ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ ಕೊರೆಸಲು ಕಚೇರಿಗಳಿಗೆ ಅಲೆದಾಟ!

ಒಣಗಿದ ಜಲಮೂಲಗಳು: ತೋಟ ಉಳಿಸಿಕೊಳ್ಳಲು, ಮನೆಕಟ್ಟಲು ನೀರಿಲ್ಲದೇ ಪರದಾಟ
Last Updated 20 ಜನವರಿ 2017, 8:41 IST
ಅಕ್ಷರ ಗಾತ್ರ

ಶಿವಮೊಗ್ಗ:  ಮಳೆ ಕೊರತೆಯ ಕಾರಣ ಅಂತರ್ಜಲ ಮಟ್ಟ ಪಾತಾಳ ತಲುಪಿದ್ದು, ಕೊಳವೆ ಬಾವಿ ಕೊರೆಸುವುದಕ್ಕೆ ಜಿಲ್ಲಾಡಳಿತ ಹೇರಿದ ನಿರ್ಬಂಧ ರೈತರು, ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಮಲೆನಾಡು ಭಾಗದಲ್ಲಿ ಎರಡು ವರ್ಷಗಳಿಂದ ವಾಡಿಕೆಯ ಮಳೆ ಸುರಿಯದ ಪರಿಣಾಮ ಜಲಾಶಯಗಳು ಬರಿದಾಗಿವೆ. ಕೆರೆಕಟ್ಟೆಗಳು ಒಣಗಿವೆ. ಅಂತರ್ಜಲಮಟ್ಟ ಕುಸಿದಿದೆ. ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ. ಹಾಗಾಗಿ, ಅಂತರ್ಜಲ ಸಂರಕ್ಷಿಸಲು ಬೇಕಾಬಿಟ್ಟಿ ಕೊಳವೆಬಾವಿ ಕೊರೆಸುವುದರ ಮೇಲೆ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಜ. 7ರಂದು ಮತ್ತೆ ಸರ್ಕಾರ ಪುನರ್‌ ಆದೇಶ ಹೊರಡಿಸಿ ಅಂತರ್ಜಲ ಬಳಕೆ ವಿಚಾರದಲ್ಲಿ 1999ರ ಆದೇಶ ಪಾಲಿಸುವಂತೆ ಸೂಚಿಸಿದ್ದರೂ, ಜಿಲ್ಲಾಡಳಿತ ಅನುಮತಿ ನಿರಾಕರಿಸುತ್ತಿದೆ.

ಪೂರ್ವಸಿದ್ಧತೆಯ ಕೊರತೆ:  ಕೊಳವೆಬಾವಿ ಕೊರೆಸುವುದರ ಮೇಲೆ ನಿರ್ಬಂಧ ಹೇರುವ ಮುನ್ನ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಬೆಳೆದು ನಿಂತ ವಾಣಿಜ್ಯ, ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ರೈತರು, ಮನೆ ಕಟ್ಟಿಕೊಳ್ಳಲು ನಾಗರಿಕರು ಜಿಲ್ಲಾಡಳಿತದಿಂದ  ನಿರಪೇಕ್ಷಣಾ ಪತ್ರ ಪಡೆದು ಕೊಳವೆಬಾವಿ ಕೊರೆಸಬಹುದು. ಆದರೆ, ಈ ಕುರಿತು ಸೂಕ್ತ ಮಾಹಿತಿ ನೀಡುತ್ತಿಲ್ಲ.

ಜಿಲ್ಲೆಯಲ್ಲಿ 79 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆ ಇದೆ. ಅದರಲ್ಲಿ 50 ಸಾವಿರ ಹೆಕ್ಟೇರ್‌ ಅಡಿಕೆ, 12,300 ಹೆಕ್ಟೇರ್‌ ಬಾಳೆ, 6,600 ಹೆಕ್ಟೇರ್‌ ತೆಂಗು, 3,350 ಹೆಕ್ಟೇರ್‌ ಮಾವು ಇದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ, ಬಾಳೆಗೆ ನೀರಿನ ಅವಶ್ಯಕತೆ ಇದೆ.

ಭದ್ರಾ, ತುಂಗಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲೂ ಈ ಬಾರಿ ನೀರಿನ ಕೊರತೆ ಇದೆ. ಕೆರೆ, ಮಳೆ ಆಶ್ರಿತ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಬೆಟ್ಟ, ಗುಡ್ಡಗಳ ಝರಿಯನ್ನೇ ನಂಬಿಕೊಂಡು ತೋಟ ಬೆಳೆಸಿದ್ದ ರೈತರು ಕಂಗಾಲಾಗಿದ್ದಾರೆ. ಹಾಗಾಗಿ, ಇದೇ ಮೊದಲ ಬಾರಿ ಮಲೆನಾಡಿನ ಹಲವು ಭಾಗಗಳ ರೈತರು ಕೊಳವೆಬಾವಿ ಕೊರೆಸಲು ಮುಂದಾಗಿದ್ದಾರೆ.

ಮನೆಕಟ್ಟುವುದೂ ಸವಾಲು: ಜಿಲ್ಲೆಯಲ್ಲಿ ಮರಳು ದೊರೆಯದೇ ಮನೆಕಟ್ಟಲು ಪರಿತಪಿಸುತ್ತಿದ್ದ ನಾಗರಿಕರು ಈಗ ನೀರಿನ ಸಮಸ್ಯೆಯನ್ನೂ ಎದುರಿಸು
ವಂತಾಗಿದೆ. ನಗರ, ಪಟ್ಟಣ ಪ್ರದೇಶ ಗಳಲ್ಲಿ ಮನೆ ಕಟ್ಟುವವರು ಕೊಳವೆ ಬಾವಿ ಕೊರೆಸಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಶಿವಮೊಗ್ಗ ನಗರದಲ್ಲೇ ಪ್ರತಿ ವರ್ಷ 800ರಿಂದ ಒಂದು ಸಾವಿರ ಮನೆಗಳ ನಿರ್ಮಾಣವಾಗುತ್ತವೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಪಾಲಿಕೆಯ ಪೈಪ್‌ಲೈನ್‌  ಸಾಗುವ ಮಾರ್ಗದಲ್ಲಿ, ನೀರಿನ ಲಭ್ಯತೆ ಇರುವ ಬಡಾವಣೆಗಳಲ್ಲಿ ಮನೆಕಟ್ಟಲು ಸಮಸ್ಯೆಯಾಗಿಲ್ಲ. ಆದರೆ, ನಗರದ ಹೊರವಲಯದ ಹೊಸ ಬಡಾವಣೆ
ಗಳಲ್ಲಿ ಮನೆಕಟ್ಟಲು ಜನರು ಪರದಾಡುತ್ತಿದ್ದಾರೆ.

ಬೋರ್‌ ಲಾರಿಗಳೂ ವಶಕ್ಕೆ: ಕೊಳವೆ ಬಾವಿ ಕೊರೆಸುವುದರ ಮೇಲೆ ನಿರ್ಬಂಧ ಹೇರುತ್ತಿದಂತೆ ಆವಶ್ಯಕತೆ ಇಲ್ಲದಿರುವ ರೈತರೂ ಮುಂದಾ
ಲೋಚನೆಯಿಂದ ಹೆಚ್ಚು ಕೊಳವೆಬಾವಿ ಕೊರೆಸಲು ಮುಂದಾಗಿದ್ದರು. ವಿವಿಧ ಪಕ್ಷಗಳ ಮುಖಂಡರೂ ಒತ್ತಡ ಹಾಕಿದ್ದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೊಳವೆಬಾವಿ ಕೊರೆಸುವವರ ಮೇಲೆ ಕ್ರಮ ಕೈಗೊಳ್ಳುವ ಬದಲು ಕೊಳವೆ ಬಾವಿ ಕೊರೆಯುವ ಲಾರಿಗಳನ್ನೇ ವಶಕ್ಕೆ ಪಡೆಯುತ್ತಿದೆ. ಕಠಿಣ ಕ್ರಮದ ಪರಿಣಾಮ ಲಾರಿಗಳ ಮಾಲೀಕರು  ಕೊಳವೆಬಾವಿ ಕೊರೆಯಲು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರದ ನಿಯಮಗಳೇನು?
ಕುಡಿಯುವ ನೀರಿನ ಮೂಲದಿಂದ 500 ಮೀಟರ್‌ ಹೊರಗೆ ಕೃಷಿ ಅಥವಾ ಮನೆಕಟ್ಟಲು ಕೊಳವೆಬಾವಿ ಕೊರೆಸಲು ಅಡ್ಡಿ ಇಲ್ಲ ಎಂದು ಸರ್ಕಾರ ಜ.7ರಂದು ಪುನರ್‌ ಆದೇಶ ಮಾಡಿದೆ.

ಒಂದು ವೇಳೆ ಖಾಸಗಿ ವ್ಯಕ್ತಿಗಳು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಸುತ್ತಿದ್ದು, ಅದು ಇನ್ನೊಂದು ಕೊಳವೆಬಾವಿಯಿಂದ 500 ಮೀಟರ್‌ ಒಳಗಿದ್ದರೆ ಅಂತರ್ಜಲ ವಿಭಾಗದ ಹಿರಿಯ ಭೂ ವಿಜ್ಞಾನಿ ಶಿಫಾರಸಿನ ಮೇಲೆ ಅವರಿಗೆ ಅನುಮತಿ ನೀಡಬಹುದು. 500 ಮೀಟರ್‌ಗೂ ಹೆಚ್ಚಿನ ಅಂತರವಿದ್ದರೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂಬುದು ಸರ್ಕಾರದ ನಿಯಮ.

*
ಕೊಳವೆಬಾವಿ ಕೊರೆಸಲು ಅನುಮತಿಗೆ ಜಿಲ್ಲಾಧಿಕಾರಿ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಬೇಕು. ಅಂತರ್ಜಲ ವಿಭಾಗ ಸ್ಥಳ ಪರಿಶೀಲಿಸಿ ಅನುಮತಿಗೆ ನೀಡಲು ಶಿಫಾರಸು ಮಾಡುತ್ತದೆ.
-ಶೇಕ್‌ ದಾವುದ್‌,
ಹಿರಿಯ ಭೂ ವಿಜ್ಞಾನಿ, ಅಂತರ್ಜಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT