ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ಕಲಿವಾಳ ವಜಾಗೊಳಿಸಲು ಆಗ್ರಹ

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಆರೋಪ
Last Updated 20 ಜನವರಿ 2017, 8:46 IST
ಅಕ್ಷರ ಗಾತ್ರ

ದಾವಣಗೆರೆ: ‘ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನೂರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಪ್ರೊ.ಬಿ.ಬಿ.ಕಲಿವಾಳ ಅವರನ್ನು ಕುಲಪತಿ ಸ್ಥಾನದಿಂದ ವಜಾಗೊಳಿಸಿ ತನಿಖೆಗೆ ಒಳಪಡಿಸಬೇಕು’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯ ಪವನ್‌ ಆಗ್ರಹಿಸಿದರು.

‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ–2000ರ ಉಪ ನಿಯಮ, ಕರ್ನಾಟಕ ಆರ್ಥಿಕ ಅನುಚ್ಛೇದ, ಸಾದಿಲ್ವಾರು ನಿಯಮ ಮತ್ತು ಕರ್ನಾಟಕ ಸಾರ್ವಜನಿಕ  ಪಾರದರ್ಶಕ ಅಧಿನಿಯಮಗಳನ್ನು ಉಲ್ಲಂಘನೆ ಮಾಡಿ, ಅಧಿಕಾರ ದುರುಪಯೋಗ ಮಾಡಿಕೊಂಡು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಎಸಗಿದ್ದಾರೆ. ಕೂಡಲೇ ಅವರನ್ನು ವಜಾಗೊಳಿಸಿ ತಕ್ಷಣ ತನಿಖೆ ಆರಂಭಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಡಿ.31, 2013ರಂದು ಅಧಿಕಾರ ವಹಿಸಿಕೊಂಡ ದಿನದಿಂದ ನ.30, 2016ರವರೆಗೆ ಮೂರು ವರ್ಷದ ಅವಧಿಯಲ್ಲಿ ಸರ್ಕಾರದ ಅನುದಾನ ಮತ್ತು ವಿಶ್ವವಿದ್ಯಾಲಯದ ಕ್ರೋಢಿಕೃತ ನಿಧಿಗಳನ್ನು ಯಾವ ಮಾನದಂಡವಿಲ್ಲದೇ ಕಾನೂನು ಬಾಹಿರವಾಗಿ ಅವರು ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ.

ಆತಿಥ್ಯ ಭತ್ಯೆಯಲ್ಲಿ ಮದ್ಯಪಾನ ಮತ್ತು ಮಾಂಸಾಹಾರಕ್ಕಾಗಿ ವೆಚ್ಚ ಭರಿಸಲು ಕರ್ನಾಟಕ ವಿವಿ ಅಧಿನಿಯಮಗಳಲ್ಲಿ ಅವಕಾಶವಿಲ್ಲ. ಆದರೆ, ಕಲಿವಾಳ ಅವರು ಆತಿಥ್ಯ ಭತ್ಯೆಯಲ್ಲಿ ಮದ್ಯಪಾನ ಮತ್ತು ಮಾಂಸಾಹಾರದ ವೆಚ್ಚವನ್ನು ಮರು ಸಂದಾಯ ಮಾಡಿಕೊಂಡಿರುತ್ತಾರೆ. 2013ರಿಂದ 2016ರ ಅವಧಿಯಲ್ಲಿ ಇದಕ್ಕಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ’ ಎಂದು ದೂರಿದರು.

‘ವಿವಿ ಆವರಣದಲ್ಲಿ ವೈ–ಫೈ ಸಂಪರ್ಕ ಮತ್ತು ಐಸಿಟಿ ಕೆಲಸ ನಿರ್ವಹಿಸಲು ಟೆಂಡರ್‌ ಕರೆಯದೆ ಕೇರಳ ಸರ್ಕಾರದ ಸಂಸ್ಥೆಯೊಂದಕ್ಕೆ ಕಾನೂನು ಬಾಹಿರ ವಾಗಿ ₹3.46ಕೋಟಿ ಒಡಂಬಡಿಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದರು.

‘ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬಯೋ ಟೆಕ್ನೊಲಜಿ ಬ್ರಾಂಚ್‌ ಇಲ್ಲ. ಅದಕ್ಕಾಗಿ 9 ಹುದ್ದೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಅಲ್ಲದೇ 104 ಬೋಧಕ ಹುದ್ದೆ ಹಾಗೂ 126 ಬೋಧಕೇತರ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನೂ ಆರಂಭಿಸಿದ್ದಾರೆ.

ಹೀಗೆ ಪ್ರತಿ ಹಂತದಲ್ಲಿಯೂ ಭ್ರಷ್ಟಾಚಾರ ನಡೆಸಿರುವ ಅವರನ್ನು ಕೂಡಲೇ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಕಡ್ಡಾಯವಾಗಿ ಅವರನ್ನು ರಜೆ ಮೇಲೆ ಕಳುಹಿಸಿ’ ಎಂದು ಆಗ್ರಹಿಸಿದರು.

‘ಪ್ರೊ.ಕಲಿವಾಳ ಅವರ ವಜಾಕ್ಕೆ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಎಬಿವಿಪಿಯಿಂದ ವಿಶ್ವವಿದ್ಯಾಲಯ ಮುತ್ತಿಗೆ ಹಾಕಿ  ‘ವಿಸಿ ಹಠಾವೊ ವಿವಿ ಬಚಾವೊ’ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಲಾಗು ವುದು’ ಎಂದು ಅವರು ಎಚ್ಚರಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿನಯ್‌, ಪ್ರಭುಲಿಂಗಪ್ಪ, ನಗರಾಧ್ಯಕ್ಷ ಕೆ.ಎಂ.ರಾಜಶೇಖರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT