ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮರಳಿದ ಕಲಾ ರಾಣಿ

ಕಲಾಪ
Last Updated 20 ಜನವರಿ 2017, 7:11 IST
ಅಕ್ಷರ ಗಾತ್ರ
* ಕಲೆಯ ಕುರಿತು ನಿಮಗೆ ಆಸಕ್ತಿ ಹೇಗೆ ಬಂತು?
ನಾನು ಚಿತ್ರಕಲೆಯ ತರಬೇತಿ ಪಡೆದವಳಲ್ಲ. ಚಿಕ್ಕಂದಿನಿಂದಲೂ ಚಿತ್ರ ಬಿಡಿಸಿ ಬಣ್ಣ ತುಂಬುವುದು ಖುಷಿ ಕೊಡುತ್ತಿತ್ತು. ಕ್ರಮೇಣ ಅದನ್ನು ರೂಢಿ ಮಾಡಿಕೊಂಡೆ. ಬಣ್ಣದ ಬಳಕೆ, ಆ ಮೂಲಕ ಚಿತ್ರಗಳಿಗೆ ಜೀವಂತಿಕೆ ತುಂಬುವ ಶಿಸ್ತು ಬೆಳೆಸಿಕೊಂಡೆ. ಬಾಲ್ಯದಲ್ಲಿ ಅಜ್ಜನ ಕಲಾ ಶ್ರೇಷ್ಠತೆಯ ಬಗ್ಗೆ ಕೇಳುತ್ತಿದ್ದೆ. ನನ್ನ ಸುಪ್ತ ಪ್ರಜ್ಞೆಯೇ ನನ್ನ ಆಸಕ್ತಿಗೆ ನೀರೆರೆದು ಪೋಷಿಸಿ, ಅದನ್ನೊಂದು ಶಿಸ್ತಾಗಿ ರೂಪಿಸಿದೆ ಎನ್ನಬಹುದು.
 
* ನಿಮ್ಮ ಆಸಕ್ತಿಗೆ ಕುಟುಂಬದವರ ಪ್ರೋತ್ಸಾಹ ಹೇಗಿತ್ತು?
ಆಗ ಚಿತ್ರಕಲೆಯು ಓದಿನ ಸಮಯ ಹಾಳು ಮಾಡುತ್ತದೆ ಎನ್ನುವ ಭಾವನೆ ಇತ್ತು. ಓದಿನ ಕಡೆಗೆ ಹೆಚ್ಚು ಒಲವು ಬೆಳೆಸಿಕೊಳ್ಳಬೇಕೆಂದು ನನ್ನ ತಂದೆ ಹೇಳುತ್ತಿದ್ದರು. ನನ್ನ ಅಜ್ಜಿ ಮಹಾರಾಣಿ ಸೇತು ಲಕ್ಷ್ಮೀಬಾಯಿ ನನ್ನ ಆಸಕ್ತಿಗೆ ಪ್ರೋತ್ಸಾಹ ಕೊಟ್ಟರು.
 
* ಒಂದಷ್ಟು ಕಾಲ ಚಿತ್ರಕಲಾ ಜಗತ್ತಿನಿಂದ ದೂರವಿದ್ದಿರಿ...
ಅಧ್ಯಾತ್ಮ ಚಿಂತನೆಗಳತ್ತ ಮನಸು ಹೊರಳಿತು. ಅರಬಿಂದೋ ಮತ್ತು ಇತರ ದಾರ್ಶನಿಕರ ಚಿಂತನೆಗಳು ನಾನು ಈ ಪಥದಲ್ಲಿ ಸಾಗುವಂತೆ ಮಾಡಿತು. ಹೀಗಾಗಿ ಚಿತ್ರಕಲೆಯಿಂದ ಕೆಲ ಕಾಲ ದೂರ ಸರಿದೆ. ಪರಮಾರ್ಥದ ಹುಡುಕಾಟದಲ್ಲಿ ಸಮಯ ಹೋಗಿದ್ದೇ ತಿಳಿಯಲಿಲ್ಲ.
 
* ಸುಮಾರು 3 ದಶಕಗಳ ನಂತರ ನಿಮ್ಮ ಕಲಾಕೃತಿಗಳು ಪ್ರದರ್ಶಿತವಾಗುತ್ತಿವೆ...
ನನ್ನ ಸ್ನೇಹಿತರು ಮತ್ತು ಅಭಿಮಾನಿಗಳು ತೋರಿದ ಪ್ರೀತಿಯೇ ಇದಕ್ಕೆ ಕಾರಣ. ನಾನೊಬ್ಬ ಸಾಮಾನ್ಯ ಮಹಿಳೆ. ಜನರ ಪ್ರೀತಿ ಗಮನಿಸಿದಾಗ, ಕಲಾಕೃತಿಗಳ ಮೂಲಕ ನಾನು ಮುಖ್ಯವಾದದ್ದೇನೋ ಮಾಡಿದ್ದೇನೆ ಎಂದು ಅನ್ನಿಸಿತು. ಕಲೆ ಮೂಲಕ ಮತ್ತೆ ಜನರೊಂದಿಗೆ ಮಾತನಾಡುವ ಅವಕಾಶಕ್ಕೆ ಒಪ್ಪಿಗೆ ಸೂಚಿಸಿದೆ. ಬಹು ಕಾಲದಿಂದ ವಾಸಿಸುತ್ತಿರುವ ಬೆಂಗಳೂರಿನಲ್ಲಿ ಈ ಪ್ರದರ್ಶನ ನಡೆಯುತ್ತಿರುವುದು ಸಂತಸ ಹೆಚ್ಚಿಸಿದೆ.
 
* ನಿಮ್ಮ ಕಲಾ ಜೀವನವನ್ನು ಹಿಂದಿರುಗಿ ನೋಡಿದರೆ ಏನನ್ನಿಸುತ್ತದೆ?
ಕಲೆ ಎನ್ನುವುದು ನನಗೆ ಊಟ– ನಿದ್ರೆಯಷ್ಟೇ ಸಹಜ. ಕಲೆ ನಮ್ಮ ವ್ಯಕ್ತಿತ್ವದ ಭಾಗವಾದಾಗ ಸಹಜವಾಗಿಯೇ ನಮ್ಮ ಬದುಕಿನ ವೈವಿಧ್ಯ ಹೆಚ್ಚುತ್ತದೆ.
 
* ಹೆಸರಿಗೆ ತಕ್ಕಂತೆ ಈ ಪ್ರದರ್ಶನದಲ್ಲಿನ ನಿಮ್ಮ ಕಲಾಕೃತಿಗಳು ‘ಭವ್ಯವಾಗಿವೆ’. ಈ ಕುರಿತು ಹೇಳಿ...
ಚಿಕ್ಕ ಮತ್ತು ದೊಡ್ಡ ಕ್ಯಾನ್ವಾಸ್‌ನಲ್ಲಿ ಬಿಡಿಸಿದ ಒಟ್ಟು 16 ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಅಧ್ಯಾತ್ಮದ ಹಾದಿಯಿಂದ ಹೊರಬಂದ ಮೇಲೆ ರಾಜಾ ರವಿವರ್ಮಾ ಪ್ರತಿಷ್ಠಾನ ಸ್ಥಾಪಿಸಲು ಮುಂದಾದೆ. ಈ ಸಂದರ್ಭ ಮತ್ತೆ ಕುಂಚವನ್ನು ಕೆಗೆತ್ತಿಕೊಂಡು ಮುಗಿಸಿದ ಕಲಾಕೃತಿಗಳಿವು. 
 
ಹಳೆಯ ಕಾಲದ ಶಾಸ್ತ್ರೀಯ ಕಲಾವಿದರು ಬಳಸುತ್ತಿದ್ದ ತೈಲವರ್ಣಗಳು ಈ ಕಲಾಕೃತಿಗಳ ಸೃಷ್ಟಿಯಲ್ಲಿ ಬಳಕೆಯಾಗಿವೆ. ಚೇರ, ಚೋಳ ಮತ್ತು ಪಾಂಡ್ಯ ರಾಜವಂಶಕ್ಕೆ ಸಂಬಂಧಿಸಿದ ಕೆಲವು ಕಲಾಕೃತಿಗಳು ಇದರಲ್ಲಿವೆ. ಹೊಯ್ಸಳ ರಾಜವಂಶದ ವಿಷ್ಣುವರ್ಧನ ಮತ್ತು ಶಾಂತಲಾ ದೇವಿಯ ಒಂದು ದೊಡ್ಡ ಕಲಾಕೃತಿ ಕೂಡ ಪ್ರದರ್ಶನಗೊಳ್ಳುತ್ತಿದೆ.
 
* ನಿಮ್ಮ ಕಲಾಕೃತಿಗಳ ವಿಶೇಷತೆ ಏನು?
ಬಾಲ್ಯದಿಂದಲೂ ನನಗೆ ಪ್ರಾಚೀನ ಯುಗದ ದೃಶ್ಯಾವಳಿಗಳು ಕಣ್ಣ ಮುಂದೆ ಬರುತ್ತವೆ. ಆ ಕಾಲದ ದೃಶ್ಯಗಳು ಕಣ್ಣ ಮುಂದೆ ಬಂದ ತಕ್ಷಣ, ಅಂತಹ ತಲೆಮಾರುಗಳ ಹೆಣ್ಣು ಮತ್ತು ಗಂಡುಗಳ ಆಕೃತಿಗಳನ್ನು ರೂಪಿಸುತ್ತಾ ಹೋಗುತ್ತೇನೆ. ಗಂಡು-ಹೆಣ್ಣು ಮತ್ತು ಆ ಕಾಲದಲ್ಲಿದ್ದ ಆಭರಣಗಳನ್ನು ನನ್ನ ಕಲಾಕೃತಿಗಳಲ್ಲಿ ಕಲಾ ರಸಿಕರು ಕಾಣಬಹುದು. 
 
ನನ್ನ ಬಹುತೇಕ ಕಲಾಕೃತಿಗಳು ಭಿನ್ನ ಕಾಲಘಟ್ಟಗಳ ಬದುಕಿನ ವಿವರಗಳನ್ನು ಹೇಳುತ್ತವೆ. ಮಹಾಕಾವ್ಯ ಮತ್ತು ಕಥನಗಳ ಕುರಿತು ಬಹಳಷ್ಟು ಜನರು ಬಣ್ಣ ತುಂಬಿದ್ದಾರೆ. ಆದರೆ, ನನ್ನ ಕುಂಚದಲ್ಲಿ ಅರಳಿರುವ ಕಲಾಕೃತಿಗಳು ನಾನು ಕಾಣುವ ಅಥವಾ ಕಲ್ಪಿಸಿಕೊಳ್ಳುವ ದೃಶ್ಯಾವಳಿಗಳಿಗೆ ಹಿಡಿದ ಕನ್ನಡಿಯಾಗಿವೆ.
 
* ನೀವು ರಾಜಾ ರವಿವರ್ಮಾ ಪ್ರತಿಷ್ಠಾನದ  ಕುರಿತು ಹೇಳಿ...
ಪ್ರತಿಷ್ಠಾನದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಗೀತಾ ಅವರ ತೀವ್ರ ಆಸಕ್ತಿಯಿಂದ ಇದು ಸ್ಥಾಪನೆಯಾಗಿದೆ. ರಾಜಾ ರವಿವರ್ಮಾ ಪ್ರತಿಷ್ಠಾನದ ಮೂಲಕ ಕಲೆಯ ಪರಂಪರೆಯನ್ನು ಮುಂದುವರಿಸಬೇಕು ಎಂಬ ಆಶಯದೊಂದಿಗೆ ನಾವು ಇದನ್ನು 2015ರಲ್ಲಿ ಶುರುಮಾಡಿದೆವು. ಕಲೆ ಮತ್ತು ಸಂಸ್ಕೃತಿಗೆ ಸೇರಿದ ಎಲ್ಲ ಬಗೆಯ ಕಲಾ ಮಾದರಿಗಳ ಬೆಳವಣಿಗೆಗಳಿಗೆ ವೇದಿಕೆ ನೀಡುವುದು ಮತ್ತು ನಿಧಾನವಾಗಿ ಕಣ್ಮರೆಯಾಗುತ್ತಿರುವ ಸ್ಥಳೀಯ ಕಲಾ ಮಾದರಿಗಳನ್ನು ಜನರಿಗೆ ಪರಿಚಯಿಸುವುದು ನಮ್ಮ ಉದ್ದೇಶ.
 
***
ಚಿತ್ರಕಲೆಯಲ್ಲಿ ಭಾರತವಷ್ಟೇ ಅಲ್ಲದೆ, ವಿಶ್ವದ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮಿದವರಲ್ಲಿ ರುಕ್ಮಿಣಿ ವರ್ಮಾ ಅವರು ಮಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ. ಅಭಿಜಾತ ಕಲಾವಿದ ರಾಜಾ ರವಿ ವರ್ಮಾ ಅವರ ಮೊಮ್ಮಗಳಾದ ರುಕ್ಮಿಣಿ ಅವರು ಕೇರಳದ ತಿರುವಾಂಕೂರು ರಾಜಮನೆತನದವರು. 1940ರಲ್ಲಿ ಜನಿಸಿದ ಇವರು ಜಲವರ್ಣ ಮತ್ತು ತೈಲವರ್ಣಗಳ ಮೂಲಕ ಶಾಸ್ಟ್ರೀಯ ಮತ್ತು ಸಾಂಪ್ರದಾಯಿಕ ಕಲೆಗೆ ಹೊಸ ರೂಪ ಕೊಟ್ಟವರು.

ಮಾನವ ದೇಹಾಕೃತಿಗಳನ್ನು ಭವ್ಯ ಆಭರಣಗಳಿಂದ ಸೂಕ್ಷ್ಮ ವಿವರಗಳೊಂದಿಗೆ ವಿಶೇಷವಾಗಿ ಚಿತ್ರಿಸುವ ಮೂಲಕ ಭಾರತೀಯ ಕಲಾ ಪರಂಪರೆಯ ‘ಸೌಂದರ್ಯ ಮತ್ತು ದೈವತ್ವದ’ ಅಂಶವನ್ನು ಕಲಾ ರಸಿಕರಿಗೆ ಉಣಬಡಿಸಿದ ಹೆಗ್ಗಳಿಕೆ ಇವರದು.

ಇವರ ಅನೇಕ ಕಲಾಕೃತಿಗಳು ವಿಶ್ವದಾದ್ಯಂತ ಪ್ರದರ್ಶನಗೊಂಡು ದುಬಾರಿ ಬೆಲೆಗೆ ಮಾರಾಟವಾಗಿವೆ. 1981ರಲ್ಲಿ ಮುಂಬೈಯ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡ ಭಾರತದ ಪ್ರಾಚೀನ ಕಾವ್ಯಗಳ ಕಥನ ಹೇಳುವ ಇವರ ನಗ್ನ ಕಲಾಕೃತಿಗಳು ಅಭೂತಪೂರ್ವ ಯಶಸ್ಸು ಕಂಡಿದ್ದವು. ಹಲವು ವರ್ಷಗಳು ಕಲಾ ಜಗತ್ತಿನಿಂದ ಹೊರಗಿದ್ದು ಅಧ್ಯಾತ್ಮದ ದಾರಿಯಲ್ಲಿದ್ದರು. ಇದೀಗ, ಮೂರೂವರೆ ದಶಕಗಳ ನಂತರ ಮತ್ತೆ ಅವರ ಕಲಾಕೃತಿಗಳನ್ನು ‘ಸಿರಿ ಮತ್ತು ಶಾಶ್ವತತೆ’ (Opulence and Eternity) ಎಂಬ ಹೆಸರಿನಲ್ಲಿ ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ ‘ಗ್ಯಾಲರಿ ಜಿ’ ಪ್ರದರ್ಶಿಸುತ್ತಿದೆ.
 
**
 
ನಗ್ನತೆ ಸೌಂದರ್ಯದ ಸಂಕೇತ. ನಿಸರ್ಗದತ್ತವಾದ ಮಾನವ ದೇಹಗಳನ್ನು ಕುಂಚದ ಮೂಲಕ ಅಭಿವ್ಯಕ್ತಿಸಿ, ನಮ್ಮ ಚಿಂತನೆಯನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯುವುದು ಮುಖ್ಯ.
–ರುಕ್ಮಿಣಿ ವರ್ಮಾ, ಚಿತ್ರ ಕಲಾವಿದೆ
 
**
ಇಂದಿನಿಂದ ಪ್ರದರ್ಶನ: ಗ್ಯಾಲರಿ ಜಿ, ಲ್ಯಾವೆಲ್ಲೆ ರಸ್ತೆ, ಜನವರಿ 20ರಿಂದ ಫೆ.19ರ ವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT