಇನ್ನಷ್ಟು ಸಿನಿಮಾ ತಯಾರಿಕರಿಗೆ ಸಹಾಯವಾಗುತ್ತದೆ’ ಎಂದು ಸಂಸ್ಥೆ ಕೆಲಸ ಮಾಡುವ ಬಗೆಯನ್ನು ವಿವರಿಸುತ್ತಾರೆ ಬಾಬುರಾಜ್‌.
 
ಕಾರ್ಯಾಗಾರಗಳು
ಫಿಲ್ಮೋಕ್ರಸಿ ಸಿನಿಮಾಗಳಿಗೆ ನೇರವಾಗಿ ಬೆಂಬಲ ನೀಡುವುದರ ಜತೆಗೆ ಸಿನಿಮಾ ಮಾಧ್ಯಮದ ಕುರಿತು ತರಬೇತಿ ನೀಡುವ ಕೆಲಸವನ್ನೂ ಮಾಡುತ್ತಿದೆ. ಸೃಜನಶೀಲ ಮತ್ತು ತಾಂತ್ರಿಕ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ ಕಾರ್ಯಾಗಾರಗಳನ್ನು ನಡೆಸಿ ತರಬೇತಿ ನೀಡುತ್ತದೆ. ಚಿತ್ರೀಕರಣ, ಸಂಕಲನ, ರೀರೆಕಾರ್ಡಿಂಗ್‌ ಹೀಗೆ ಹಲವು ತಾಂತ್ರಿಕ ಸಂಗತಿಗಳ ಬಗ್ಗೆ ಪರಿಣತ ತಜ್ಞರು ತರಬೇತಿ ನೀಡುತ್ತಾರೆ. ಹಾಗೆಯೇ ಚಿತ್ರಕಥೆ ಬರವಣಿಗೆ, ಅಭಿನಯ, ಪಾತ್ರಗಳ ಪೋಷಣೆ, ಕಲಾವಿದರ ಆಯ್ಕೆ, ನಿರ್ದೇಶನ ಕೌಶಲಗಳ ಕುರಿತೂ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತದೆ. 
 
ಸಿನಿಮಾದಂಥ ದುಬಾರಿ ಮಾಧ್ಯಮದಲ್ಲಿ ಮಾರುಕಟ್ಟೆಯ ಲೆಕ್ಕಾಚಾರಗಳನ್ನು ಬಿಟ್ಟುಕೊಟ್ಟು ಪ್ರಯೋಗಗಳನ್ನು ಮಾಡುವುದು, ಪರ್ಯಾಯ ಸಾಧ್ಯತೆಗಳನ್ನು ಶೋಧಿಸುವವರ ಸಂಖ್ಯೆ ಯಾವಾಗಲೂ ಕಡಿಮೆಯೇ ಇರುತ್ತದೆ. ಮತ್ತು ವ್ಯವಹಾರದ ದೃಷ್ಟಿಯಿಂದ ಅಂಥ ಪ್ರಯೋಗಗಳು ಲಾಭದಾಯಕವಾಗುವುದು ತೀರಾ ಅಪರೂಪವಾದ್ದರಿಂದ ಅವರಿಗೆ ಬೆಂಬಲ ನೀಡಲು ಮುಂದೆ ಬರುವವರೂ ಕಡಿಮೆಯೇ. ಈ ನಿಟ್ಟಿನಿಂದ ನೋಡಿದರೆ ‘ಫಿಲ್ಮೋಕ್ರಸಿ’ಯಂಥ ಸಂಸ್ಥೆಗಳ ಮಹತ್ವ ಅರ್ಥವಾಗುತ್ತದೆ. ಇಂಥ ಸಂಸ್ಥೆ ಕನ್ನಡ ಸಿನಿಕರ್ಮಿಗಳಿಗೂ ಬೆಂಬಲ ನೀಡಲು ಮುಂದೆ ಬಂದಿರುವುದು ಸ್ವಾಗತಾರ್ಹ. ಕನ್ನಡದಲ್ಲಿ ಕಾಣಿಸಿಕೊಂಡಿರುವ ಹೊಸತನದ ಅಲೆ ಇಂಥ ಸಂಸ್ಥೆಗಳ ಸಹಾಯದಿಂದ ಇನ್ನಷ್ಟು ವಿಸ್ತರಿಸಿಕೊಳ್ಳಬಹುದಾದ ಸಾಧ್ಯತೆಯೂ ತೆರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT