ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಆಸೆ ಕುಗ್ಗಿಸಿದ ಪೋಷಕರ ಜಗಳ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ಪ್ಪ–ಅಮ್ಮನ ಸಂಬಂಧದಲ್ಲಿ ಬಿರುಕು ಬಿಟ್ಟು ಎಷ್ಟೋ ವರ್ಷಗಳಾಗಿವೆ. ಐದು ವರ್ಷಗಳ ಕಾಲ ಅವರು ಬೇರ್ಪಟ್ಟಿದ್ದರು. ಈಗ ನನಗೆ ಮದುವೆ ಮಾಡಬೇಕೆಂಬ ಉದ್ದೇಶದಿಂದ ಒಟ್ಟಿಗೆ ಇದ್ದರೂ ಅವರ ನಡುವೆ ಸುಮಧುರ ಬಾಂಧವ್ಯವೇನೂ ಇಲ್ಲ. ಇಬ್ಬರ ನಡುವಿನ ಮನಸ್ತಾಪವನ್ನೇ ಕಂಡಿರುವ ನನಗೆ, ಮದುವೆಯ ವಿಷಯ ನೆನಪಿಸಿಕೊಂಡರೆ ಭಯವಾಗುತ್ತದೆ. ಮದುವೆ ಆಗುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇನೆ.’
 
‘ನಿಮ್ಹಾನ್ಸ್‌ ಸೆಂಟರ್‌ ಫಾರ್‌ ವೆಲ್‌ ಬೀಯಿಂಗ್‌’ (ಎನ್‌ಸಿಡಬ್ಲ್ಯುಬಿ) ಕೇಂದ್ರದಲ್ಲಿ ನಡೆದ ‘ವಿವಾಹಪೂರ್ವ ಸಿದ್ಧತಾ ಕಾರ್ಯಕ್ರಮ’ದಲ್ಲಿ ನಿಮ್ಹಾನ್ಸ್‌ನ ವಿವಾಹ ಮತ್ತು ಕೌಟುಂಬಿಕ ಥೆರಪಿ ವಿಭಾಗದ ಸಲಹೆಗಾರ ಡಾ. ಬಿನೋ ಥಾಮಸ್‌ ಅವರ ಬಳಿ 24 ವರ್ಷದ ಎಂಬಿಎ ಪದವೀಧರೆಯೊಬ್ಬರು ತನ್ನ ಸಮಸ್ಯೆಯನ್ನು ವಿವರಿಸಿದ್ದು ಹೀಗೆ.
 
‘ತಂದೆ–ತಾಯಿ ನಡುವಿನ ಜಗಳ ಮಕ್ಕಳ ಮಾನಸಿಕ, ಶಾರೀರಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಈಗ ಆಕೆಗೆ ಮದುವೆ ಮಾಡಲೆಂದೇ ತಂದೆ–ತಾಯಿ ನೆಪ ಮಾತ್ರಕ್ಕೆ ಒಟ್ಟಿಗೆ ಇದ್ದಾರೆ. ಆದರೆ, ಆಕೆಯ ಆಂತರ್ಯದಲ್ಲಿ ನೋವು, ಸಂದೇಹ, ಭಯ, ಆತಂಕ ಮಡುಗಟ್ಟಿವೆ. ಮದುವೆಯಾದರೆ ತನ್ನ ಸಾಂಸಾರಿಕ ಜೀವನವೂ ತಂದೆ–ತಾಯಿಯ ರೀತಿಯಲ್ಲಿ ಸಂಕಷ್ಟಗಳಿಂದಲೇ ಕೂಡಿರಬಹುದು ಎಂಬ ಭಯ ಆಕೆಯನ್ನು ಕಾಡುತ್ತಿದೆ. ಹೀಗಾಗಿ ಮದುವೆಗೆ ಒಲ್ಲೆ ಎನ್ನುತ್ತಿದ್ದಾಳೆ’ ಎಂದು ಬಿನೋ ಥಾಮಸ್‌ ಈ ಸಮಸ್ಯೆಯ ಆಯಾಮಗಳನ್ನು ವಿವರಿಸುತ್ತಾರೆ. ಇಂಥ ಹಲವು ಉದಾಹರಣೆಗಳನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.
 
‘ಬಿ.ಟೆಕ್‌. ಮಾಡಿರುವ ಯುವಕ–ಯುವತಿಗೆ ವಿವಾಹ ನಿಶ್ಚಯವಾಗಿದೆ. ಮದುವೆಗೆ ಮೂರು ವಾರಗಳಿವೆ. ಆದರೆ, ಯುವಕನ ಸ್ವಭಾವದ ಬಗ್ಗೆ ಯುವತಿಗೆ ಆಕ್ಷೇಪವಿತ್ತು. ಆತನಿಗೆ ದೃಢ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ. ಯಾವುದೇ ಕೆಲಸವನ್ನು ಬೇಗ ಮಾಡಿ ಮುಗಿಸುವುದಿಲ್ಲ. ಇದೇ ನನ್ನ ಚಿಂತೆಗೆ ಕಾರಣ ಎಂದು ಯುವತಿ ತನ್ನ ಸಮಸ್ಯೆಯನ್ನು ಹೇಳಿಕೊಂಡಳು’ ಎಂದರು.
 
‘ವ್ಯಕ್ತಿಗತ ಸ್ವಭಾವಗಳನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಭಾವ ಬದಲಿಸಿಕೊಳ್ಳುವಂತೆ ಒತ್ತಡ ಹೇರುವುದೂ ಸರಿಯಲ್ಲ. ಇದರಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು. ದೃಢ ನಿರ್ಧಾರ ತೆಗೆದುಕೊಳ್ಳಲು ಬೇಕಾದ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಪರಿವರ್ತನೆ ತರಲು ಸಾಧ್ಯವಿದೆ ಎಂದು ಯುವತಿಗೆ ಸಲಹೆ ನೀಡಿದೆ’ ಎಂದರು.
 
‘ಎರಡು ವರ್ಷಗಳಿಂದ ಲಿವಿಂಗ್‌ ಟುಗೆದರ್‌ ಜೀವನವನ್ನು ನಡೆಸುತ್ತಿರುವ ಯುವಕ–ಯುವತಿ ಸಲಹೆ ಕೇಳಿಕೊಂಡು ಬಂದಿದ್ದರು. ಆಕೆಗೆ ಆತನನ್ನು ಮದುವೆಯಾಗಬೇಕೆಂಬ ಆಸೆ. ಆದರೆ, ಆತನಿಗೆ ಮದುವೆ ಇಷ್ಟವಿಲ್ಲ. ಈಗಿರುವ ಜೀವನವೇ ಸಾಕು ಎಂಬ ನಿರ್ಧಾರಕ್ಕೆ ಆತ ಬಂದಿದ್ದಾನೆ. ಇದು ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು’ ಎಂದು ಮತ್ತೊಂದು ಉದಾಹರಣೆಯನ್ನು ನೀಡಿದರು.
 
‘ಸಂಬಂಧಗಳು ನಂಬಿಕೆ, ಪ್ರಾಮಾಣಿಕತೆಯ ಮೇಲೆ ನಿಂತಿರುತ್ತವೆ.  ಭಿನ್ನ ಅಭಿಪ್ರಾಯಗಳಿದ್ದಾಗ ಪರಸ್ಪರ ಅರ್ಥ ಮಾಡಿಕೊಂಡು ಬಾಳಬೇಕು. ಇಲ್ಲವಾದರೆ, ಸಂಬಂಧಗಳಿಗೆ ಬೆಲೆಯೇ ಇಲ್ಲವಾಗುತ್ತದೆ’ ಎಂಬ ಕಿವಿಮಾತನ್ನೂ ಡಾ. ಬಿನೋ ಥಾಮಸ್‌ ಹೇಳಿದರು.
 
**
ಆಸೆ–ಆಕಾಂಕ್ಷೆ ಈಡೇರಿಸುವನೇ...?
‘ಎಂಬಿಎ ಪದವೀಧರೆಯೊಬ್ಬರಿಗೆ ಹೈದರಾಬಾದ್‌ ಯುವಕನೊಂದಿಗೆ ವಿವಾಹ ನಿಶ್ಚಯವಾಗಿದೆ. ಆಕೆ ತಂದೆ–ತಾಯಿಗೆ ಮುದ್ದು ಮಗಳು. ಹೀಗಾಗಿ ಆಕೆಯ ಆಸೆ–ಆಕಾಂಕ್ಷೆಗಳನ್ನು ಈಡೇರಿಸಿದ್ದಾರೆ. ಭಾವಿ ಪತಿಯಾಗುವವನು ತನ್ನ ಆಸೆ–ಆಕಾಂಕ್ಷೆಗಳನ್ನು ಈಡೇರಿಸುವನೇ  ಎನ್ನುವುದು ಆಕೆಯನ್ನು ಕಾಡುತ್ತಿರುವ ಪ್ರಶ್ನೆ’. 
 
‘ಗಂಡನಿಂದ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ, ಅತಿಯಾದ ನಿರೀಕ್ಷೆ ಸಲ್ಲದು. ಎಲ್ಲ ಆಸೆ–ಆಕಾಂಕ್ಷೆಗಳನ್ನು ಈಡೇರಿಸಲು ಗಂಡನಿಂದ ಸಾಧ್ಯವಾಗದೇ ಇರಬಹುದು. ಮದುವೆ ಎನ್ನುವುದು ಹೊಂದಾಣಿಕೆ ಮೇಲೆ ನಿಂತಿರುತ್ತದೆ. ಪರಸ್ಪರ ಅರ್ಥ ಮಾಡಿಕೊಂಡು ಬೇಕು–ಬೇಡಗಳಿಗೆ ಸ್ಪಂದಿಸುತ್ತಾ ಬದುಕು ಸಾಗಿಸಬೇಕು’ ಎಂದು  ಮನವರಿಕೆ ಮಾಡಿಕೊಟ್ಟರು ವೈದ್ಯರು.
 
**
ವೈವಾಹಿಕ ಜೀವನವನ್ನು ಕುರಿತ ಕೌನ್ಸೆಲಿಂಗ್‌
ವಿವಾಹಪೂರ್ವದಲ್ಲಿ ವೈವಾಹಿಕ ಜೀವನದ ಬಗ್ಗೆ ಯುವಕ–ಯುವತಿಯರಿಗೆ ಇರುವ ಗೊಂದಲ, ಅನುಮಾನಗಳಿಗೆ ಪರಿಹಾರ ಸೂಚಿಸಲೆಂದೇ ಬೆಂಗಳೂರಿನ ಬಿಟಿಎಂ ಬಡಾವಣೆ ಮೊದಲ ಹಂತದ 9ನೇ ಮುಖ್ಯರಸ್ತೆಯಲ್ಲಿರುವ ‘ಎನ್‌ಸಿಡಬ್ಲ್ಯುಬಿ’ ಕೇಂದ್ರದಲ್ಲಿ ಕೌನ್ಸೆಲಿಂಗ್‌ ನಡೆಸಲಾಗುತ್ತಿದೆ.
 
ಬುಧವಾರ ಮಧ್ಯಾಹ್ನ  ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ, ಶುಕ್ರವಾರ ಹಾಗೂ ಶನಿವಾರದಂದು ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಕೌನ್ಸೆಲಿಂಗ್‌ ನಡೆಸಲಾಗುತ್ತದೆ. ಅಲ್ಲದೆ, ಪ್ರತಿ ತಿಂಗಳ ಮೊದಲ ಶನಿವಾರದಂದು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಸಾಮೂಹಿಕ ಕೌನ್ಸೆಲಿಂಗ್‌ ನಡೆಸಲಾಗುತ್ತದೆ.
ಸಂಪರ್ಕಕ್ಕೆ: 080– 2668 5948, 94808 29670

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT