ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡಯ್ಯನವರ ಪಿಟೀಲು ಸಂಭ್ರಮದ ‘ವಾಣಿ’

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ಪಿಟೀಲು ವಾದನದಲ್ಲಿ ‘ಕರ್ನಾಟಕ ಸಂಗೀತ’ ಕ್ಷೇತ್ರದ ಅಗ್ರಮಾನ್ಯ ಎನ್ನಿಸಿಕೊಂಡಿದ್ದ ಮೈಸೂರು ಟಿ. ಚೌಡಯ್ಯನವರು ಗಾಯಕರೂ ಆಗಿದ್ದರು. ಅಷ್ಟೇ ಅಲ್ಲ, ಸಿನಿಮಾದಲ್ಲಿ ನಾಯಕ ನಟರಾಗಿಯೂ ಅಭಿನಯಿಸಿದ್ದರು. ಇವರ ವಾದನ–ಗಾಯನ–ಅಭಿನಯ ಎಲ್ಲಕ್ಕೂ ಸಾಕ್ಷಿಯಾದ ಏಕೈಕ ಕನ್ನಡ ಚಿತ್ರ ‘ವಾಣಿ’.
ಹೊಸ ಮಾಧ್ಯಮ ಚಲನಚಿತ್ರ ಜನರನ್ನು ಆವರಿಸಿಕೊಳ್ಳುತ್ತಿದ್ದ ಸಮಯವದು. ಆ ಕಾಲಘಟ್ಟದಲ್ಲಿ ಅತಿರಥ ಮಹಾರಥ ಸಂಗೀತಗಾರರಾದ ಎಂ.ಎಸ್‌. ಸುಬ್ಬಲಕ್ಷ್ಮಿ,  ಮಹಾರಾಜಪುರಂ ವಿಶ್ವನಾಥ ಅಯ್ಯರ್‌, ಜಿ.ಎನ್‌. ಬಾಲಸುಬ್ರಮಣ್ಯಂ, ಮುಸುರಿ ಸುಬ್ರಮಣ್ಯ ಅಯ್ಯರ್‌ ಅವರುಗಳೆಲ್ಲಾ ಬಣ್ಣಹಚ್ಚಿ ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದ್ದರು. 
 
ದಕ್ಷಿಣ ಭಾರತದಲ್ಲಿ ಚೌಡಯ್ಯನವರು ಅಷ್ಟರಲ್ಲಾಗಲೇ ‘ಪಿಟೀಲು ಸ್ಟಾರ್‌’ ಆಗಿದ್ದರು. ಪ್ರಸಿದ್ಧ ವಿದ್ವಾಂಸರೆಲ್ಲ ಚೌಡಯ್ಯನವರ ಪಿಟೀಲು ಸಹವಾದನಕ್ಕೆ ಕಾಯುತ್ತಿದ್ದ ಸನ್ನಿವೇಶಗಳೂ ಇದ್ದವು.
 
ತಮಿಳು ಚಿತ್ರಗಳಲ್ಲಿ ಕರ್ನಾಟಕ ಸಂಗೀತಗಾರರೆಲ್ಲ ನಟಿಸುತ್ತಿದ್ದು, ತಾವೇಕೆ ಕನ್ನಡ ಚಿತ್ರವೊಂದರಲ್ಲಿ ಪಾತ್ರ ಮಾಡಬಾರದು ಎಂದುಕೊಂಡರು ಚೌಡಯ್ಯ. ಕನ್ನಡನಾಡಿನಲ್ಲಿ ಸಿನಿಮಾ ಇನ್ನೂ ಸರಿಯಾಗಿ ಕಾಲೂರಿರಲಿಲ್ಲ. ತಯಾರಿಕೆಗೆ ಅಗತ್ಯವಾದ ಸೌಲಭ್ಯಗಳೆಲ್ಲ ಇದ್ದುದು ನೆರೆಯ ರಾಜ್ಯಗಳಲ್ಲಿ.
 
ಮೈಸೂರು ಆಗ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ. ನೃತ್ಯ, ನಾಟಕ, ಸಂಗೀತ ಎಲ್ಲವೂ ಜರಗುತ್ತಿದ್ದ ಸ್ಥಳ. ಚೌಡಯ್ಯನವರೂ ಇದೇ ಊರಿನಲ್ಲಿ ಸಂಗೀತದ ಸಾಮು ತೆಗೆದವರು. ಗೆಳೆಯರಲ್ಲಿ ಚಿತ್ರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದರು.
 
ಗೆಳೆಯರ ಗುಂಪು ಒಂದಾಗಿ ಚಿತ್ರ ತಯಾರಿಕೆಗೆ ನಿರ್ಧರಿಸಿತು. ಆದರೆ ಇವರಲ್ಲಿ ಯಾರಿಗೂ ಚಿತ್ರನಿರ್ಮಾಣದ ಅನುಭವವಿರಲಿಲ್ಲ. ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಕೆ. ಹಿರಣ್ಣಯ್ಯನವರು ಸಾಹಿತ್ಯ ರಚನೆಯಲ್ಲೂ ಪರಿಣಿತರಾಗಿದ್ದರಿಂದ, ಮದ್ರಾಸ್‌ನ ಎ.ವಿ. ಮೇಯಪ್ಪ ಚೆಟ್ಟಯಾರ್‌ ಚಿತ್ರಗಳಲ್ಲಿ ಕೆಲಸ ಮಾಡಲು ಆಹ್ವಾನಿತರಾಗಿದ್ದರು. ಪಿಟೀಲು ಚೌಡಯ್ಯನವರ ನೇತೃತ್ವದಲ್ಲಿ ಕನ್ನಡ ಸಿನಿಮಾ ಎಂದು ತಿಳಿದಾಗ ಹಿರಣ್ಣಯ್ಯನವರೂ ಇದರಲ್ಲಿ ಗೆಳೆಯರೊಂದಿಗೆ ಕೈ ಜೋಡಿಸಿದರು. ‘ಎಚ್‌.ಎಸ್‌.ಆರ್‌.ಜಿ.ಸಿ ಸಂಸ್ಥೆ’ ಲಾಂಛನದಲ್ಲಿ ‘ವಾಣಿ’ ಸೆಟ್ಟೇರಿತು. ಅದು ರೂಪುಗೊಂಡಿದ್ದು ಕೊಯಮತ್ತೂರಿನ ಸೆಂಟ್ರೆಲ್‌ ಸ್ಟುಡಿಯೋದಲ್ಲಿ.
 
ಚೌಡಯ್ಯನವರೇ ಚಿತ್ರದ ನಾಯಕ ನಟ. ಚಿತ್ರದ ಸಂಗೀತ ನಿರ್ದೇಶನವೂ ಅವರದೇ. ರಂಗಭೂಮಿ ಹಾಗೂ ಸಿನಿಮಾ ಅನುಭವಿ ಕೆ. ಹಿರಣ್ಣಯ್ಯ ಚಿತ್ರ ಸಾಹಿತ್ಯ ರಚನೆ ಹೊಣೆ ವಹಿಸಿಕೊಂಡರು. ಜೊತೆಗೆ, ಛಾಯಾಗ್ರಾಹಕ ಎಂ.ಎನ್‌. ಗೋಪಾಲ್‌ರೊಂದಿಗೆ ಚಿತ್ರದ ನಿರ್ದೇಶನದ ಜವಾಬ್ದಾರಿಗೂ ಹೆಗಲು ಕೊಟ್ಟರು.
 
‘ಮೃಚ್ಛಕಟಿಕ’ ಮೂಕಿ ಚಿತ್ರ ಕನ್ನಡನಾಡಿನಲ್ಲಿ ನಿರ್ಮಾಣವಾದಾಗ ಸಾಹಿತ್ಯ ಹಾಗೂ ರಂಗಭೂಮಿ ದಿಗ್ಗಜರೆಲ್ಲರೂ ಕೈ ಜೋಡಿಸಿದಂತೆ ‘ವಾಣಿ’ ಚಿತ್ರಕ್ಕೂ ಹಲವು ಗಣ್ಯರು ಒಂದಾಗಿದ್ದರು. ಹಿರಣ್ಣಯ್ಯನವರು ಖಳನಾಗಿ ಕಾಣಿಸಿಕೊಂಡರೆ – ಬಳ್ಳಾರಿ ಲಲಿತಾ, ಪಂಡರಿಬಾಯಿ, ಮುಸುರಿ ಕೃಷ್ಣಮೂರ್ತಿ, ಬಳ್ಳಾರಿ ರತ್ನಮಾಲ, ಎಂ.ಎಸ್‌. ಮಾಧವರಾವ್‌, ವಿ. ನಾರಾಯಣರಾವ್‌, ಸುಬ್ಬಣ್ಣ, ಕೆ.ವಿ. ಅಚ್ಚುತರಾವ್‌ ಇವರೆಲ್ಲರೊಟ್ಟಿಗೆ, ಬಾಲ ಕಲಾವಿದರಾಗಿ ಕಾಣಿಸಿಕೊಂಡವರು ಮಾಸ್ಟರ್‌ ಹಿರಣ್ಣಯ್ಯ.
 
ನಾಟಕದ ಮನೆಯಂತೆ ಕೊಯಮತ್ತೂರಿನಲ್ಲಿ ಸಿನಿಮಾ ಮನೆ ಮಾಡಿ, ಎಲ್ಲಾ ಕಲಾವಿದ–ತಂತ್ರಜ್ಞರು ಒಂದೆಡೆ ಇದ್ದು ಚಲನಚಿತ್ರ ತಯಾರಿಕೆಯಲ್ಲಿ ಪಾಲ್ಗೊಂಡರು.
 
ರೆಕಾರ್ಡಿಂಗ್‌ ಅಥವ ರೀ–ರೆಕಾರ್ಡಿಂಗ್‌ ವ್ಯವಸ್ಥೆ ಆಗ ಇರಲಿಲ್ಲ. ನಟ ನಟಿಯರೆಲ್ಲ ತಮ್ಮ ಹಾಡುಗಳನ್ನು ತಾವೇ ಹಾಡಬೇಕಿತ್ತು. ಚಿತ್ರೀಕರಣ ಸಮಯದಲ್ಲೇ ಹಾಡುಗಳ ಧ್ವನಿಮುದ್ರಣವೂ ಆಗಬೇಕಿತ್ತು. ಅಲ್ಲಿಯೇ ವಾದ್ಯ ಮೇಳವೂ ಇರುವುದು ಅನಿವಾರ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ‘ವಾಣಿ’ ತಾಂತ್ರಿಕವಾಗಿ, ಅಭಿನಯ ದೃಷ್ಟಿಯಿಂದಲೂ ಉತ್ತಮವಾಗಿ ಮೂಡಿಬಂದಿರುವುದು ಆಗಿನ ಕಾಲದಲ್ಲಿ ವೃತ್ತಿಪರತೆ ಹಾಗೂ ಬದ್ಧತೆಗೆ ನಿದರ್ಶನ.
 
ಪ್ರಧಾನ ಪಾತ್ರಧಾರಿಗಳಾಗಿದ್ದ ಚೌಡಯ್ಯನವರು ಪಾತ್ರ ನಿರ್ವಹಣೆಯಲ್ಲಿ ತನ್ಮಯರಾಗಿ ಹೋಗಿದ್ದಾರೆ. ತೀರ ಸಹಜವೆನ್ನುವಂತಿದೆ ಅವರ ಅಭಿನಯ. ಜೊತೆಗೆ ಅದ್ಭುತವಾದ ಪಿಟೀಲು ವಾದನ.
 
ಕಲಾಪ್ರೌಢಿಮೆಯನ್ನು ಸಮರ್ಥವಾಗಿ ಹೊರ ಸೂಸುವ ‘ವಾಣಿ’ ಚಿತ್ರದಲ್ಲಿ ಚೌಡಯ್ಯನವರ ಕಂಠಸಿರಿಯನ್ನು ಕೇಳಿ ತಲೆದೂಗಬೇಕು. ಇಲ್ಲಿ ಅವರಿಗೆ ಎಲ್ಲವೂ ಸಹಜವೆನ್ನುವಂತಾಗಿದೆ.
 
ಸಂಪ್ರದಾಯಸ್ಥ ಸಂಗೀತಗಾರರು ಚಲನಚಿತ್ರ ರಂಗವನ್ನು ಕಂಡರೆ ಮಾರುದೂರ ನಿಲ್ಲುತ್ತಿದ್ದ ಆ ಕಾಲದಲ್ಲಿ ತೀರಾ ಮಡಿವಂತರೆಂದೇ ಖ್ಯಾತರಾಗಿದ್ದ ಹಿರಿಯ ಗಾಯಕ ಚೆಂಬೈ ವೈದ್ಯನಾಥ ಭಾಗವತರ್‌ ಹಾಗೂ ಮೃದಂಗ ಪಟು ಪಾಲ್ಗಾಟ್‌ ಟಿ.ಎಸ್‌. ಮಣಿ ಅಯ್ಯರ್‌ ಅವರನ್ನು ಚಲನಚಿತ್ರ ಆವರಣಕ್ಕೆ ತಂದ ಕೀರ್ತಿಯೂ ‘ವಾಣಿ’ ಕನ್ನಡ ಚಿತ್ರಕ್ಕೆ ಸಲ್ಲುತ್ತದೆ. ಇವರ್‍ಯಾರೂ ‘ವಾಣಿ’ಯಲ್ಲಿ ಬಣ್ಣ ಹಚ್ಚಿ ಅಭಿನಯಿಸಲಿಲ್ಲ. ಆದರೆ ‘ವಾಣಿ’ ನಾಯಕ ಟಿ. ಚೌಡಯ್ಯನವರೊಂದಿಗೆ ಅಪೂರ್ವ ಸಂಗೀತ ಕಛೇರಿಯನ್ನು ಚಿತ್ರದಲ್ಲಿ ನಡೆಸಿಕೊಟ್ಟಿದ್ದಾರೆ. ಚಿತ್ರದಲ್ಲಿ ಇದೊಂದು ಮಹತ್ವದ ಸನ್ನಿವೇಶ.
 
‘ವಾಣಿ’ ಚಿತ್ರದ ಸಂಕಲನ, ಮುಂದೆ ಹೆಸರಾಂತ ನಿರ್ದೇಶಕರಾದ ಸಿ.ವಿ. ರಾಜು ಅವರದು. ಚಿತ್ರ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲೂ ಗೆದ್ದಿತು. ನಿರ್ಮಾಪಕರು ಒಳ್ಳೆಯ ಲಾಭ ಗಳಿಸಿದರಾದರೂ ಮತ್ತೆ ಸಿನಿಮಾ ನಿರ್ಮಾಣಕ್ಕೆ ಇಳಿಯಲಿಲ್ಲ. ನಾಲ್ಕು ತಂತಿಗಳಿದ್ದ ಪಿಟೀಲನ್ನು ಏಳು ತಂತಿಗಳಿಗೆ ಆವಿಷ್ಕರಿಸಿ ಪ್ರಸಿದ್ಧರಾದ ಮೈಸೂರು ಟಿ. ಚೌಡಯ್ಯನವರೂ ಮತ್ತೆ ಚಿತ್ರರಂಗಕ್ಕೆ ಬರಲಿಲ್ಲ.
 
‘ವಾಣಿ’ಯಲ್ಲಿ ಪಾಲ್ಗೊಂಡ ಬಳ್ಳಾರಿ ಲಲಿತಾ, ಪಂಡರಿಬಾಯಿ, ಮುಸುರಿ ಕೃಷ್ಣಮೂರ್ತ, ಮೇಕಪ್‌ ಸುಬ್ಬಣ್ಣ, ಎಂ.ಎಸ್‌. ಮಾಧವರಾವ್‌ ಚಿತ್ರರಂಗದಲ್ಲಿ ಮುಂದುವರೆದು ಹೆಸರು ಮಾಡಿದರು. ಮಾಸ್ಟರ್‌ ಹಿರಣ್ಣಯ್ಯ ರಂಗಭೂಮಿಯಲ್ಲಿ ಖ್ಯಾತರಾದರು.
 
ಸಂಗೀತ–ಸಾರಸ್ವತ ದಿಗ್ಗಜರೆಲ್ಲ ಒಂದೆಡೆ ಸೇರಿದ್ದ ‘ವಾಣಿ’ ಕನ್ನಡ ಸಿನಿಮಾ ಚರಿತ್ರೆಯಲ್ಲಿ ದಾಖಲಾದರೂ ಚಿತ್ರದ ಪ್ರತಿ ಸಿಕ್ಕಿರಲಿಲ್ಲ. ಕೊಡಗಿನ ಚಿತ್ರವಿತರಕರ ಅಟ್ಟದ ಮೇಲಿದ್ದ ಈ ಸಿನಿಮಾ ದಶಕಗಳ ಬಳಿಕ ಸಿಕ್ಕಿ, ಹೊಸ ತಂತ್ರಜ್ಞಾನದ ನೆರವಿನೊಡನೆ ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಾಗುವಂತೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT