ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹೋರಾತ್ರಿ’ಯಲ್ಲಿ ಪ್ರಹರ ರಾಗ ವೈವಿಧ್ಯ

ನಾದ ಲೋಕ
Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
* ಬೆಂಗಳೂರಿನಲ್ಲಿ ಅಹೋರಾತ್ರಿ ಸಂಗೀತೋತ್ಸವ ಆರಂಭಿಸಿದವರು ನೀವು. ಆರಂಭದ ಕಛೇರಿಗಳ ನಿರ್ವಹಣೆ ಹೇಗಿತ್ತು?
ಬೆಂಗಳೂರಿನಲ್ಲಿ ‘ಅಹೋರಾತ್ರಿ ಸಂಗೀತೋತ್ಸವ’ ಮೊದಲು ಆರಂಭಿಸಿದ್ದು ನಾನೇ. ನಾನು 1979ರಲ್ಲಿ ಧಾರವಾಡದಿಂದ ಬೆಂಗಳೂರಿಗೆ ಬಂದಾಗ ಇಲ್ಲಿ ಹಿಂದೂಸ್ತಾನಿ ಸಂಗೀತ ಅಷ್ಟಾಗಿ ಇರಲಿಲ್ಲ. ಕೆನರಾ ಬ್ಯಾಂಕಿನಲ್ಲಿ ನೌಕರನಾಗಿದ್ದ ನಾನು ಬೆಂಗಳೂರಿಗೆ ಬಂದಾಗ ಇಲ್ಲಿನ ವ್ಯವಸ್ಥಾಪಕರಾದ ಏಕನಾಥ ಕಾಮತ್‌ ಅವರು ‘ಇಲ್ಲಿ ನೀವು ಸಂಗೀತ ಬೆಳೆಸಿ’ ಎಂದು ಹುರಿದುಂಬಿಸಿದರು. ಆಗ ವರ್ಷಕ್ಕೆ ಒಂದೋ ಎರಡೋ ಸಂಗೀತ ಕಛೇರಿ ನಡೆಯುತ್ತಿತ್ತು. ಇಲ್ಲಿಗೆ ಬಂದ ಮೇಲೆ ಸಾಕಷ್ಟು ಸಂದರ್ಭಗಳಲ್ಲಿ ಕಛೇರಿ ನೀಡುತ್ತಾ ಬಂದೆ. ಜನ ಮೆಚ್ಚಿದರು.
 
ಧಾರವಾಡದಲ್ಲಿ 15 ವರ್ಷ ‘ಗುರು–ಶಿಷ್ಯ’ ಪರಂಪರೆಯಲ್ಲಿ ಸಂಗೀತ ಕಲಿತ ನಾನು ಗುರು ‘ಗುರುರಾವ್‌ ದೇಶಪಾಂಡೆ ಅವರ ನಿಧನಾ ನಂತರ (1982) ‘ಸಂಗೀತ ಸಭಾ’ ಸ್ಥಾಪಿಸಿದೆ. 1983ರಲ್ಲಿ ಮೊದಲ ಬಾರಿಗೆ ‘ಅಹೋರಾತ್ರಿ ಸಂಗೀತೋತ್ಸವ’ ಏರ್ಪಡಿಸಿ ರಾತ್ರಿಯಿಡೀ ವಿವಿಧ ರಾಗಗಳನ್ನು ಕೇಳುವ ಅವಕಾಶ ಒದಗಿಸಿದೆ. ಅಲ್ಲಿಂದ ಮತ್ತೆ ಪ್ರತೀವರ್ಷ ಈ ಸಂಗೀತ ಸೇವೆ ನಿರಂತರವಾಗಿ ನಡೆದುಕೊಂಡು ಬಂದಿದೆ. 
 
* ಅಹೋರಾತ್ರಿ ಸಂಗೀತೋತ್ಸವದ ಸ್ವರೂಪ, ಒಳಸುಳಿಗಳೇನು? 
ರಾತ್ರಿಯಿಂದ ಬೆಳಗಿನವರೆಗೂ ನಿರಂತರವಾಗಿ ವಿವಿಧ ಕಛೇರಿಗಳನ್ನು ಏರ್ಪಡಿಸುವುದು. ಸಂಗೀತದಲ್ಲಿ ಆಯಾಯ ಸಮಯ ದಲ್ಲಿ ಹಾಡುವ ರಾಗಗಳಿವೆ. ಇದಕ್ಕೆ ಪ್ರಹರ ರಾಗಗಳೆಂದು ಹೆಸರು. ನಸುಕಿನ ರಾಗ, ಬೆಳಗಿನ ರಾಗ, ಮಧ್ಯಾಹ್ನ ರಾಗ,  ಸಂಜೆಯ ರಾಗ, ರಾತ್ರಿ ರಾಗ, ಇಳಿರಾತ್ರಿ ರಾಗ.. ಹೀಗೆ. ಅಹೋರಾತ್ರಿ ಸಂಗೀತೋತ್ಸವದಲ್ಲಿ ಎಲ್ಲ ಪ್ರಹರದ ರಾಗಗಳನ್ನು ಕೇಳುವ ಅವಕಾಶ ಸಹೃದಯರಿಗೆ. ಜನ ಹೆಚ್ಚು ಖುಷಿ ಪಡ್ತಾರೆ.
 
ಹಿಂದೂಸ್ತಾನಿ ಸಂಗೀತದ ಜತೆಗೆ ಕರ್ನಾಟಕ ಸಂಗೀತ ಕಛೇರಿಗಳನ್ನೂ ಏರ್ಪಡಿಸುವ ಕಾರಣ ಒಂದೇ ವೇದಿಕೆಯಲ್ಲಿ ಎರಡೂ ಪ್ರಕಾರಗಳ ಸಂಗೀತ ಸವಿಯುವ ಸುಯೋಗ ಕೇಳುಗರಿಗೆ ಸಿಗುತ್ತದೆ. 
 
* ಸದ್ಯ ಶಾಸ್ತ್ರೀಯ ಸಂಗೀತ ಕಛೇರಿಗಳ ಸ್ಥಿತಿಗತಿ ಹೇಗಿದೆ?
ಸದ್ಯ ಬೆಂಗಳೂರಿನಲ್ಲಿ ಶಾಸ್ತ್ರೀಯ ಸಂಗೀತ ಕಛೇರಿಗಳು ಒಂದು ಶೋ ತರ ಆಗ್ತಾ ಇದೆ. ಕಛೇರಿಗಳಲ್ಲಿ ಗಾಂಭೀರ್ಯ ಮಾಯವಾಗುತ್ತಿದೆಯೇನೋ ಎಂಬ ಸಂಶಯ ಕಾಡುತ್ತಿದೆ. ಕಲಾವಿದರಲ್ಲೂ ಮೊದಲಿನ ಹಾಗೆ ಸಂಗೀತದಲ್ಲಿ ಉತ್ಸಾಹ, ಶಕ್ತಿ ಇಲ್ಲ. ಅಹೋರಾತ್ರಿ ಸಂಗೀತದಲ್ಲಿ ಭಾಗವಹಿಸಲು ಕಲಾವಿದರನ್ನು ಗೊತ್ತು ಮಾಡುವಾಗ ಕೆಲವು ಕಲಾವಿದರು ತಡರಾತ್ರಿ, ನಸುಕಿನ ರಾಗಗಳನ್ನು ಹಾಡುವ ಸಮಯವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದರು.
 
ಜೀವನಶೈಲಿ ಕಾಯಿಲೆಗಳು ಕೆಲವರನ್ನು ಕಾಡುತ್ತಿದ್ದರೆ ಇನ್ನು ಕೆಲವರಿಗೆ ಶರೀರ ಮತ್ತು ಶಾರೀರದ ಶಕ್ತಿ ಕಡಿಮೆಯಾಗುತ್ತಿದೆ. ಅಹೋರಾತ್ರಿ ಸಂಗೀತದಲ್ಲಿ ಆಯಾಯ ಪ್ರಹರ ರಾಗಗಳನ್ನು ಕೇಳುವ, ಬೆಳಗಿನವರೆಗೆ ಸಂಗೀತವನ್ನು ಆಸ್ವಾದಿಸುವ ಆಸಕ್ತರಿರುತ್ತಾರೆ. ಅವರಿಗಾಗಿ ಇಡೀ ರಾತ್ರಿ ವೈವಿಧ್ಯಮಯ ರಾಗಗಳನ್ನು ಹಾಡುಲು ಕಲಾವಿದರು ಸಿದ್ಧರಿರಬೇಕು.
 
* ಡಿಜಿಟಲ್‌ ಯುಗದತ್ತ ದಾಪುಗಾಲು ಹಾಕುತ್ತಿರುವ ಇಂದಿನ ಜಗತ್ತಿನಲ್ಲಿ ಮಕ್ಕಳ ಸಂಗೀತಾಸಕ್ತಿ, ಒಲವು ಹೇಗಿದೆ.
ಜಗತ್ತು ಎಷ್ಟೇ ಆಧುನಿಕವಾದರೂ ಪರಂಪರೆಯ ಸಂಗೀತದತ್ತ ಮಕ್ಕಳ ಆಸಕ್ತಿ, ಒಲವು ಕಡಿಮೆಯಾಗಿಲ್ಲ, ಆಗುವುದೂ ಇಲ್ಲ. ಇಂದಿನ ಕೆಲವು ಮಕ್ಕಳು (ಹೆತ್ತವರೂ) ಬೇಗ ಸಂಗೀತ ಕಲಿಯಬೇಕು, ವೇದಿಕೆ ಏರಬೇಕು, ಸೀಡಿ ಬರಬೇಕು, ಪ್ರಚಾರ ಸಿಗಬೇಕು, ವಿದೇಶಕ್ಕೆ ಹೋಗಬೇಕು ಎಂಬ ಒತ್ತಾಸೆ ತೋರುತ್ತಿದ್ದಾರೆ.
 
ಒಬ್ಬ ಉತ್ತಮ ಕಲಾವಿದನಾಗಬೇಕಾದರೆ ಕನಿಷ್ಠ 15 ವರ್ಷ ಕಠಿಣ ಅಭ್ಯಾಸ, ಕಟ್ಟುನಿಟ್ಟಿನ ರಿಯಾಜ್‌ ಮಾಡಬೇಕು. ರಾಗ, ಲಯ, ಉಚ್ಛಾರ, ಸಾಹಿತ್ಯ, ತಾಳ ಶುದ್ಧತೆ ರೂಢಿಸಿಕೊಳ್ಳಬೇಕು. ಆಗಲೇ ಗಾಯಕ ಪರಿಪೂರ್ಣನಾಗಲು ಸಾಧ್ಯ.
 
* ‘ಗ್ರಾಮ ಸಂಗೀತ ಯಾತ್ರೆ’ಗೆ ಜನರ ಸ್ಪಂದನೆ ಹೇಗಿದೆ?
‘ಗ್ರಾಮ ಸಂಗೀತ ಯಾತ್ರೆ’ ನಮ್ಮ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ಕಳೆದ ಐದು ವರ್ಷಗಳಿಂದ ಏಳೆಂಟು ರಾಜ್ಯಗಳ ಸುಮಾರು 60 ಗ್ರಾಮಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದ್ದೇವೆ. ಹಳ್ಳಿಗಳಲ್ಲಿರುವ ಹಿರಿಯ ಸಂಗೀತ ಆಸಕ್ತರನ್ನು, ಕಲಾವಿದರನ್ನು ಸನ್ಮಾನಿಸುವುದು, ಕಛೇರಿ ಏರ್ಪಡಿಸುವುದು ಇತ್ಯಾದಿ ಮಾಡ್ತೀವಿ. 
ಕಾಸರಗೋಡು ಸಮೀಪದ ಬೇಕಲಕೋಟೆಯಲ್ಲಿ ನಡೆದ ಗ್ರಾಮ ಸಂಗೀತ ಕಾರ್ಯಕ್ರಮ’ ಎಂದಿಗೂ ನೆನಪಿನಲ್ಲಿ ಉಳಿಯುವಂಥದ್ದು.
 
ಅಲ್ಲಿ ಶೆಹನಾಯ್‌ ಮಾಂತ್ರಿಕ ಉಸ್ತಾದ್‌ ಬಿಸ್ಮಿಲ್ಲಾಖಾನ್‌ ಅವರ ಶಿಷ್ಯರೊಬ್ಬರು ಇದ್ದಾರೆ. ಹಿರಿಯ ವ್ಯಕ್ತಿ. ಅವರ ಮನೆ ವಿಳಾಸ ಹುಡುಕಿ ಹೋಗಿ ಸನ್ಮಾನಿಸಿ ಬಂದೆವು. ಅವರಿಗೆ ಖುಷಿಯಾಗಿ ಆನಂದಭಾಷ್ಪ ಸುರಿಸಿದರು. ನಮಗೂ ಸಾರ್ಥಕ ಮನೋಭಾವನೆ ಮೂಡಿತು. ಧಾರವಾಡ ಸಮೀಪದ ಹೆಬ್ಬಳ್ಳಿಯಲ್ಲೂ ಇಂಥದ್ದೇ ಎಂದೂ ಮರೆಯದ ಅನುಭವ ಉಂಟಾಯಿತು. ಗ್ರಾಮ ಸಂಗೀತ ಯಾತ್ರೆ ಅತ್ಯಂತ ಖುಷಿ, ಸಮಾಧಾನ ತರುವ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT