ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಮನುಷ್ಯನಿಗೆ ‘ಧೈರ್ಯ’ ಬಂದರೆ...

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
‘ಎಲ್ಲವನ್ನೂ ಸಹಿಸಿಕೊಂಡು ಇರುವ ಸಾಮಾನ್ಯ ಮನುಷ್ಯ ಧೈರ್ಯದಿಂದ ಸಿಡಿದೆದ್ದರೆ ಏನಾಗುತ್ತದೆ ಎಂಬುದೇ ನಮ್ಮ ಸಿನಿಮಾದ ತಿರುಳು. ನಾಯಕ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಕಾಲೇಜು ಹುಡುಗನಾಗಿ ತನ್ನ ಪಾಡಿಗೆ ತಾನಿದ್ದವನನ್ನು ಒಂದು ಪರಿಸ್ಥಿತಿ ಸಿಡಿದೇಳುವಂತೆ ಮಾಡುತ್ತದೆ. ಭಯ ಮತ್ತು ಧೈರ್ಯ ಇವೆರಡರ ಘರ್ಷಣೆಯಲ್ಲಿ ಮುಗ್ಧತೆಯನ್ನು ಮೀರಿ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾನೆ ಎಂಬುದೇ ‘ಧೈರ್ಯಂ’ ಸಿನಿಮಾದ ಕಥೆ’ ಎಂದು ವಿವರವಾಗಿಯೇ ತಮ್ಮ ಸಿನಿಮಾದ ಕಥೆಯನ್ನು ವಿವರಿಸಿದರು ಶಿವತೇಜಸ್‌.
 
ಈ ಹಿಂದೆ ‘ಮಳೆ’ಯಲ್ಲಿ ನೆನೆಯುತ್ತ ನಿರ್ದೇಶಕನ ಪಟ್ಟ ಏರಿದ್ದ ಶಿವತೇಜಸ್‌ ಅವರು ‘ಧೈರ್ಯಂ’ ಮೂಲಕ ವೃತ್ತಿಜೀವನದ ಮತ್ತೊಂದು ಹೆಜ್ಜೆಯನ್ನು ಇಟ್ಟಿದ್ದಾರೆ.
 
‘ಈ ಚಿತ್ರದ ಪ್ರತಿ ಪಾತ್ರಗಳೂ ಪ್ರೇಕ್ಷಕರು ತಮ್ಮೊಳಗಿನ ಒಳಿತು ಕೆಡಕುಗಳ ಬಗೆಗೆ ಯೋಚಿಸುವಂತೇ ಮಾಡುತ್ತವೆ’ ಎನ್ನುತ್ತಾರೆ ಶಿವತೇಜಸ್‌. ಅಜಯ್‌ ರಾವ್‌ ನಾಯಕನಾಗಿರುವ ಈ ಚಿತ್ರಕ್ಕೆ ದಾವಣಗೆರೆಯ ಸುದೀಪನಾ ಎಂಬ ಹೊಸ ಹುಡುಗಿ ನಾಯಕಿ.  ಈ ಹಿಂದೆ ಕಿರುತೆರೆ ನಟಿಯಾಗಿದ್ದ ಅದಿತಿ ‘ಧೈರ್ಯಂ’ ಮೂಲಕ ಹಿರಿತೆರೆಗೆ ಅಡಿಯಿಡುತ್ತಿದ್ದಾರೆ. 
 
‘ಈ ಚಿತ್ರದಲ್ಲಿ ನಾನು ವಿಶಿಷ್ಟ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಪ್ರಾಕ್ಟಿಕಲ್‌ ಆಗಿ ಬದುಕುವ, ತನ್ನದೇ ಕನಸುಗಳನ್ನು ಕಟ್ಟಿಕೊಂಡು ಅವನ್ನು ನನಸು ಮಾಡಿಕೊಳ್ಳಲು ಹವಣಿಸುವ ಹುಡುಗಿ’ ಎಂದು ಅದಿತಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಬೆಂಗಳೂರಿನ ಸುತ್ತಮುತ್ತಲನ ಸ್ಥಳಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. 
 
ಸಿನಿಮಾದಲ್ಲಿನ ನಾಲ್ಕು ಗೀತೆಗಳಿಗೆ ಎಮಿಲ್ ಸಂಗೀತ ಸಂಯೋಜನೆ ಮಾಡಿರುವುದಲ್ಲದೇ ಒಂದು ಹಾಡನ್ನು ಹಾಡಿದ್ದಾರೆ ಕೂಡ. ರವಿಶಂಕರ್, ಇವರೊಂದಿಗೆ ಸಾಧುಕೋಕಿಲ, ಹೊನ್ನವಳ್ಳಿ ಕೃಷ್ಣ, ಸಂಗೀತಾ, ಪದ್ಮಿನಿರಾವ್ ಮುಖ್ಯಭೂಮಿಕೆಯಲ್ಲಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರುವ ಹವಣಿಕೆ ಚಿತ್ರತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT