ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯಚಿತ್ರ ಲೋಕದ ಉತ್ಸಾಹದ ಚಿಲುಮೆ ಪಾಂಡುರಂಗರಾವ್

ಕಲಾಪ
Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಅತ್ಯಪೂರ್ವ ಸಾಧನೆಗಾಗಿ ಗಿನ್ನೆಸ್ ದಾಖಲೆವರೆಗೆ ತಮ್ಮ ಸಾಧನೆಯನ್ನು ವ್ಯಾಪಿಸಿರುವ ವ್ಯಂಗ್ಯಚಿತ್ರಕಾರ ಬಿ.ವಿ. ಪಾಂಡುರಂಗರಾವ್. ಅಪಾರ ಜೀವನಪ್ರೀತಿಯ ಅವರ ಲವಲವಿಕೆ ಬದುಕು ಯುವ ಜನರಿಗೆ ಮಾದರಿ. 
 
ಮೂಲತಃ ಮೈಸೂರಿನವರಾದ  ಪಾಂಡುರಂಗರಾವ್ 1944ರ ಸೆಪ್ಟೆಂಬರ್ 20ರಂದು ಜನಿಸಿದರು.  ಬಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತರಾದ ಪಾಂಡುರಂಗರಾವ್ ಅವರಿಗೆ ಈಗ  72ರ  ಹರೆಯ. 
 
ತಮ್ಮ 18ನೇ ವಯಸ್ಸಿನಿಂದಲೇ ವ್ಯಂಗ್ಯಚಿತ್ರ ರಚನೆಯಲ್ಲಿ ಆಸಕ್ತಿ ಮೂಡಿಸಿಕೊಂಡ  ಅವರು, ಮುಂದೆ ಈ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮಹತ್ವ ಪೂರ್ಣವಾದದ್ದು.  ರಾಜ್ಯ ಹಾಗೂ ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರಶಸ್ತಿ ತಮ್ಮದಾಗಿಸಿಕೊಂಡವರು. ತೈವಾನ್, ಟರ್ಕಿ, ಕೊರಿಯಾ, ಚೀನಾ, ಬ್ರೆಜಿಲ್, ಫ್ರಾನ್ಸ್, ಇಸ್ರೇಲ್  ಸೇರಿದಂತೆ ಇದುವರೆಗೆ 78 ಅಂತರರಾಷ್ಟ್ರೀಯ ಮಟ್ಟದ ವ್ಯಂಗ್ಯ ಚಿತ್ರೋತ್ಸವಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡಿವೆ, ಐವತ್ತಕ್ಕೂ ಹೆಚ್ಚು ಬಾರಿ ಬಹುಮಾನ  ಪಡೆದಿದ್ದಾರೆ. 
 
 
ಸುಮಾರು 40ಕ್ಕೂ ಹೆಚ್ಚು  ಬಾರಿ ಏಕವ್ಯಕ್ತಿ ವ್ಯಂಗ್ಯ ಚಿತ್ರಪ್ರದರ್ಶನ ನೀಡಿದ್ದಾರೆ. 53 ಸ್ಪರ್ಧಾ  ಆಲ್ಬಮ್ ನಿರ್ಮಿಸಿದ್ದಾರೆ. ಸುಧಾ, ತರಂಗ, ಮಲ್ಲಿಗೆ ಸೇರಿದಂತೆ ದೇಶ ವಿದೇಶಗಳ ಅನೇಕ ವಾರ ಪತ್ರಿಕೆಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡು ಜನಮನ್ನಣೆ ಪಡೆದಿವೆ.  ಇತ್ತೀಚಿನ ವರ್ಷಗಳಲ್ಲಿ  ಅವರು ಸುಂದರ  3ಡಿ ಸ್ವರೂಪದ ಚಿತ್ರಗಳನ್ನು ತಮ್ಮ ಕೈಚಳಕದಿಂದ ಪೋಣಿಸಿ ಮೆಚ್ಚುಗೆ ಪಾತ್ರರಾಗಿದ್ದಾರೆ. 
 
ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸಾಧನೆಗಾಗಿ ಪಾಂಡುರಂಗರಾವ್ ಅವರ ಹೆಸರು, ಏಳು ಬಾರಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ನಮೂದಾಗಿದೆ. ಇಂಡಿಯ ಬುಕ್ ಆಫ್ ರೆಕಾರ್ಡ್‌ನಲ್ಲೂ ಅವರ  ಸಾಧನೆಯ ಏಳು  ದಾಖಲಾಗಿದೆ.     ಅನೇಕ ಮಾಹಿತಿಗಳನ್ನೊಳಗೊಂಡ ತಮ್ಮದೇ ಆದ ಅತಿ ಸಣ್ಣ ಅಂದರೆ 1.5 ಮಿ.ಮೀ ಫ್ಲಿಪ್ ಪುಸ್ತಕ ರಚಿಸಿದ್ದು, ಮಹತ್ವದ ಸಾಧನೆಗಳಲ್ಲಿ ಇದೊಂದು ವಿಶೇಷವಾಗಿದೆ ಎಂದು ಲಿಮ್ಕಾ ಪ್ರತಿಷ್ಠಾನ ಗುರುತಿಸಿದೆ.    ಪರಿಸರ ಪ್ರಜ್ಞೆ ಮೂಡಿಸುವ ಅವರ ಬೃಹತ್ ಕ್ಯಾಲೆಂಡರ್ ಕೂಡ ದಾಖಲೆ ಪುಟ ಸೇರಿದೆ.
 
2011ರ ವರ್ಷದಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಟೂನ್ ಉತ್ಸವದಲ್ಲಿ ಪಾಂಡುರಂಗರಾವ್ ಅವರು ಮಾಜಿ ರಾಷ್ಟ್ರಪತಿ ಭಾರತರತ್ನ  ದಿವಂಗತ ಎ.ಪಿ.ಜೆಅಬ್ದುಲ್ ಕಲಾಂ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ.
 
 
ಪಾಂಡುರಂಗರಾವ್ ಅವರ ಕೈ ಚಳಕ ಕಂಡು ಆರ್.ಕೆ.ಲಕ್ಷ್ಮಣ್ ಅವರಂತಹ ಶ್ರೇಷ್ಠರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹಜೀವಿ ಪಾಂಡುರಂಗರಾವ್ ಅವರ ರೇಖಾ ಚಿತ್ರವನ್ನು  ಆರ್.ಕೆ.ಲಕ್ಷ್ಮಣ್ ಅವರೇ ತಮ್ಮ ಕೈಯಾರ ಅವರಿಗೆ ಬಿಡಿಸಿ ಕೊಟ್ಟಿದ್ದಾರೆ.  
 
ಪಾಂಡುರಂಗರಾವ್ ಕರ್ನಾಟಕ ವ್ಯಂಗ್ಯಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿ ಕೂಡ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.
 
ಕ್ರೀಡಾರಂಗದಲ್ಲೂ ಮಹತ್ವಪೂರ್ಣ ಸಾಧನೆಗೈದಿರುವ ಅವರು, ಬಿಲಾಯ್ ಉಕ್ಕಿನ ಕಾರ್ಖಾನೆಯ ಕ್ರಿಕೆಟ್ ತಂಡ, ಮಧ್ಯಪ್ರದೇಶದ ವಿಭಾಗೀಯ ಮಟ್ಟದ  ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದಾರೆ.  
 
ಅಂತರ್ಜಾಲದಲ್ಲಿ ಅನೇಕ ಸುಂದರವಾದ ಬ್ಲಾಗ್‌ಗಳನ್ನು ಸೃಷ್ಟಿಸಿದ್ದಾರೆ. ಫೇಸ್‌ಬುಕ್‌ನಲ್ಲೂ  ಸಕ್ರಿಯರಾಗಿದ್ದಾರೆ. ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಮಾನವೀಯ ವ್ಯಕ್ತಿತ್ವ ಅವರದು.
 
**
ವ್ಯಂಗ್ಯಚಿತ್ರ ಪ್ರದರ್ಶನ 
ಬಿ.ವಿ. ಪಾಂಡುರಂಗರಾವ್ ಅವರ ವ್ಯಂಗ್ಯಚಿತ್ರ ಪ್ರದರ್ಶನ ವಿದ್ಯಾರಣ್ಯಪುರದ ಹಿರಿಯ ನಾಗರಿಕ ವೇದಿಕೆ ಸಂಸ್ಥೆಯ ಆವರಣದಲ್ಲಿ ಜ.20ರಂದು (ಶುಕ್ರವಾರ) ಬೆಳಿಗ್ಗೆ11ಕ್ಕೆ ಏರ್ಪಡಿಸಲಾಗಿದೆ. ಅಂದು ಸಂಜೆ 6ಕ್ಕೆ ಅವರ ವ್ಯಂಗ್ಯಚಿತ್ರಗಳ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಕೂಡ ನಡೆಯಲಿದೆ.
 
ಅವರ 100 ವ್ಯಂಗ್ಯಚಿತ್ರಗಳನ್ನೊಳಗೊಂಡ ಈ ಪ್ರದರ್ಶನದಲ್ಲಿ ರಾಜಕೀಯ, ಸಾಮಾಜಿಕ, ಪರಿಸರ, ತಿಳಿ ಹಾಸ್ಯ, ಕ್ರೀಡೆ, ಜಲಸಂಕಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿರುವ ಅನೇಕ ವ್ಯಂಗ್ಯಚಿತ್ರಗಳ 49ನೇ ಪ್ರದರ್ಶನ ಇದಾಗಿದೆ.
 
**
ಇಂದಿನ ವ್ಯಂಗ್ಯಚಿತ್ರಕಾರರು ವಾಸ್ತವ ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.  ಚಿತ್ರವನ್ನು  ಬರೆದ ಮಾತ್ರಕ್ಕೆ ಯಾರೂ  ವ್ಯಂಗ್ಯಚಿತ್ರಕಾರರಾಗಲು ಸಾಧ್ಯವಿಲ್ಲ. ಸತತ ಪ್ರಯತ್ನದಿಂದ ಮಾತ್ರವೇ ಯಶಸ್ಸು ನಮ್ಮದಾಗುತ್ತದೆ
–ಪಾಂಡುರಂಗರಾವ್, ವ್ಯಂಗ್ಯಚಿತ್ರಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT