ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಳಿಗಾನದ ಮೋಡಿ

ನಾದ ಲೋಕ
Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ಪಂಚಮವೇದ ಎಂದೇ ಕರೆಯುವ ಸಂಗೀತ ಹಿಂದೂ ಮಹಾ ಸಾಗರವಿದ್ದಂತೆ. ಶಿಶು ಹುಟ್ಟಿದ ತಕ್ಷಣ ಅಳುತ್ತದೆ ಎನ್ನುತ್ತೇವೆ. ಆ ಸದ್ದನ್ನು ಸೂಕ್ಷ್ಮವಾಗಿ ಆಲಿಸಿದರೆ ಅಲ್ಲಿಂದಲೇ ಸಂಗೀತ ಮನುಷ್ಯನ ಬಾಳಿನಲ್ಲಿ ಆರಂಭವಾಗುವುದು ಅರ್ಥವಾಗುತ್ತದೆ.
 
ಭಾರತೀಯ ತತ್ವಶಾಸ್ತ್ರದಲ್ಲಿ ಸಂಗೀತಕ್ಕೆ ಪಂಚಮವೇದದ ಮನ್ನಣೆ ಇದೆ. ತ್ಯಾಗರಾಜರ ಪಂಚರತ್ನ ಕೀರ್ತನೆಗಳು ಈಗಲೂ ಶ್ರೋತೃಗಳನ್ನು ಸೆಳೆಯುತ್ತವೆ. ತ್ಯಾಗರಾಜರು, ಪುರಂದರದಾಸರ ಕೀರ್ತನೆಗಳಲ್ಲಿ ಅಧ್ಯಾತ್ಮ ಮಿಳಿತವಾಗಿದೆ.
 
ಪ್ರತಿ ವ್ಯಕ್ತಿಯ ಆಂತರ್ಯದಲ್ಲಿ ಸಂಗೀತವಿದೆ. ಬಾಹ್ಯವಾಗಿ ಅದಕ್ಕೆ ತರಬೇತಿ ಕಲಿಕೆ ದೊರೆತಾಗ ಅದು ವಿಕಸಿತವಾಗುತ್ತದೆ.
 
ನನ್ನ ಬಾಲ್ಯದಲ್ಲಿ ತಂಗಿ ಬಾಲಾಂಬಾ ಹಾಡುವುದನ್ನು ಕೇಳುತ್ತಿದ್ದೆ. ಹಾಗೇ ಹಾಡು ಕೇಳುತ್ತಾ ಕೊಳಲಿನೊಂದಿಗೆ ಆಡುತ್ತಾ ನುಡಿಸುತ್ತಿದ್ದೆ. ಅದು ಶಿಸ್ತುಬದ್ಧ ರೀತಿಯಲ್ಲಿರುತ್ತಿರಲಿಲ್ಲ. ಒಮ್ಮೆ ನಾನು ಕೊಳಲು ನುಡಿಸುತ್ತಿದ್ದುದನ್ನು ವೀಣೆ ರಾಜಾರಾವ್‌ ಅವರು ಕೇಳಿಸಿಕೊಂಡರು. ‘ಶಂಕರ ನೀನು ಕ್ರಮಬದ್ಧವಾಗಿ ಕೊಳಲು ನುಡಿಸುವುದನ್ನು ಅಭ್ಯಾಸ ಮಾಡಬೇಕು. ನಿನ್ನಲ್ಲಿ ಆ ಶ್ರುತಿ, ಸ್ವರಗಳ ಜ್ಞಾನವಿದೆ. ಕ್ರಮಬದ್ಧ ಕಲಿಕೆ ಮಾಡದಿದ್ದರೆ ಅದು ಸರಸ್ವತಿಗೆ ದ್ರೋಹ ಮಾಡಿದಂತೆ.
 
ಅದೇ ರೀತಿ ಮೃದಂಗ ವಾದಕ ಪುಟ್ಟಾಚಾರ್‌ ಸಹ ನನ್ನ ಕೊಳಲು ನುಡಿಸುವಿಕೆಯನ್ನು ಕೇಳಿದ್ದರು. ಬಳಿಕ ಅವರೇ ನನ್ನ ಕೊಳಲು ಕಲಿಕೆಗೆ ನೆರವಾದರು. ಅವರು ಮೃದಂಗ  ನುಡಿಸುವಾಗ ನಾನು ಕೊಳಲು ಅಭ್ಯಾಸ ಮಾಡುತ್ತಿದ್ದೆ. ಹೀಗೆಯೇ ಕಲಿಕೆ ಸಾಗಿತು. ಪುಟ್ಟಾಚಾರ್‌ ಅವರ ಹೃದಯವೈಶಾಲ್ಯ ಅಪಾರ. ಮದ್ರಾಸಿನಲ್ಲಿ ಕೊಳಲು ವಾದಕ ಟಿ.ಮಹಾಲಿಂಗಂ ಪರಿಚಯ ಆಯಿತು. ಅವರ ಬಳಿ ಸಾಕಷ್ಟು ಕಲಿತಿದ್ದೇನೆ.
 
1940ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಾನು ಮೊದಲ ಬಾರಿಗೆ ಸಾರ್ವಜನಿಕ ಕಛೇರಿ ನೀಡಿದೆ. ಹಿಂದೆಲ್ಲಾ ಮಾಧ್ಯಮಗಳ ಪ್ರಭಾವ ಈಗಿರುವಷ್ಟು ಇರಲಿಲ್ಲ. ಪ್ರಚಾರ ಪಡೆಯಬೇಕು ಎಂಬ ಯೋಚನೆಯೂ ಮನಸಿಗೆ ಬರುತ್ತಿರಲಿಲ್ಲ. ತೀವ್ರವಾದ ಕಲಿಕೆ, ಕಛೇರಿಗಳಲ್ಲಿ ಅದನ್ನು ಪ್ರಸ್ತುತಪಡಿಸುವುದು ಇದಿಷ್ಟೇ  ಸಂಗೀತ ವಿದ್ವಾಂಸರ ಗಮನದಲ್ಲಿ ಇರುತ್ತಿತ್ತು.
 
ಆಗಿನ ಕೇಳುಗರಿಗೆ ತಾಳ್ಮೆ ಸಾಕಷ್ಟು ಇರುತ್ತಿತ್ತು. 4–5 ತಾಸುಗಳ ಕಛೇರಿಗಳನ್ನು ತದೇಕ ಮನಸ್ಕರಾಗಿ ಆಲಿಸುತ್ತಿದ್ದರು. ಈಗ ಆ ರೀತಿಯ ಕೇಳುಗರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಯುವಕರು ಗಂಭೀರವಾಗಿ ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 
 
ಸಂಗೀತದ ಚಿಕಿತ್ಸಕ ಗುಣ ಕೇಳುಗರನ್ನು ಸೆಳೆಯುತ್ತದೆ. ಸಂಗೀತದ ಮೂಲ ಸ್ವರೂಪ ಉಳಿಸಿಕೊಂಡೇ ಕಲಿಕೆ ಸಾಗಬೇಕು.
 
ಈಚೆಗೆ ಬಂದಿರುವ ಫ್ಯೂಷನ್‌ ಸಂಗೀತ ನನಗೆ ಅಷ್ಟೇನೂ ಸರಿ ಎನಿಸುವುದಿಲ್ಲ. ಕೆಲವು ಪಾಶ್ಚಾತ್ಯ ಸಂಗೀತ ಪ್ರಕಾರಗಳು ಮೂಲವನ್ನು ಹಾಗೆಯೇ ಉಳಿಸಿಕೊಂಡು ಬಂದಿವೆ. ಕೊಂಚವೂ ಬದಲಾಗಿಲ್ಲ.
 
ನಮ್ಮಲ್ಲಿಯೂ ಮೂಲ ಸಂಗೀತವನ್ನು ಧಕ್ಕೆಗೊಳಿಸದ ರೀತಿಯಲ್ಲಿ ಕಲಿಕೆ ಸಾಗಬೇಕು. ಈಚೆಗಿನ ರಿಯಾಲಿಟಿ ಶೋಗಳನ್ನು ಗಮನಿಸುತ್ತಿರುತ್ತೇನೆ. ಸಂಗೀತವನ್ನು ಅಬ್ಬರದಿಂದ ಪ್ರಸ್ತುತಪಡಿಸಲು ಹೋಗಬಾರದು. ಮಕ್ಕಳಲ್ಲಿ ಗಂಭೀರವಾಗಿ ಅಭ್ಯಾಸ ಮಾಡುವ ಗುಣ ರೂಢಿಯಾಗುವಂತೆ ನೋಡಿಕೊಳ್ಳಬೇಕು.
 
ಕೊಳಲು ವಾದನದಿಂದ ನನ್ನ ಆರೋಗ್ಯಕ್ಕೆ ಲಾಭವಾಗಿದೆ. ಈಗಲೂ ನಾನು ಲವಲವಿಕೆಯಿಂದ ಇರಲು ಇದೇ ಕಾರಣ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಒಂದರಿಂದ ಎರಡು ತಾಸು 7–8 ವಿದ್ಯಾರ್ಥಿಗಳಿಗೆ ಕೊಳಲು ಕಲಿಸುತ್ತೇನೆ. ಮೂರು ಗಂಟೆ ಒಂದೇ ಭಂಗಿಯಲ್ಲಿ ಕೂರುವುದು ಕೊಂಚ ಕಷ್ಟ ಎನ್ನುವ ಕಾರಣಕ್ಕೆ ಈಗ ಕಛೇರಿ ನೀಡುವುದನ್ನು ನಿಲ್ಲಿಸಿದ್ದೇನೆ.
 
ನನಗೀಗ 95 ವರ್ಷ. ಇಷ್ಟು ದೀರ್ಘಾವಧಿವರೆಗೂ ಕೊಳಲಿನ ಇಂಪಿನೊಂದಿಗೆ ಜೀವನ ಸಾಗಿ ಬಂದಿದ್ದು  ನನಗೆ ಖುಷಿ ತಂದಿದೆ. ಸಂತೃಪ್ತಿ ಇದೆ. ಸಂಗೀತದಿಂದ ದೊರಕುವ ಶಾಂತಿ, ಆಧ್ಯಾತ್ಮಿಕ ಚೈತನ್ಯ ಅಮೂಲ್ಯವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT