ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಕೊಂದಿದ್ದ ಎಂಜಿನಿಯರ್‌ಗೆ ಜೀವಾವಧಿ ಶಿಕ್ಷೆ

ಅತ್ತೆ –ಮಾವ, ಮಗಳ ಎದುರೇ  ಕೃತ್ಯವೆಸಗಿದ್ದ ಆರೋಪಿ
Last Updated 19 ಜನವರಿ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯ ಕರುಳು ಹೊರಗೆ ಬರುವಂತೆ 17 ಬಾರಿ ಹೊಟ್ಟೆಗೆ ಇರಿದು  ಕೊಲೆ ಮಾಡಿದ್ದ ಟೆಕಿ ಸಿದ್ಧಾರ್ಥ ಚೌಧರಿ (34) ಎಂಬಾತನಿಗೆ ನಗರದ 70ನೇ ಸಿಟಿ ಸಿವಿಲ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ  ಗುರುವಾರ ಆದೇಶ ಹೊರಡಿಸಿದೆ.

ಎಚ್ಎಎಲ್‌ ಠಾಣೆ ವ್ಯಾಪ್ತಿಯ ರಾಜೇಶ್ವರಿ ಲೇಔಟ್‌ನಲ್ಲಿದ್ದ ತಂದೆ–ತಾಯಿ ಮನೆಯಲ್ಲಿ ಮೂರು ವರ್ಷದ ಮಗಳೊಂದಿಗೆ ರುಚಿ ಚೌಧರಿ (28) ಎಂಬುವರು ನೆಲೆಸಿದ್ದರು.2012ರ ನವೆಂಬರ್‌ 12ರಂದು ಆ ಮನೆಗೆ ಹೋಗಿದ್ದ ಆರೋಪಿಯು ಕೊಲೆ ಮಾಡಿ ಪರಾರಿಯಾಗಿದ್ದ. 

ರುಚಿ ಅವರ ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಅಂದಿನ ಎಚ್‌ಎಎಲ್‌ ಠಾಣೆಯ ಇನ್‌ಸ್ಪೆಕ್ಟರ್‌  ಸಿ.ಬಾಲಕೃಷ್ಣ,  ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಚ್‌.ಆರ್‌.ಸತ್ಯವತಿ ವಾದ ಮಂಡಿಸಿದ್ದರು.

ಪ್ರಕರಣದ ವಿವರ: ದೆಹಲಿ ಮೂಲದ ಸಿದ್ಧಾರ್ಥ, ನಗರದ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ರುಚಿ ಎಂಬುವರನ್ನು ಪ್ರೀತಿಸಿ 2008ರಲ್ಲಿ ಮದುವೆಯಾಗಿದ್ದ. ಬಳಿಕ ದಂಪತಿಯು ಮಾರತ್ತಹಳ್ಳಿಯ ಮುನೇಕೊಳಾಲದ ಅಪಾರ್ಟ್‌ಮೆಂಟ್‌ನಲ್ಲಿ  ವಾಸವಿದ್ದರು. ಅವರಿಗೆ ಮೂರು ವರ್ಷದ ಹೆಣ್ಣು ಮಗುವಿತ್ತು. 

2012ರ ಆಗಸ್ಟ್‌ನಲ್ಲಿ ಸಿದ್ಧಾರ್ಥ ದೆಹಲಿಗೆ ವರ್ಗವಾಗಿದ್ದ. ಆಗ ಪತ್ನಿ ಸಹ ಆತನೊಂದಿಗೆ ದೆಹಲಿಯಲ್ಲಿ ನೆಲೆಸಿದ್ದರು. ಕೆಲ ದಿನ ಬಳಿಕ ದಂಪತಿ ಮಧ್ಯೆ  ಕಲಹ ಉಂಟಾಗಿತ್ತು.ಆಗ ರುಚಿ, ಮಗುವಿನೊಂದಿಗೆ ಬೆಂಗಳೂರಿಗೆ ಬಂದು ತಂದೆ–ತಾಯಿಯೊಂದಿಗೆ ವಾಸವಿದ್ದರು. ಪೋಷಕರು, ಅವರಿಬ್ಬರ ಮಧ್ಯೆ ಸಂಧಾನ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

ಅದಾದ ಕೆಲ ದಿನಗಳ ಬಳಿಕ ದೆಹಲಿಯಿಂದ ವಿಮಾನದಲ್ಲಿ ನಗರಕ್ಕೆ ಬಂದಿದ್ದ ಸಿದ್ಧಾರ್ಥ್‌, ಪತ್ನಿ ರುಚಿ ವಾಸವಿದ್ದ ಮನೆಗೆ ಹೋಗಿದ್ದ. ಬಳಿಕ ತನ್ನ ಬಳಿಯ ಚಾಕುವಿನಿಂದ ಪೋಷಕರ ಎದುರೇ  ದಾರುಣವಾಗಿ ಕೊಲೆ ಮಾಡಿದ್ದ.

ವೇತನಕ್ಕಾಗಿ ಮದುವೆಯಾಗಿದ್ದ: ಸಿದ್ಧಾರ್ಥ್‌ನಿಗೆ ಸುಮಾರು ₹40 ಸಾವಿರ ಸಂಬಳವಿತ್ತು. ಅದೇ ರೀತಿ ರುಚಿ ಅವರಿಗೂ ₹50 ಸಾವಿರ ವೇತನ ಬರುತ್ತಿತ್ತು. ಪತ್ನಿ ಸಂಬಳವನ್ನೆಲ್ಲ ಕಸಿದುಕೊಳ್ಳುತ್ತಿದ್ದ ಸಿದ್ಧಾರ್ಥ್‌, ಮಾನಸಿಕ ಕಿರುಕುಳ ನೀಡುತ್ತಿದ್ದ. ಪತ್ನಿಯ ದಿನಬಳಕೆಗೂ ಹಣ ನೀಡುತ್ತಿರಲಿಲ್ಲ. ಹೀಗಾಗಿ ರುಚಿ, ಆತನಿಂದ ದೂರವಾಗಲು ಬಯಸಿ ತವರು ಮನೆಗೆ ಬಂದಿದ್ದರು.

ಅವರನ್ನು ಕೊಲೆ ಮಾಡಲು ನಿರ್ಧರಿಸಿ ನಗರಕ್ಕೆ ಬಂದ ಸಿದ್ಧಾರ್ಥ್‌, ಮಾಲ್‌ವೊಂದರಲ್ಲಿ ಚಾಕು ಖರೀದಿಸಿದ್ದ. ಬಳಿಕ ಮನೆಗೆ ಹೋಗಿ ಪೋಷಕರು ಹಾಗೂ ತನ್ನ ಮಗಳ ಎದುರೇ ಕೃತ್ಯ ಎಸಗಿದ್ದ ಎಂದು ಎಚ್‌ಎಎಲ್‌ ಪೊಲೀಸರು ತಿಳಿಸಿದರು.

ಜಾಮೀನು ಅರ್ಜಿ ರದ್ದು
‘ಆರೋಪಿಯು ಜಾಮೀನಿಗಾಗಿ  ಹೈಕೋರ್ಟ್‌ಗೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದ. ಆದರೆ, ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌್ ಸತ್ಯವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT