ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹಚ್ಚೆ ಕೇಳೋರು ಹೆಚ್ಚು

ಫ್ಯಾಷನ್‌
Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಯುವಕ, ಯುವತಿಯರ ಫ್ಯಾಷನ್‌ನ ಭಾಗವಾಗಿ ಬಹಳ ದಿನಗಳೇ ಆಗಿವೆ.  ನೆಚ್ಚಿನ ನಟ, ನಟಿಯರು, ಕ್ರೀಡಾಪಟುಗಳು ಹಾಕಿಸಿಕೊಳ್ಳುವ ಟ್ಯಾಟೂ ಹೊಸ ಟ್ರೆಂಡ್‌ ಆಗುತ್ತದೆ. ಅಲ್ಲದೇ ಕಾಸ್ಮೆಟಿಕ್‌, ಲಿಪ್‌ ಲೈನರ್‌ ಹಾಗೂ ಐ ಲೈನರ್‌, ಐಬ್ರೊ ಟ್ಯಾಟೂಗಳಿಗೆ ಬೇಡಿಕೆ ಹೆಚ್ಚಿದೆ.
 
ಹುಬ್ಬಿನ ಸುಂದರ ಆಕಾರಕ್ಕಾಗಿ ಮಹಿಳೆಯರು ಐಬ್ರೊ ಟ್ಯಾಟೂ ಮೊರೆ ಹೋಗುತ್ತಿದ್ದಾರೆ. ಇದು ಶಾಶ್ವತವಾಗಿ ಉಳಿಯುವುದರಿಂದ ಅವರ ಮುಖದ ಅಂದಕ್ಕೆ ತಕ್ಕಂತೆ ಹುಬ್ಬಿನ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಈ ಟ್ಯಾಟೂವಿಗೆ ಮಧ್ಯ ವಯಸ್ಸಿನ ಮಹಿಳೆಯರಿಂದ ಹೆಚ್ಚು ಬೇಡಿಕೆಯಿದೆಯಂತೆ.  
 
ವಿಶೇಷ ಸೂಜಿ ಬಳಕೆ
‘ಐಬ್ರೊ ಟ್ಯಾಟೂ ಹಾಕಲು ವಿಶೇಷ ಸೂಜಿಗಳನ್ನು ಬಳಸುತ್ತೇವೆ. ರಷ್ಯಾ ಕಲಾವಿದರಿಂದ ಈ ಹಚ್ಚೆ ಹಾಕುವ ಕಲೆಯನ್ನು ಕಲಿತಿದ್ದೇನೆ. ಮೊದಲು ಮುಖಕ್ಕೆ ಹೊಂದುವಂತೆ  ಹುಬ್ಬುಗಳ ಆಕಾರ ಮಾಡಿಕೊಳ್ಳುತ್ತೇನೆ. ನಂತರ ಹಚ್ಚೆ ಹಾಕಲು ಮುಂದಾಗುತ್ತೇನೆ. ಎರಡು ಗಂಟೆ ಸಮಯವಾಗುತ್ತದೆ’ ಎನ್ನುತ್ತಾರೆ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಬ್ರಹ್ಮ ಟಾಟ್ಯೂ ಸೆಂಟರ್‌ನ ಗಿರೀಶ್‌.
 
ಹಾಲಿವುಡ್‌ ನಟಿ ಏಂಜಲೀನಾ ಜೋಲಿ, ಪ್ರಿಯಾಂಕಾ ಚೋಪ್ರಾ ತುಟಿಗಳಿಗೆ ಮಾಡಿಸಿಕೊಂಡಿರುವ ಲಿಪ್‌ ಕಲರ್‌ ಟ್ಯಾಟೂವನ್ನು ಕಾಲೇಜು ಯುವತಿಯರು ಹೆಚ್ಚಾಗಿ ಬಿಡಿಸಿಕೊಳ್ಳುತ್ತಿದ್ದಾರೆ. ಈ ಟ್ಯಾಟೂವಿನಿಂದ ತುಟಿಯ ಬಣ್ಣ ಬದಲಾಗುವುದಲ್ಲದೇ ಕೊಂಚ ಉಬ್ಬಿದಂತೆ ಕಾಣುತ್ತದೆ. ಈ ಟ್ಯಾಟೂ ಹಾಕಿಸಿಕೊಳ್ಳಲು ಮೂರು ಗಂಟೆ ಬೇಕಾಗುತ್ತದೆ. ಗಿಡಮೂಲಿಕೆಯಿಂದ ತಯಾರಿಸಿದ ಇಂಕ್‌ಗಳನ್ನು ಟ್ಯಾಟೂಗೆ ಬಳಸಲಾಗುತ್ತದೆ ಎನ್ನುತ್ತಾರೆ, ಗಿರೀಶ್‌.
 
‘ಯುರೋಪ್‌, ಲಂಡನ್‌ನಿಂದ ಇಂಕ್‌ಗಳನ್ನು ತರಿಸುತ್ತೇವೆ. ಕಾಲೇಜು ವಿದ್ಯಾರ್ಥಿನಿಯರಲ್ಲದೇ ರೂಪದರ್ಶಿಯರು ಈ ಟ್ಯಾಟೂ ಹಿಂದೆ ಬಿದ್ದಿದ್ದಾರೆ. ಐ ಲೈನರ್‌ ಹಾಗೂ ಲಿಪ್‌ ಕಲರ್‌ ಟ್ಯಾಟೂಗಳು ಶಾಶ್ವತವಾಗಿರುತ್ತವೆ.  ಆದ್ದರಿಂದ ತರಬೇತಿ ಪಡೆದ ಕಲಾವಿದರಿಂದ ಹಚ್ಚೆ ಹಾಕಿಸಿಕೊಳ್ಳುವುದು ಉತ್ತಮ. ಕಡಿಮೆ ಬೆಲೆಗೆ ಹಾಕುವ ಟ್ಯಾಟೂ ಸೆಂಟರ್‌ಗಳ ಬಗ್ಗೆಯೂ ಜಾಗೃತರಾಗಿರಿ’ ಎಂದು ಸಲಹೆ ನೀಡುತ್ತಾರೆ ಗಿರೀಶ್‌.
 
ಲಿಪ್‌ ಕಲರ್‌ ಟ್ಯಾಟೂ ಹಾಕಿಸಿಕೊಂಡರೆ ಲಿಪ್‌ಸ್ಟಿಕ್‌ ಹಾಕಿಕೊಳ್ಳುವ ಅಗತ್ಯವಿಲ್ಲವಂತೆ. ನಸುಗೆಂಪು, ಕಡುಗೆಂಪು ಬಣ್ಣದಲ್ಲಿ ಲಿಪ್‌ ಕಲರ್‌ ಟ್ಯಾಟೂ ಹಾಕಲಾಗುತ್ತದೆ.
‘ನಮ್ಮಲ್ಲಿ ಬರುವ ಯುವಕರು ಹೆಚ್ಚಾಗಿ ಫೈಟರ್‌, ಬುದ್ಧನ ಮುಖ, ಸಿಂಹ, ಓಂ ಚಿಹ್ನೆ, ಗಡಿಯಾರ, ಸಾಹಿತಿಗಳ ಮುಖ, ಅಪ್ಪ, ಅಮ್ಮನ ಮುಖದ ಹಚ್ಚೆಗಳನ್ನೇ ಹಾಕಿಸಿಕೊಂಡಿದ್ದಾರೆ. ಕೆಲವರು ತಮಗಿಷ್ಟದ ಫೋಟೊ ತರುತ್ತಾರೆ. ಯುವತಿಯರು ಚಿಟ್ಟೆ, ಏಂಜೆಲ್‌, ನಕ್ಷತ್ರ, ಗೂಬೆ, ಡಾಲ್ಫಿನ್‌, ಮೀನು, ‘ಹಾರ್ಟ್‌ ಬೀಟ್‌’ ಚಿತ್ರಗಳನ್ನು ಇಷ್ಟಪಡುತ್ತಾರೆ. ಐದು ವರ್ಷಗಳಿಂದ ಟ್ಯಾಟೂ ಸೆಂಟರ್‌ ನಡೆಸುತ್ತಿದ್ದೇನೆ’ ಎನ್ನುತ್ತಾರೆ ರಾಜಾಜಿನಗರ 2ನೇ ಬ್ಲಾಕ್‌ನಲ್ಲಿ ಶಿವಂ ಟ್ಯಾಟೂ ಸೆಂಟರ್‌ನ ಮನು.
 
ಟ್ಯಾಟೂ ಟ್ರೆಂಡ್‌
ಕೈ ಹಾಗೂ ಮುಖಕ್ಕೆ ಸೀಮಿತವಾಗಿದ್ದ ಟ್ಯಾಟೂ ಈಗ ದೇಹದ ಎಲ್ಲಾ ಭಾಗವನ್ನೂ ಆವರಿಸಿಕೊಳ್ಳುತ್ತಿದೆ. ಕೆಲವು ಬುಡಕಟ್ಟು ಸಮುದಾಯದವರಿಗೆ ಮೀಸಲಾಗಿದ್ದ ಹಚ್ಚೆಗಳೂ ಈಗ ಯುವಜನರ ಮೆಚ್ಚಿನ ಆಯ್ಕೆಗಳಾಗುತ್ತಿವೆ.
 
ದೇವರ ಚಿತ್ರಗಳು, ನಕ್ಷತ್ರ, ಸಂಬಂಧಿಗಳ ಹೆಸರು, ಆಂಜನೇಯ, ಗದೆ, ಈಶ್ವರ, ಡಮರುಗ, ಓಂ, ತ್ರಿಶೂಲ, ಬುಡಕಟ್ಟು ಚಿಹ್ನೆಗಳನ್ನೂ ಯುವಕರು ಹೆಚ್ಚಾಗಿ ಹಾಕಿಸಿಕೊಳ್ಳುತ್ತಿದ್ದಾರೆ.
 
ದೃಷ್ಟಿ ಆಗದಂತೆ ಗಲ್ಲದ ಮೇಲೆ, ಕಣ್ಣಿನ ಪಕ್ಕ ಮೂರು ಚುಕ್ಕಿಗಳನ್ನು ಹಾಕಿಸಿಕೊಳ್ಳುವರೂ ಇದ್ದಾರೆ.
 
**
ಅಪರೂಪದ ಟ್ಯಾಟೂ
ತಲೆಕೂದಲು ಉದುರುವ ಸಮಸ್ಯೆ ಇರುವವರಿಗೆ ಸ್ಕ್ಯಾಲ್ಪ್‌ ಮೈಕ್ರೊ ಪಿಗ್ಮಂಟೇಷನ್‌ ಟ್ಯಾಟೂ (ಎಸ್‌.ಎಂ.ಪಿ) ಸಹ ಬಂದಿದೆ. ಇದೊಂದು ಅಪರೂಪದ ಟ್ಯಾಟೂ ಆಗಿದೆ. ಕೂದಲು ಉದುರಿದ ಜಾಗದಲ್ಲಿ ಹಚ್ಚೆ ಹಾಕಲಾಗುತ್ತದೆ. ಹುಟ್ಟುತ್ತಿರುವ ಕೂದಲಿನಂತೆ ಕಾಣುವುದರಿಂದ ತಲೆ ಬೋಳಾಗಿರುವುದು ಗೊತ್ತಾಗುವುದಿಲ್ಲ. 
 
15 ದಿನಗಳ ಬಿಡುವು ಕೊಟ್ಟು ಮೂರು ಬಾರಿ ಎಸ್‌.ಎಂ.ಪಿ. ಟ್ಯಾಟೂ ಹಾಕಿಸಿಕೊಳ್ಳಬೇಕಾಗುತ್ತದೆ. ಸ್ವಲ್ಪ ದುಬಾರಿಯ ಟ್ಯಾಟೂ ಇದಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT