ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು ನಗುತಾ ಮುತ್ತು!

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
‘ಸ್ಮೈಲ್ ಪ್ಲೀಸ್’ ಸಿನಿಮಾದಲ್ಲಿ ಒಂದು ದೃಶ್ಯ ಇದೆ. ನಾಯಕ ಗುರುನಂದನ್ ನಾಯಕಿ ಕಾವ್ಯಾ ಶೆಟ್ಟಿಯ ಬಾಯಿಗೆ ಬಾಯಿಟ್ಟು ಮುತ್ತು ಕೊಡುತ್ತಾರೆ. ಇದು ಹಿಂದಿ ಸಿನಿಮಾ ದೃಶ್ಯಗಳನ್ನು ನೆನಪಿಸುವಂತಿದೆ ಎಂಬುದು ಕೆಲವರ ಮಾತು. ನಿಜ ಹೇಳಬೇಕೆಂದರೆ ಈ ದೃಶ್ಯವನ್ನು ಸಂಯೋಜಿಸಿದ್ದು ಸ್ವತಃ ಚಿತ್ರದ ನಿರ್ಮಾಪಕ ಕೆ. ಮಂಜು! ಈ ವಿಚಾರ ಹೇಳಿದ್ದು ಬೇರೆ ಯಾರೂ ಅಲ್ಲ; ಚಿತ್ರತಂಡದ ಸದಸ್ಯ ರಂಗಾಯಣ ರಘು.
 
ಈ ದೃಶ್ಯದ ಬಗ್ಗೆ ಕಾವ್ಯಾ ಅಪಸ್ವರ ಎತ್ತಿದ್ದರಂತೆ. ಆದರೆ ನಿರ್ಮಾಪಕರು, ‘ಬಾಲಿವುಡ್ ಸಿನಿಮಾಗಳಲ್ಲಿ ಇನ್ನೂ ಏನೇನೆಲ್ಲ ಮಾಡ್ತಾರೆ. ಇದು ಕಥೆಗೆ ಬೇಕು ಅಷ್ಟೇ’ ಎಂದಾಗ ತಕರಾರಿಲ್ಲದೆ ಒಪ್ಪಿಕೊಂಡರಂತೆ. ಇದನ್ನು ಮಂಜು ಅವರೇ ಹೇಳಿದ್ದು. ಈ ಮುತ್ತಿನ ಮಾತುಕತೆ ನಡೆದಾಗ ಪಕ್ಕದಲ್ಲೇ ಕೂತಿದ್ದ ಕಾವ್ಯಾ ನಾಚಿ ನೀರಾಗಿದ್ದರು. ಇದೆಲ್ಲ ನಡೆದಿದ್ದು ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ.
 
‘ಏನೋ ಒಂದು ಸಿನಿಮಾ ಮಾಡಿದರೆ ಆಯ್ತು ಎಂಬ ಕಾರಣಕ್ಕೆ ಸಿನಿಮಾ ಮಾಡಿಲ್ಲ. ಸಾಮಾನ್ಯ ಪ್ರೇಮಕಥೆಗಳ ಮಾದರಿಯ ಹೊರತಾಗಿ, ತತ್ವ ಬೋಧನೆ ಮಾಡದೇ ತಮಾಷೆ, ತಲೆಹರಟೆಯ ಮೂಲಕವೇ ಸಿನಿಮಾ ಮಾಡಿದ್ದೇನೆ’ ಎಂದರು ನಿರ್ದೇಶಕ ರಘು ಸಮರ್ಥ.
 
ಚಿತ್ರದ ಆರಂಭದಿಂದ ಕೊನೆಯವರೆಗೂ ನಗಿಸುವ ಶಪಥ ತೊಟ್ಟಿದ್ದಾರೆ ನಿರ್ದೇಶಕರು ಎಂದು ಚಿತ್ರದ ನಗಿಸುವ ಗುಣದ ಬಗೆಗೆ ಮಾತನಾಡಿದರು ಕಾವ್ಯಾ. ‘ಫಸ್ಟ್ ರ್‍ಯಾಂಕ್ ರಾಜು’ ಯಶಸ್ಸಿನ ನಂತರ ಗುರುನಂದನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
 
ನೇಹಾ ಶೆಟ್ಟಿ, ರಂಗಾಯಣ ರಘು, ಶ್ರೀನಿವಾಸಪ್ರಭು ವೇದಿಕೆಯಲ್ಲಿದ್ದರು. ನಟ ಯಶ್ ಸೀಡಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಸಂಗೀತ ಸಂಯೋಜಿಸಿರುವ ಅನೂಪ್ ಸೀಳಿನ್, ‘ಚಿತ್ರದಲ್ಲಿ ಯಾವ ಪ್ರೇಕ್ಷಕನಿಗೂ ಮುಜುಗರ ಆಗುವಂಥ ಸನ್ನಿವೇಶಗಳಿಲ್ಲ’ ಎಂದರು. ನಾಲ್ಕು ಹಾಡುಗಳಿಗೆ ಅವರು ರಾಗ ಸಂಯೋಜಿಸಿದ್ದು, ಜಯಂತ ಕಾಯ್ಕಿಣಿ, ಅರಸು ಅಂತಾರೆ, ರಘು ಸಮರ್ಥ್ ಸಾಹಿತ್ಯ ರಚಿಸಿದ್ದಾರೆ. ಜೆ.ಎಸ್. ವಾಲಿ ಛಾಯಾಗ್ರಹಣ, ಜೋ.ನಿ. ಹರ್ಷ ಸಂಕಲನ ಇದೆ. ಫೆಬ್ರುವರಿ 24ರಂದು ಚಿತ್ರವನ್ನು ತೆರೆಗೆ ತೆರುವುದಾಗಿ ನಿರ್ಮಾಪಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT