ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ, ಸಾಂಸ್ಕೃತಿಕ ಮೇಳಕ್ಕೆ ತೆರೆ

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
Last Updated 20 ಜನವರಿ 2017, 7:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ತಾಲ್ಲೂಕಿನಲ್ಲಿ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮದಲ್ಲಿ ಜನವರಿ 15 ರಿಂದ ನಡೆದಿದ್ದ ೪೩ನೇ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಮೇಳಕ್ಕೆ ಗುರುವಾರ ತೆರೆ ಬಿದ್ದಿತ್ತು.

ಪ್ರೇಮಾಮೃತಂ ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಬಹುಮಾನ ಪ್ರದಾನ ಮಾಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಜೆ. ಶಶಿಧರ ಪ್ರಸಾದ್, ‘ಹೃದಯ ತೆರೆದು, ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಏಕಾಗ್ರತೆಯಿಂದ ಗುರಿಯೆಡೆಗೆ ಸಾಗುತ್ತಿದ್ದರೆ ಜಯ ಖಂಡಿತ ಸಿಗುತ್ತದೆ. ನಾನು ಎನ್ನುವ ಸ್ವಾರ್ಥ ನುಸುಳಿದರೆ ಸಮೂಹದ ಶಕ್ತಿ ಹಾಳಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಶಸ್ಸಿನಲ್ಲಿ ನಮ್ಮ ಪಾಲಿದ್ದರೂ ಅದರ ಹಿಂದಿನ ಕಾರಣ ನಾನಲ್ಲ. ನಾವು ನೆಪ ಮಾತ್ರ ಎನ್ನುವ ಭಾವನೆ ಬೆಳಸಿಕೊಳ್ಳಬೇಕು’ ಎಂದು ಹೇಳಿದರು.

ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಈ ಮೇಳ ಯಶಸ್ವಿಯಾಗುವಲ್ಲಿ ನೂರಾರು ಜನರ ಅರ್ಪಣಾ ಮನೋಭಾವದ ಶ್ರಮವಿದೆ. ಅಂಥ ಮನೋಭಾವನೆ ಪ್ರಪಂಚದಾದ್ಯಂತ ಪಸರಿಸಿ ಅದರ ಪ್ರಯೋಜನ ಪ್ರತಿಯೊಬ್ಬರಿಗೂ ಲಭಿಸುವಂತಾಗಬೇಕು’ ಎಂದು ತಿಳಿಸಿದರು.

ವಿಜೇತರ ವಿವರ: ಬಾಲಕರ ವಿಭಾಗ: ಪಥಸಂಚಲನದ ಕಿರಿಯರ ವಿಭಾಗದಲ್ಲಿ ಹಾಸನದ ಸತ್ಯನಿಕೇತನದ ವಿದ್ಯಾರ್ಥಿಗಳು ಪ್ರಥಮ, ವಿಜಯಪುರದ ಪ್ರೇಮನಿಕೇತನದ ವಿದ್ಯಾರ್ಥಿಗಳು ದ್ವಿತೀಯ, ಹಿರಿಯರ ವಿಭಾಗದಲ್ಲಿ ಮುದ್ದೇನಹಳ್ಳೀ ಸತ್ಯಸಾಯಿ ವಿದ್ಯಾನಿವೇಶನದ ಪದವಿ ಪೂರ್ವ ಕಾಲೇಜು ಹಾಗೂ ಸತ್ಯಸಾಯಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು.

ಕ್ರೀಡೆ ಮತ್ತು ಮೇಲಾಟಗಳಲ್ಲಿ ಮುದ್ದೇನಹಳ್ಳಿ ಸತ್ಯಸಾಯಿ ವಿದ್ಯಾಕೇಂದ್ರ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮುದ್ದೇನಹಳ್ಳಿಯ ಸತ್ಯಸಾಯಿ ಪ್ರೌಢಶಾಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಮುದ್ದೇನಹಳ್ಳಿ ಸತ್ಯಸಾಯಿ ವಿದ್ಯಾಕೇಂದ್ರ, ಜಯಪುರದ ಸತ್ಯಸಾಯಿ ದಿವ್ಯನಿಕೇತನ   ಜಂಟಿಯಾಗಿ ಹಂಚಿಕೊಂಡವು.

ಬಾಲಕಿಯರ ವಿಭಾಗ: ಚಿಕ್ಕಬಳ್ಳಾಪುರದ ಪ್ರಶಾಂತಿ ಬಾಲಮಂದಿರ ಮತ್ತು ಜಯಪುರದ ಶ್ರೀನಿಕೇತನದ ವಿದ್ಯಾರ್ಥಿಗಳು ಪಥಸಂಚಲನ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡರು. ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರಶಸ್ತಿಗಳನ್ನು ಹಂಚಿಕೊಂಡರು. ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ವರ್ಷದ ಉತ್ತಮ ಕ್ರೀಡಾಪಟು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ರೀಡಾಕೂಟದ ನಿರ್ದೇಶಕ ಗೋಪಿನಾಥ, ಪಥಸಂಚಲನದ ರೂವಾರಿ ಸುಬೇದಾರ್ ರಮಣ ರಾಜು, ವಾದ್ಯ ವೃಂದದ ನಿರ್ದೇಶಕ ಡಿಮಿಟ್ರಿಸ್ ಲ್ಯಾಂಬ್ರಿಯೋನಸ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಪಿ.ಸಾಯಿಲೀಲಾ, ವಿನೋದಿನಿ ಮಹಿಷಿ, ಶ್ರೀಮತಿ ಶಶಿಧರ ಪ್ರಸಾದ್, ಆಡಳಿತ ಅಧಿಕಾರಿ ಶಿವಸುಬ್ರಹ್ಮಣ್ಯಂ, ಅಳಿಕೆಯ ಪ್ರತಿನಿಧಿಗಳಾದ ಕರಾಯ ಸಂಜೀವಶೆಟ್ಟಿ, ಎಚ್‌.ರಮಾನಂದ, ಭುವನ ಸಂತಾನಂ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT