ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

ನಗರದ ಬೀಡಿ ಕಾಲೊನಿ ನಿವಾಸಿಗಳಿಂದ ನಗರ ಸಭೆಗೆ ದಿಢೀರ ಮುತ್ತಿಗೆ
Last Updated 20 ಜನವರಿ 2017, 7:43 IST
ಅಕ್ಷರ ಗಾತ್ರ

ಕೋಲಾರ: ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಗರದ ಬೀಡಿ ಕಾಲೊನಿ ನಿವಾಸಿಗಳು ನಗರಸಭೆ ಕಚೇರಿಗೆ ಗುರುವಾರ ದಿಢೀರ್‌ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಆಟೊ, ಬೈಕ್‌ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಬಂದ ಬಡಾವಣೆಯ ನಿವಾಸಿಗಳು ನಗರಸಭೆಯ ಪ್ರವೇಶಧ್ವಾರದಲ್ಲಿ ಕುಳಿತು ಅಧಿಕಾರಿಗಳು ಮತ್ತು ವಾರ್ಡ್‌ನ ಸದಸ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಮ್ಮ ಕೊಠಡಿಯಿಂದ ಹೊರಬಂದ ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಹಾಗೂ ಕೆಲ ಸದಸ್ಯರನ್ನು ಸುತ್ತುವರಿದ ಪ್ರತಿಭಟನಾಕಾರರು, ಬಡಾವಣೆಗೆ ಖುದ್ದು ಭೇಟಿ ನೀಡಿ ಮೂಲಸೌಕರ್ಯ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು. ಅಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ಪ್ರಸಾದ್‌ ಬಾಬು, ಅಸ್ಲಂ ಪಾಷಾ, ಸೋಮಶೇಖರ್‌, ನಾರಾಯಣಸ್ವಾಮಿ, ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಆದರೆ, ಪಟ್ಟು ಸಡಿಲಿಸದ ಪ್ರತಿಭಟನಾಕಾರರು, ‘ಬಡಾವಣೆಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ನಗರಸಭೆ ವತಿಯಿಂದ ಕಳುಹಿಸುತ್ತಿರುವ ಟ್ಯಾಂಕರ್‌ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್‌ ಚಾಲಕ ಪ್ರತಿ ಮನೆಯಿಂದ ₹ 10 ಪಡೆಯುತ್ತಿದ್ದಾನೆ. ಹಣ ನೀಡದಿದ್ದರೆ ಆತ ನೀರು ಕೊಡುವುದೇ ಇಲ್ಲ’ ಎಂದು ಆರೋಪಿಸಿದರು.

ಇ–ಟೆಂಡರ್‌ನಡಿ ಬಡಾವಣೆಗೆ ನೀರು ಪೂರೈಸಲು ಗುತ್ತಿಗೆ ಪಡೆದಿರುವ ಟ್ಯಾಂಕರ್‌ ಮಾಲೀಕ ನಗರಸಭೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ನೀರು ಸರಬರಾಜು ಮಾಡುತ್ತಿದ್ದಾನೆ. ಪ್ರತಿ ಮನೆಗೆ ದಿನಕ್ಕೆ ಕೇವಲ 15 ಬಿಂದಿಗೆ ಮಾತ್ರ ನೀರು ಕೊಡಲಾಗುತ್ತಿದೆ. ಆದರೆ, ಟ್ಯಾಂಕರ್‌ ಮಾಲೀಕ ಬಡಾವಣೆಗೆ ನಿಗದಿತ ಪ್ರಮಾಣದಲ್ಲೇ ನೀರು ಸರಬರಾಜು ಮಾಡಿರುವುದಾಗಿ ನಗರಸಭೆಗೆ ಸುಳ್ಳು ಮಾಹಿತಿ ಕೊಟ್ಟು ವಂಚಿಸುತ್ತಿದ್ದಾನೆ ಎಂದು ದೂರಿದರು.

ಕಾಳಜಿ ಇಲ್ಲ: ಬಡಾವಣೆಯು 35ನೇ ವಾರ್ಡ್‌ ವ್ಯಾಪ್ತಿಯಲ್ಲಿದ್ದು, ವಾರ್ಡ್‌ನ ಸದಸ್ಯರಾದ ಸರ್ಲಾ ತಾಜ್‌ ಅವರಿಗೆ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ, ಟ್ಯಾಂಕರ್‌ ಮಾಲೀಕರ ಜತೆ ಶಾಮೀಲಾಗಿರುವ ಅವರು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿಲ್ಲ. ಅವರು ಸದಸ್ಯೆಯಾಗಿ ಆಯ್ಕೆಯಾದ ನಂತರ ಎರಡು ಬಾರಿ ಮಾತ್ರ ಬಡಾವಣೆಗೆ ಭೇಟಿ ನೀಡಿದ್ದಾರೆ. ಅವರಿಗೆ ಸ್ವಲ್ಪವೂ ಜನಪರ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡಾವಣೆಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ಹಣ ಕೊಟ್ಟು ಕುಡಿಯುವ ನೀರು ಖರೀದಿಸುತ್ತಿದ್ದೇವೆ. ಬಡಾವಣೆಯ ಬಹುಪಾಲು ಚರಂಡಿಗಳಲ್ಲಿ ಕಸ ಕಟ್ಟಿಕೊಂಡಿದ್ದು, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಪೌರ ಕಾರ್ಮಿಕರು ಏಳೆಂಟು ತಿಂಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಚರಂಡಿ ನೀರು ರಸ್ತೆಗೆ ಹರಿದು ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಮತ್ತೊಂದೆಡೆ ಮ್ಯಾನ್‌ಹೋಲ್‌ಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.

ಕೊಳೆಗೇರಿಯಂತಾಗಿದೆ: ನಗರಸಭೆಯ ಪೌರ ಕಾರ್ಮಿಕರು ಪ್ರತಿನಿತ್ಯ ಮನೆಗಳ ಬಳಿ ಬಂದು ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ಖಾಲಿ ನಿವೇಶನ ಹಾಗೂ ರಸ್ತೆಗಳ ಅಕ್ಕಪಕ್ಕ ಕಸ ಸುರಿಯುತ್ತಿದ್ದಾರೆ. ಬಡಾವಣೆಯ ಹಲವೆಡೆ ಕಸ ರಾಶಿಯಾಗಿ ಬಿದ್ದಿದ್ದು, ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ. ಜತೆಗೆ ಸೊಳ್ಳೆ, ಬೀದಿ ನಾಯಿ ಹಾಗೂ ಹಂದಿಗಳ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ ಎಂದು ಹೇಳಿದರು.

ಗೊಂದಲದ ವಾತಾವರಣ: ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಪ್ರತಿಭಟನಾಕಾರರು ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಬಡಾವಣೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದರು.

ಜತೆಗೆ ಸ್ಥಳೀಯರ ಅಹವಾಲು ಆಲಿಸಿ ಬಡಾವಣೆಯ ವಾಲ್‌ಮೆನ್‌ ಮತ್ತು ಟ್ಯಾಂಕರ್‌ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಟ್ಯಾಂಕರ್‌ ಮಾಲೀಕನ ಗುತ್ತಿಗೆ ರದ್ದುಪಡಿಸುತ್ತೇವೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT