ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಲು ಕಾಯುತ್ತಿಲ್ಲ ಕಾಂಚಾಣಕ್ಕೆ ಕಣ್ಣಿಲ್ಲ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

‘ಅಮ್ಮನ ಕರುಳಬಳ್ಳಿ ಕಡಿದುಕೊಂಡು ಬಾಹ್ಯ ಜಗತ್ತು ಕಾಣಲು ಕಂದನಿಗೆ ಒಂಬತ್ತು ತಿಂಗಳು ಬೇಕು. ಆದರೆ, ಬೇಡಿಕೆಯಿಟ್ಟ ಒಂದೆರಡು ತಿಂಗಳಲ್ಲೇ ಮಗು ಕೊಡಿ ಎಂದು ಮಕ್ಕಳಿಲ್ಲದ ದಂಪತಿ ದುಂಬಾಲು ಬೀಳುತ್ತಾರೆ. ಈ ದರ್ದು ಮಕ್ಕಳ ಅಕ್ರಮ ಮಾರಾಟ ಜಾಲವ್ಯೂಹದೊಳಗೆ ಬಂದಿಯಾಗಲು ಕಾರಣ ಆಗುತ್ತಿರುವುದು ದುರಂತ’ ಬಹುತೇಕ ದತ್ತು ಸಂಸ್ಥೆಗಳ ಅಳಲು ಇದು.

ನೋಂದಣಿ ಮಾಡಿಸಿ ವರ್ಷಾನುಗಟ್ಟಲೆ ಕಾಯ್ದರೂ ಮಗುವನ್ನು ದತ್ತು ಪಡೆಯಲು ಕೆಲ ದಂಪತಿಗಳಿಗೆ ಸಾಧ್ಯವಾಗುತ್ತಿಲ್ಲ ಎಂಬುದು ನಿಜ. ಹೆಸರು ನೋಂದಾಯಿಸಿದ ಹಿರಿತನದ ಮೇಲೆ ಮಕ್ಕಳನ್ನು ದತ್ತು ನೀಡಲಾಗುತ್ತದೆ. ಅದಕ್ಕೆ ದೊಡ್ಡ ಸರತಿ ಸಾಲೇ ಇದೆ. ಜೊತೆಗೆ ನ್ಯಾಯಾಲಯಕ್ಕೆ ಅಲೆದಾಟ. ಕಾನೂನು, ದಾಖಲೆ ಪತ್ರದ ಜಂಜಾಟ ಬೇರೆ. ದತ್ತು ಸಂಸ್ಥೆಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇತ್ತ ದತ್ತು ಸಂಸ್ಥೆಗಳಿಗೆ ಬರುವ ಮಕ್ಕಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಇದೇ ಕಾರಣಕ್ಕಾಗಿ ನಿರೀಕ್ಷಿತ ಪ್ರಮಾಣದಲ್ಲಿ ದತ್ತು ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕೆಲ ದತ್ತು ಸಂಸ್ಥೆಗಳ ದೂರು.

ದತ್ತು ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕೂಡ ಹಲವು ಬಾರಿ ಚಾಟಿ ಬೀಸಿದೆ. ಮಕ್ಕಳನ್ನು ಕಾನೂನಿನ ಚೌಕಟ್ಟಿನಲ್ಲಿ ಪಡೆಯಲು ಕಾಯುವ ವ್ಯವಧಾನ ದತ್ತು ಪಡೆಯುವವರಿಗೆ ಇಲ್ಲ.

ಇದು ಅನಧಿಕೃತ ದತ್ತು ಪ್ರಕರಣಗಳು ಹೆಚ್ಚಾಗಲು ಒಂದು ಕಾರಣ. ಮಕ್ಕಳಿಲ್ಲದ ದಂಪತಿಯ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಮಕ್ಕಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಪತ್ತೆ ಆಗುತ್ತಿವೆ. ಆಸ್ಪತ್ರೆಗಳಲ್ಲೇ ಮಕ್ಕಳ ಮಾರಾಟ ದಂಧೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ. ಇಂಥ ಅಕ್ರಮ ಚಟುವಟಿಕೆಗಳಿಂದಾಗಿ ಅಧಿಕೃತ ಸಂಸ್ಥೆಗಳನ್ನು ಸೇರುವ ಮಕ್ಕಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಈಚೆಗೆ ಪತ್ತೆಯಾದ ಶಿಶು ಮಾರಾಟ ಜಾಲವೇ ಅದಕ್ಕೊಂದು ನಿದರ್ಶನ.

‘ಯಾವುದೇ ಪದಾರ್ಥ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸಿದರೆ ಯಾರೂ ಕಾಳಸಂತೆ ಮೊರೆ ಹೋಗಲ್ಲ. ಅಕಸ್ಮಾತ್‌ ತುಂಬಾ ಕಾಯಬೇಕು ಎನಿಸಿದಾಗ, ಖರೀದಿ ಕ್ಲಿಷ್ಟಕರವಾದಾಗ ಅಡ್ಡ ಮಾರ್ಗ ಹಿಡಿಯುತ್ತಾರೆ. ದತ್ತು ಪ್ರಕ್ರಿಯೆಯಲ್ಲಿ ಆಗಿರುವುದು ಇದೇ. ಕೆಲವರು ಮಕ್ಕಳನ್ನು ದತ್ತು ಪಡೆಯಲು ಎರಡು ವರ್ಷಗಳಿಂದ ಕಾಯುತ್ತಿದ್ದಾರೆ.

ದತ್ತು ಪಡೆಯಲು ದಂಪತಿ ಹರಸಾಹಸ ಪಡಬೇಕಾಗಿದೆ’ ಎಂದು ಹೇಳುತ್ತಾರೆ ಸಮುದಾಯ ವೈದ್ಯ ಮೈಸೂರಿನ ಡಾ. ಆರ್.ಬಾಲಸುಬ್ರಹ್ಮಣ್ಯ. ‘ಕೆಲ ದಂಪತಿಗೆ ಮಕ್ಕಳಿಲ್ಲ ಎಂಬ ಕೊರಗು ಇರುತ್ತದೆ. ಅವರು ಸಮಾಜದ ಕೊಂಕು ನುಡಿಗಳಿಗೆ ಅಂಜುತ್ತಾರೆ. ಹೀಗಾಗಿ, ಅಕ್ರಮ ಜಾಲದ ಮೊರೆ ಹೋಗುತ್ತಾರೆ.

ಇಂಥ ಜಾಲದಿಂದ ಮಗು ಪಡೆದು ತಮ್ಮದೇ ಮಗು ಎಂದು ಸಾರ್ವಜನಿಕವಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮಗೆ ಬೇಕಾದ ರೀತಿಯ ಮಗುವನ್ನು ಆಯ್ಕೆ ಮಾಡಿಕೊಳ್ಳಲು ಗೋಪ್ಯ ವ್ಯವಹಾರಕ್ಕೆ ಇಳಿಯುತ್ತಾರೆ. ಕಾನೂನುಬದ್ಧವಾಗಿ ದತ್ತು ಪಡೆಯಲು ಹಿಂಜರಿಯುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ ಸಾಮಾಜಿಕ ಕಾರ್ಯಕರ್ತೆ ಹಾಗೂ ಬಾಪೂಜಿ ಮಕ್ಕಳ ಮನೆಯ ನಂದಾ ಪ್ರಸಾದ್‌.

ಅಪಹರಣ ಜಾಲದ ಹಿಂದೆ... ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಸಮೀಪದ ಗುಡಿಸಿಲಿನಲ್ಲಿ ವಾಸವಿದ್ದ ಶಾಂತಾ ಎಂಬ ಮಹಿಳೆಯ ಮಗು ಕಳೆದ ಏಪ್ರಿಲ್‌ 21ರಂದು ನಾಪತ್ತೆ ಆಗಿತ್ತು. ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕು ತಿಂಗಳ ಗಂಡು ಮಗುವನ್ನು ಅಪಹರಿಸಿದ್ದರು. ಆ ಮಹಿಳೆ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯ ಪರಿಶೀಲಿಸಿ ವಿಚಾರಣೆಗೆ ಒಳಪಡಿಸಿದಾಗ ಮಕ್ಕಳ ಮಾರಾಟ ಜಾಲದ ಸ್ವರೂಪ ಬಿಚ್ಚಿಕೊಂಡಿತು.

ಅಪಹರಣಕ್ಕೆ ಕೆಲವೇ ದಿನಗಳ ಹಿಂದಷ್ಟೇ ಮಗುವನ್ನು ಮಾರಾಟ ಮಾಡುವಂತೆ ಕೆಲವರು ಆ ಮಹಿಳೆಯ ಮೇಲೆ ಒತ್ತಡ ಹೇರಿದ್ದರು! ಹೀಗೆ, ಮಕ್ಕಳಿಲ್ಲದ ದಂಪತಿಗೆ ಅಪಾರ ಹಣಕ್ಕೆ ಮಾರಾಟ ಮಾಡಿದ್ದ 16 ಮಕ್ಕಳನ್ನು ಪೊಲೀಸರು ರಕ್ಷಿಸಿ ವಿವಿಧ ಬಾಲಮಂದಿರಗಳಲ್ಲಿ ಇರಿಸಿದ್ದಾರೆ. ಹೆಚ್ಚಿನ ಮಕ್ಕಳು ಒಂದು ವರ್ಷದ ಒಳಗಿನವು. ಪರಿತ್ಯಕ್ತ ಮಕ್ಕಳು, ಅನಾಥ ಮಕ್ಕಳು, ಭಿಕ್ಷುಕರು, ಕೊಳೆಗೇರಿವಾಸಿಗಳು, ಬಡವರ ಮಕ್ಕಳೇ ಈ ಜಾಲದ ಪ್ರಮುಖ ಗುರಿ. ಮಕ್ಕಳ ಮಾರಾಟ ಜಾಲದಿಂದ ಅಮೆರಿಕಕ್ಕೂ ಒಂದು ಮಗು ಸಾಗಣೆಯಾಗಿದ್ದು, ಆ ಮಗುವಿನ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.

ದತ್ತು ಪ್ರಕ್ರಿಯೆ ಕಾನೂನುಗಳನ್ನು ಗಾಳಿಗೆ ತೂರಿ ಕೆಲ ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳೇ ದತ್ತು ಕೇಂದ್ರಗಳಾಗಿ ವ್ಯವಹಾರ ನಡೆಸುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ವಂಚನೆ, ಮೋಸಕ್ಕೆ ಒಳಗಾದ ಯುವತಿಯರಿಗೆ ಹುಟ್ಟುವ ಮಕ್ಕಳನ್ನು ಹಾಗೂ ಗರ್ಭಪಾತ ಮಾಡಿಸಿಕೊಳ್ಳಲು ಬರುವವರಿಗೆ ಹಣದ ಆಮಿಷವೊಡ್ಡಿ ಈ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮಗು ಕೊಳ್ಳಲು ಬರುವ ಗಿರಾಕಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಶಿಶು ಜನನ ಪ್ರಮಾಣಪತ್ರಕ್ಕೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದಾರೆ.

‘ಇದೊಂದು ವ್ಯವಸ್ಥಿತ ಜಾಲ. ಆಸ್ಪತ್ರೆಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದವರೇ ಮಕ್ಕಳ ಮಾರಾಟ ಜಾಲವನ್ನು ರೂಪಿಸಿಕೊಂಡಿದ್ದರು. ಆಸ್ಪತ್ರೆಗೆ ಬರುವ ಬಡವರಿಗೆ ಆಮಿಷ ಒಡ್ಡಿ ಮಕ್ಕಳನ್ನು ಖರೀದಿಸುತ್ತಿದ್ದರು. ಮಕ್ಕಳನ್ನು ಖರೀದಿಸಿದವರೂ ಸುಶಿಕ್ಷಿತರೆ. ಅವರಿಗೆ ದತ್ತು ಪ್ರಕ್ರಿಯೆಯ ಮಾಹಿತಿ ಕೊರತೆಯೇನೂ ಇಲ್ಲ. ಹಾಗಿದ್ದೂ ತಪ್ಪು ಹಾದಿ ಹಿಡಿದಿದ್ದಾರೆ’ ಎಂದು ಹೇಳುತ್ತಾರೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ.

ಮಕ್ಕಳ ರಕ್ಷಣಾ ಆಯೋಗಕ್ಕೂ ಈ ರೀತಿಯ ದೂರುಗಳು ಬಂದಿವೆ. ನರ್ಸಿಂಗ್‌ ಹೋಂಗಳಿಗೆ ನೋಟಿಸ್‌ ಕೂಡ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುವ ಅಥವಾ ಪರಿತ್ಯಕ್ತ ಮಕ್ಕಳನ್ನು ದತ್ತು ಸಂಸ್ಥೆಗಳಿಗೆ ಕಡ್ಡಾಯವಾಗಿ ಒಪ್ಪಿಸಬೇಕು. ಆದರೆ, ವಾಸ್ತವವಾಗಿ ಆ ರೀತಿ ನಡೆಯುತ್ತಿಲ್ಲ.

ತೊಟ್ಟಿಲು ಯೋಜನೆ: ಕೆಲವರು ದತ್ತು ಕೇಂದ್ರಕ್ಕೆ ಹೋಗಿ ಮಗುವನ್ನು ಬಿಟ್ಟು ಬರಲು ಹಿಂಜರಿಯುತ್ತಾರೆ. ಮೈಸೂರು ನಗರದ ರಸ್ತೆ ಬದಿಯಲ್ಲಿಯೇ ಮಕ್ಕಳನ್ನು ಬಿಸಾಡಿ ಹೋಗಿದ್ದ ಒಂದೆರಡು ಪ್ರಕರಣಗಳು ಈಚೆಗೆ ಪತ್ತೆ ಆಗಿದ್ದವು. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಮಮತೆ ತೊಟ್ಟಿಲು’ ಎಂಬ ಪರಿಕಲ್ಪನೆಯೊಂದಿಗೆ ಆಸ್ಪತ್ರೆ ಹಾಗೂ ಬಾಲ ಮಂದಿರದ ಸಮೀಪ ತೊಟ್ಟಿಲು ಇಟ್ಟಿದೆ.

ಇದರಲ್ಲಿ ಮಕ್ಕಳನ್ನು ಇರಿಸಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಇಂಥ ಮಕ್ಕಳನ್ನು ಬಾಲಮಂದಿರ ಅಥವಾ ದತ್ತು ಸಂಸ್ಥೆಗಳಲ್ಲಿ ಬೆಳೆಸಲಾಗುತ್ತಿದೆ. ಅಕ್ರಮ ಮಾರಾಟ ತಡೆಗಟ್ಟಲು ಮತ್ತು ಎಲ್ಲೆಂದರಲ್ಲಿ ಶಿಶುಗಳನ್ನು ಬಿಸಾಡಿ ಹೋಗುವುದನ್ನು ತಡೆಯಲು ದತ್ತು ಸಂಸ್ಥೆ ಸಮೀಪ ಕಡ್ಡಾಯವಾಗಿ ತೊಟ್ಟಿಲು ಇಡಲೇಬೇಕು.

‘ಮಗುವಿನ ಜನನದ ಬಳಿಕ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯರು ಅದರ ಬೆಳವಣಿಗೆಯ ಮೇಲೆ ಕಣ್ಣಿಡಬೇಕು. ದಂಪತಿಗೆ ದತ್ತು ನೀಡಿದ ಮೇಲೂ ಗಮನವಿಟ್ಟಿರಬೇಕು. ದುರಂತವೆಂದರೆ ದತ್ತು ಪಡೆಯಲು ಮಗು ಎಲ್ಲಿ ಸಿಗುತ್ತೆ ಎಂಬುದೇ ಕೆಲ ದಂಪತಿಗಳಿಗೆ ಗೊತ್ತಿಲ್ಲ. ದತ್ತು ಪ್ರಕ್ರಿಯೆ ಬಗ್ಗೆಯೂ ಮಾಹಿತಿ ಇಲ್ಲ. ಇಂಥವರು ಮಕ್ಕಳ ಅಕ್ರಮ ಜಾಲದವರಿಗೆ ಸುಲಭವಾಗಿ ತುತ್ತಾಗುತ್ತಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಕೆ.ರಾಧಾ ಹೇಳುತ್ತಾರೆ.

***
ಅಸಹಾಯಕತೆ ದುರುಪಯೋಗ

ಮಕ್ಕಳಿಲ್ಲದ ದಂಪತಿಯ ಅಸಹಾಯಕತೆಯೇ ಕಳ್ಳಮಾರ್ಗಕ್ಕೆ ದಾರಿ ಮಾಡಿಕೊಡುತ್ತಿದೆ. ಇಂಥ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಅಡ್ಡ ಮಾರ್ಗ ಹಿಡಿಯುವರ ಸಂಖ್ಯೆಯೂ ಹೆಚ್ಚುತ್ತಿದೆ. ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುವವರಿಗೆ ಹಾಗೂ ನೀಡುವವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ, ಕಾನೂನುಬಾಹಿರವಾಗಿ ಮಕ್ಕಳನ್ನು ಪಡೆದವರು ಮುಂದೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.ದತ್ತು ಪ್ರಕ್ರಿಯೆ ಕಾನೂನು ಸರಳಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಂತೂ ದತ್ತು ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆಯುತ್ತಿದೆ. ಕಾಯುವ ವ್ಯವಧಾನ ದಂಪತಿಗೆ ಇರಬೇಕು.
–ಶೈಲಾ, ಕಾರ್ಯಕ್ರಮ ಅನುಷ್ಠಾನ ವ್ಯವಸ್ಥಾಪಕಿ
ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆ

***
ಬೇರೆ ದಾರಿ ಇಲ್ಲ

ದತ್ತು ಪಡೆಯಲು ಕೆಲವರು 2–3 ವರ್ಷಗಳಿಂದ ಕಾಯುತ್ತಿರುವುದು ನಿಜ. ಜೊತೆಗೆ ಮಗುವನ್ನು ಕಾನೂನು ಪ್ರಕಾರ ತಮ್ಮದಾಗಿಸಿಕೊಳ್ಳಲು ದಂಪತಿ ಹಲವು ದಾಖಲೆ ತೋರಿಸಬೇಕು. ಇದರಿಂದ ಪ್ರಕ್ರಿಯೆ ತಡವಾಗುತ್ತಿರಬಹುದು. ಆದರೆ, ಬೇರೆ ದಾರಿಯೇ ಇಲ್ಲ. ಕಾನೂನು ಮೂಲಕ ಮಕ್ಕಳನ್ನು ದತ್ತು ಪಡೆದರೆ ಮಾತ್ರ ಜೀವನ ಸುಖಕರ.
–ಸರಸ್ವತಿ
ನಿರ್ದೇಶಕಿ, ಗ್ರಾಮೀಣ ಶಿಕ್ಷಣ–ಆರೋಗ್ಯ ಸ್ವಯಂ ಸೇವಾ ಸಂಸ್ಥೆ, ಮೈಸೂರು


***
ಜೈಲಿಗೆ ಕಳುಹಿಸಿ...

ದತ್ತು ಪ್ರಕ್ರಿಯೆಯಲ್ಲಿ ಸರ್ಕಾರದ ನೀತಿಗಳು ಸರಳವಾಗಿರಬೇಕು. ಸರಿಯಾಗಿ ಅನುಷ್ಠಾನಕ್ಕೆ ತರಬೇಕು. ಅಕ್ರಮವಾಗಿ ಮಕ್ಕಳನ್ನು ಮಾರುವ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಬೇಕು. ಅದು ಎಚ್ಚರಿಕೆಯ ಪಾಠವಾಗುತ್ತದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಕೂಡ ಧ್ವನಿ ಎತ್ತಬೇಕು. ಆಗ ಮಾತ್ರ ಇಂಥ ಕೃತ್ಯಗಳಿಗೆ ಕಡಿವಾಣ ಹಾಕಬಹುದು.
–ಡಾ. ಆರ್‌.ಬಾಲಸುಬ್ರಹ್ಮಣ್ಯ ಸಮುದಾಯ ವೈದ್ಯ, ಮೈಸೂರು

***
ಕೊರಗು ಅಡ್ಡದಾರಿ ಹಿಡಿಸಿತು

ಜೀವನಶೈಲಿ ಹಾಗೂ ಇನ್ನಿತರ ಕಾರಣಗಳಿಂದ ದಂಪತಿಗೆ ಮಕ್ಕಳು ಜನಿಸುತ್ತಿಲ್ಲ. ಇನ್ನು ಕೆಲವರು ಮಕ್ಕಳನ್ನು ಹೆರಲು ಇಷ್ಟಪಡುವುದಿಲ್ಲ. ಹೀಗಾಗಿ, ದತ್ತು ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಇಂಥವರು ತಾಳ್ಮೆಯಿಂದ ಕಾಯದೆ ಅಡ್ಡದಾರಿ ಮೂಲಕವೇ ಮಕ್ಕಳನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಾರೆ.

ಅಸ್ಪತ್ರೆ ಅಥವಾ ಇನ್ನೆಲ್ಲಿಯೋ ಪರಿತ್ಯಕ್ತ ಅಥವಾ ಅನಾಥ ಮಗು ಪತ್ತೆಯಾದ ಕೂಡಲೇ ಪೊಲೀಸರಿಗೆ ಅಥವಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಬೇಕು. ಸಮೀಪದ ದತ್ತು ಸಂಸ್ಥೆಯಲ್ಲಿ ಮಗುವನ್ನು ಇರಿಸಬೇಕು. ಬಳಿಕ ಮಗುವಿನ ವಾರಸುದಾರರ ಪತ್ತೆಗೆ ಫೋಟೊ ಸಮೇತ ಜಾಹೀರಾತು ಪ್ರಕಟಿಸಲಾಗುತ್ತದೆ. ಅದಾಗಿ ಎರಡು ತಿಂಗಳು ಕಾಯಬೇಕು. ಆಗಲೂ ವಾರಸುದಾರರು ಸಿಗದಿದ್ದರೆ ಮಗುವನ್ನು ಕಾನೂನು ಪ್ರಕಾರ ದತ್ತು ನೀಡುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ತೀರ್ಮಾನಿಸುತ್ತದೆ.
–ಪಿ.ಪಿ.ಬಾಬುರಾಜ್‌, ಮಕ್ಕಳ ಹಕ್ಕುಗಳ ಕಾರ್ಯಕರ್ತ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT