ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಪಡೆಗೆ ಸರಣಿ ಜಯ

ಯುವರಾಜ್‌–ದೋನಿ ಶತಕಗಳ ಜುಗಲ್‌ಬಂದಿ
Last Updated 19 ಜನವರಿ 2017, 20:08 IST
ಅಕ್ಷರ ಗಾತ್ರ

ಕಟಕ್‌:  ರನ್‌ ಹೊಳೆ ಹರಿದ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ತಂಡವನ್ನು 15 ರನ್‌ಗಳಿಂದ ಮಣಿಸಿದ   ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೂರು ವರ್ಷಗಳ ಬಳಿಕ ರಾಷ್ಟ್ರೀಯ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಯುವರಾಜ್‌ ಸಿಂಗ್ ಮತ್ತು ನಾಯಕತ್ವ ತ್ಯಜಿಸಿದ ಬಳಿಕ ಎರಡನೇ ಪಂದ್ಯವಾಡಿದ ಮಹೇಂದ್ರ ಸಿಂಗ್ ದೋನಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ ಒದಗಿಸಿತು. ಇದರಿಂದ ಸವಾಲಿನ ಮೊತ್ತ ಕಲೆ ಹಾಕಿದ ಆತಿಥೇಯರು ಎದುರಾಳಿ ತಂಡವನ್ನು ಕೊನೆಯ ಓವರ್‌ಗಳಲ್ಲಿ ನಿಯಂತ್ರಿಸಿ ಗೆಲುವು ಪಡೆದರು.

ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 381 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ದಿಟ್ಟತನದಿಂದಲೇ ಬೆನ್ನಟ್ಟಿದ ಪ್ರವಾಸಿ ತಂಡ ಕೊನೆಯಲ್ಲಿ ಎಡವಿತು. ಈ ತಂಡ ಅಂತಿಮವಾಗಿ ಎಂಟು ವಿಕೆಟ್‌ ಕಳೆದುಕೊಂಡು 366 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು.

ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿದ್ದು ಭಾರತ ಈಗ 2–0ರಲ್ಲಿ ಮುನ್ನಡೆ ಸಾಧಿಸಿದೆ. ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿಥೇಯರು ಗೆಲುವು ಸಾಧಿಸಿದ್ದರು. ಮೊದಲ ಸರಣಿಯಲ್ಲಿಯೇ ಯಶಸ್ಸು: ಇಂಗ್ಲೆಂಡ್ ಎದುರಿನ ಸರಣಿಗೂ ಮೊದಲು ದೋನಿ  ಏಕದಿನ ಮಾದರಿಯ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಪೂರ್ಣಾವಧಿ ನಾಯಕರಾದ ಬಳಿಕದ ಮೊದಲ ಸರಣಿಯಲ್ಲಿಯೇ ವಿರಾಟ್‌ ಕೊಹ್ಲಿ ಯಶಸ್ಸು ಕಂಡಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ ಪುಣೆ ಪಂದ್ಯದಲ್ಲಿ ಶತಕ ಗಳಿಸಿ ಗೆಲುವಿಗೆ ಕಾರಣರಾಗಿದ್ದರು. ಆದರೆ ಅವರು ಅಲ್ಲಿ  ಎಂಟು ರನ್ ಗಳಿಸಿ ಔಟಾದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್‌ (11) ಮತ್ತು ಕರ್ನಾಟಕದ ಕೆ.ಎಲ್‌. ರಾಹುಲ್‌  ಮತ್ತೆ ವೈಫಲ್ಯ ಕಂಡರು. ಭಾರತದ ಮೊದಲ ಮೂರು ವಿಕೆಟ್‌ಗಳು ಪತನವಾದಾಗ ತಂಡದ ಖಾತೆಯಲ್ಲಿ ಇದ್ದದ್ದು ಕೇವಲ 25 ರನ್‌. ಈ ವೇಳೆ ಆಪದ್ಘಾಂದವರಾಗಿ ಬಂದಿದ್ದು ಯುವರಾಜ್‌ ಮತ್ತು ದೋನಿ.

ಕಳಪೆ ಬ್ಯಾಟಿಂಗ್‌ನಿಂದ ಯುವರಾಜ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದರು. ಆದರೆ ಈ ಬಾರಿ ಸಿಕ್ಕ ಅವಕಾಶವನ್ನು  ಸರಿಯಾಗಿಯೇ ಬಳಸಿಕೊಂಡರು. 56 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ  ನಂತರ ರನ್‌ ವೇಗ ಹೆಚ್ಚಿಸಿದರು. ಮೂರಂಕಿ ಮುಟ್ಟಲು 98 ಎಸೆತಗಳನ್ನು ತೆಗೆದುಕೊಂಡರು.

ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಶತಕ ಗಳಿಸುತ್ತಿದ್ದಂತೆ ಭಾವುಕರಾಗಿ ಬ್ಯಾಟ್‌ ಅನ್ನು ಎದೆಗೆ ಬಡಿದುಕೊಂಡರು. ಏಕೆಂದರೆ ಪಂಜಾಬ್‌ನ ಬ್ಯಾಟ್ಸ್‌ಮನ್‌ 2011ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಚೆನ್ನೈನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಶತಕ ಹೊಡೆದಿದ್ದರು. ಆ ಬಳಿಕ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.
ಇವರ ಆಟಕ್ಕೆ ಉತ್ತಮ ಬೆಂಬಲ ನೀಡಿದ ದೋನಿ ಕೂಡ ಇಂಗ್ಲೆಂಡ್ ಬೌಲರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ದೋನಿ (134, 202 ನಿಮಿಷ, 122 ಎಸೆತ, 10 ಬೌಂಡರಿ, 6 ಸಿಕ್ಸರ್‌) ತಂಡದ ಮೊತ್ತವನ್ನು ಮೂನ್ನೂರು ರನ್‌ಗಳ ಗಡಿ ದಾಟಿಸಿದರು.

ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 256 ರನ್‌ಗಳ ಜೊತೆಯಾಟವಾಡಿದರು. 50 ಓವರ್‌ಗಳ ಬ್ಯಾಟಿಂಗ್‌ನಲ್ಲಿ 38.2 ಓವರ್‌ಗಳನ್ನು ಇವರೇ ಆಡಿ ಕ್ರಿಕೆಟ್‌ ಪ್ರೇಮಿಗಳು ರನ್‌ ಮಳೆಯಲ್ಲಿ ಸಂಭ್ರಮಿಸುವಂತೆ ಮಾಡಿದರು.

ಕೊನೆಯಲ್ಲಿ ಎಡವಿದ ಇಂಗ್ಲೆಂಡ್‌: ಸರಣಿ ಉಳಿಸಿಕೊಳ್ಳಲು ಇಂಗ್ಲೆಂಡ್‌  ಶತಪ್ರಯತ್ನ ಮಾಡಿ ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಜಾಸನ್ ರಾಯ್‌ (82), ನಾಯಕ ಏಯೊನ್‌ ಮಾರ್ಗನ್‌ (102) ಮತ್ತು ಮೋಯಿನ್‌ ಅಲಿ (55) ಅವರು ನಡೆಸಿದ ಹೋರಾಟ ಸಾಕಾಗಲಿಲ್ಲ.  ಪ್ರಮುಖ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ ಕೊನೆಯವರೆಗೂ ಉತ್ತಮ ರನ್‌ರೇಟ್‌ ಕಾಪಾಡಿಕೊಂಡು ಬಂದ ತಂಡ ಕೊನೆಯ ಐದು ಓವರ್‌ಗಳಲ್ಲಿ 73 ರನ್ ಗಳಿಸಬೇಕಿತ್ತು.
47ನೇ ಓವರ್‌ನಲ್ಲಿ 17 ರನ್ ಕಲೆ ಹಾಕಿದ ಇಂಗ್ಲೆಂಡ್‌ ಗೆಲುವಿನ ಸನಿಹ ಬಂದಿತ್ತು. ಕೊನೆಯ ಎರಡು ಓವರ್‌ಗಳಲ್ಲಿ 33 ರನ್ ಹೊಡೆಯ ಬೇಕಿತ್ತು. ಈ ವೇಳೆ ವೇಗಿ ಜಸ್‌ಪ್ರೀತ್‌ ಬೂಮ್ರಾ ಮತ್ತು ಭುವನೇಶ್ವರ ಕುಮಾರ್ ತಲಾ ಒಂದು ಓವರ್ ಬೌಲ್‌ ಮಾಡಿ ರನ್ ನಿಯಂತ್ರಿಸಿದರು.

ಭಾರತ  6 ಕ್ಕೆ 381  (50 ಓವರ್‌ಗಳಲ್ಲಿ)

ಕೆ.ಎಲ್‌. ರಾಹುಲ್‌ ಸಿ ಬೆನ್‌ ಸ್ಟೋಕ್ಸ್‌ ಬಿ ಕ್ರಿಸ್‌ ವೋಕ್ಸ್‌  05
ಶಿಖರ್ ಧವನ್‌ ಬಿ ಕ್ರಿಸ್‌ ವೋಕ್ಸ್‌  11
ವಿರಾಟ್‌ ಕೊಹ್ಲಿ ಸಿ ಬೆನ್‌ ಸ್ಟೋಕ್ಸ್‌ ಬಿ ಕ್ರಿಸ್‌ ವೋಕ್ಸ್‌  08
ಯುವರಾಜ್‌ ಸಿಂಗ್‌ ಸಿ ಜಾಸ್‌ ಬಟ್ಲರ್‌ ಬಿ ಕ್ರಿಸ್‌ ವೋಕ್ಸ್‌  150
ಮಹೇಂದ್ರ ಸಿಂಗ್ ದೋನಿ ಸಿ ಡೇವಿಡ್‌ ವಿಲ್ಲೆ ಬಿ ಲಿಯಾಮ್‌ ಫ್ಲುಂಕೆಟ್‌  134
ಕೇದಾರ್‌ ಜಾಧವ್‌ ಸಿ ಜಾಕ್ ಬಲ್‌ ಬಿ ಲಿಯಾಮ್‌ ಫ್ಲುಂಕೆಟ್‌  22
ಹಾರ್ದಿಕ್‌ ಪಾಂಡ್ಯ ಔಟಾಗದೆ  19
ರವೀಂದ್ರ ಜಡೇಜ ಔಟಾಗದೆ  16
ಇತರೆ: (ಬೈ–4, ಲೆಗ್‌ ಬೈ–2, ವೈಡ್‌–9, ನೋ ಬಾಲ್‌–1)  16

ವಿಕೆಟ್‌ ಪತನ: 1–14  (ರಾಹುಲ್‌; 2.1), 2–22  (ವಿರಾಟ್‌; 2.6), 3–25 (ಧವನ್‌; 4.4), 4–281 (ಯುವರಾಜ್‌; 42.6), 5–323 (ಕೇದಾರ್‌; 45.6), 6–358 (ದೋನಿ; 47.6).

ಬೌಲಿಂಗ್‌:  ಕ್ರಿಸ್‌ ವೋಕ್ಸ್‌ 10–3–60–4, ಡೇವಿಡ್‌ ವಿಲ್ಲೆ 5–0–32–0, ಜಾಕ್‌ ಬಲ್‌ 10–0–80–0, ಲಿಯಾಮ್‌ ಫ್ಲುಂಕೆಟ್‌ 10–1–91–2, ಬೆನ್‌ ಸ್ಟೋಕ್ಸ್‌    9–0–79–0, ಮೊಯೀನ್‌ ಅಲಿ 6–0–33–0.

ಇಂಗ್ಲೆಂಡ್‌ 8 ಕ್ಕೆ 366 (50 ಓವರ್‌ಗಳಲ್ಲಿ)

ಜಾಸನ್‌ ರಾಯ್‌ ಬಿ ರವೀಂದ್ರ ಜಡೇಜ  82
ಅಲೆಕ್ಸ್‌ ಹೇಲ್ಸ್‌ ಸಿ ಮಹೇಂದ್ರ ಸಿಂಗ್ ದೋನಿ ಬಿ ಜಸ್‌ಪ್ರೀತ್ ಬೂಮ್ರಾ  14
ಜೋ ರೂಟ್‌ ಸಿ ವಿರಾಟ್‌ ಕೊಹ್ಲಿ ಬಿ ರವಿಚಂದ್ರನ್‌ ಅಶ್ವಿನ್‌  54
ಏಯೊನ್‌ ಮಾರ್ಗನ್‌ ರನ್‌ ಔಟ್‌ (ಜಸ್‌ಪ್ರೀತ್ ಬೂಮ್ರಾ)  102
ಬೆನ್‌ ಸ್ಟೋಕ್ಸ್‌್ ಬಿ ರವಿಚಂದ್ರನ್‌ ಅಶ್ವಿನ್‌  01
ಜಾಸ್‌ ಬಟ್ಲರ್‌ ಸ್ಟಂಪ್ಡ್‌ ಮಹೇಂದ್ರ ಸಿಂಗ್ ದೋನಿ ಬಿ ರವಿಚಂದ್ರನ್ ಅಶ್ವಿನ್‌ 10
ಮೊಯೀನ್‌ ಅಲಿ ಬಿ ಭುವನೇಶ್ವರ ಕುಮಾರ್‌  55
ಕ್ರಿಸ್‌ ವೋಕ್ಸ್‌ ಬಿ ಜಸ್‌ಪ್ರೀತ್‌ ಬೂಮ್ರಾ  05
ಲಿಯಾಮ್‌ ಫ್ಲುಂಕೆಟ್‌ ಔಟಾಗದೆ  26
ಡೇವಿಡ್‌ ವಿಲ್ಲೆ ಔಟಾಗದೆ 05
ಇತರೆ: (ಲೆಗ್‌ ಬೈ–7, ವೈಡ್‌–4,  ನೋ ಬಾಲ್‌–1) 12

ವಿಕೆಟ್‌ ಪತನ: 1–28 (ಹೇಲ್ಸ್‌; 3.5), 2–128 (ರೂಟ್‌; 19.5), 3–170 (ರಾಯ್‌; 26.1), 4–173 (ಸ್ಟೋಕ್ಸ್‌; 27.2), 5–206 (ಬಟ್ಲರ್‌; 31.2),   6–299 (ಅಲಿ; 43.3), 7–304 (ವೋಕ್ಸ್‌; 44.2), 8–354 (ಮಾರ್ಗನ್‌; 48.3).

ಬೌಲಿಂಗ್‌:  ಭುವನೇಶ್ವರ ಕುಮಾರ್‌ 10–1–63–1, ಜಸ್‌ಪ್ರೀತ್ ಬೂಮ್ರಾ      9–0–81–2, ರವೀಂದ್ರ ಜಡೇಜ 10–0–45–1, ಹಾರ್ದಿಕ್‌ ಪಾಂಡ್ಯ  6–0–60–0, ರವಿಚಂದ್ರನ್‌ ಅಶ್ವಿನ್‌ 10–0–65–3, ಕೇದಾರ್ ಜಾಧವ್‌         5–0–45–0.

ಫಲಿತಾಂಶ:  ಭಾರತಕ್ಕೆ 15 ರನ್ ಗೆಲುವು ಹಾಗೂ 3 ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ.
ಪಂದ್ಯ ಶ್ರೇಷ್ಠ: ಯುವರಾಜ್‌ ಸಿಂಗ್‌.
ಮೂರನೇ ಪಂದ್ಯ: ಜನವರಿ 22 (ಕೋಲ್ಕತ್ತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT