ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು: ಇನ್ನೊಂದು ಸಲ...

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
‘ನಮ್ಮ ಸಿನಿಮಾದಲ್ಲಿ ಅಪ್ಪಟ ಪ್ರೇಮಕಥೆ ಇದೆ. ಅದಕ್ಕೆ ಗುರುಪ್ರಸಾದ್ ಅವರ ವೈಶಿಷ್ಟ್ಯದ ಲೇಪವಿದೆ’. ‘ಎರಡನೇ ಸಲ’ ಚಿತ್ರದ ಕುರಿತು ನಾಯಕ ನಟ ಧನಂಜಯ್ ಹೇಳಿದ್ದಿಷ್ಟು.
 
ಗುರುಪ್ರಸಾದ್ ನಿರ್ದೇಶನದ ‘ಮಠ’, ‘ಎದ್ದೇಳು ಮಂಜುನಾಥಾ..!’ ಚಿತ್ರ ನೋಡಿದವರಿಗೆ ಧನಂಜಯ್ ಮಾತು ಬೇಗ ಅರ್ಥವಾಗುತ್ತದೆ. ಇನ್ನೂ ಹೆಚ್ಚಿನ ಪುರಾವೆ ಬೇಕೆಂದರೆ ‘ಎರಡನೇ ಸಲ’ ಚಿತ್ರದ ಟ್ರೈಲರ್‌ ಅನ್ನು ಒಂದು ಸಲವಾದರೂ ನೋಡಿ.
 
‘ನಗರಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುವ ಅನಾಥಾಲಯ ಮತ್ತು ವೃದ್ಧಾಶ್ರಮಗಳ ಕುರಿತ ಕಥೆ ಇದೆ. ಚಿತ್ರದ ಬಗ್ಗೆ ನಾವು ಹೇಳುವುದಕ್ಕಿಂತ ಚಿತ್ರವೇ ಮಾತನಾಡಿದರೆ ಒಳ್ಳೆಯದು’ ಎಂದ ಧನಂಜಯ್, ‘ಈ ಚಿತ್ರ ಎಲ್ಲ ತಾಯಂದಿರಿಗೆ ಸಮರ್ಪಿತ’ ಎಂದರು. ನಟಿ ಲಕ್ಷ್ಮೀ ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
‘ಧನಂಜಯ್ ಅವರಂಥ ಚೆಲುವಾದ ನಟನ ಜೊತೆ ತೆರೆಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದು ಖುಷಿಯಾಗಿದೆ’ ಎಂದು ತಮ್ಮ ಉತ್ಸಾಹವನ್ನು ವಿವರಿಸಿದರು ನಾಯಕಿ ಸಂಗೀತಾ ಭಟ್. ‘ಲೈಫು ಸೂಪರ್ ಗುರು’ ರಿಯಾಲಿಟಿ ಷೋ ಸಂದರ್ಭದಲ್ಲಿ ಗುರುಪ್ರಸಾದ್ ಅವರನ್ನು ಸಂಗೀತಾ ಭಟ್ ಮೊದಲ ಬಾರಿ ಭೇಟಿ ಆಗಿದ್ದು. ಅಲ್ಲಿ ಅವರ ಪ್ರತಿಭೆ ಗುರ್ತಿಸಿದ ಗುರುಪ್ರಸಾದ್ ತಮ್ಮ ಚಿತ್ರದಲ್ಲಿ ನಟನೆಯ ಅವಕಾಶ ನೀಡಿದ್ದಾರೆ. ಈ ಚಿತ್ರದಲ್ಲಿ ಅವರು ಮೇಕಪ್ ಇಲ್ಲದೇ ನಟಿಸಿದ್ದಾರಂತೆ.
 
ಚಿತ್ರ ತಡವಾಗಿದ್ದು ನಿರ್ಮಾಪಕ ಯೋಗೇಶ್ ನಾರಾಯಣ ಅವರಿಗೆ ಬೇಸರ ತರಿಸಿದ್ದರೂ ಸಿನಿಮಾದ ಬಗ್ಗೆ ಅವರದು ತುಂಬುನಂಬಿಕೆ. ‘ತಡವಾಗಿದ್ದರೂ ಅದನ್ನೆಲ್ಲ ಮರೆಸುವಂತಿದೆ ಚಿತ್ರ. ಈ ಚಿತ್ರಕ್ಕೆ ಗುರುಪ್ರಸಾದ್ ಸೂಕ್ತ ನಿರ್ದೇಶಕರು’ ಎಂದರು ಯೋಗೇಶ್. ‘ಧನಂಜಯ್ ಅವರ ನಟನಾ ಕೌಶಲ ಈ ಚಿತ್ರದಲ್ಲಿ ಇನ್ನಷ್ಟು ಹೆಚ್ಚಿದೆ’ ಎಂದರು. ಸಂಗೀತ ನಿರ್ದೇಶಕ ಅನೂಪ್ ಸೀಳಿನ್‌ಗೆ ಅವರು ‘ರಾಗನಿಧಿ’ ಬಿರುದನ್ನೂ ನೀಡಿದರು.
 
ಗಾಯಕಿ ಬಿ.ಆರ್. ಛಾಯಾ ಒಂದು ಹಾಡಿಗೆ ದನಿಯಾಗಿದ್ದಾರೆ. ಎಲ್ಲ ಹಾಡುಗಳಿಗೂ ಅನೂಪ್ ಸೀಳಿನ್ ಕಂಠವಿದೆ. ಗುರುಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಆದರೆ ನಿರ್ದೇಶಕ ಗುರುಪ್ರಸಾದ್ ಅವರೇ ಸೀಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿರುವುದು ಚರ್ಚೆಯ ವಿಷಯವಾಗಿತ್ತು.
 
ನಿರ್ದೇಶಕ ವಿಜಯ್ ಪ್ರಸಾದ್ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡವನ್ನು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT