ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕಾಗಿ ವೈಭೋಗ ತ್ಯಜಿಸಿದ ವೇಮನ

ಮಹಾಯೋಗಿ ವೇಮನ ಜಯಂತಿ; ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ
Last Updated 20 ಜನವರಿ 2017, 9:19 IST
ಅಕ್ಷರ ಗಾತ್ರ

ರಾಮದುರ್ಗ: ಮಹಾಯೋಗಿ ಶ್ರೀ ವೇಮನ ರಾಜವಂಶಸ್ಥನಾಗಿದ್ದರೂ ಸಾಮಾಜಿಕ ಸಮಾನತೆಗಾಗಿ ವೈಭವ ಯುತ ಜೀವನವನ್ನು ತ್ಯಾಗ ಮಾಡಿದ ಶ್ರೇಷ್ಠ ದಾರ್ಶನಿಕರಾಗಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ ಹೇಳಿದರು.

ಪಟ್ಟಣದಲ್ಲಿ ಗುರುವಾರ ಆಂಜನೇಯ ನಗರದ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಾಯೋಗಿ ವೇಮನರ 605ನೇ ಜಯಂತಿ ಹಾಗೂ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿಯ ಅನ್ಯಾಯ, ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕಲು ರಾಜವೈಭೋಗವನ್ನು ತ್ಯಜಿಸಿ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟದ್ದವರು ವೇಮನರು ಎಂದು ಅವರು ವಿವರಿಸಿದರು.

ಆತ್ಮಶುದ್ದಿ ಇಲ್ಲದ ಆಚಾರವೇಕೆ, ಮಡಿವಂತಿಕೆ ಶುದ್ಧಿ ಅಡುಗೆ ಏಕೆ ಎಂಬ ವೇಮನರ ವಚನದಂತೆ, ಆತ್ಮ, ಮನಸ್ಸು, ಆಚಾರ, ವಿಚಾರ, ನಿಷ್ಠೆ, ಕಾಯಕಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಹೇಳಿದರು.

ಹುಬ್ಬಳ್ಳಿ-–ಧಾರವಾಡದ ಮಾಜಿ ಮೇಯರ್ ಪಾಂಡುರಂಗ ಪಾಟೀಲ ಮಾತನಾಡಿ, ಪೂರ್ವಜರ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಸಮಾಜಕ್ಕೆ ತಿಳಿಸುವ ಮೂಲಕ ಉಳಿಸಿ ಬೆಳೆಸಿಕೊಂಡು ಹೋಗುವತ್ತ ಸಾಗಬೇಕಿದೆ. ಇಂದಿನ ಯುವ ಪೀಳಿಗೆಗೆ ಉತ್ತಮ ವ್ಯಕ್ತಿತ್ವದ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.

ವೇಮನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪಕ್ಕೆ ಸಂಸದ ಸುರೇಶ ಅಂಗಡಿ ಅವರು ₹10 ಲಕ್ಷ ಅನುದಾನ ನೀಡಿದ್ದಾರೆ, ಶಾಸಕ ಅಶೋಕ ಪಟ್ಟಣ ಅವರು ಕೂಡ ₹10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಅವರು ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಮದುರ್ಗ ತಾಲ್ಲೂಕು ರಡ್ಡಿ ಸಹಕಾರಿ ನೌಕರರ ಸಂಘವನ್ನು ಉದ್ಘಾಟಿಸಲಾಯಿತು. ಶ್ರೀನಿವಾಸಗೌಡ ಪಾಟೀಲ ರಚಿಸಿದ ‘ವಿಶ್ವಕವಿ ವೇದಾಂತ ವೇಮನ’ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಮನಿಹಾಳ –ಸುರೇಬಾನದ ಆತ್ಮಾನಂದ ಪುಣ್ಯಾಶ್ರಮದ ಗುರುದೇವ ಸಮರ್ಥ ಶಿವಾನಂದ ಸ್ವಾಮೀಜಿ, ಮುಳ್ಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಪತಿ ನಗರದ ಸಿದ್ದಾರೂಢ ಮಠದ ಜಗದಾತ್ಮಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಆನಂದ ಪಾಟೀಲ ಸ್ವಾಗತಿಸಿದರು. ವೈ.ವಿ. ಮಳಲಿ ಹಾಗೂ ಅಶೋಕ ಹಕಾಟಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಚ್. ಅಣ್ಣಿಗೇರಿ ವಂದಿಸಿದರು.

ಗಮನ ಸೆಳೆದ ಅದ್ಧೂರಿ ಮೆರವಣಿಗೆ
ಮಹಾಯೋಗಿ ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರಗಳನ್ನು ಇಲ್ಲಿನ ವೆಂಕಟೇಶ್ವರ ದೇವಸ್ಥಾನದಿಂದ ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಜರುಗಿತು.

ಕೊಣ್ಣೂರಿನ ಮಹಿಳಾ ಡೊಳ್ಳಿನ ಮೇಳ ಮತ್ತು ಸುಮಾರು 50 ಜೋಡಿ ಎತ್ತುಗಳ ಶೃಂಗರಿಸಿಕೊಂಡು ರಡ್ಡಿ ಸಮಾಜದ ಗಣ್ಯರು ಪಾಲ್ಗೊಂಡಿದ್ದರು. ಚಿಪ್ಪಲಕಟ್ಟಿಯ ಗಜರಾಜ (ಆನೆ) ಉಭಯ ದಾರ್ಶಿನಿಕರನ್ನು ಹೊತ್ತು ಹೆಜ್ಜೆ ಹಾಕಿದ್ದು ಅತ್ಯಂತ ಆಕರ್ಷಿತವಾಗಿತ್ತು. 

ಡೊಳ್ಳು, ಕರಡಿ ಮಜಲು, ಭಜನೆಯೊಂದಿಗೆ ಮಹಿಳೆಯರು ಆರತಿ, ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪುರಷರು ಒಂದುಕಡೆಯಲ್ಲಿ ಸಾಲುಗಟ್ಟಿದ್ದರೆ ಮಹಿಳೆಯರು ಇನ್ನೊಂದು ಕಡೆಯಲ್ಲಿ ಶಿಸ್ತಿನಿಂದ ನಡೆದು ಹೋದರು.

ಮೆರವಣಿಗೆಯು ಇಲ್ಲಿನ ತೇರ ಬಜಾರ, ಹಳೇ ಪೊಲೀಸ್‌ ಠಾಣೆ ರಸ್ತೆ, ಹುತಾತ್ಮ ಚೌಕ್‌, ಬಸವ ಮಾರ್ಗದ ಮೂಲಕ ಹೊಸ ಬಸ್‌ ನಿಲ್ದಾಣದಿಂದ ಆಂಜನೇಯ ನಗರದಲ್ಲಿ ನಿರ್ಮಿತ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT