ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕ, ಶರೀಫರ ನಾಡಿನಲ್ಲಿ ಅಕ್ಷರ ಜಾತ್ರೆ ಸಡಗರ

ಕನ್ನಡವು ಕೇವಲ ಭಾಷೆಯಲ್ಲ, ಅದೊಂದು ಜೀವನ ವಿಧಾನ– ಸಮ್ಮೇಳನ ಅಧ್ಯಕ್ಷ ಡಾ.ಮಹೇಶ ಜೋಶಿ ಅಭಿಮತ
Last Updated 21 ಜನವರಿ 2017, 5:01 IST
ಅಕ್ಷರ ಗಾತ್ರ

ಶಿಶುವಿನಹಾಳ ಶ್ರೀ ಶರೀಫ್ ಶಿವಯೋಗಿ ವೇದಿಕೆ (ಶಿಗ್ಗಾವಿ): ‘ಸಂಸ್ಥೆ, ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು  ಸಮ್ಮೇಳನಾಧ್ಯಕ್ಷ ಡಾ. ಮಹೇಶ ಜೋಶಿ ಮನವಿ ಮಾಡಿದರು. ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಅವರು ಮಾತನಾಡಿದರು.

‘ಸರೋಜಿನಿ ಮಹಿಷಿ ಹಾಗೂ ಡಾ. ಡಿ.ಎಂ. ನಂಜುಂಡಪ್ಪ ವರದಿಗಳು ಅನುಷ್ಠಾನಗೊಳ್ಳಬೇಕಾಗಿದೆ. ಸ್ಥಳೀಯ ಮಾನವ ಸಂಪನ್ಮೂಲ ಬಳಕೆಯಾಗಬೇಕು. ಆಗ ಕನ್ನಡದ ಅಭಿವೃದ್ಧಿ ಸಾಧ್ಯ’ ಎಂದರು.

‘ಬಾಳು ಕಾಳಿನ ಮೇಲೆ ನಿಂತಿದೆ. ಭಾರತದ ಋಷಿ ಸಂಸ್ಕೃತಿಯೂ ಕೃಷಿ ಸಂಸ್ಕೃತಿಯ ಮೇಲೆ ನಿಂತಿದೆ. ಆದರೆ, ರೈತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ. ಸಂಕಷ್ಟಗಳು ಸಹಜ. ರೈತರೇ ಆತ್ಮಹತ್ಯೆಗೆ ಶರಣಾಗಬೇಡಿ’ ಎಂದು ಮನವಿ ಮಾಡಿದರು.

‘ಗುರು ಗೋವಿಂದ ಭಟ್ಟರು, ಸಂತ ಶಿಶುನಾಳ ಷರೀಫರು, ಕನಕದಾಸರು ಸೇರಿದಂತೆ ಈ ನೆಲದ ದಾರ್ಶನಿಕರೆಲ್ಲ ಜಾತಿ, ಕುಲ, ಧರ್ಮಕ್ಕಿಂತ ‘ಮಾನವ ಧರ್ಮ’ ದೊಡ್ಡದು ಎಂದು ತೋರಿಸಿದ್ದಾರೆ’ ಎಂದರು.

‘ಕನ್ನಡ ಸಾಹಿತ್ಯ, ಸ್ವಾತಂತ್ರ್ಯ, ಏಕೀಕರಣದ ಹೋರಾಟಕ್ಕೆ ಹಾವೇರಿ ಜಿಲ್ಲೆಯ ಕೊಡುಗೆ ಅಪಾರ. ಸಾಹಿತ್ಯಿಕ ಕಾರ್ಯಕ್ರಮಗಳು ಹಳೆಬೇರು– ಹೊಸಚಿಗುರಿನ ಸಮ್ಮಿಲನ ಆಗಿರಬೇಕು. ಆಗ ಹಳೆಯ ಅಡಿಪಾಯದ ಮೇಲೆ ಹೊಸ ಸಾಹಿತ್ಯ ಸೌಧ ನಿರ್ಮಿಸಲು ಸಾಧ್ಯ’ ಎಂದರು.

‘ಕನ್ನಡವು ಕೇವಲ ಭಾಷೆಯಲ್ಲ. ಅದೊಂದು ಜೀವನ ವಿಧಾನ. ಮಣ್ಣು ಮತ್ತು ಮನಸ್ಸುಗಳ ಸಂಬಂಧ. ಆದರೆ, ಇಂದು ನಮ್ಮ ಸಂಸ್ಕೃತಿಯ ಮೂಲ ಧಾತುವಿನಿಂದ ದೂರವಾಗುತ್ತಿದ್ದೇವೆ ಎಂಬ ಭಯ ಕಾಡುತ್ತಿದೆ.

ಇಂದಿನ ಧಾರವಾಹಿ, ಟಿ.ವಿ ಕಾರ್ಯಕ್ರಮಗಳಲ್ಲಿ ಮೆರವ ಕ್ರೌರ್ಯ, ಅಪರಾಧದ ವೈಭವೀಕರಣಗಳು ನಮ್ಮ ನೈತಿಕ ನೆಲೆಗಟ್ಟಿನ ಮೇಲೆ ಆಕ್ರಮಣ ಎಸಗುತ್ತಿವೆ. ಶಾಂತಿಪ್ರಿಯ ಹಾಗೂ ಸಮಾನತೆಯ ತವರಾದ ಕನ್ನಡ ನೆಲದಲ್ಲಿ  ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿದೆ’ ಎಂದರು.

‘ನಮ್ಮ ನೆಲದ ಕಲೆಗಳು ಆಧುನಿಕ ಮೊಬೈಲ್, ಸಿನಿಮಾ, ಟಿ.ವಿ ಮತ್ತಿತರ ದಾಳಿಗೆ ಒಳಗಾಗಿವೆ. ತಂತ್ರಜಜ್ಞಾನ ಬಳಸಿಕೊಂಡು ಅವುಗಳನ್ನು ಸಮರ್ಥಗೊಳಿಸಬೇಕಾಗಿದೆ’ ಎಂದರು.

‘ಎಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ವೃತ್ತಿಪರ ತರಗತಿಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಆಗಬೇಕಿತ್ತು. ಆಗ,  ಕನ್ನಡ ತಂದೆ– ತಾಯಂದಿರೇ ತಮ್ಮ ಮಕ್ಕಳಿಗೆ, ‘ಕನ್ನಡ ಬರುವುದಿಲ್ಲ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಕನ್ನಡದ ಕುರಿತು ಅರ್ಥಗರ್ಭಿತ ಕಾರ್ಯಕ್ರಮಗಳು ಆಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ’ ಎಂದರು.

‘ಕನ್ನಡ, ಕನ್ನಡಿಗ, ಕರ್ನಾಟಕವು ಎಲ್ಲ ವಲಯಗಳಲ್ಲಿ ಅರಳಬೇಕು. ಅಂತರಾಳದಲ್ಲಿ ಕನ್ನಡದ ಬೇರು ಬೆಳೆಯಬೇಕು. ಆತ್ಮಾಭಿಮಾನ, ಆತ್ಮವಿಶ್ವಾಸವನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಸರ್ಕಾರಿ ಚಾಕರಿಯೇ ಸಾರ್ಥಕ್ಯ ಎಂಬ ದಾಸ್ಯದಿಂದ ಹೊರಬರಬೇಕು. ಅದಕ್ಕಾಗಿ ಬಲಶಾಲಿ ಕರ್ನಾಟಕ ನಿರ್ಮಾಣದ ಪ್ರತಿಜ್ಞೆ ಮಾಡಿ’ ಎಂದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  ಸಾಹಿತಿಗಳಾದ ಪ್ರೊ. ಹಂಪ ನಾಗರಾಜಯ್ಯ, ಲಿಂಗರಾಜ ಕಮ್ಮಾರ,  ಬ.ಫ. ಯಲಿಗಾರ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಶಿವರಾಜ ಸಜ್ಜನರ,

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಉಪಾಧ್ಯಕ್ಷೆ ಮಮತಾಜಬಿ ತಡಸ, ಸದಸ್ಯ ಬಸವರಾಜ ದೇಸಾಯಿ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಎಸ್‌.ಸುರಗೀಮಠ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ಪಾಟೀಲ್‌, ಸಹಕಾರಿ ಮುಖಂಡ ಎಸ್.ಎಸ್‌. ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರ, ಪದಾಧಿಕಾರಿಗಳಾದ ಎಸ್.ಎಸ್. ಬೇವಿನಮರದ, ಬಿ. ಪಿ. ಶಿಡೇನೂರ, ಎಸ್.ಎನ್. ಮುಗಳ, ನಾಗರಾಜ ದ್ಯಾಮನಕೊಪ್ಪ ಮತ್ತಿತರರು ಇದ್ದರು.

ಪಟ್ಟಣದಲ್ಲಿ ಕನ್ನಡದ ಅನುರಣನ...
ಶಿಗ್ಗಾವಿ
: 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಿಸಿ ಅಕ್ಷರ ಮಾಲೆ ಅನಾವರಣಗೊಂಡಿರುವುದು ಇಂದಿನ ಸಮ್ಮೇಳದ ಅಧ್ಯಕ್ಷರ ಭವ್ಯ ಮೆರವಣಿಗೆ ಸಾಕ್ಷಿಯಾಯಿತು.

ಬೆಳಿಗ್ಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಸೇರಿದ ಸಾವಿರಾರು ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಕನ್ನಡ ಜಯ ಘೋಷಣೆಗಳ ನಡುವೆ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಮಹೇಶ ಜೋಶಿ, ಮಾಲಾ ಜೋಶಿ ದಂಪತಿಯನ್ನು ಕರೆತರುವ ಮೆರವಣಿಗೆಗೆ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಶಾಸಕ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಮೆರವಣಿಗೆ ಆರಂಭವಾಗುತ್ತಿದಂತೆ ಶಾಲಾ ಕಾಲೇಜಿನ ಸಾವಿರಾರು ಮಕ್ಕಳು ಭಾಗವಹಿಸುವ ಮೂಲಕ ರಾಷ್ಟ್ರೀಯ ನಾಯಕರ ವೇಷಭೂಷಣಗಳನ್ನು ಹಾಕಿಕೊಂಡು ವಿಶೇಷ ಗಮನ ಸೆಳೆದರು. ಉತ್ಸವ ರಾಕ್‌ ಗಾರ್ಡನ್‌ ಪ್ರಾಥಮಿಕ ಶಾಲೆ ಮಕ್ಕಳು ಡೊಳ್ಳು ಕಟ್ಟಿಕೊಂಡು ಡೊಳ್ಳು ಬಾರಿಸಿ ಜನಾಕರ್ಷಿಸಿ ದರು. ನೂರಾರು ಮಹಿಳೆಯರು  ಪೂರ್ಣಕುಂಭ ಹೊತ್ತು ಮೆರವಣಿಗೆ ಅಂದ ಹೆಚ್ಚಿಸಿದರು.

ಮೆರವಣಿಗೆಗೆ ಮೆರಗು ತರುವಂತೆ ಡೋಳ್ಳು ಕುಣಿತ, ಕುದುರೆ ಕುಣಿತ, ಝಾಂಜಮೇಳ, ಭಜನೆ ಸೇರಿದಂತೆ ವಿವಿಧ ವಾದ್ಯ–ವೈಭವದೊಂದಿಗೆ ಮೆರವಣಿಗೆ ಸಂಚರಿಸಿತು.

‘ಬತ್ತಿ ಇಡಬೇಡಿ, ಒಟ್ಟುಗೂಡಿಸಿ ’
‘ಬತ್ತಿ ಇಡುವ ಬದಲಾಗಿ ಬತ್ತಿಗಳನ್ನು ಒಟ್ಟುಗೂಡಿಸಿ ಜ್ಯೊತಿ ಬೆಳಗುವ ಪ್ರವೃತ್ತಿಯನ್ನು ಬೆಳೆಸಿಕೊ ಳ್ಳಬೇಕು’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
‘ಹಾವೇರಿ ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ತಪ್ಪಲು ಇಂತಹ ಕೆಲ ಪ್ರವೃತ್ತಿಗಳೇ ಕಾರಣ’ ಎಂದ ಅವರು, ‘ಎಲ್ಲ ಸಹಕಾರದಿಂದ ಮಾತ್ರ ಕನ್ನಡ ಉಳಿಯಲು ಸಾಧ್ಯ. ಸಮ್ಮೇ ಳನ ಸಂಘಟನೆಗೂ ಒಗ್ಗಟ್ಟು ಅತ್ಯಗತ್ಯ’ ಎಂದರು.

‘ಇಂಗ್ಲಿಷ್‌ ಒಂದು ‘ಕೆಟ್ಟ ಕನ್ಫ್ಯೂಷನ್’ ಭಾಷೆ. ಅಲ್ಲಿ ಯಾವುದು ಸೈಲೆಂಟ್, ಯಾವುದರ ಉಚ್ಚಾರ ಹೇಗೆ? ಎಂಬುದೇ ವಿಚಿತ್ರ. ಕನ್ನಡ ಪರಿಶುದ್ಧ ಭಾಷೆ. ಆದರೆ, ‘ಇಂಗ್ಲಿಷ್‌ ಬರುವುದಿಲ್ಲ ಎಂಬ ಕೀಳರಿಮೆಯೇ’ ನಮ್ಮ ಹಿನ್ನಡೆಗೆ ಕಾರಣವಾಗಿದೆ. ಜರ್ಮನಿ, ಚೀನಾ, ಜಪಾನ್, ರಷ್ಯಾ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇಂಗ್ಲಿಷ್ ಇಲ್ಲ. ಆದರೆ, ಅದು ನಮಗೆ ಗೊತ್ತಿಲ್ಲ!’ ಎಂದರು.

‘ಕರ್ನಾಟಕ ಒಡೆದು ನೋಡಬೇಡಿ’
ಶಿಗ್ಗಾವಿ (ಹಾವೇರಿ ಜಿಲ್ಲೆ):
‘ಕರ್ನಾಟಕದ ವಿವಿಧ ಪ್ರದೇಶಗಳನ್ನು ‘ಕಲ್ಯಾಣ’, ‘ಕಿತ್ತೂರ’, ‘ಹೈದರಾಬಾದ್‌’, ‘ಮುಂಬೈ ಕರ್ನಾಟಕ’ ಎಂದು ಪ್ರತ್ಯೇಕವಾಗಿ ಗುರುತಿಸಬೇಡಿ. ಅಖಂಡ ಕರ್ನಾಟಕವನ್ನು ಒಂದಾಗಿ ನೋಡಿ’ ಎಂದು ಸಾಹಿತಿ ಡಾ. ಕಮಲಾ ಹಂಪನಾ ಗುರುವಾರ ಇಲ್ಲಿ ಹೇಳಿದರು.

ಒಂಬತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ದಾಸ್ಯ ಪ್ರವೃತ್ತಿಯಿಂದ ಪ್ರದೇಶಗಳನ್ನು ಗುರುತಿಸಬೇಡಿ. ಆಯಾ ಪ್ರದೇಶದ ಜಿಲ್ಲೆಗಳ ಹೆಸರಿನ ಮೂಲಕವೇ ಪ್ರದೇಶವನ್ನು ಗುರುತಿಸಿ’ ಎಂದರು.

‘ಪೋಷಕರ ಇಚ್ಛೆಗೆ ತಕ್ಕಂತೆ ಮಕ್ಕಳನ್ನು ಶಾಲೆಗೆ ಸೇರಿಸಲು ಸುಪ್ರೀಂ ಕೋರ್ಟ್‌ ಅವಕಾಶ ಕಲ್ಪಿಸಿದೆ. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್‌ ಅನ್ನು ದೂರಬಾರದು. ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲು ಯಾರೂ ಅಡ್ಡಿ ಮಾಡಿಲ್ಲ. ಪೋಷಕರು ಇಂಗ್ಲಿಷ್‌ ಭ್ರಾಂತಿಯನ್ನು ಮೊದಲು ತಲೆಯಿಂದ ತೆಗೆದು ಹಾಕಬೇಕು. ಕನ್ನಡವನ್ನು ಮಾಧ್ಯಮ ಮತ್ತು ಇಂಗ್ಲಿಷ್‌ ಅನ್ನು ಸಂವಹನ ಭಾಷೆಯಾಗಿ ಮಕ್ಕಳಿಗೆ ಕಲಿಸಬೇಕು’ ಎಂದರು.

‘ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭ ಎನ್ನುವಂತೆ ಹಾವೇರಿ ಜಿಲ್ಲೆಗೆ ‘ಅಖಿಲ ಭಾರತ ಸಮ್ಮೇಳನ’ ಕೈ ತಪ್ಪಿದೆ. ನಾವು ಇನ್ನೊಬ್ಬರ ಅಭಿಪ್ರಾಯ, ವಿಚಾರ, ಧರ್ಮಗಳನ್ನು ಗೌರವಿಸಲು, ಪ್ರೀತಿಸಲು ಹಾಗೂ ಸಹಿಸಿಕೊಳ್ಳುವುದನ್ನು ಕಲಿಯಬೇಕು. ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ದಿಕ್ಸೂಚಿಯಾಗಿದೆ’ ಎಂದರು.

ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಸಾಹಿತಿಗಳೂ ಸರಳವಿಲ್ಲ, ದೊಡ್ಡ ಮನಸ್ಸು ಮಾಡಲಿಲ್ಲ. ಕಳೆದ ಬಾರಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ ಪಕ್ಷ, ಕ್ಷೇತ್ರಗಳ ಭೇದ ಮರೆತು ರಾಜಕಾರಣಿಗಳೆಲ್ಲ ಒಪ್ಪಿಗೆ ನೀಡಿದ್ದೆವು. ಆದರೂ ಸ್ಥಳಗೊಂದಲ ನಿಲ್ಲಲಿಲ್ಲ. ಜಿಲ್ಲೆಗೆ ಕಪ್ಪು ಚುಕ್ಕೆ ಬಂತು. ಅದನ್ನು ಮರೆಸುವ ನಿಟ್ಟಿನಲ್ಲಿ ಜಿಲ್ಲೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಪಡೆಯಲು ಪ್ರಯತ್ನಿಸಲಾಗುವುದು’ ಎಂದರು.

‘ನಾವು ಸಾಹಿತ್ಯದಲ್ಲಿ ರಾಜಕಾರಣ ಮಾಡುವುದಿಲ್ಲ. ಇಂಗ್ಲಿಷ್‌ ವ್ಯಾಮೋಹ ಹೋಗಿ ಕನ್ನಡದ ಬಗ್ಗೆ ಕಾಳಜಿ ಮೂಡಬೇಕು. ಇಂಗ್ಲಿಷ್‌ ಎಂಬುದು ಊಟದ ತಟ್ಟೆಯಲ್ಲಿನ ಉಪ್ಪಿನಕಾಯಿಯಂತಿರಲಿ. ನಮ್ಮ ನಿತ್ಯದ ಅನ್ನ ಕನ್ನಡವಾಗಲಿ’ ಎಂದು ಅವರು ಆಶಿಸಿದರು.
 

*
ಎಲ್ಲ ಸಾಹಿತಿಗಳೂ ಸ್ವಚ್ಛವಾ ಗಿಲ್ಲ. ಢೋಂಗಿ ಭಾಷಣಕಾ ರರೂ ಇದ್ದಾರೆ. ಮೊದಲು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಸಿ, ಬಳಿಕ ಇತರರಿಗೆ ಭಾಷಣ ಮಾಡಬೇಕು.
-ಡಾ. ಕಮಲಾ ಹಂಪನಾ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT