ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗದ ತೇಲಾಡುವ ಸೋಲಾರ್‌ ಘಟಕ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಕೆರೆ ಆಯ್ಕೆ; ದೇಶದ ಪ್ರಥಮ ಘಟಕಕ್ಕೆ ಹಿನ್ನಡೆ
Last Updated 20 ಜನವರಿ 2017, 7:52 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ದೇಶದ ಮೊದಲ ತೇಲಾಡುವ ಸೋಲಾರ್‌ ಘಟಕ ಸ್ಥಾಪನೆಯ ಕನಸು ಭಗ್ನಗೊಂಡಿದೆ. ಮೂರು ಸಲ ಟೆಂಡರ್‌ ಕರೆದರೂ ಯಾವ ಕಂಪೆನಿಯೂ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಹೊಸ ತಂತ್ರಜ್ಞಾನ ಆಗಿರುವ ಕಾರಣ ಕಂಪೆನಿಗಳು ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕೊನೆಯ ಟೆಂಡರ್‌ ಕರೆಯುವ ಮುನ್ನ ಟಾಟಾ ಸೋಲಾರ್‌ ಕಂಪೆನಿ ಘಟಕ ಸ್ಥಾಪಿಸುವ ಆಸಕ್ತಿ ತೋರಿಸಿತ್ತು. ಆದರೂ ಟೆಂಡರ್‌ನಲ್ಲಿ ಭಾಗಹಿಸಲಿಲ್ಲ. ಈಗ ನಾಲ್ಕನೇ ಸಲ ಟೆಂಡರ್‌ ಕರೆಯಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಗುಬ್ಬಿ ತಾಲ್ಲೂಕಿನ ನಿಟ್ಟೂರು ಕೆರೆಯನ್ನು  ಘಟಕ ಸ್ಥಾಪನೆಗೆ ಕ್ರೆಡೆಲ್‌  (ಕರ್ನಾಟಕ ನವೀಕರಿಸಬಲ್ಲ ಇಂಧನ ನಿಗಮ) ಆಯ್ಕೆ ಮಾಡಿಕೊಂಡಿತ್ತು.
ಪಾವಗಡ ತಾಲ್ಲೂಕಿನಲ್ಲಿ  12 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಸೋಲಾರ ಘಟಕ ಸ್ಥಾಪನೆಯಾಗುತ್ತಿರುವ ಕಾರಣ ದೇಶದ ಗಮನ ಸೆಳೆಯುವ ಸಲುವಾಗಿ ತೇಲಾಡುವ ಸೋಲಾರ್‌ ಘಟಕ ನಿರ್ಮಾಣ ಮಾಡುವ ಚಿಂತನೆ ನಡೆಸಲಾಗಿತ್ತು.

ನಿಟ್ಟೂರು ಕೆರೆಯು ಬೆಂಗಳೂರಿಗೆ ಸಮೀಪ ಇದೆ. ಅಲ್ಲದೇ  ಕೆರೆಗೆ ಹೇಮಾವತಿ ನೀರಿನ ಮೂಲ ಇರುವುದರಿಂದ ಮಳೆ ಆಶ್ರಯಿಸಬೇಕಾಗಿಲ್ಲ. ಪ್ರತಿ ವರ್ಷ ಹೇಮಾವತಿ ನೀರಿನಿಂದ ಕೆರೆ ತುಂಬಿಸಬಹುದು. ಹೀಗಾಗಿ ಇಲ್ಲಿ ನೀರಿನ ಸಮಸ್ಯೆ ಕಾಡದ ಕಾರಣ ಘಟಕ ಸ್ಥಾಪನೆಗೆ ಕೆರೆಯನ್ನು ಆಯ್ಕೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಕೆರೆಯು 1045 ಎಕರೆಯಷ್ಟಿದ್ದು, ಇದರಲ್ಲಿ ಶೇ 30ರಷ್ಟು ಜಾಗದಲ್ಲಿ ಸೋಲಾರ್‌ ಘಟಕ ಸ್ಥಾಪಿಸಲು ನೀಲ ನಕ್ಷೆ ತಯಾರಿಸಲಾಗಿತ್ತು. ಈ ತೇಲಾಡುವ ಘಟಕ ಕೆರೆಯ ಬೇರೆ ಬೇರೆ ಬದಿಗೆ ತೇಲಿ ಹೋಗದಂತೆ ತಡೆಯಲು ‘ತಡೆಕಟ್ಟೆ’ಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು ಎಂದು ಹೇಳಲಾಗಿದೆ.

ಕೆರೆಯು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿದ್ದು,  ಕುಡಿಯುವ ನೀರು ಪೂರೈಸಲು ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶಕ್ಕೂ ನೀರು ಪೂರೈಸಲಾಗುತ್ತದೆ. ಸೋಲಾರ್‌ ಘಟಕಕ್ಕೆ ಕೆರೆಯಲ್ಲಿ ಐದು–ಆರು ಅಡಿ ನೀರು ಇದ್ದರೂ ಸಾಕಾಗಲಿದೆ. ಘಟಕ ಸ್ಥಾಪನೆಯಾದರೆ ಕುಡಿಯುವ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೂ  ನೀರಿನ ಸಮಸ್ಯೆಯಾಗುತ್ತಿರಲಿಲ್ಲ ಎನ್ನಲಾಗಿದೆ. ಘಟಕ ಸ್ಥಾಪನೆಗೆ ₹ 20 ಕೋಟಿ ವೆಚ್ಚವಾಗಲಿದ್ದು, 2 ಮೆಗಾವಾಟ್ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿತ್ತು.

ಘಟಕ ಸ್ಥಾಪನೆಯ ಸಂಬಂಧ ಫ್ರಾನ್ಸ್‌ ಮೂಲದ ಬೆಂಗಳೂರಿನಲ್ಲಿರುವ  ಇಜಿಎಸ್‌ಪಿಎಲ್‌ ಕಂಪೆನಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಕೂಡ ಸಲ್ಲಿಸಿತ್ತು ಎಂದು ತಿಳಿದುಬಂದಿದೆ. 

ತೇಲಾಡುವ  ಘಟಕ  ದೇಶದಲ್ಲಿ ಎಲ್ಲೂ ಇಲ್ಲ. ಇದೊಂದು ಪ್ರಾಯೋಗಿಕ ಯೋಜನೆಯಾಗಿದೆ. ಇದು ಯಶಸ್ವಿಯಾದರೆ ಕೆಆರ್ಎಸ್‌  ಮತ್ತಿತರರ ಜಲಾಶಯಗಳಲ್ಲಿ ಹಾಗೂ ರಾಜ್ಯದ ದೊಡ್ಡ ದೊಡ್ಡ ಕೆರೆಗಳಲ್ಲಿ ಇಂಥದೇ ಘಟಕ ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿತ್ತು ಎಂದು ಹೇಳಲಾಗಿದೆ.

ಇಂಥ ಘಟಕಗಳಿಗೆ ಭೂ ಸ್ವಾಧೀನದ ಪ್ರಶ್ನೆ ಬರುವುದಿಲ್ಲ. ಭೂಮಿಗಾಗಿ ಬಂಡವಾಳ ಹೂಡುವುದು ತಪ್ಪಲಿದೆ. ಕೆರೆ, ಜಲಾಶಯಗಳಿಂದ ಆವಿಯಾಗಿ ಹೋಗುವ ನೀರಿನ ಪ್ರಮಾಣವನ್ನು ತಡೆಯಬಹುದು.

ಇದರಿಂದಾಗಿ ನೀರಿನ ಉಳಿತಾಯವು ಆಗಲಿದೆ. ನಿಟ್ಟೂರು ಕೆರೆಯನ್ನು ಮಾದರಿಯಾಗಿ ತೆಗೆದುಕೊಂಡು  ರಾಜ್ಯದ ಎಲ್ಲ ಕಡೆ ಪ್ರೋತ್ಸಾಹ ನೀಡಲು ಉದ್ದೇಶಿಸಿ ಇಲ್ಲಿ ಘಟಕ ಆರಂಭಿಸಲು ಮುಂದಡಿ ಇಡಲಾಗಿತ್ತು ಎಂದು ಕ್ರೆಡೆಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕನಸು ಬಿಟ್ಟಿಲ್ಲ
ಇದೊಂದು ಕನಸಿನ ಯೋಜನೆ. ಯಾಕಾಗಿ ಕಂಪೆನಿಗಳು ಆಸಕ್ತಿ  ತೋರುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಯೋಜನೆಯನ್ನು ಕೈ ಬಿಡುವ ಪ್ರಶ್ನೆಯೆ ಇಲ್ಲ ಎಂದು ಕ್ರೆಡೆಲ್‌ ವ್ಯವಸ್ಥಾಪಕ ನಿರ್ದೇಶಕ ಬಲರಾಮ್‌ ತಿಳಿಸಿದರು.

‘ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ಕೋಟ್‌ ಮಾಡಿದರೂ ಯಾರೂ ಮುಂದೆ ಬರಲಿಲ್ಲ. ಬಂಡವಾಳ ಹೂಡಲು ಸ್ವಲ್ಪ ಹಣವನ್ನು ಸರ್ಕಾರ ವತಿಯಿಂದ ಭರಿಸಲು ಆಶ್ವಾಸನೆ ನೀಡಲಾಗಿದೆ. ಒಂದು ಯೂನಿಟ್‌ ವಿದ್ಯುತ್‌ಗೆ ₹ 8.40 ಪೈಸೆ ಪೂರಾ ಹಣವನ್ನು ಕಂಪೆನಿಗಳಿಗೆ ನೀಡುವ ವಾಗ್ದಾನ ಮಾಡಲಾಗಿದೆ. ಕಂಪೆನಿಗಳ ಬಳಿ ಮಾತನಾಡಿ ಮತ್ತೊಮ್ಮೆ ಟೆಂಡರ್‌ ಕರೆಯಲಾಗುವುದು. ಟಾಟಾ ಸೋಲಾರ್‌ ಕಂಪೆನಿಯವರು ಬಂಡವಾಳ ಹೂಡುವ ನಿರೀಕ್ಷೆ ಇದೆ’ ಎಂದರು.

ಮೇ ಒಳಗೆ ಉತ್ಪಾದನೆ
ಪಾವಗಡದ ಉದ್ದೇಶಿತ ಸೋಲಾರ ಘಟಕದ ಕಾಮಗಾರಿಗಳು ಆರಂಭಗೊಂಡಿವೆ. ಎಲ್ಲ ಸಮಸ್ಯೆಗಳು ಬಗೆಹರಿದಿವೆ ಎಂದು ಬಲರಾಮ್‌ ತಿಳಿಸಿದರು.
ಮೇ ತಿಂಗಳ ಒಳಗೆ ಸುಮಾರು 500 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT